ಶುಕ್ರವಾರ, ಜುಲೈ 1, 2022
26 °C
ಬಜೆಟ್‌ನಲ್ಲಿ ಪ್ರತಿವರ್ಷವೂ ಕಡಿತವನ್ನೇ ಕಾಣುತ್ತಿರುವ ಆರೋಗ್ಯ ಕ್ಷೇತ್ರವು ಬಡಕಲಾಗುತ್ತಲೇ ಹೊರಟಿದೆ

ಖಾಸಗಿ ಕಂಪನಿಗಳೇ, ಆಯುಷ್ಮಾನ್‌ಭವ!

ಶಾರದಾ ಗೋಪಾಲ Updated:

ಅಕ್ಷರ ಗಾತ್ರ : | |

Deccan Herald

1978ರ ಸೆಪ್ಟೆಂಬರ್ ತಿಂಗಳು. ಆರೋಗ್ಯ ಕ್ಷೇತ್ರದಲ್ಲೊಂದು ಮೈಲುಗಲ್ಲು. ಕಜಾಕಸ್ತಾನದ ಅಲ್ಮಾಅಟಾ ಎಂಬ ಊರಿನಲ್ಲಿ ಜಗತ್ತಿನ 138 ದೇಶಗಳು ಒಟ್ಟಿಗೆ ಬಂದು 2000ದ ಇಸವಿಯೊಳಗೆ ‘ಎಲ್ಲರಿಗೂ ಆರೋಗ್ಯ’ವನ್ನು ಕೊಡುತ್ತೇವೆಂಬ ವಚನಕ್ಕೆ ಸಹಿ ಹಾಕಿದವು. ಅಷ್ಟೇ ಅಲ್ಲ, ಆರೋಗ್ಯವು ಮಾನವ ಹಕ್ಕು. ಆರೋಗ್ಯವೆಂದರೆ ಆಸ್ಪತ್ರೆ, ಔಷಧ ಅಲ್ಲ; ಬದಲಿಗೆ ಕುಡಿಯುವ ಶುದ್ಧನೀರು, ಆಹಾರ, ವಸತಿ, ನೈರ್ಮಲ್ಯ, ಶಿಕ್ಷಣ ಮತ್ತು ಲಿಂಗ ಸಮಾನತೆ ಎಂದು ಸಾರಿದವು. ವಿಶ್ವ ಆರೋಗ್ಯ ಸಂಸ್ಥೆಯಡಿ ಬರುತ್ತಿದ್ದ ಆರೋಗ್ಯ ವಿಚಾರಗಳನ್ನು ಹೀಗೆ ಘೋಷಿಸುವುದರ ಮೂಲಕ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಗಳಡಿಯಲ್ಲಿ ತಂದವು.

ನಲವತ್ತು ವರ್ಷಗಳಾದವು. ಎಲ್ಲರಿಗೂ ಆರೋಗ್ಯ ಬಂತೇ? ಆಹಾರ, ನೀರು-ನೈರ್ಮಲ್ಯ, ಶಿಕ್ಷಣ, ಲಿಂಗ ಸಮಾನತೆ ಮುಂತಾದ ಆರೋಗ್ಯದ ಸಾಮಾಜಿಕ ನಿರ್ಧಾರಕಗಳು ಏನಾದವು? ಇದನ್ನು ವಿಶ್ಲೇಷಿಸುವಾಗ ಎದ್ದು ಕಾಣುವುದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಗಳಡಿಗೆ ಬರಬೇಕಾಗಿದ್ದ ಸಾಮಾಜಿಕ ನಿರ್ಧಾರಕಗಳನ್ನು ಪಟ್ಟೆಂದು ಮಧ್ಯದಲ್ಲಿಯೇ ಹಿಡಿದದ್ದು ವಿಶ್ವಬ್ಯಾಂಕು! ಅಲ್ಮಾಅಟಾ ಘೋಷಣೆಯಾದ ಒಂದೇ ವರ್ಷದೊಳಗೆ ಬಹುರಾಷ್ಟ್ರೀಯ ಕಂಪನಿಗಳೆಲ್ಲ ಸೇರಿ ವಿಶ್ವಬ್ಯಾಂಕ್‌ ನೇತೃತ್ವದಲ್ಲಿ ಆರೋಗ್ಯದ ದಿಕ್ಕು ದೆಸೆಯನ್ನೇ ಬದಲು ಮಾಡಿದವು.

2000ನೇ ಇಸವಿ ಹತ್ತಿರ ಬರುತ್ತಿದ್ದರೂ ಜನಸಾಮಾನ್ಯರಿಗೆ ಆರೋಗ್ಯ ಸಿಗುವ ಲಕ್ಷಣಗಳೇ ಕಾಣದಿದ್ದಾಗ ವಿಶ್ವದಾದ್ಯಂತದಿಂದ ನೂರಾರು ಜನಪರ ಸಂಘಟನೆಗಳು ಬಾಂಗ್ಲಾದ ಢಾಕಾದಲ್ಲಿ ಒಟ್ಟಿಗೆ ಸೇರಿದವು. ಈ ಸಮಾವೇಶಕ್ಕೆ ವಿಶ್ವ ಆರೋಗ್ಯ ಸಂಸ್ಥೆಯನ್ನೂ, ಯುನಿಸೆಫ್‍ ಅನ್ನೂ ಆಹ್ವಾನಿಸಲಾಗಿತ್ತು. ಆದರೆ ಅಲ್ಲಿಗೆ ಬಂದಿದ್ದು ಅವೆರಡೂ ಸಂಸ್ಥೆಗಳಲ್ಲ, ಬದಲಿಗೆ ವಿಶ್ವಬ್ಯಾಂಕು! ಯಾಕೆ? ಯಾಕೆಂದರೆ ಆರೋಗ್ಯ ಕ್ಷೇತ್ರದಲ್ಲಿ ಅತಿ ಮಹತ್ವದ ಪಾತ್ರ ತನ್ನದು ಎಂದು ಪ್ರಚಾರದಲ್ಲಿ ತೊಡಗಿಕೊಂಡಿದ್ದ ವಿಶ್ವಬ್ಯಾಂಕು, ಅದನ್ನು ಪ್ರಸ್ತುತಪಡಿಸಲು ವಿಶ್ವ ಜನಾರೋಗ್ಯ ಸಮಾವೇಶದೊಳಗೂ ನುಗ್ಗಿತ್ತು. ಆರೋಗ್ಯವೆಂದರೆ ಅನ್ನ, ನೀರು, ನೈರ್ಮಲ್ಯ, ಶಿಕ್ಷಣ, ವಸತಿ, ಲಿಂಗ ಸಮಾನತೆಗಳಲ್ಲ, ಬದಲಿಗೆ ದೊಡ್ಡ ದೊಡ್ಡ ಆಸ್ಪತ್ರೆಗಳು. ಅವು ಜನರಿಗೆ ಆರೋಗ್ಯವನ್ನು ಕೊಡಬಲ್ಲವು. ಆಸ್ಪತ್ರೆಗಳೇ ಆರೋಗ್ಯಕ್ಕೆ ಮುಖ್ಯ ಎಂದು ಎಲ್ಲಾ ಸರ್ಕಾರಗಳಿಗಾಗಲೇ ‘ಅರ್ಥ’ ಮಾಡಿಸಿ, ತರಲೆ ತೆಗೆಯುವ ಈ ಜನಸಂಘಟನೆಗಳಿಗೂ ವಿಷಯವನ್ನು ಅರ್ಥಮಾಡಿಸುವುದಕ್ಕಾಗಿ ಬಂದಿತ್ತದು ಅಲ್ಲಿ.

ತನ್ನ ದೃಷ್ಟಿಕೋನದ ಆರೋಗ್ಯವನ್ನು ಜನಪರ ಸಂಘಟನೆಗಳಿಗೆ ತೋರಿಸಲು ವಿಶ್ವಬ್ಯಾಂಕಿಗೆ ಸಾಧ್ಯವಾಗಲಿಲ್ಲ ಬಿಡಿ. ಆದರೇನು, ಅರಿತುಕೊಂಡಿದ್ದ ಸರ್ಕಾರಗಳ ಜೊತೆಗೆ ಅದು ತನ್ನ ಕಾರ್ಯಕ್ರಮಗಳನ್ನು ಮುಂದುವರೆಸಿದ್ದಂತೂ ನಿಜ. ಅಂದಿನಿಂದಲೂ ವಿಶ್ವಬ್ಯಾಂಕಿನ ಪ್ರಭಾವ ಮತ್ತು ಜನಸಂಘಟನೆಗಳ ಒತ್ತಾಯಗಳ ಮಧ್ಯೆ ಸರ್ಕಾರವು ಅತ್ತಿಂದಿತ್ತ ಓಲಾಡುತ್ತಲೇ ಇದೆ. ಒಂದು ಬಾರಿ ಜನಾಂದೋಲನಗಳಿಗೆ ಸ್ಪಂದಿಸಿದಂತೆ ತೋರಿದರೂ ಮರುಕ್ಷಣವೇ ಅದರ ದಿಕ್ಕು ಖಾಸಗೀಕರಣದತ್ತ ವಾಲಿರುತ್ತದೆ.

90ರ ದಶಕದ ನವಉದಾರೀಕರಣ ನೀತಿಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಪೂರ್ಣವಾಗಿ ಹಾಳುಗೆಡುವುವಲ್ಲಿ ಸಫಲವಾದವು. ಸಾಲ ಪಡೆಯಲು ಆರೋಗ್ಯ ಸೇವೆಯಂಥ ಕಾರ್ಯಕ್ರಮಗಳಿಂದ ಸರ್ಕಾರವು ಹಿಂದೆ ಸರಿಯಬೇಕೆಂಬುದೇ ಜಾಗತಿಕ ಹಣಕಾಸು ಸಂಸ್ಥೆಗಳ ಮೊದಲ ಷರತ್ತು. ಅಂತೆಯೇ ನೀರು, ಪಡಿತರದಂಥ ಮೂಲಭೂತ ಸೌಲಭ್ಯಗಳನ್ನು ಕೂಡ ಜನರು ಹಣ ಕೊಟ್ಟು ಪಡೆಯಲಿ ಎಂದಿವೆ. ಜನಸಂಘಟನೆಗಳ ಹೋರಾಟಗಳ ಫಲವಾಗಿ 2005ರಲ್ಲಿ ಸರ್ಕಾರವು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನವನ್ನು ಆರಂಭಿಸಿದರೂ ಅದಕ್ಕೆ ಬೇಕಾದಷ್ಟು ಹಣವನ್ನು ಬಜೆಟ್ಟಿನಲ್ಲಿ ಇರಿಸದೇ ಅದು ಯಶಸ್ವಿಯಾಗದಂತೆ ನೋಡಿಕೊಳ್ಳಲಾಯಿತು.

ಅಲ್ಮಾಅಟಾ ಘೋಷಣೆಯಂತೇ ಪ್ರಾಥಮಿಕ ಆರೋಗ್ಯಕ್ಕೆ ಸರ್ಕಾರವು ಪ್ರಾಶಸ್ತ್ಯ ನೀಡಬೇಕಾಗಿತ್ತು. ನೀರು, ನೈರ್ಮಲ್ಯ, ಲಸಿಕೆಗಳು, ಸ್ಥಳೀಯ ರೋಗಗಳ ತಡೆಯುವಿಕೆ, ಶಿಶು ಮತ್ತು ತಾಯಿಯ ಆರೋಗ್ಯ ಮತ್ತು ಔಷಧಗಳು... ಇವೆಲ್ಲವೂ ಉಚಿತವಾಗಿ, ಸಾರ್ವತ್ರಿಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕಾಗಿತ್ತು. ಆದರೆ ವಿಶ್ವಬ್ಯಾಂಕಿನ ಷರತ್ತಿನಂತೆ ಜನರನ್ನು ಎಪಿಎಲ್, ಬಿಪಿಎಲ್ ಎಂದು ವಿಭಜನೆ ಮಾಡಲಾಯಿತು. ಬಿಪಿಎಲ್‍ಗೆ ವೈದ್ಯಕೀಯ ಸೇವೆ ಉಚಿತ ಎನ್ನುತ್ತಲೇ ಉಳ್ಳವರು ಕೂಡ ಬಿಪಿಎಲ್ ಕಾರ್ಡಿಗಾಗಿ ಮುಗಿಬಿದ್ದಿರುವ ಪರಿಣಾಮವಾಗಿ ಸಿಗಬೇಕಾದವರಿಗೆ ಅದು ಸಿಗದಂತಾಯಿತು. ಉಚಿತವಾಗಿ ಸಿಗಬೇಕಾಗಿದ್ದ ಸೇವೆಗಳಿಗೆಲ್ಲ ಯೂಸರ್ ಫೀ ಕೊಟ್ಟಾಗ ಮಾತ್ರ ಸಿಗುವಂತಾಯಿತು.

ಅತ್ಯಂತ ವೇಗವಾಗಿ ನೀರು, ನೈರ್ಮಲ್ಯಗಳ ಖಾಸಗೀಕರಣ ನಡೆದಿದೆ. ವಿಶ್ವಬ್ಯಾಂಕಿನ ಸಾಲದ ಷರತ್ತಿಗೆ ಅನುಗುಣವಾಗಿ ಜನರ ಹಕ್ಕಾಗಿದ್ದ ನೀರನ್ನು ವಿದೇಶಿ ಕಂಪನಿಗಳಿಗೆ ಮಾರಿದ್ದೇವೆ. ಚಿಕ್ಕಪುಟ್ಟ ಪಟ್ಟಣಗಳಲ್ಲಿಯೂ ನೀರು ಸರಬರಾಜಿಗೆ ವಿದೇಶಿ ಕಂಪನಿಗಳು ಮುಂದೆ ಬಂದಿವೆ. ನೀರು, ನೈರ್ಮಲ್ಯಗಳು ದುಬಾರಿಯಾಗಿ ಕೈಗೆಟುಕದಾದಾಗ ಬಡವರು ಮತ್ತಷ್ಟು ಬಡತನಕ್ಕೆ ತಳ್ಳಲ್ಪಟ್ಟು, ಬಡವ– ಶ್ರೀಮಂತರ ನಡುವಿನ ಕಂದಕ ಇನ್ನಷ್ಟು ಅಗಲವಾಗಿದೆ.

ಕಾಳಿನ ಸಂಗ್ರಹ, ಸರಬರಾಜು, ಪಡಿತರ... ಎಲ್ಲಾ ಕ್ಷೇತ್ರಗಳಲ್ಲೂ ವಿದೇಶಿ ಕಂಪನಿಗಳು, ಸಾಲ ಕೊಡುವ ಸಂಸ್ಥೆಗಳ ಷರತ್ತುಗಳು. ಪಡಿತರವನ್ನೇಕೆ ಕೊಡುತ್ತೀರಿ ಎಂದು ಪ್ರಶ್ನಿಸುವ ವಿಶ್ವಬ್ಯಾಂಕಿಗೆ ಮೊಣಕಾಲೂರಿದೆ ನಮ್ಮ ಸರ್ಕಾರ. ಜೀವನಕ್ಕಾಗಿ ಪಡಿತರವನ್ನೇ ಅವಲಂಬಿಸಿದ್ದ ಜನರಿಗೆ ಅದು ಸಿಗದಂತೆ ಮಾಡಲು ಒಂದೆರಡು ನಾಟಕವೇ? ಅಂತ್ಯೋದಯ ಕಾರ್ಡಿನಿಂದ ಬಿಪಿಎಲ್, ಬಿಪಿಎಲ್‍ನಿಂದ ಎಪಿಎಲ್‍ಗೆ ಅದೇ ಜನ ತಳ್ಳಲ್ಪಡುತ್ತಿದ್ದಾರೆ. ಕಾರ್ಡು ಬದಲಾದಾಗೊಮ್ಮೆ ತಮ್ಮ ಗುರುತನ್ನು ಸಾಬೀತು ಮಾಡಬೇಕಾದ ಒತ್ತಡ. ಆಧಾರ್ ಮತ್ತು ಬಯೊಮೆಟ್ರಿಕ್‍ಗಳು ಇತ್ತೀಚಿನ ಅಸ್ತ್ರಗಳು. ಆ ಮಷಿನ್‌ಗಳನ್ನು ಅದೆಷ್ಟು ಪರಿಪೂರ್ಣವಾಗಿ ತಯಾರಿಸಲಾಗಿದೆಯೆಂದರೆ ಮೂರು ತಿಂಗಳಿಗೊಮ್ಮೆ ಅದು ಅದೇ ವ್ಯಕ್ತಿಯನ್ನು ಗುರುತಿಸದೆ ಆ ತಿಂಗಳಿನ ಆಹಾರದ ನಿರಾಕರಣೆ. ಎರಡು ತಿಂಗಳು ಕಾಳು ಪಡೆಯದಿದ್ದರೆ ಅವರ ಕಾರ್ಡೇ ಕ್ಯಾನ್ಸಲ್. ಹೊಸದಾಗಿ ಕಾರ್ಡು ಮಾಡಿಸಲು ವರ್ಷಾನುಗಟ್ಟಲೆ ತಿರುಗಬೇಕು.

ಆಹಾರ, ಉದ್ಯೋಗ ಖಾತರಿಯ ಕೆಲಸ, ಪಿಂಚಣಿ ಹೀಗೆ ಪ್ರತಿಯೊಂದು ಸರ್ಕಾರಿ ಸೌಲಭ್ಯಕ್ಕೂ ತಾನಿದಕ್ಕೆ ಅರ್ಹ ಎಂದು ಸಾಬೀತುಪಡಿಸುವುದರಲ್ಲಿಯೇ ಜನರ ಜೀವನವು ಸವೆದು ಹೋಗುತ್ತಿದೆ. ಕಾಗದ ಆಯುವವರ ಸಂಘಟನೆಯಲ್ಲಿ ತೊಡಗಿಕೊಂಡಿರುವ ಬೆಂಗಳೂರಿನ ‘ಹಸಿರು ದಳ’ ಎಂಬ ಸಂಸ್ಥೆ ಪ್ರತಿಪಾದಿಸುವಂತೆ ಒಬ್ಬ ವ್ಯಕ್ತಿ ಇಂದು ತನ್ನ ಗುರುತನ್ನು, ತಾನು ಈ ದೇಶದ ಪ್ರಜೆ ಎಂದು ಸಾಬೀತುಪಡಿಸಲು 19 ನಮೂನೆಯ ಕಾರ್ಡುಗಳನ್ನು ಹೊಂದಿರಬೇಕು.

ತಮಿಳುನಾಡು ಮತ್ತು ಕೇರಳ ರಾಜ್ಯಗಳು ಮಾತ್ರ ಎಲ್ಲರಿಗೂ ಆರೋಗ್ಯದತ್ತ ಗಟ್ಟಿಯಾದ ಹೆಜ್ಜೆ ಹಾಕಿವೆ. ತಾಯಿ ಮರಣ, ಶಿಶುಮರಣಗಳನ್ನು ತಡೆಯುವಲ್ಲಿ ಈ ರಾಜ್ಯಗಳು ಇಡೀ ದೇಶಕ್ಕೇ ಮೊದಲಿನ ಸ್ಥಾನದಲ್ಲಿರಲು ಮುಖ್ಯ ಕಾರಣ ತಾಯಂದಿರಲ್ಲಿ ಹೆಚ್ಚಿದ ಸಾಕ್ಷರತೆ. ಈ ದೃಶ್ಯ ಉಳಿದಾವ ರಾಜ್ಯಗಳಲ್ಲೂ, ಅಷ್ಟೇಕೆ ನಮ್ಮ ಕರ್ನಾಟಕದಲ್ಲೂಕಾಣದು. ಇದಕ್ಕೆ ಮುಖ್ಯ ಕಾರಣ ಶಿಕ್ಷಣ ಕ್ಷೇತ್ರದಲ್ಲಿ ಒಮ್ಮೆಲೇ ಹೆಚ್ಚಿರುವ ಖಾಸಗೀಕರಣ. ಇಂದು ಹಳ್ಳಿಹಳ್ಳಿಗೂ ನುಗ್ಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ಮುಚ್ಚಿಸುವಲ್ಲಿ ಸಫಲವಾಗುತ್ತಿರುವುದಷ್ಟೇ ಅಲ್ಲ, ಶಿಕ್ಷಣವನ್ನು ಅತಿ ದುಬಾರಿಯಾಗಿಸಿ ಬಡವರಿಗೆ ಅದು ಸಿಗದಂತೆ ಮಾಡುತ್ತಿವೆ. ಏಳು, ಎಂಟನೇ ಇಯತ್ತೆಯವರೆಗೆ ಕಲಿತ ಹುಡುಗರು ಶಾಲೆ ಬಿಟ್ಟೋಡಿ ಕಟ್ಟಡ ಕಾರ್ಮಿಕರಾಗಿದ್ದಾರೆ. ಬಾಲ್ಯ ವಿವಾಹವಾಗಿ ಹುಡುಗಿಯರು ಇನ್ನೊಂದು ಮನೆಗೆ ಪುಕ್ಕಟೆ ದುಡಿಯುವ ಜೀತದಾಳಾಗಿ ಹೋಗುತ್ತಿದ್ದಾರೆ. ಇಂಥವರಿಗೆ ಉಚಿತ ಆರೋಗ್ಯ ಸೇವೆ, ತಾಯ್ತನದ ಸೌಲಭ್ಯಗಳು ಸಿಗುವುದೆಂತು?

ಲಿಂಗ ಸಮಾನತೆ ಹೇಗೆ ಆರೋಗ್ಯವನ್ನು ನಿರ್ಧರಿಸುತ್ತದೆ? ಬಹುಶಃ ಈ ಲೇಖನವನ್ನು ಓದಬಲ್ಲ ಮಧ್ಯಮ ವರ್ಗದವರಿಗೆ ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಬಹುದು. ಆದರೆ ಹಳ್ಳಿಗಳಲ್ಲಿ, ಸಂಪ್ರದಾಯಸ್ಥ ಕುಟುಂಬಗಳಲ್ಲಿ ಇಂದಿಗೂ ಗಂಡನ ಊಟದ ನಂತರವೇ ಹೆಂಡತಿ ಉಣ್ಣಬೇಕು. ಕುಡಿಯುವ ಗಂಡನಿದ್ದರಂತೂ ಆತ ಅದೆಷ್ಟು ತಡವಾಗಿ ಮನೆಗೆ ಬಂದರೂ ಕಾಯುತ್ತ ಕುಳಿತು ಕುಡುಕನಿಗೆ ಬಡಿಸಿ, ಆತ ಇದ್ದುದನ್ನೆಲ್ಲ ಎತ್ತಿ ಬಿಸಾಡದಿದ್ದರೆ ತಾನು ಉಣ್ಣಬೇಕು. ಪ್ರತಿನಿತ್ಯ ಬಡಿತ, ಹೊಡೆತಗಳು. ಅಪೌಷ್ಟಿಕತೆಯಲ್ಲಿ ಬಳಲುವ ತಾಯಿ ಗರ್ಭಿಣಿಯಾದಾಗಲೂ ಮನೆಯ ವಾತಾವರಣದಲ್ಲಿ ಬದಲಾವಣೆ ಇಲ್ಲ. ರಕ್ತಹೀನತೆಯಿಂದ ಬಳಲುವ ಗರ್ಭಿಣಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಬ್ಬಿಣಾಂಶದ ಮಾತ್ರೆಗಳು ಉಚಿತವಾಗಿ ಲಭ್ಯವಿಲ್ಲ. ಅದನ್ನು ತಿನ್ನುವ ಮಹತ್ವದ ಕುರಿತು ಮಾಹಿತಿ ಹೇಳುವುದಿಲ್ಲ. ಅತಿಹೆಚ್ಚು ತಾಯಿ ಮರಣವಿರುವ ಬೆಳಗಾವಿ ಜಿಲ್ಲೆಯಲ್ಲಿ ಸಂಘಟನೆಯೊಂದು ಮಾಡಿರುವ ಅಧ್ಯಯನದಲ್ಲಿ ಕಂಡುಬಂದಿರುವ ಅಂಶವೆಂದರೆ ಸರ್ಕಾರವು ತಾಯಂದಿರನ್ನು ಉಳಿಸಲು ಮಾಡುವುದಕ್ಕಿಂತ ಹೆಚ್ಚು ಖರ್ಚನ್ನು ಬಡ ತಾಯಂದಿರೇ ತಮ್ಮ ಹೆರಿಗೆಗಾಗಿ ಮಾಡಿಕೊಳ್ಳುತ್ತಿದ್ದಾರೆ. ಗರ್ಭಿಣಿಯರು ತಮ್ಮ ಆಹಾರ, ವಿಶ್ರಾಂತಿಗಳ ಬಗ್ಗೆ ವಿಚಾರ ಮಾಡದೆಯೇ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್‌ಗಳನ್ನು ಮಾಡಿಸಿಕೊಳ್ಳುವುದಕ್ಕಾಗಿ ಓಡಾಡುತ್ತಿರಬೇಕು. ಬಿಪಿಎಲ್, ಆಧಾರ್ ಕಾರ್ಡ್ ಇಲ್ಲದಿದ್ದರೆ ಯಾವೊಂದು ಸೌಲಭ್ಯವೂ ಸಿಗದು.

ಬಜೆಟ್ಟಿನಲ್ಲಿ ಪ್ರತಿವರ್ಷವೂ ಕಡಿತವನ್ನೇ ಕಾಣುತ್ತಿರುವ ಆರೋಗ್ಯ ಕ್ಷೇತ್ರವು ಬಡಕಲಾಗುತ್ತಲೇ ಹೊರಟಿದೆ. ತನಗಿನ್ನೂ ಜನರ ಆರೋಗ್ಯದ ಬಗ್ಗೆ ಕಾಳಜಿ ಇದೆಯೆಂದು ತೋರ್ಪಡಿಸಿಕೊಳ್ಳಲು ಸರ್ಕಾರವು ವಿವಿಧ ಖಾಸಗಿ ಕಂಪನಿಗಳ ಜೊತೆಗೆ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತಿದೆ. ಖಾಸಗಿ- ಸರ್ಕಾರಿ ಒಡಂಬಡಿಕೆಯಲ್ಲಿ ಸೇವೆಗಳನ್ನು ಖಾಸಗಿಯಲ್ಲಿ ಪಡೆದುಕೊಳ್ಳಿ, ಅದಕ್ಕೆ ತಗುಲುವ ವೆಚ್ಚವನ್ನು ತಾನು ಭರಿಸುತ್ತೇನೆ ಎನ್ನುತ್ತದೆ ಸರ್ಕಾರ. ಪ್ರಾಥಮಿಕ, ದ್ವಿತೀಯ, ತೃತೀಯ ಹಂತದ ಆರೋಗ್ಯ ಕೇಂದ್ರಗಳಿಗೆ ಹಣಕಾಸಿನ ಬೆಂಬಲವನ್ನು ಪೂರ್ತಿಯಾಗಿ ಕಡಿತಗೊಳಿಸಿ ಆ ಹಣವನ್ನು ವಿಮೆಯಲ್ಲಿ ತೊಡಗಿಸುತ್ತದೆ. ಅದೆಷ್ಟು ವಿಮಾ ಯೋಜನೆಗಳು! ವಾಜಪೇಯಿ ಆರೋಗ್ಯಶ್ರೀ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನಾ, ಚಿರಂಜೀವಿ ಯೋಜನೆ, ರಾಜೀವ ಆರೋಗ್ಯಶ್ರೀ, ಸಮುದಾಯ ವಿಮಾ ಯೋಜನೆ, ಆರೋಗ್ಯ ರಕ್ಷಾ ಯೋಜನೆ, ತುರ್ತು ವೈದ್ಯಕೀಯ ಸೇವೆಗಳು (108ರ ಸೇವೆ), ಒಂದೊಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಒಂದೊಂದು ಸಂಸ್ಥೆಗೆ ವಹಿಸಿಕೊಡುವುದು, ಹೀಗೆ ಒಂದೆರಡಲ್ಲ ಹತ್ತೊಂಬತ್ತು ರೀತಿಯ ಆರೋಗ್ಯ ಸೇವೆಗಳಿಗಾಗಿ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಖಾಸಗಿ ಆರೋಗ್ಯ ಕ್ಷೇತ್ರವನ್ನು ಅವಲಂಬಿಸಿವೆ.

ಬಂಡವಾಳ ಹೂಡಿ ಲಾಭವನ್ನೇ ಗುರಿಯಾಗುಳ್ಳ ಕಂಪನಿಗಳು ಜನರಿಗೆ ಆರೋಗ್ಯವನ್ನು ಕೊಟ್ಟಾವೆಂದು ನಿರೀಕ್ಷಿಸುವಂಥ ಹುಚ್ಚುತನ ಇನ್ನೊಂದಿಲ್ಲ. ವಿಮೆ ಸಿಗುವುದೆಂದು ಅನವಶ್ಯಕ ಪರೀಕ್ಷೆಗಳು, ಅನವಶ್ಯಕ ಔಷಧೋಪಚಾರಗಳು ಖಾಸಗಿಯಲ್ಲಿ ಇರುವುದು ಸರ್ವವಿದಿತ. ವಿಮೆಯ ಹಣವನ್ನು ಎತ್ತಿಹಾಕಲು ಹೆಣ್ಣುಮಕ್ಕಳಿಗೆ ಅನವಶ್ಯಕವಾಗಿ ಗರ್ಭಕೋಶದ ಸರ್ಜರಿಗಳನ್ನು ಮಾಡುತ್ತಿರುವ ಎಷ್ಟೋ ಪ್ರಕರಣಗಳು ಬಯಲಿಗೆ ಬಂದಿವೆ. ಅಂಥ ವೈದ್ಯರಿಗೆ ಶಿಕ್ಷೆ ಆಗಬೇಕೆಂದು ಮಹಿಳಾ ಸಂಘಟನೆಗಳೆಲ್ಲ ಕೂಡಿ ಹೋರಾಟ ಮಾಡುತ್ತಿದ್ದರೂ ನ್ಯಾಯವಿನ್ನೂ ಬಲು ದೂರದಲ್ಲಿದೆ. ಮಧ್ಯಪ್ರದೇಶದಲ್ಲಂತೂ ವಿಮೆಹಣ ಹೊಡೆಯಲು ಗಂಡಸರಿಗೆ ಕೂಡ ಗರ್ಭಕೋಶದ ಸರ್ಜರಿ ಮಾಡಿದ ಭೂಪತಿಗಳಿದ್ದಾರೆ!

ಆರೋಗ್ಯಕ್ಕಾಗಿ ಬಜೆಟ್ಟಿನಲ್ಲಿ ಕೇವಲ ಶೇ 1.2 ಇಟ್ಟಿರುವ ಕೇಂದ್ರ ಸರ್ಕಾರ ಇದೀಗ ದೊಡ್ಡ ಡಂಗೂರದೊಂದಿಗೆ ‘ಆಯುಷ್ಮಾನ್ ಭಾರತ’ದ ಘೋಷಣೆ ಮಾಡಿದೆ. ಹೆಸರು ಸಂಸ್ಕೃತೀಕರಣಗೊಂಡಿದ್ದರ ಹೊರತಾಗಿ ಇನ್ನೇನೂ ಹುರುಳಿಲ್ಲದ ಪ್ರಧಾನ ಮಂತ್ರಿಗಳ ಈ ಮಹತ್ವಾಕಾಂಕ್ಷೀ ಯೋಜನೆಯಲ್ಲಿ ದ್ವಿತೀಯ (ತಾಲ್ಲೂಕು ಮಟ್ಟದ) ಮತ್ತು ತೃತೀಯ ಹಂತದ (ಜಿಲ್ಲಾ ಮಟ್ಟದ) ಆರೋಗ್ಯ ಸೇವೆಗಳಲ್ಲಿ ಸರ್ಕಾರೇತರ ಸಂಸ್ಥೆಗಳೊಂದಿಗೆ ಒಪ್ಪಂದ, ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ, ಆರೋಗ್ಯ ಸೇವೆಗಳನ್ನು ಖಾಸಗಿ ಕಂಪನಿಗಳಿಂದ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸುವುದು ಮತ್ತು ವಿಮೆ ಇವೆ. ವಿಮೆಗಾಗಿ ಇನ್ಶೂರೆನ್ಸ್ ಪದದ ಬದಲಾಗಿ ಅಶೂರೆನ್ಸ್ ಪದವನ್ನು ಬಳಸಲಾಗಿದೆಯಷ್ಟೇ. ‘ಖಾಸಗಿ ವಿಮಾ ಕಂಪನಿಗಳೇ ಆಯುಷ್ಯವಂತರಾಗಿರಿ, ಹೆಚ್ಚು ಕಾಲ ಬಾಳಿರಿ’ ಎಂದಿದರ ತತ್ವ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು