ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನಿನ ಸೌಂದರ್ಯಕ್ಕೆ ಥರಾವರಿ ಆಭರಣ

Last Updated 3 ಸೆಪ್ಟೆಂಬರ್ 2018, 13:29 IST
ಅಕ್ಷರ ಗಾತ್ರ

ಸೌಂದರ್ಯದ ವಿಷಯಕ್ಕೆ ಬಂದರೆ ಬೆನ್ನನ್ನು ನಿರ್ಲಕ್ಷಿಸುವವರೇ ಹೆಚ್ಚು. ಆಭರಣದ ವಿಷಯದಲ್ಲಂತೂ ಬೆನ್ನಿನ ಬಗ್ಗೆ ಯೋಚಿಸುವವರಿಲ್ಲ. ನೆತ್ತಿಯಿಂದಿಡಿದು ಉಂಗುಷ್ಟದವರೆಗೂ ಥರಾವರಿ ಆಭರಣಗಳಿದ್ದರೂ ಬೆನ್ನಿನ ಚೆಂದದ ಕುರಿತು ಮಾತನಾಡಿದ್ದು ಕಡಿಮೆಯೇ.

ಆದರೆ ಈಗ ಈ ಅಭಿಪ್ರಾಯ ಬದಲಾಗಿದೆ. ಬೆನ್ನಿನ ಸೌಂದರ್ಯಕ್ಕೆ ಒತ್ತು ಕೊಡುವವರು ಹೆಚ್ಚಿದ್ದಾರೆ. ಒಟ್ಟಾರೆ ಸುಂದರವಾಗಿ ಕಾಣಬೇಕಾದರೆ, ಬೆನ್ನನ್ನೂ ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು ಎಂಬುದು ಫ್ಯಾಷನ್ ಪ್ರಿಯರ ಮಾತು. ಇದೇ ಹಾದಿಯಲ್ಲಿ, ಬೆನ್ನನ್ನು ಸಿಂಗಾರಗೊಳಿಸುವ ಹಲವು ಕಸರತ್ತುಗಳು ಫ್ಯಾಷನ್ ಕ್ಷೇತ್ರದಲ್ಲಿ ಸಾಕಷ್ಟು ನಡೆಯುತ್ತಿವೆ.

ಈ ಸಾಲಿನಲ್ಲಿ ಸದ್ಯಕ್ಕೆ ಟ್ರೆಂಡ್‌ನಲ್ಲಿರುವುದು ‘ಬ್ಯಾಕ್ ಜ್ಯುವೆಲ್ಲರಿ’ಗಳು. ಅಂದರೆ ಬೆನ್ನನ್ನು ಚೆಂದಗಾಣಿಸಲೆಂದೇ ವಿಶೇಷವಾಗಿ ರೂಪಿಸಿರುವ ಆಭರಣಗಳು. ನೀಳ ಬೆನ್ನಿನ ಸೌಂದರ್ಯಕ್ಕೆ ಮತ್ತಷ್ಟು ಇಂಬು ಕೊಡುವಂಥ ಈ ಆಭರಣಗಳು ಸದ್ಯಕ್ಕೆ ಹುಡುಗಿಯರ ಮೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆಯಂತೆ.

ಮೊದಲು, ಬ್ಯಾಕ್‌ಲೆಸ್ ಮೇಲಂಗಿ ಅಥವಾ ಗೌನ್‌ಗಳಿಗೆ ಮಾತ್ರ ಈ ಆಭರಣವನ್ನು ಹಿಂಭಾಗದಲ್ಲಿ ಉದ್ದಕ್ಕೆ ಇಳಿಬಿಡುವುದು ಟ್ರೆಂಡ್ ಅನ್ನಿಸಿತ್ತು. ಪಾಶ್ಚಾತ್ಯ ದಿರಿಸುಗಳಲ್ಲಿ ಮಾತ್ರ ಈ ಆಭರಣ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಹಲವು ನಮೂನೆಗಳಲ್ಲಿ ವಿನ್ಯಾಸದ ಕೈಚಳಕ ಮೂಡಿದೆ. ಆಭರಣ ವಿನ್ಯಾಸಕರು ಇದನ್ನು ಭಾರತೀಯ ಶೈಲಿಗೂ ಒಗ್ಗಿಸಿದ್ದಾರೆ. ಲೆಹೆಂಗಾ, ಸಲ್ವಾರ್, ಸೀರೆಗಳಂಥ ಸಾಂಪ್ರದಾಯಿಕ, ಜೊತೆಗೆ ಸಾದಾ ಉಡುಪಿಗೆ ತಕ್ಕಂತೆಯೂ ಈ ಶೈಲಿಯನ್ನು ವಿನ್ಯಾಸಗೊಳಿಸಿರುವುದು ಇದರ ಟ್ರೆಂಡ್ ಶುರುವಾಗಲು ಕಾರಣ. ಉಡುಪಿಗೆ ತಕ್ಕಂತೆ ಇವುಗಳ ಮಾರ್ಪಾಡು ಮಾಡಿಕೊಳ್ಳಬಹುದಾಗಿರುವುದು ಇದರ ಮತ್ತೊಂದು ಪ್ಲಸ್ ಪಾಯಿಂಟ್.

ಬ್ಯಾಕ್ ಜ್ಯುವೆಲ್ಲರಿಗಳಲ್ಲೂ ಹಲವು ವಿಧಗಳಿವೆ. ಮುತ್ತಿನಿಂದ, ಮಣಿಗಳಿಂದ, ಹಗ್ಗದಂಥ ಸರದ ವಿನ್ಯಾಸದಿಂದ ರೂಪಿತಗೊಂಡ ಇವು ಹುಡುಗಿಯರ ಮನ ಸೆಳೆಯುತ್ತವೆ. ಈಗಂತೂ ಬ್ಯಾಕ್ ನೆಕ್‌ಲೇಸ್, ಬ್ಯಾಕ್ ಲಾಂಗ್ ಚೇನ್, ಬ್ಯಾಕ್ ಎಕ್ಸ್‌ಟ್ರಾ ಲಾಂಗ್ ಚೇನ್ ಹೀಗೆ ಥರಾವರಿ ಆಯ್ಕೆಗಳಿವೆ. ಈಗೀಗ ಚಿನ್ನ, ಬೆಳ್ಳಿಯ ಚೇನ್‌ಗಳೂ ದೊರೆಯುತ್ತಿವೆ. ಬಟ್ಟೆ, ಲೇಸ್, ಎಂಬ್ರಾಯ್ಡರಿಗಳಿಂದ ರೂಪಿತಗೊಳ್ಳುತ್ತಿರುವುದೂ ಹೊಸ ನಮೂನೆಯ ಸಾಲಿಗೆ ಸೇರುತ್ತದೆ.

ಸರಳವಾದ ವಿನ್ಯಾಸ ಬಯಸುವವರು ಒಂಟಿ ಎಳೆಯನ್ನು ಹಾಕಿಕೊಳ್ಳುತ್ತಾರೆ. ಸ್ವಲ್ಪ ಹೆಚ್ಚು ವಿನ್ಯಾಸ ಬಯಸುವವರಿಗೆ ಎಳೆ ಎಳೆಯಾದ ಸರಣಿ ಸರಗಳು ಇವೆ. ಕುತ್ತಿಗೆಯಿಂದ ಸೊಂಟದವರೆಗೆ, ಬೆನ್ನಿನ ಮಧ್ಯಭಾಗದಲ್ಲಿ ಜೋತಾಡುವಂಥ ವಿನ್ಯಾಸ, ಬೆನ್ನು, ಭುಜವನ್ನು ಹೊಂದಿಕೊಂಡಂಥ ಸರದ ವಿನ್ಯಾಸ... ಹೀಗೆ ಪ್ರತಿ ಅಗತ್ಯಕ್ಕೂ ಆಯ್ಕೆ ಉಂಟು. ಬೆನ್ನಿನ ಆಕಾರಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು.

ಪಾರ್ಟಿಗಳಿಗೆ ಒಳ್ಳೆ ಲುಕ್ ಕೊಡುವ ಈ ವಿನ್ಯಾಸವನ್ನು ಈಗ ಸೀರೆಯ ರವಿಕೆಗೆ ತಕ್ಕಂತೆಯೂ ಪ್ರಯೋಗಿಸಲಾಗುತ್ತಿದೆ. ಕುಂದನ್‌ಗಳನ್ನು, ದೊಡ್ಡ ದೊಡ್ಡ ಮಣಿಗಳನ್ನು ಬಳಸಿ ಇವುಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ.

ಬ್ಯಾಕ್ ಜ್ಯುವೆಲ್ಲರಿಗಳಲ್ಲಿ ಹೆಚ್ಚು ಗಮನ ಸೆಳೆದದ್ದು ಹಾವಿನ ವಿನ್ಯಾಸ. ಬೆನ್ನಿಗೆ ಹಾವಿನ, ಡ್ರ್ಯಾಗನ್ ಶೈಲಿಯ ಆಭರಣ ತೊಡುವುದು ಎಷ್ಟೋ ರೂಪದರ್ಶಿಯರ ಮೆಚ್ಚುಗೆ ಗಳಿಸಿತು. ನಂತರ ಹಲವು ರ‍್ಯಾಂಪ್ ಷೋಗಳಲ್ಲಿ ಈ ವಿನ್ಯಾಸ ಸುದ್ದಿಯನ್ನೂ ಮಾಡಿತು.

ಬಾಲಿವುಡ್ ನಟಿಯರಾದ ಶಿಲ್ಪಾ ಶೆಟ್ಟಿ, ಸೋನಂ ಕಪೂರ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಛೋಪ್ರಾ ಇವರೆಲ್ಲ ಬ್ಯಾಕ್ ಜ್ಯುವೆಲ್ಲರಿಗಳ ಅಂದಕ್ಕೆ ಮರುಳಾದವರೇ. ಸರಳವಾದ, ಆದರೆ ಆಕರ್ಷಕ ಎನ್ನಿಸುವ ಈ ಆಭರಣಗಳನ್ನು ತೊಟ್ಟು ಮಿಂಚಿದವರೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT