ಶುಕ್ರವಾರ, ಮಾರ್ಚ್ 31, 2023
24 °C
ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಣೆಗೆ ಕ್ಷಣಗಣನೆ

ಬಸವ ಜಯಂತಿಗೆ ಬಸವ ಜನ್ಮಭೂಮಿ ಸಜ್ಜು..!

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕಾಯಕ, ದಾಸೋಹದ ಮಹತ್ವವನ್ನು ಸಾಮಾನ್ಯರಿಗೂ ಮನಮುಟ್ಟುವಂತೆ ವಿವರಿಸಿ, ಸಮಾನತೆಯ ತತ್ವಗಳನ್ನು ಪ್ರತಿಪಾದಿಸಿದ, ದಾರ್ಶನಿಕ ಮಹಾತ್ಮ ಬಸವೇಶ್ವರರ ಜನ್ಮದಿನ (ಅಕ್ಷಯ ತೃತೀಯ) ಇಂದು.

ಹನ್ನೆರಡನೇ ಶತಮಾನದಲ್ಲೇ ಸಾಮಾಜಿಕ, ಧಾರ್ಮಿಕ ಕ್ರಾಂತಿಯ ಮೂಲಕ ಸಮಾಜದಲ್ಲಿ ಹಲವು ಸುಧಾರಣೆಗಳನ್ನು ಅನುಷ್ಠಾನಗೊಳಿಸದ ಕೀರ್ತಿ ಜಗಜ್ಯೋತಿ ಬಸವೇಶ್ವರರದ್ದು.

ತುಳಿತಕ್ಕೊಳಗಾದವರು, ಶೋಷಿತರು, ನೊಂದವರ ಧ್ವನಿಯಾಗಿ, ಮೂಢನಂಬಿಕೆಯ ಕಂದಾಚಾರಗಳನ್ನು ಕಿತ್ತೆಸೆದ ಮಹಾಮಹಿಮರು ಇವರು. ಮಹಿಳೆಯರಿಗೆ ಸಮಾನತೆಯ ಹಕ್ಕು ನೀಡಿದವರು ಬಸವೇಶ್ವರರು. ಪ್ರಜಾಪ್ರಭುತ್ವದ ಪರಿಕಲ್ಪನೆಯಲ್ಲಿ ಅನುಭವ ಮಂಟಪ ಆರಂಭಿಸಿ, ದೇಶದ ಎಲ್ಲೆಡೆಯ ಶರಣ–ಶರಣೆಯರಿಗೆ ಆಸರೆ ಒದಗಿಸಿ, ವಚನ ಸಾಹಿತ್ಯ ಚಳವಳಿಗೆ ಪ್ರೇರಣೆಯಾದವರು ಅಣ್ಣ ಬಸವಣ್ಣ.

ಜಗಜ್ಯೋತಿ ಬಸವೇಶ್ವರರ ಜನ್ಮಭೂಮಿ ವಿಜಯಪುರ ಜಿಲ್ಲೆ. ಕರ್ಮಭೂಮಿ ಬೀದರ್‌ ಜಿಲ್ಲೆಯ ಬಸವಕಲ್ಯಾಣ. ಐಕ್ಯರಾಗಿದ್ದು ಅವಿಭಜಿತ ವಿಜಯಪುರ ಜಿಲ್ಲೆಯ ಕೂಡಲಸಂಗಮದಲ್ಲಿ. ಬಸವನಬಾಗೇವಾಡಿಯ ನಂದೀಶ್ವರನ ಅನುಗ್ರಹದಿಂದಲೇ ಬಸವಣ್ಣ ಮಾದರಸ–ಮಾದಲಾಂಬಿಕೆಯ ಪುತ್ರರಾಗಿ ಜನಿಸಿದರು ಎಂಬುದು ಇತಿಹಾಸದ ಪುಟದಲ್ಲಿ ದಾಖಲಾಗಿದೆ.

ಬಸವನಬಾಗೇವಾಡಿಯಲ್ಲಿ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಬಸವ ಜನ್ಮ ಸ್ಮಾರಕದಲ್ಲೂ ಈ ಕಥಾನಕ ಚಿತ್ರಾವಳಿ, ಕಲಾಕೃತಿಯಾಗಿ ರೂಪುಗೊಂಡಿದೆ.

ಜಯಂತಿಗೆ ಕ್ಷಣಗಣನೆ

ಬಸವ ಜನ್ಮಭೂಮಿ ಬಸವನಬಾಗೇವಾಡಿ ಸೇರಿದಂತೆ ವಿಜಯಪುರ ಜಿಲ್ಲೆಯ ಎಲ್ಲೆಡೆ ಬಸವ ಜಯಂತಿ ಆಚರಣೆಗೆ ಸಕಲ ಸಿದ್ಧತೆ ನಡೆದಿವೆ. ರಾಜ್ಯ ಸರ್ಕಾರ ಸಹ ಬಸವ ಜಯಂತಿ ಆಚರಿಸುತ್ತಿದ್ದು, ಚುನಾವಣಾ ನೀತಿ ಸಂಹಿತೆಯಿಂದ ಅದ್ಧೂರಿ ಕಾರ್ಯಕ್ರಮ ನಡೆಯುತ್ತಿಲ್ಲ. ಸಾಂಕೇತಿಕವಾಗಿ ಜಯಂತಿ ನಡೆಯಲಿದೆ.

ವೀರಶೈವ ಲಿಂಗಾಯತ, ಲಿಂಗಾಯತ ಸಂಘಟನೆಗಳು, ಪಂಗಡಗಳು ಜಿಲ್ಲೆಯಾದ್ಯಂಥಹ ಉತ್ಸುಕತೆಯಿಂದ ಬಸವ ಜಯಂತಿ ಆಚರಣೆಗೆ ಈಗಾಗಲೇ ಸಕಲ ಸಿದ್ಧತೆಗಳನ್ನು ಪೂರೈಸಿವೆ. ಮಂಗಳವಾರ ನಸುಕಿನಿಂದಲೇ ಹಲವೆಡೆ ಬಸವ ಸ್ಮರಣೆ, ಜಪ ನಡೆಯಲಿದೆ.

ದಿನವಿಡಿ ವಿವಿಧೆಡೆ ಅಣ್ಣ ಬಸವಣ್ಣನವರ ಸಾಮಾಜಿಕ ಕೊಡುಗೆ, ತತ್ವ, ಆದರ್ಶಗಳ ಗುಣಗಾನ ನಡೆಯಲಿದೆ. ಬಹುತೇಕರು ತಮ್ಮ ಮನೆಗಳಲ್ಲೂ ಬಸವೇಶ್ವರರಿಗೆ ಪೂಜೆ ಸಲ್ಲಿಸಲಿದ್ದಾರೆ. ವಿಶೇಷ ಪ್ರಾರ್ಥನೆ ಸಲ್ಲಿಸಿ, ನೈವೇದ್ಯವನ್ನು ಅರ್ಪಿಸುವುದು ವೈಶಿಷ್ಟ್ಯ.

ವಿಜಯಪುರದ ಪ್ರತಿಷ್ಠಿತ ಸಿದ್ಧೇಶ್ವರ ಸಂಸ್ಥೆ, ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ಸೇರಿದಂತೆ, ವಿವಿಧೆಡೆ ಬಸವ ಜಯಂತಿ ಆಯೋಜನೆಗೊಂಡಿದೆ. ಬಸವ ಜಯಂತಿಗಾಗಿಯೇ ನಗರದ ಸಿದ್ಧೇಶ್ವರ ಗುಡಿ ರಸ್ತೆಯನ್ನು ಶೃಂಗರಿಸಲಾಗಿದೆ.

ಬಸವೇಶ್ವರ ವೃತ್ತದಲ್ಲಿನ ಅಶ್ವಾರೂಢ ಬಸವೇಶ್ವರರ ಮೂರ್ತಿ ಸ್ವಚ್ಛಗೊಳಿಸಲಾಗಿದೆ. ವೃತ್ತಕ್ಕೆ ದೀಪಾಲಂಕಾರ ಮಾಡುವ ಮೂಲಕ ಮೆರುಗು ಹೆಚ್ಚಿಸಲಾಗಿದೆ. ಅಶ್ವಾರೂಢ ಬಸವೇಶ್ವರರ ಕೊರಳಿಗೆ ವಿಜಯಪುರಿಗರು ಸಂಭ್ರಮದಿಂದ ಹೂ ಮಾಲೆ ಹಾಕಲಿಕ್ಕಾಗಿಯೇ ಹೈಡ್ರಾಲಿಕ್ ಲಿಫ್ಟ್‌ ವ್ಯವಸ್ಥೆ ಮಾಡಲಾಗಿದೆ.

ಶಿವ ಭಜನೆ–ಪ್ರವಚನ

‘ಸಿಂದಗಿ ಪಟ್ಟಣದಲ್ಲಿ ಬಸವ ಜಯಂತಿ ಅಂಗವಾಗಿಯೇ ಮೇ ೧ರಿಂದ ೭ರವರೆಗೆ ಬಸವ ಮಂಟಪದಲ್ಲಿ ಬೀದರ್‌ನ ಬಸವಧರ್ಮ ಪೀಠದ ಮಾತಾಜಿ ಸತ್ಯವತಿ ಅವರಿಂದ ಬಸವ ತತ್ವ ಪ್ರಚಾರ ಪ್ರವಚನ ನಡೆದಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬಸವಣ್ಣನವರ ಭಾವಚಿತ್ರ ಮೆರವಣಿಗೆಗೆ ಅನುಮತಿ ಸಿಕ್ಕಿಲ್ಲ. ಮಂಗಳವಾರ ಸಂಜೆ ಬಸವ ಮಂಟಪದಲ್ಲಿ ಬಸವ ಜಯಂತಿ ಆಚರಿಸಲಿದ್ದೇವೆ’ ಎಂದು ರಾಷ್ಟ್ರೀಯ ಬಸವದಳದ ಶಿವಾನಂದ ಕಲಬುರ್ಗಿ ತಿಳಿಸಿದ್ದಾರೆ.

ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರದಿಂದಲೇ ಶಿವಭಜನೆ ಆರಂಭವಾಗಿದೆ. ಬಸವೇಶ್ವರ ವೃತ್ತದ ಸುತ್ತಲಿನ ಉದ್ಯಾನ ಹಚ್ಚ ಹಸುರಾಗಿ ಕಂಗೊಳಿಸುವಂತೆ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ನೀರಿನ ಕಾರಂಜಿ, ವಿದ್ಯುತ್ ದೀಪದ ಅಲಂಕಾರದಿಂದ ಬಸವೇಶ್ವರ ವೃತ್ತದ ಅಂದ ಹೆಚ್ಚಿಸಿದ್ದಾರೆ.

ಬಸವೇಶ್ವರ ದೇವಸ್ಥಾನ, ಬಸವ ಜನ್ಮ ಸ್ಮಾರಕಕ್ಕೂ ವಿದ್ಯುತ್ ದೀಪದ ಅಲಂಕಾರ ಮಾಡಲಾಗಿದೆ. ಜನ್ಮ ಸ್ಮಾರಕದಲ್ಲಿ ಮಂಗಳವಾರ ಬೆಳಿಗ್ಗೆ ಬಸವೇಶ್ವರರ ತೊಟ್ಟಲೋತ್ಸವ ನಡೆಯಲಿದೆ. ಸಂಜೆ ಬಸವೇಶ್ವರ ದೇವಾಸ್ಥಾನದ ಆವರಣದಲ್ಲಿ ವಿಶೇಷ ಉಪನ್ಯಾಸ, ವಚನ ಸಂಗೀತ ಕಾರ್ಯಕ್ರಮ ಜರುಗಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು