ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯೂಷನ್‌ನ ಹಾದಿಯಲ್ಲಿ ‘ಕೇಪ್ ಟಾಪ್’

Last Updated 19 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ದೊಗಳೆ ಮೇಲಂಗಿ ಮೆಚ್ಚುವ ಹುಡುಗಿಯರು ಕಡಿಮೆಯೇ. ಆದರೆ ದೊಗಳೆಯನ್ನೇ ಫ್ಯಾಷನ್ ಆಗಿಸುವ ಕೆಲ ಪ್ರಯತ್ನಗಳು ಸಾಗಿದವು. ಜೊತೆಗೆ ಅವು ಯುವತಿಯರ ಮನ ಮೆಚ್ಚಿಸಿದವು ಕೂಡ. ಹಳೆ ಸಿನಿಮಾಗಳಲ್ಲಿ ನಟಿಯರು ತೊಡುತ್ತಿದ್ದ ಈ ಸಡಿಲ ಮೇಲಂಗಿಗಳೇ ಆಗ ಟ್ರೆಂಡ್ ಆಗಿ ಮಾರ್ಪಟ್ಟಿತು.

ಸಡಿಲವಾದ, ಜೊತೆಗೆ ಆರಾಮ ಎನಿಸುವ ಮೇಲಂಗಿಗಳು ಸ್ವಲ್ಪ ಅವಧಿ ಫ್ಯಾಷನ್ ಕ್ಷೇತ್ರದಲ್ಲಿ ಕಾಣಿಸಿಕೊಂಡು ಕಣ್ಮರೆಯಾಗಿದ್ದವು. ಈಗ ಮತ್ತೆ ಕೇಪ್ ಟಾಪ್‌ ಸುದ್ದಿಯಲ್ಲಿದೆ. ಅದೂ ಹೊಸ ಹೊಸ ಪ್ರಯೋಗಗಳೊಂದಿಗೆ.

ಕೇಪ್ ಎಂದರೆ ಓವರ್ ಕೋಟ್‌ -ಅಂಗಿಯ ಮೇಲೆ ತೊಡುವ ಅಂಗಿಯಾಗಿತ್ತು. ಈಗ ಅಂಗಿ ಹಾಗೂ ಓವರ್ ಕೋಟ್ ಎರಡೂ ವಿಧದಲ್ಲಿ ಕೇಪ್ ಕಾಣಿಸಿಕೊಳ್ಳುತ್ತಿದೆ. ಹೆಚ್ಚಾಗಿ ಪಾಶ್ಚಾತ್ಯ ಶೈಲಿಯಲ್ಲೇ ಬಿಂಬಿತವಾಗಿದ್ದ ಈ ಮೇಲಂಗಿಗೆ ಮರುಜೀವ ಬಂದಿದ್ದೇ ಸಾಂಪ್ರದಾಯಿಕ ಶೈಲಿಯ ಮಿಶ್ರಣದಿಂದ.

ಅದಕ್ಕೇ ಈಗ ಕೇಪ್ ‘ಫ್ಯೂಷನ್ ಫ್ಯಾಷನ್’ ಎನ್ನಿಸಿಕೊಂಡಿದೆ. ಈ ಫ್ಯೂಷನ್ ಕೇಪ್‌ಗೆ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಸೋನಾಕ್ಷಿ ಸಿನ್ಹಾ, ಸೋನಂ ಕಪೂರ್, ಶಿಲ್ಪಾ ಶೆಟ್ಟಿ, ಕರೀಷ್ಮಾ, ಕರೀನಾ, ನಿಮ್ರತ್ ಕೌರ್ ಇವರೆಲ್ಲಾ ಮಾರುಹೋದವರೇ.

ಅಂಗಿಗೆ ಹೊದಿಕೆಯಂತಿರುವ ಕೇಪ್‌ನಲ್ಲಿ ಈಗ ಎಷ್ಟೊಂದು ಆಯ್ಕೆಗಳು ಹುಟ್ಟಿಕೊಂಡಿವೆ. ಜೀನ್ಸ್‌ ಪ್ಯಾಂಟ್‌, ಜಂಪ್ ಸೂಟ್, ಗೌನ್, ಲೆಹೆಂಗಾ, ಘಾಗ್ರಾ ಚೋಲಿ, ಪಲಾಜೊ ಪ್ಯಾಂಟ್, ಲಾಂಗ್ ಸ್ಕರ್ಟ್, ಶಾರ್ಟ್‌ ಸ್ಕರ್ಟ್‌ ಯಾವುದಾದರೂ ಸರಿ, ಎಲ್ಲಕ್ಕೂ ಒಪ್ಪುವ, ಅಷ್ಟೇ ಚೆನ್ನಾಗಿ ಬಿಂಬಿಸುವ ಕೇಪ್‌ಗಳು ವಿನ್ಯಾಸಗೊಂಡಿವೆ. ಇದು ಸೀರೆಗೂ ಹೊರತಲ್ಲ. ಇತ್ತೀಚೆಗೆ ಸೀರೆ ಮೇಲೆ ತೆಳುವಾದ ಕೇಪ್ ತೊಟ್ಟು ಅದು ಕೂಡ ಫ್ಯಾಷನ್ ಕ್ಷೇತ್ರದಲ್ಲಿ ಹೆಸರು ಗಳಿಸಿತು. ಇದೀಗ ಅನಾರ್ಕಲಿ ಉಡುಪಿನಲ್ಲೂ ಕೇಪ್ ವಿನ್ಯಾಸ ಕಾಣಿಸಿಕೊಳ್ಳುತ್ತಿದೆ.

ಗಿಡ್ಡವಾದ, ಉದ್ದವಾದ, ಸೀಳಿದ ಇಲ್ಲವೇ ಪೂರ್ಣ ಆವರಿಸುವ ಕೇಪ್‌ಗಳು ಇವೆ. ಲೇಯರ್ಡ್ ಕೇಪ್ ಈಗ ಪ್ರಚಲಿತದಲ್ಲಿರುವುದು.

ಹೀಗೆ ಎಲ್ಲಾ ವಿಧದ ದಿರಿಸಿಗೆ ಕೇಪ್ ಒಪ್ಪಬೇಕೆಂದರೆ ಅದರ ಬಗೆಗಳೂ ಹೆಚ್ಚೇ ಇರಬೇಕು. ಅದಕ್ಕಾಗೇ ಒಂದೊಂದು ಬಗೆಯ ದಿರಿಸಿಗೂ ಅದಕ್ಕೆ ಒಪ್ಪುವಂಥ ಸಡಿಲ ಮೇಲಂಗಿಗಳು ವಿನ್ಯಾಸಗೊಂಡಿವೆ.

ಶರ್ಟ್, ಸ್ಕರ್ಟ್‌ಗಳಿಗೆ ಸ್ಪ್ಲಿಟೆಡ್–ಅಂದರೆ ಅರ್ಧ ಸೀಳಿದ, ಕೋಲ್ಡ್ ಶೋಲ್ಡರ್‌, ಎಳೆ ಎಳೆಗಳನ್ನು ಹೊಂದಿರುವ ಲೇಯರ್ಡ್ ಕೇಪ್, ಶಾರ್ಟ್ ಹಾಫ್ ಕೇಪ್, ಅಸೆಮೆಟ್ರಿಕ್ ಕೇಪ್, ಆಫ್ ಶೋಲ್ಡರ್ ಕೇಪ್, ಕ್ರಿಸ್‌ಕ್ರಾಸ್ ಫ್ರಂಟ್ ಲೇಯರ್, ಲೇಸ್‌ ಶಾರ್ಟ್ ಕೇಪ್‌ನ ಆಯ್ಕೆಯಿವೆ.

ಸಾಂಪ್ರದಾಯಿಕ ದಿರಿಸುಗಳಿಗೂ ಆಯ್ಕೆಯಲ್ಲಿ ಕಡಿಮೆಯಿಲ್ಲ. ಲೆಹೆಂಗಾಗೆ ಹೊಂದುವಂತೆ, ಶ್ರೀಮಂತ ಶೈಲಿಯ ಹಾಗೆ ಕಾಣಿಸಲು ವಿನ್ಯಾಸದಲ್ಲಿ ಹಲವು ಕಸರತ್ತುಗಳು ನಡೆದಿವೆ. ಎಂಬ್ರಾಯ್ಡರಿ, ಮಣಿಗಳನ್ನು ಹೊಂದಿರುವ ಕೇಪ್‌ಗಳು ಸಾಂಪ್ರದಾಯಿಕ ಶೈಲಿಗೆ ಒಪ್ಪುತ್ತಿವೆ. ಅನಾರ್ಕಲಿ ಅಥವಾ ಲೆಹೆಂಗಾದಂಥ ದಿರಿಸಿಗೆ ಹೈನೆಕ್ ಕೇಪ್ ಮತ್ತಷ್ಟು ಲುಕ್ ನೀಡುತ್ತದೆ ಎನ್ನಲಾಗಿದೆ.

ಟ್ರಾನ್ಸ್‌ಪರೆಂಟ್‌, ನೆಟೆಡ್‌ ಕೇಪ್: ಹೆಚ್ಚು ಹುಡುಗಿಯರ ಮನ ಸೆಳೆಯುತ್ತಿರುವ ಪೈಕಿ ಪಾರದರ್ಶಕ ಕೇಪ್‌ ಮುಂದಿದೆ. ಪಾರದರ್ಶಕವಾಗಿರುವ, ಪರದೆಯಂತಿರುವ ಬಟ್ಟೆ ಮೇಲೆ ‌ಕುಸುರಿ ಮಾಡಿದ ಕೇಪ್‌ಗಳು ಇಷ್ಟವಾಗುವಂತಿವೆ. ಗೌನ್‌ ಮೇಲೆ ಇಲ್ಲವೇ ಲೆಹೆಂಗಾ, ಚೋಲಿ ಮೇಲೆ ಇದನ್ನು ಧರಿಸಿ ಮಿಂಚಿದ ಯುವತಿಯರೂ ಹೆಚ್ಚಿದ್ದಾರೆ.

ತೀರಾ ಸರಳ ದಿರಿಸಿನ ಮೇಲೆ ತೊಡಲೂ ಆಯ್ಕೆಯಿವೆ. ಕುಚ್ಚು ಹೊಂದಿರುವ ಕೇಪ್- ಪಾಶ್ಚಾತ್ಯ, ಸಾಂಪ್ರದಾಯಿಕ ಎರಡರ ಮಿಶ್ರಣವೂ ಹೌದು. ಬೋಹೊ ಶೈಲಿಯೂ ಕೇಪ್‌ನ ಮತ್ತೊಂದು ರೂಪವೇ. ಇನ್ನು ಚಳಿಗಾಲ ಬಂದರೆ ಚಿಂತಿಸಬೇಕಿಲ್ಲ. ಸ್ವೆಟರ್‌ನಂಥ ಗಟ್ಟಿ ಕೇಪ್‌ಗಳೂ ಸಿಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT