ಶನಿವಾರ, ಮೇ 21, 2022
26 °C

ಅಂದ ಹೆಚ್ಚಿಸುವ ಹರಳಿನ ಒಡವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಭರಣಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ! ಅಮೂಲ್ಯ ಲೋಹಗಳಾದ ಚಿನ್ನ, ಪ್ಲಾಟಿನಂ ಅಥವಾ ಬೆಳ್ಳಿ ಒಡವೆಗಳೇ ಆಗಬೇಕಾಗಿಲ್ಲ, 1 ಗ್ರಾಂ ಚಿನ್ನದ ಆಭರಣ, ಕೃತಕ ಆಭರಣ, ಸ್ಟೇಟ್‌ಮೆಂಟ್‌ ಆಭರಣ ಅಥವಾ ಜಂಕ್‌ ಒಡವೆಗಳಾದರೂ ಸರಿ, ಧರಿಸಿದ ಉಡುಪಿಗೆ ಹೊಂದಿಕೊಂಡರೆ ನೋಡುಗರ ನೋಟವೇ ಬೇರೆ. ಅದು ಸಾಂಪ್ರದಾಯಿಕ ಅಥವಾ ಫಾರ್ಮಲ್‌ ಉಡುಪಾದರೂ ಇರಲಿ, ಒಂದಿಷ್ಟು ಸ್ಟೈಲ್‌ ಸೇರಿಸುತ್ತದೆ.

ಈ ಆಭರಣಗಳಲ್ಲಿ ಹರಳುಗಳನ್ನು ಸೇರಿಸುವುದು ಇತ್ತೀಚಿನ ಟ್ರೆಂಡ್‌. ಒಂದೇ ಒಂದು ಒಡವೆ ಧರಿಸಿದರೂ ಸಾಕು, ಅದರಲ್ಲಿರುವ ಹರಳುಗಳು ಹೊಳಪನ್ನು ನೀಡುವುದಲ್ಲದೇ ಆಭರಣದ ಗುಣಮಟ್ಟವನ್ನೇ ಬದಲಾಯಿಸಿಬಿಡುತ್ತವೆ. ವಜ್ರ, ಪಚ್ಚೆ, ನೀಲ, ಮಾಣಿಕ್ಯದಂತಹ ಅಮೂಲ್ಯ ಹರಳುಗಳಿರಲಿ ಅಥವಾ ಅಮೆಥಿಸ್ಟ್‌, ಗೋಮೇಧಿಕ, ಪುಷ್ಯರಾಗ, ಅಕ್ವಾಮರೈನ್‌ನಂತಹ ಅರೆ ಅಮೂಲ್ಯ ಹರಳುಗಳೇ ಆಗಲಿ ಒಡವೆಯ ಶೋಭೆಯನ್ನು ಹೆಚ್ಚಿಸುತ್ತವೆ.

ಆರಂಭದಲ್ಲಿ ಅಮೂಲ್ಯವಾದ ಹರಳುಗಳ ಒಡವೆಯನ್ನೇ ಧರಿಸಬೇಕೆಂದಿಲ್ಲ, ಕೃತಕ ಹರಳುಗಳನ್ನು ಕೂಡ ಜೋಡಿಸಿಕೊಳ್ಳಬಹುದು. ಇವುಗಳು ಸಿಂಥೆಟಿಕ್‌ ಹರಳುಗಳೆಂದೂ ಜನಪ್ರಿಯವಾಗಿವೆ. ಹೆಚ್ಚಾಗಿ ಕೃತಕ ಆಭರಣಗಳಲ್ಲಿ ಬಳಸುವ ಹರಳುಗಳೆಂದರೆ ಕ್ಯೂಬಿಕ್‌ ಝಿರ್ಕೋನ್‌. ಭಾರತದಲ್ಲಿ ಅಮೆರಿಕನ್‌ ಡೈಮಂಡ್‌ ಎಂದೇ ಜನಪ್ರಿಯ. ಸರಿಯಾಗಿ ಕಟ್‌ ಮಾಡಿದರೆ ವಜ್ರದ ಹರಳುಗಳಂತೆ ಗೋಚರಿಸುತ್ತವೆ. ಈ ಸಿಂಥೆಟಿಕ್‌ ಹರಳುಗಳು ಮೂಲದಲ್ಲಿ ಯಾವುದೇ ಬಣ್ಣವಿಲ್ಲದಿದ್ದರೂ ವೈವಿಧ್ಯಮಯ ರಂಗನ್ನು ಸೇರಿಸಿ ಮಾರುಕಟ್ಟೆಗೆ ಬಿಡಲಾಗುತ್ತಿದೆ.

ಅರೆ ಅಮೂಲ್ಯ ಹರಳುಗಳು
ಗ್ರಾಹಕರು ಅತ್ಯಂತ ಇಷ್ಟಪಡುವ ಅರೆ ಅಮೂಲ್ಯ ಹರಳುಗಳು ಚಿನ್ನದ ಹಾಗೂ ಬೆಳ್ಳಿಯ ಒಡವೆಗಳು ಕಣ್ಣು ಕೋರೈಸುವಂತೆ ಮಾಡುತ್ತವೆ. ನೈಸರ್ಗಿಕವಾಗಿ ದೊರೆಯುವ ಈ ಹರಳುಗಳು ದುಬಾರಿ ಕೂಡ. ಆದರೆ ಮಾರುಕಟ್ಟೆಯಲ್ಲಿ ನೈಜವಾಗಿ ಕಾಣುವಂತಹ ಕೃತಕ ಹರಳುಗಳೂ ಲಭ್ಯ.

ಅಕ್ವಾಮರೈನ್‌: ಸಮುದ್ರ ನೀಲಿ ರಂಗಿನಲ್ಲಿರುವ ಈ ಹರಳುಗಳು ಪಚ್ಚೆ ಹರಳಿ (ಎಮರಾಲ್ಡ್‌)ನ ವರ್ಗಕ್ಕೆ ಸೇರಿವೆ. ಅಕ್ವಾಮರೈನ್‌ ಎಂದರೆ ಲ್ಯಾಟಿನ್‌ನಲ್ಲಿ ಸಮುದ್ರದ ನೀರು ಎಂದರ್ಥ. ಈ ಹರಳನ್ನು ಸೇರಿಸಿದ ಒಡವೆ ಧರಿಸಿದವರಿಗೆ ಯಾವಾಗಲೂ ತಾಜಾತನದ ನೋಟ ಒದಗಿಸುತ್ತದೆ. ಓಲೆಯಲ್ಲಿ ದೊಡ್ಡದಾದ ಒಂದೇ ಹರಳು ಬಳಸಿ ಅದಕ್ಕೆ ಹೊಂದುವ ದೊಡ್ಡ ಪದಕವನ್ನು ಧರಿಸಬಹುದು. ಉಂಗುರದಲ್ಲೂ ಇದನ್ನು ಕೂರಿಸಿದರೆ ಅಂದವಾಗಿ ಕಾಣುತ್ತದೆ. ಕೆಲವರು ‘ಬರ್ಥ್‌ಸ್ಟೋನ್‌’ ಆಗಿ ಧರಿಸುವ ರೂಢಿಯೂ ಇದೆ.

ಓಪಲ್‌: ಸಿಲಿಕೇಟ್‌ ಖನಿಜಾಂಶ ಹೊಂದಿರುವ ಈ ಅರೆ ಅಮೂಲ್ಯ ಹರಳು ಕಾಮನಬಿಲ್ಲಿನ ಹಲವು ಬಣ್ಣಗಳನ್ನು ಹೊರಹೊಮ್ಮಿಸುತ್ತದೆ. ಬೆಳ್ಳಿ ಆಭರಣದಲ್ಲಿ ಹೆಚ್ಚಾಗಿ ಬಳಸುತ್ತಾರೆ.

ಟ್ಯಾಂಜನೈಟ್‌: ಗಾಢ ನೇರಳೆ ರಂಗಿನ ಟ್ಯಾಂಜನೈಟ್‌ ಹರಳು ತಾಂಜಾನಿಯದಲ್ಲಿ ಹೇರಳವಾಗಿ ಲಭ್ಯ. ಚಿಕ್ಕ ಚಿಕ್ಕ ಹರಳುಗಳನ್ನು ಚಿನ್ನದ ನೆಕ್ಲೇಸ್‌ನಲ್ಲಿ ಕೂರಿಸಿದರೆ ಅಗಾಧ ಹೊಳಪಿನಿಂದ ಮುಖಕ್ಕೆ ಶೋಭೆ ನೀಡುವುದಲ್ಲದೇ ವಿವಿಧ ಉಡುಪುಗಳಿಗೆ ಮ್ಯಾಚಿಂಗ್‌ ಮಾಡಬಹುದು.

ಗಾರ್ನೆಟ್‌: ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಜನಪ್ರಿಯವಾಗಿರುವ ಹರಳೆಂದರೆ ಗಾರ್ನೆಟ್‌. ಗಾಢ ಕೆಂಪು ವರ್ಣದ ಈ ಹರಳನ್ನು ದಾಳಿಂಬೆ ಬೀಜಕ್ಕೆ ಹೋಲಿಸುವುದೂ ಇದೆ. ಈ ಹರಳನ್ನು ಕೂರಿಸಿದ ಕಿವಿಯೋಲೆ ಸೀರೆಯಂತಹ ಸಾಂಪ್ರದಾಯಿಕ ಉಡುಪಿಗೆ ಅಂದವಾಗಿ ಕಾಣುತ್ತದೆ.

ಜೇಡ್‌: ತಿಳಿ ಹಸಿರು ರಂಗಿನ ಜೇಡ್‌ ಹರಳು ಚಿನ್ನದ ಒಡವೆಗೆ ಹೇಳಿ ಮಾಡಿಸಿದಂತಹ ಹರಳು. ಓಲೆ, ನೆಕ್ಲೇಸ್‌ ಅಥವಾ ಉದ್ದನೆಯ ಹಾರ ಹಾಗೂ ಬಳೆಗಳ ಸೆಟ್‌ ಅನ್ನು ಮಾಡಿಸಿಕೊಳ್ಳಬಹುದು.

ಲ್ಯಾಬ್ರಡೈಟ್‌: ನೀಲಿ, ಹಸಿರು, ನೇರಳೆ ಮತ್ತು ಬೂದು ರಂಗಿನಲ್ಲಿ ಲಭ್ಯವಿರುವ ಈ ಹರಳುಗಳು ಹೊಳಪಿನಿಂದ ಕೂಡಿದ್ದು ಎಲ್ಲಾ ರೀತಿಯ ಆಭರಣಗಳಲ್ಲಿ ಬಳಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.