ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖದ ಅಂದಕ್ಕೆ ಮುಲಾಮು ಮೊಸರು

Last Updated 24 ಜನವರಿ 2020, 19:30 IST
ಅಕ್ಷರ ಗಾತ್ರ

ಅಡುಗೆ ಮನೆಯಲ್ಲಿ ಇರುವ ಅದೆಷ್ಟೋ ಪದಾರ್ಥಗಳು ನಮ್ಮ ದಿನನಿತ್ಯದ ಸಮಸ್ಯೆಗಳಿಗೆ‍‍ಪರಿಹಾರ ನೀಡುವ ಔಷಧಿಗಳೇ ಆಗಿವೆ. ಅವುಗಳಲ್ಲಿ ಮೊಸರು ಕೂಡ ಒಂದು. ಪ್ರತಿದಿನ ಮೊಸರು ಸೇವಿಸುವುದರಿಂದ ಜೀರ್ಣಾಂಗ ಕ್ರಿಯೆ ಉತ್ತಮವಾಗಿರುತ್ತದೆ.ಅಲ್ಲದೆ ಮೊಸರಿನ ಇನ್ನೊಂದು ವಿಶೇಷತೆ ಎಂದರೆ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುವುದು. ಇದರಲ್ಲಿ ಕ್ಯಾಲ್ಶಿಯಂ, ಪ್ರೊಟೀನ್‌ನಂತಹ ವಿಟಮಿನ್‌ಗಳು ಹೆಚ್ಚಿರುವುದರಿಂದ ಚರ್ಮದ ತೊಂದರೆಗಳಿಗೆ ಸೂಕ್ತ ಮದ್ದು.

ಮೊಸರನ್ನು ಯಾವ ವಿಧಾನಗಳಲ್ಲಿ ಬಳಸಬೇಕು ಹಾಗೂ ಅದರ ಪ್ರಯೋಜನಗಳು ಏನು? ಅದಕ್ಕೆ ಯಾವ ಪದಾರ್ಥಗಳನ್ನು ಸೇರಿಸಿದರೆ ಉಪಯುಕ್ತ ಎಂಬ ಮಾಹಿತಿ ಇಲ್ಲಿದೆ.

ಮೊಸರಿನ ಪ್ರಯೋಜನಗಳು

*ಚರ್ಮವನ್ನು ಆಳವಾಗಿ ಶುದ್ಧ ಮಾಡುತ್ತದೆ.

*ಮೊಡವೆಗಳನ್ನು ಶಮನ ಮಾಡುತ್ತದೆ.

*ಹೊಳಪು ಹೆಚ್ಚಿಸಲು ಸೂಕ್ತ ಮುಲಾಮು.

*ಮುಖದ ಕಲೆಗಳನ್ನು ನಿವಾರಿಸುತ್ತದೆ.

*ಸೂರ್ಯ ಕಿರಣಗಳಿಂದಾಗುವ ಹಾನಿಯಿಂದ ರಕ್ಷಿಸುತ್ತದೆ.

*ತೇವಾಂಶವನ್ನು ಹೆಚ್ಚಿಸುತ್ತದೆ.

*ಚರ್ಮದ ಕಾಂತಿ ಹೆಚ್ಚಿಸುತ್ತದೆ.

ಚರ್ಮದ ಕಾಂತಿಗೆ ಮೊಸರು, ಸೌತೆಕಾಯಿ

ರಾಸಾಯನಿಕ ಉತ್ಪನ್ನಗಳ ಬಳಕೆ ಹಾಗೂ ವಯಸ್ಸಿನ ಕಾರಣದಿಂದ ಚರ್ಮ ಕಳೆಗುಂದುವ ಸಮಸ್ಯೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆಗೆ ಮೊಸರಿನೊಂದಿಗೆ ಸೌತೆಕಾಯಿ ಸೇರಿಸಿ ಮುಖಕ್ಕೆ ಲೇಪಿಸಿದರೆ ಸಮಸ್ಯೆ ದೂರವಾಗುತ್ತದೆ.

ಹೀಗೆ ಮಾಡಿ

ಒಂದು ಬಟ್ಟಲಿನಲ್ಲಿ ಒಂದು ಚಮಚ ಮೊಸರು ಹಾಗೂ ತಾಜಾ ಸೌತೆಕಾಯಿಯನ್ನು ಕತ್ತರಿಸಿ ಮೊಸರಿನೊಂದಿಗೆ ಸೇರಿಸಿ ಪೇಸ್ಟ್‌ ತಯಾರಿಸಿ. ಪೇಸ್ಟ್‌ ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನೊಂದಿಗೆ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖದ ಸೌಂದರ್ಯ ಹೆಚ್ಚುವುದರೊಂದಿಗೆ ಕಳೆಗುಂದಿದ ತ್ವಚೆ ಹೊಳೆಯುತ್ತದೆ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಉತ್ತಮ.

ಶುಷ್ಕ ಚರ್ಮಕ್ಕೆ ಮೊಸರು, ಜೇನುತುಪ್ಪ

ಶುಷ್ಕ ಚರ್ಮವನ್ನು ನಿಯಂತ್ರಿಸುವುದು ಸುಲಭವಲ್ಲ. ಅದರಲ್ಲೂ ಚಳಿಗಾಲದಲ್ಲಾದರೆ ಕಷ್ಟಕರ. ಇಂತಹ ಸಮಸ್ಯೆಗಳಿಗೆ ಮೊಸರು ಸಹಕಾರಿ. ಚರ್ಮವನ್ನು ತೇವಗೊಳಿಸುವ ಮೂಲಕ ಶುದ್ಧಗೊಳಿಸುತ್ತದೆ. ಜೇನುತುಪ್ಪ ಸೇರಿಸುವುದರಿಂದ ಚರ್ಮದ ಹಾನಿಯನ್ನು ತಪ್ಪಿಸಬಹುದು.

ಹೀಗೆ ಮಾಡಿ

ಎರಡು ಚಮಚ ಮೊಸರು ಹಾಗೂ ಒಂದು ಚಮಚ ಜೇನುತುಪ್ಪ ಸೇರಿಸಿ ಪೇಸ್ಟ್‌ ಮಾಡಿಕೊಳ್ಳಿ. ನಂತರ ಮುಖಕ್ಕೆ ಹಾಗೂ ಕುತ್ತಿಗೆಗೆ ಲೇಪಿಸಿ. 20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದರೆ ಮುಖವು ಕಾಂತಿಯಿಂದ ಕೂಡಿರುತ್ತದೆ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಸಾಕು.

ಮೊಡವೆಗೆ ಮೊಸರು ಮತ್ತು ಅಕ್ಕಿಹಿಟ್ಟು

ಮೊಡವೆ ಸಮಸ್ಯೆಗಳಿಗೆ ಅಕ್ಕಿಹಿಟ್ಟು ಸೂಕ್ತವಾದದ್ದು. ಇದರಲ್ಲಿ ವಿಟಮಿನ್‌ ಬಿ ಇರುವುದರಿಂದ ಮೊಡವೆಗಳನ್ನು ಚರ್ಮದಿಂದ ಮಾಯವಾಗುವಂತೆ ಮಾಡುತ್ತದೆ. ಜತೆಗೆ ಚರ್ಮದ ಬಣ್ಣ ಹೆಚ್ಚಲು ಸಹಕಾರಿ.

ಹೀಗೆ ಮಾಡಿ

ಒಂದು ಚಮಚ ಮೊಸರು ಹಾಗೂ ಒಂದೂವರೆ ಚಮಚ ಅಕ್ಕಿಹಿಟ್ಟು ಸೇರಿಸಿ ಪೇಸ್ಟ್‌ ತಯಾರಿಸಿ. ನಂತರ ಪೇಸ್ಟ್‌ ಅನ್ನು ಮೊಡವೆಗಳ ಮೇಲೆ ಲೇಪಿಸಿ. 15 ರಿಂದ 20 ನಿಮಿಷಗಳ ಕಾಲ ಒಣಗಲು ಬಿಡಿ. ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ಪೇಸ್ಟ್ ಅನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ನಿಯಮಿತವಾಗಿ ಹಚ್ಚುವುದರಿಂದ ಮೊಡವೆಗಳು ಕಡಿಮೆಯಾಗುತ್ತವೆ.

ಹೊಳಪಿಗೆ ಮೊಸರು ಹಾಗೂ ಕಡಲೆಹಿಟ್ಟು

ಮೊಸರಿನಲ್ಲಿರುವ ವಿಟಮಿನ್ ಡಿ ಮತ್ತು ಕ್ಯಾಲ್ಶಿಯಂ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತವೆ. ಮೊಸರಿನೊಂದಿಗೆ ಕಡಲೆಹಿಟ್ಟು ಸೇರಿಸಿದರೆ ಚರ್ಮವನ್ನು ಆಳವಾಗಿ ಶುದ್ಧೀಕರಿಸಿ ಮುಖದ ಬಣ್ಣ ಹೆಚ್ಚವಂತೆ ಮಾಡುತ್ತದೆ.

ಹೀಗೆ ಮಾಡಿ: ಒಂದು ಚಮಚ ಮೊಸರು ಹಾಗೂ ಒಂದೂವರೆ ಚಮಚ ಕಡಲೆಹಿಟ್ಟು ಸೇರಿಸಿ ಪೇಸ್ಟ್‌ ತಯಾರಿಸಿ ಮುಖಕ್ಕೆ ಲೇಪಿಸಿಕೊಳ್ಳಿ. 10 ರಿಂದ 15 ನಿಮಿಷಗಳ ನಂತರ ಒದ್ದೆ ಬಟ್ಟೆಯಿಂದ ನಿಧಾನವಾಗಿ ಒರೆಸಿಕೊಳ್ಳಿ. ವಾರಕ್ಕೆ ಒಂದು ಬಾರಿ ಹಚ್ಚಿದರೆ ಸಾಕು. ಮುಖದ ಬಣ್ಣ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT