ಸೋಮವಾರ, ಮೇ 23, 2022
30 °C

ಬಡ ಹೊಟ್ಟೆಗೆ ಇಸ್ತ್ರಿ ಪೆಟ್ಟಿಗೆ ಆಧಾರ

ವಿದ್ಯಾಶ್ರೀ ಗಾಣಿಗೇರ Updated:

ಅಕ್ಷರ ಗಾತ್ರ : | |

Deccan Herald

ನ ನ್ನ ಹೆಸರು ನಾಗರಾಜ್. ಮೊಟಪ್ಪಪಾಳ್ಯದ ನಿವಾಸಿ. ನನಗೆ 60 ವರ್ಷ. ಬಡತನದಿಂದ ಬಂದ ನಾನು ಈಗಲೂ ಬಡತನದಲ್ಲಿಯೇ ಇದ್ದೇನೆ. ಜೀವನದಲ್ಲಿ ಸಾಕಷ್ಟು ನೋವುಗಳನ್ನ ಕಂಡಿದ್ದೇನೆ,  ಈಗಲೂ ನೋವಿನಿಂದಲೇ ಕುಟುಂಬವನ್ನು ಸಲಹುತ್ತಿದ್ದೇನೆ. ಓದಿದ್ದು ಐದನೇ ತರಗತಿವರೆಗೆ ಮಾತ್ರ. ಶಿಕ್ಷಣದಲ್ಲಿ ವಂಚಿತನಾದ ನನ್ನನ್ನು ಕೈ ಹಿಡಿದಿದ್ದು ಇಸ್ತ್ರಿ ಪೆಟ್ಟಿಗೆ. ಚಿಕ್ಕಂದಿನಿಂದಲೇ ನಾನು ಇಸ್ತ್ರಿ ಮಾಡುವ ವೃತ್ತಿಯಲ್ಲಿ ನಿರತನಾಗಿದ್ದೇನೆ. ಬಡತನದಿಂದ ಬಂದ ನನ್ನ ಕುಟುಂಬಕ್ಕೆ ಆಸರೆಯಾಗಿದ್ದು ಈ ವೃತ್ತಿಯೇ. ಇದರಿಂದ ನನ್ನ ಬದುಕಿನ ಆರ್ಥಿಕ ಪರಿಸ್ಥಿತಿ ಸುಧಾರಿಸದೇ ಇದ್ದರೂ ಜೀವನವನ್ನು ಮುಂದೆ ನಡೆಸಲು ಈ ಕೆಲಸ ಅವಶ್ಯವಿತ್ತು. ನನ್ನ ಅಪ್ಪನೂ ಇದೇ ಕೆಲಸ ಮಾಡುತ್ತಿದ್ದರಿಂದ ಈ ವೃತ್ತಿ ನನ್ನ ಕುಟುಂಬದಿಂದ ಬಂದ ಬಳುವಳಿ ಎನ್ನಬಹುದು. ನಾನು ಸುಮಾರು 43 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿದ್ದೇನೆ. .

ನಾವೆಲ್ಲಾ ದಿನಗೂಲಿಗಳ ಹಾಗೆ ಕೆಲಸಮಾಡೋರು. ಅವತ್ತು ದುಡಿದರೆ ಮಾತ್ರ ಕುಟುಂಬದವರ ಪಾಲಿಗೆ ಹಿಟ್ಟು, ಇಲ್ಲಾಂದ್ರೆ ಗಂಜೀನೆ ಗತಿ.  ಇಷ್ಟೇ ಜೀವನ...    

ನನ್ನ ಹೆಂಡತಿ ರತ್ನಮ್ಮ. ಮನೆ ಕೆಲಸ ಮುಗಿಸಿ ಮಧ್ಯಾಹ್ನ ವೇಳೆಗೆ ನನ್ನ ಕೆಲಸಕ್ಕೆ ಕೈ ಜೋಡಿಸುತ್ತಾಳೆ. ಜೀವನದ ಬಂಡಿ ಸಾಗಲು ಇಬ್ಬರು ದುಡಿಯಲೇ ಬೇಕು. ನನಗೆ ಇಬ್ಬರು ಮಕ್ಕಳು. ಮಗಳಿಗೆ ಮದುವೆ ಮಾಡಿ ಕೊಟ್ಟಿದ್ದೇನೆ. ಮಗ ಇಂಟರ್‌ನೆಟ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅವನಿಗೆ ತಿಂಗಳಿಗೆ ₹15000 ಸಂಬಳ. ನಾವು ಮೂವರು ದುಡಿಯುತ್ತಿದ್ದರೂ, ಇಂತಾ ದೊಡ್ಡ ನಗರದಲ್ಲಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಇನ್ನು ನನ್ನ ಸಹೋದರರೂ ಕೂಡಾ ಇದೇ ಕೆಲಸವನ್ನು ಮಾಡುತ್ತಿದ್ದು ಒಬ್ಬ ಮಾತ್ರ ಆಟೊ ಚಾಲಕನಾಗಿದ್ದಾನೆ. 

ಬೆಳಿಗ್ಗೆ ಎಂಟು ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಕೆಲಸವನ್ನು ಮಾಡುತ್ತೇನೆ. ಒಂದು ಜೊತೆ ಬಟ್ಟೆಗೆ ಇಸ್ತ್ರಿ ಮಾಡಲು ₹15. ದಿನಕ್ಕೆ 20 ರಿಂದ 30 ಜೊತೆ ಬಟ್ಟೆಗಳು ಬರುತ್ತವೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಂದ ಬಟ್ಟೆಗಳನ್ನ ನಾನು ಇಸ್ತ್ರಿ ಮಾಡುತ್ತೇನೆ. ನಂತರ ಬಂದ ಬಟ್ಟೆಗಳನ್ನು ನನ್ನ ಹೆಂಡತಿ ಇಸ್ತ್ರಿ ಮಾಡುತ್ತಾಳೆ. ಅರ್ಧಾಂಗಿ ಎನ್ನುವ ಹಾಗೆ ಎಲ್ಲ ಕೆಲಸದಲ್ಲಿಯೂ ಅವಳಿಗೂ ಪಾಲು ಇದೆ. ನಾನು ಅವಳಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುತ್ತೇನೆ. ಇಬ್ಬರೂ ಒಬ್ಬರಿಗೊಬ್ಬರು ಹೊಂದಿಕೊಂಡು ಕೆಲಸವನ್ನು ಮಾಡುತ್ತೇವೆ.

ಈ ಕೆಲಸದಿಂದ ಬರೋ ಅಷ್ಟಿಷ್ಟೂ ಹಣ ಕೂಡಿಟ್ಟು ಮಕ್ಕಳಿಗೆ ಕೈಯಲ್ಲಿ ಆದಷ್ಟೂ ಶಿಕ್ಷಣ ಕೊಡಿಸಿದ್ದೇನೆ. ಮಗಳ ಬಾಣಂತನ, ಮಗನ ಮದುವೆ ಇಷ್ಟಕ್ಕೂ ಹಣ ಹೊಂದಿಸೋದೆ ದೊಡ್ಡ ಕಷ್ಟ. ಬೆಟ್ಟದಷ್ಟು ಜವಾಬ್ದಾರಿ ಇದೆ. ಮನುಷ್ಯ ಸಾಯುವವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಜವಾಬ್ದಾರಿ ಇದ್ದೇ ಇರುತ್ತದೆ.  ನಮ್ಮ ಸುಖ ಸಂಸಾರ ಆಮೆ ವೇಗದಲ್ಲಿ ಸಾಗುತ್ತಿದೆ. ನಮ್ಮದು ಚಿಕ್ಕ ಕುಟುಂಬ. ಕಷ್ಟ– ಸುಖ ಏನೇ ಇರಲಿ ಸಂತೋಷದಿಂದ ಎದುರಿಸುತ್ತೇವೆ. ಕಷ್ಟ ಮನುಷ್ಯನಿಗೆ ಬರಲಾರದೆ ಮರಕ್ಕಾ ಬಂದೀತು?

ನಮಗೆ ಯಾವುದೇ ಸೌಲಭ್ಯವಿಲ್ಲ. ಬದುಕೋದೆ ಕಷ್ಟ ಅಂತಾ ಕೂತ್ರೆ, ಜೀವನವೇ ಕಷ್ಟ ಆಗುತ್ತೆ. ಬಂದಿದ್ದು ಬರ್ಲಿ ಮುನ್ನಡೆಯುತ್ತೇನೆ ಅನ್ನೋ ಧೈರ್ಯ ಇದ್ದರೆ ಸಾಕು. ಎಲ್ಲಾನೂ ಗೆಲ್ತೀವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.