ಹೂವೆಲ್ಲ ಘಮಘಮ, ನೋವೆಲ್ಲಾ ನಮಗಮ್ಮ

7

ಹೂವೆಲ್ಲ ಘಮಘಮ, ನೋವೆಲ್ಲಾ ನಮಗಮ್ಮ

Published:
Updated:

ನನ್ನ ಹೆಸರು ರೇಣುಕಮ್ಮ ಎಂ. ವಯಸ್ಸು 62. ನಾನು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನ ಜೋಗುಪಾಳ್ಯದಲ್ಲಿಯೇ. ಕಳೆದ 35 ವರ್ಷದಿಂದ ಹಲಸೂರಿನ ಜೋಗುಪಾಳ್ಯದ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಹೂ ಮಾರುತ್ತಿದ್ದೇನೆ. 10 ಅಡಿ ಅಗಲ 20 ಅಡಿ ಉದ್ದ ಸ್ವಂತ ಮನೆ ಇದೆ. ಈ ಚಿಕ್ಕ ಮನೆಯಲ್ಲಿ ನನ್ನ ಇಬ್ಬರು ತಮ್ಮ ಹಾಗೂ ಅವನ ಹೆಂಡತಿ ಎಲ್ಲರೂ ವಾಸ ಮಾಡುತ್ತಿದ್ದೇವೆ.

ಚಿಕ್ಕವಳಿದ್ದಾಗಲೇ ತಂದೆ–ತಾಯಿಯನ್ನು ಕಳೆದುಕೊಂಡ ನಾನು ಅವರ ನಂತರ ನನ್ನ ತಂಗಿ, ತಮ್ಮಂದಿರ ಜವಾಬ್ದಾರಿ ವಹಿಸಿಕೊಂಡೆ. ನನ್ನ ತಂಗಿಗೆ ಕಾಲು ನೋವು ಇತ್ತು. ಅದಕ್ಕಾಗಿ ಆಸ್ಪತ್ರೆಗೆ ಸುಮಾರು ಹಣ ಖರ್ಚು ಮಾಡಿದೆವು. ಆದರೆ ಏನೂ ಪ್ರಯೋಜನವಾಗಲಿಲ್ಲ. ಅವಳು 12 ವರ್ಷದವಳಿದ್ದಾಗ ತೀರಿಕೊಂಡಳು. ಅನಂತರ ತಮ್ಮಂದಿರೇ ನನಗೆ ಮಕ್ಕಳಾದರು. ನಾನು ಮದುವೆ ಆಗಿಲ್ಲ. ನೋವುಗಳಿಂದಲೇ ನನ್ನ ಕಣ್ಣೀರು ಬತ್ತಿ ಹೋಗಿವೆ. ಆ ದೇವರಿಗೆ ನಮ್ಮನ್ನು ಕಾಡಿಸುವುದು ಎಂದರೆ ಬಲು ಪ್ರೀತಿ.

12 ವರ್ಷ ವಯಸ್ಸಿನಿಂದ ಪಾತ್ರೆ ತೊಳೆಯುವ ಕೆಲಸಕ್ಕೆ ಹೋಗುತ್ತಿದ್ದೆ. ನಂತರ ಹೂ ಕಟ್ಟುವ ಕೆಲಸ ಕಲಿತೆ. ಈಗ ಹೂವು ತಂದು ಕಟ್ಟಿ ಮಾರುತ್ತಿದ್ದೇನೆ. ನಾವು ಬಡವರೇ. ಆದರೆ ನಮ್ಮಲ್ಲಿ ಪ್ರೀತಿ ಜಾಸ್ತಿ ಇದೆ. ತಮ್ಮನಿಗೆ ಮದುವೆ ಮಾಡಿದ್ದೇನೆ. ತಮ್ಮನ ಹೆಂಡತಿ ಕೂಡಾ ನನ್ನೊಟ್ಟಿಗೆ ಹೂವು ಮಾರುವ ಕಸುಬು ಮಾಡುತ್ತಿದ್ದಾಳೆ.

ಬೆಳಿಗ್ಗೆ 8 ರಿಂದ ರಾತ್ರಿ 10 ಗಂಟೆವರೆಗೂ ಒಂದೇ ಕಡೆ ಕುಳಿತು ಹೂ ಕಟ್ಟುವುದರಿಂದ ಬೆನ್ನು ನೋವು ಬರುತ್ತದೆ. ಕೈ ನೋವು ಬರುತ್ತೆ. ಆದರೂ ಬದುಕು ಸಾಗಿಸುವುದು ಅನಿವಾರ್ಯ.

ಒಂದು ದಿನ ಚೆನ್ನಾಗಿ ವ್ಯಾಪಾರ ಆದರೆ ಮತ್ತೊಂದು ದಿನ ವ್ಯಾಪಾರ ಇರಲ್ಲ. ವ್ಯಾಪಾರ ಚೆನ್ನಾಗಿ ಆದ್ರೆ ಒಂದು ದಿನಕ್ಕೆ ₹120 ಲಾಭ ಆಗುತ್ತೆ, ಕೆಲವೊಮ್ಮೆ ಲಾಭ ಆಗುವುದಿಲ್ಲ. ತಮ್ಮಂದಿರು ದಿನಗೂಲಿ ಕೆಲಸಕ್ಕೆ ಹೋಗುತ್ತಾರೆ.

ನಾನು ಸ್ವಆಸಕ್ತಿಯಿಂದಲೇ ಕನ್ನಡ ಬರೆಯುವುದನ್ನು, ಓದುವುದನ್ನು ಕಲಿತಿದ್ದೇನೆ. 7ನೇ ತರಗತಿ ಪರೀಕ್ಷೆ ಪಾಸಾಗಿದ್ದೇನೆ. ಈಗ ಗ್ರಂಥಾಲಯದಲ್ಲಿ ಮೂರು ಕಾರ್ಡ್ ಮಾಡಿಸಿದ್ದೇನೆ. ಗ್ರಂಥಾಲಯಕ್ಕೆ ಹೋಗಿ ಪುಸ್ತಕಗಳು ಓದುತ್ತೇನೆ. ಪುಸ್ತಕ ಓದುವುದರಿಂದ ನೆಮ್ಮದಿ ಸಿಗುತ್ತದೆ. ಎಲ್ಲ ದಿನಪತ್ರಿಕೆಗಳನ್ನು ಓದುತ್ತೇನೆ. ನಿಯತಕಾಲಿಕೆಗಳಲ್ಲಿ ಬರುವ ಕಥೆ, ಕಾದಂಬರಿಗಳನ್ನು ಓದುತ್ತೇನೆ. ಎಚ್‌.ಜಿ.ರಾಧಾದೇವಿ ಅವರ ಕಾದಂಬರಿಗಳೆಂದರೆ ನನಗಿಷ್ಟ. ಓದು ಜೀವನದಲ್ಲಿ ಬದುಕುವ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂಬುದು ನನ್ನ ನಂಬಿಕೆ.

ನನಗೆ ಹೃದಯ ಕಾಯಿಲೆ, ಬಿಪಿ ಇದೆ. ದಿನಕ್ಕೆ ಆರು ಮಾತ್ರೆ ತಗೋತೀನಿ. ನಮ್ಮಂತ ಬಡವರಿಗೆ ಆರೋಗ್ಯ ಭಾಗ್ಯನೂ ಇಲ್ಲ, ರೇಷನ್ ಕಾರ್ಡ್ ಕೂಡ ಎಪಿಎಲ್ ಕಾರ್ಡ್‌ ಕೊಟ್ಟಿದ್ದಾರೆ. ಏನು ಮಾಡೋಕಾಗುತ್ತೆ ಬಂದದ್ದನ್ನ ಎದುರಿಸಿಕೊಂಡು ಜೀವನ ಸಾಗಿಸಬೇಕಷ್ಟೆ.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !