ಬುಧವಾರ, ಸೆಪ್ಟೆಂಬರ್ 22, 2021
21 °C
ಬಿಬಿಎಂಪಿ: ಸಕಾಲಕ್ಕೆ ಆಸ್ತಿ ವಿವರ ಸಲ್ಲಿಸಿಲ್ಲ l ಕ್ರಮ ಕೈಗೊಳ್ಳಲು ಪ್ರಾದೇಶಿಕ ಆಯುಕ್ತರ ಸೂಚನೆ

32 ಸದಸ್ಯರಿಗೆ ಅನರ್ಹತೆ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಕಾಲಕ್ಕೆ ಆಸ್ತಿ ವಿವರ ಸಲ್ಲಿಸದ ಕಾರ್ಪೊರೇಟರ್‌ಗಳ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಪ್ರಾದೇಶಿಕ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಪತ್ರ ಬರೆದಿದ್ದು, ಇದರಿಂದಾಗಿ 32 ಸದಸ್ಯರಿಗೆ ಅನರ್ಹತೆಯ ಭೀತಿ ಎದುರಾಗಿದೆ.

2016ರಲ್ಲಿ 14 ಹಾಗೂ 2017ರಲ್ಲಿ 16 ಕಾರ್ಪೊರೇಟರ್‌ಗಳು ಸಕಾಲದಲ್ಲಿ ಆಸ್ತಿ ವಿವರ ಸಲ್ಲಿಸಿಲ್ಲ. ಆರು ಜನ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಲಾಗಿದೆ. ದೂರು ಎದುರಿಸುತ್ತಿರು 36 ಕಾರ್ಪೊರೇಟರ್‌ಗಳಲ್ಲಿ ಇಬ್ಬರು (ರಮಿಳಾ ಉಮಾಶಂಕರ್‌ ಹಾಗೂ ಏಳುಮಲೈ) ಮೃತಪಟ್ಟಿದ್ದಾರೆ. ಇನ್ನಿಬ್ಬರ ಹೆಸರುಗಳು (ಜಿ.ಬಾಲಕೃಷ್ಣ ಹಾಗೂ ಜಿ.ಮಂಜುನಾಥ್‌) ಎರಡೂ ವರ್ಷಗಳಲ್ಲಿ ಸಕಾಲದಲ್ಲಿ ಮಾಹಿತಿ ನೀಡಿಲ್ಲ. ಹೀಗಾಗಿ 32 ಜನರ ಮೇಲೆ ಅನರ್ಹತೆಯ ತೂಗುಗತ್ತಿ ತೂಗುತ್ತಿದೆ.

2017ನೇ ಸಾಲಿನ ಆಸ್ತಿ ವಿವರವನ್ನು ಆ ವರ್ಷದ ಅಕ್ಟೋಬರ್‌ನಲ್ಲಿಯೇ ಸದಸ್ಯರು ಸಲ್ಲಿಸಬೇಕಿತ್ತು. 2018ರ ಜುಲೈ 9ರವರೆಗೆ 16 ಮಂದಿ ವಿವರ ಸಲ್ಲಿಸಿಲ್ಲ ಎಂದು ಮಾಹಿತಿ ಹಕ್ಕಿನಡಿ ಬಿಬಿಎಂಪಿ ವಿವರ ಒದಗಿಸಿದೆ.

ಈ ಮಾಹಿತಿ ಆಧರಿಸಿ ‌ನವ ಭಾರತಿ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷ ಅನಿಲ್ ಶೆಟ್ಟಿ ಎಂಬುವರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದರು. ಬಿಬಿಎಂಪಿ ಆಯುಕ್ತರಿಗೆ ಏ 3ರಂದು ಪತ್ರ ಬರೆದಿರುವ ಪ್ರಾದೇಶಿಕ ಆಯುಕ್ತರು, ಸದಸ್ಯತ್ವ ರದ್ದುಗೊಳಿಸುವ ಬಗ್ಗೆ ಕ್ರಮ ಕೈಗೊಂಡು ಮಾಹಿತಿ ಒದಗಿಸುವಂತೆ ಸೂಚಿಸಿದ್ದಾರೆ.

2016ರಲ್ಲೂ 14 ಮಂದಿ ತಡವಾಗಿ ಆಸ್ತಿ ವಿವರ ಸಲ್ಲಿಸಿದ್ದು, 6 ಮಂದಿ ನಕಲಿ ದಾಖಲೆ ಸಲ್ಲಿಸಿದ್ದಾರೆ. ಇವರ ವಿರುದ್ಧವೂ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ ಎಂದು ಅನಿಲ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಕಾಯ್ದೆ ಏನು ಹೇಳುತ್ತದೆ?: ಕಾರ್ಪೊರೇಟರ್‌ ಆಗಿ ಚುನಾಯಿತನಾದ ಯಾವುದೇ ವ್ಯಕ್ತಿಯು ತಾನು ಪ್ರಮಾಣವಚನ ಸ್ವೀಕರಿಸಿದ ದಿನಾಂಕದಿಂದ ತಿಂಗಳೊಳಗೆ ತನ್ನ ಹಾಗೂ ತನ್ನ ಕುಟುಂಬದ ಯಾವುದೇ ಸದಸ್ಯನ ಒಡೆತನದ ಎಲ್ಲ ಆಸ್ತಿಗಳ ವಿವರವನ್ನು ಮೇಯರ್‌ ಅವರಿಗೆ ಸಲ್ಲಿಸಬೇಕು. ಅಧಿಕಾರಾವಧಿಯಲ್ಲಿ ಪ್ರತಿ ವರ್ಷ ಅದೇ (ಮೊದಲ ಸಲ ಸಲ್ಲಿಸಿದ) ತಿಂಗಳಿನಲ್ಲಿ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ ಎನ್ನುತ್ತದೆ ಕೆಎಂಸಿ ಕಾಯ್ದೆ–1976ರ 19ನೇ ನಿಯಮ.

ಆಸ್ತಿ ವಿವರ ಸಲ್ಲಿಸಲು ಕಾರ್ಪೊರೇಟರ್‌ ವಿಫಲನಾದರೆ ಅಥವಾ ಸಲ್ಲಿಸಿದ ಮಾಹಿತಿ ಸುಳ್ಳು ಇಲ್ಲವೆ ಸರಿಯಾಗಿಲ್ಲ ಎಂಬುದು ರುಜುವಾತಾದರೆ ಅವರನ್ನು ಹುದ್ದೆಯಿಂದ ಅನರ್ಹಗೊಳಿಸಬೇಕು. ಆ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ರವಾನಿಸಬೇಕು. ಈ ವಿಷಯದಲ್ಲಿ ಸರ್ಕಾರದ ತೀರ್ಮಾನವೇ ಅಂತಿಮ ಎಂದೂ ನಿಯಮ ಹೇಳುತ್ತದೆ. 

ಸಕಾಲದಲ್ಲಿ ಆಸ್ತಿ ವಿವರ ಸಲ್ಲಿಸದವರು
ಕೆ.ಎಂ. ಮಮತಾ (ಥಣಿಸಂದ್ರ ವಾರ್ಡ್‌), ಎಂ. ವೇಲು ನಾಯಕರ್ (ಲಕ್ಷ್ಮಿದೇವಿನಗರ), ಬಿ.ಎನ್. ಜಯಪ್ರಕಾಶ್ (ಬಸವನಪುರ), ಎಂ.ಎನ್‌. ಶ್ರೀಕಾಂತ್‌(ಪುಟ್ಟ) (ದೇವಸಂದ್ರ), ವಿ. ಏಳುಮಲೈ (ಸಗಾಯಪುರ), ಜಿ. ಮೋಹನ್‌ಕುಮಾರ್ (ಕೊಟ್ಟಿಗೆಪಾಳ್ಯ), ಎನ್. ರಮೇಶ್ (ಮಾರತ್ತಹಳ್ಳಿ), ಫರಿದಾ ಇಸ್ತಿಯಾಕ್ (ಶಿವಾಜಿನಗರ), ಜಿ. ಬಾಲಕೃಷ್ಣ (ನೀಲಸಂದ್ರ), ಆರ್.ವಿ. ಯುವರಾಜ್ (ಸುಧಾಮನಗರ), ಡಿ. ಪ್ರಮೋದ್ (ಕಾಟನ್‌ಪೇಟೆ), ಎಂ.ಗಾಯಿತ್ರಿ (ಕೆಂಪಾಪುರ ಅಗ್ರಹಾರ),  ಅಜ್ಮಲ್‌ ಬೇಗ್‌ (ಬಾಪೂಜಿನಗರ), ಜಿ. ಮಂಜುನಾಥ್ (ಸುದ್ದುಗುಂಟೆ ಪಾಳ್ಯ), ಎನ್. ನಾಗರಾಜು (ಭೈರಸಂದ್ರ), ಎಸ್. ಅನ್ಸರ್ ಪಾಷಾ (ಬನಶಂಕರಿ ದೇವಸ್ಥಾನ ವಾರ್ಡ್‌).

ಇವರ ಪೈಕಿ ಸಗಾಯಪುರ ವಾರ್ಡ್‌ ಸದಸ್ಯ ಏಳುಮಲೈ ಮೃತಪಟ್ಟಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು