ಸಂಬಂಧಗಳ ಸಾಯಿಸಿ, ನಾನೂ ಸತ್ತೆನೇ?

7

ಸಂಬಂಧಗಳ ಸಾಯಿಸಿ, ನಾನೂ ಸತ್ತೆನೇ?

Published:
Updated:
Prajavani

ಟೇಬಲ್ ಮೇಲೆ ಟೀ ಇಟ್ಟು, ಪಕ್ಕದಲ್ಲಿ ಬಿಲ್ ಇಟ್ಟು ಮುಖ ನೋಡುತ್ತ ನಿಂತ ಆ ಹೋಟೆಲಿನ ವೇಟರ್. ನಾನು ಅವನಿಗೆ ಬಿಲ್ ಕೊಟ್ಟು ಟೀ ಹೀರತೊಡಗಿದೆ.

ಸುತ್ತಲೂ ಎತ್ತ ನೋಡಿದರೂ ಜನಜಂಗುಳಿಯಿಂದ ತುಂಬಿದ್ದ ಊರಿನಲ್ಲಿ ನಾನೀವಾಗಲೂ ಒಂಟಿಯಾಗಿಯೇ ಇದೀನಿ ಎನ್ನುವ ಭಾವನೆ ನನ್ನಲ್ಲಿ ತುಂಬಿ ಹೋಗಿದೆ. ಈಗ ತಾನೆ ಟೀ ಕೊಟ್ಟು ಹೋದ ಹುಡುಗ ಮಾಡಿದ ಕೆಲಸ ಕಾಸಿಗಾಗಿ. ನಾನು ಅವನಿಗೆ ಕಾಸು ಕೊಡುವವರೆಗೆ ಮಾತ್ರವೇ ನನ್ನ ಅವನ ಸಂಬಂಧ, ನಂತರ ಅವನ್ಯಾರೋ ನನಗೆ, ನಾನ್ಯಾರೋ ಅವನಿಗೆ...

ಹೀಗೆ ಒಂದೊಂದೇ ಗುಟುಕು ಟೀ ಹೀರುತ್ತ ಈ ಸಂಬಂಧದ ಸುರುಳಿ ನನ್ನ ಮನಸ್ಸಿನಲ್ಲಿ ಬಿಚ್ಚತೊಡಗಿತು. ಕೆಲವೇ ಕೆಲವು ವರ್ಷಗಳ ಹಿಂದೆ ಇದೇ ಟೀ ಕುಡಿಯಲು ನಾನು ಏನೆಲ್ಲ ನಾಟಕ ಮಾಡುತ್ತಿದ್ದೆ! ‘ಅಮ್ಮಾ, ತಲೆ ನೋವಮ್ಮ ಟೀ ಕೊಡು’ ಎಂದೋ ಅಥವಾ ‘ಅಮ್ಮ ಓದ್ಕೋಬೇಕು ಟೀ ಕೊಡು’ ಎಂದೋ ಅಮ್ಮನ ಹಿಂದೇನೇ ಅಲೆಯುತ್ತಿದ್ದೆ. ಆದರೆ ಈಗ ಟೀ ಕುಡಿಯೋಕೆ ನಮ್ಮವರು ಯಾರೂ ಬೇಕಾಗಿಲ್ಲ, ದುಡ್ಡು ಕೊಟ್ಟರೆ ಯಾರು ಬೇಕಾದರೂ ನಮ್ಮವರಾಗಿ ಟೀ ಕೊಟ್ಟುಬಿಡುತ್ತಾರೆ ನೋಡಿ.

ಈ ಸಂಬಂಧ ಬರೀ ಟೀಯೊಂದಿಗೆ ಮಾತ್ರ ಬೆಸೆದುಕೊಂಡಿಲ್ಲ. ಅದು ಬೆಳಿಗ್ಗೆ ಹಾಸಿಗೆಯಿಂದ ಅಮ್ಮ ನನ್ನನ್ನು ಎಬ್ಬಿಸುವುದರಿಂದ ಹಿಡಿದು, ರಾತ್ರಿ ಅಜ್ಜಿ ನನಗೆ ಕಥೆ ಹೇಳಿ ಮಲಗಿಸುವವರೆಗೆ ನನ್ನ ಸಂಗಂಡವೇ ಸುತ್ತಿಕೊಂಡಿತ್ತು, ಒಂದಾನೊಂದು ಕಾಲದಲ್ಲಿ. ಆದರೆ ಈಗ ಅದೇ ಅಮ್ಮನ ಜಾಗದಲ್ಲಿ ಅಲಾರಾಂ, ಅಜ್ಜಿಯ ಜಾಗದಲ್ಲಿ ವಾಟ್ಸ್ ಆ್ಯಪ್, ಫೇಸ್ ಬುಕ್...

ಕಾರಣ ಇಷ್ಟೇ, ನಾನು ಜೀವನದಲ್ಲಿ ಮಹತ್ತರವಾದುದೆನನ್ನಾದರೂ ಸಾಧಿಸೋಕೆ ಊರು ಬಿಟ್ಟು ಬಂದು ಇಲ್ಲೆಲ್ಲೋ ನೆಲೆ ನಿಂತಿರುವೆ. ಇಲ್ಲಿ ಯಾರೂ ನನ್ನವರಲ್ಲ. ಆದರೂ ಎಲ್ಲರೂ ನನ್ನವರೇ ಎಂದುಕೊಂಡು ಬದುಕುತ್ತಿರುವೆ.

ಆಗ ಮನೆಯಲ್ಲಿ ನನಗಿದ್ದ ವಾತಾವರಣ– ಬೆಳಿಗ್ಗೆ ಎಣ್ಣೆ ಸ್ನಾನ, ತಿಂಡಿಗೆ ಅಕ್ಕ ಮಾಡಿದ ಉಪ್ಪಿಟ್ಟು. ಅಪ್ಪನ ಜೊತೆ ಹೊಲಕ್ಕೆ ಹೋದರೆ ಮಧ್ಯಾಹ್ನ ಅಮ್ಮ ಬುತ್ತಿ ಕಟ್ಟಿಕೊಂಡು ಬರೋಳು. ಸಂಜೆ ಅಮ್ಮನ ಜೊತೆ ಹರಟೆ ಹೊಡೆಯುತ್ತಾ ಟೀ ಕುಡಿಯುವುದರ ಮಜವೇ ಬೇರೆ. ರಾತ್ರಿ ಅಜ್ಜಿ ಹೇಳುವ ಕಥೆ ಕೇಳುತ್ತಾ ಬೆಳದಿಂಗಳಲ್ಲಿ ಮಲಗಿಕೊಂಡು ಬಿಟ್ಟರೆ ನಿದ್ದೆಯಲ್ಲಿ ನಾನೇ ರಾಜ...

ಗೆಳೆಯರ ಜೊತೆ ಹೊರಗೆಲ್ಲೋ ಸುತ್ತಾಡಿ, ಸಂಬಂಧಿಕರ ಮನೆಯಲ್ಲಿ ಹಬ್ಬಕ್ಕೋ ಹರಿದಿನಕ್ಕೊ ಅಥವಾ ಇನ್ಯಾವುದೋ ವಿಶೇಷ ದಿನಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಅಲ್ಲಲ್ಲ... ಕಾರ್ಯಕ್ರಮಗಳು ಸಾಗುತ್ತಿದ್ದುದೇ ನಮ್ಮಿಂದಾಗಿ. ಊರಲ್ಲಿಯ ಜಾತ್ರೆಯಲ್ಲಿ ತೇರನ್ನೆಳೆದು, ‘ಮಾವನ ಮಗಳ ಜೊತೆ ಮದುವೆ ಮಾಡ್ಲೇನೋ’ ಎಂದು ಅಜ್ಜ ಆಗಾಗ ರೇಗಿಸುತ್ತಿದ್ದಾಗ ಇದ್ದ ಖುಷಿ, ಈಗೆಲ್ಲೋ ಕಳೆದೇಹೋಗಿಬಿಟ್ಟಿದೆ.

ಸಾಧನೆ– ಸಾಧನೆ ಅಂತ ಸಾಧನೆಯ ಹಿಂದೆ ಬಿದ್ದು ನಮ್ಮವರನ್ನೆಲ್ಲಾ ಬಿಟ್ಟು ಬಂದ ಮೇಲೆ  ಇಲ್ಲಿಯ ಜೀವನಕ್ಕೆ, ಇಲ್ಲಿಯ ಪರಿಸ್ಥಿತಿಗೆ ನಾನು ತಾನಾಗೇ ಹೊಂದಿಕೊಂಡು ಬಿಟ್ಟಿದೀನಿ. ಬೆಳಿಗ್ಗೆ ಎದ್ದು ವಾಕಿಂಗ್, ಆಮೇಲೆ ಕ್ಲಾಸು– ಕೆಲಸ, ಸಂಜೆ ಒಂದಷ್ಟು ಹೊತ್ತು ರೂಮ್ ಮೇಟ್ ಜೊತೆ ಹರಟೆ, ರಾತ್ರಿ ವಾಟ್ಸ್ ಆ್ಯಪ್ ಸ್ನೇಹಿತರ ಜೊತೆ ಹರಟೆ, ಆನಂತರ ಆ ದಿನಕ್ಕೆ ಶುಭಂ.

ಇಲ್ಲಿ ಬಂದಿದ್ದು ಏನಾದರೂ ಸಾಧನೆ ಮಾಡೋದಕ್ಕೆ ಅಂತ. ಆದರೆ, ಇಲ್ಲಿ ಬಂದು ಜನರ ಬಗ್ಗೆ ತಿಳಿದುಕೊಂಡು ಅವರಿವರ ಜೊತೆ ಒಡನಾಟದಿಂದ ಗೊತ್ತಾಗಿದ್ದು ಈ ಭೂಮಿಯ ಮೇಲೆ ಬದುಕು ನಡೆಸೋದೇ ಒಂದು ಸಾಧನೆ ಅಂತ. ನಂತರ ಈ ಬದುಕಿನಲ್ಲಿ ಬದುಕಿ ಆಮೇಲೆ ಏನಾದರೂ ಬದುಕಿದ್ದು ಸಾರ್ಥಕ ಅನ್ನಿಸುವಂಥ ಕೆಲಸ ಮಾಡಬೇಕು ಎಂದುಕೊಂಡಾಗ, ಈಗಿರುವ ಕೆಲಸದ ಮಧ್ಯದಲ್ಲೇ ಅಲ್ಪ ಸ್ವಲ್ಪ ಬಿಡುವು ಮಾಡಿಕೊಂಡು ಬದುಕಿಗೊಂದಷ್ಟು ಖುಷಿ ಕೊಡುವ ಕೆಲಸ ಮಾಡಬೇಕಷ್ಟೇ.

ಇಲ್ಲಿ ಬಂದ ಮೇಲೆ ಹಬ್ಬ ಹರಿದಿನಗಳಿಗೆ ಸಂಬಂಧಿಕರ ಮನೆಗೆ ಹೋಗುವುದಿರಲಿ, ನಮ್ಮ ಮನೆಗೇ ಹೋಗಲಾಗುತ್ತಿಲ್ಲ. ಅಜ್ಜ ತೀರಿಹೋದ ಸುದ್ದಿ ನನಗೆ ತಿಳಿದಿದ್ದು ಮಾರನೇ ದಿನ, ಕಾರಣ ಅದ್ಯಾವುದೋ ನಕ್ಷತ್ರ ಇದ್ದಿದ್ದಕ್ಕೆ ಆವತ್ತೇ ಮಣ್ಣು ಮಾಡಬೇಕೆಂದರಂತೆ, ಇನ್ನು ನಾನು ಬರುವುದಕ್ಕೆ ಒಂದು ದಿನ ಬೇಕು. ಹೀಗಾಗಿ ‘ತಿಥಿಗೆ ಹೇಳಿದರಾಯಿತು ಎಂದು ಹೇಳಲಿಲ್ಲ’ ಎಂದು ಅಪ್ಪ ನನಗೆ ಹೇಳಿದಾಗ, ನಿಜಕ್ಕೂ ಬೇಸರವಾಗಿಹೋಯಿತು.

ಈಗ ನನಗೆ ನಿಜಕ್ಕೂ ಚಿಂತೆ ಕಾಡತೊಡಗಿದೆ...

ನಾನು ಊರು ಬಿಟ್ಟು ಬಂದಿದ್ದು ಸಾಧನೆ ಮಾಡುವುದಕ್ಕೆ. ಆದರೆ ಸಾಧನೆಯ ಭರದಲ್ಲಿ, ನನ್ನ ಜೊತೆಗಿದ್ದ ಸಂಬಂಧಗಳ ಬಂಧವನ್ನೇ ಕಡೆದುಕೊಂಡು ಬಿಡುತ್ತಿದ್ದೇನಲ್ಲಾ ಎಂದು ಅನ್ನಿಸೋಕೆ ಶುರುವಾಗಿದೆ. ಅಮ್ಮನ ಅಕ್ಕರೆ, ಅಕ್ಕನ ಜಗಳ, ಅಪ್ಪನ ಬೈಗುಳ, ಅಜ್ಜಿಯ ಕಥೆಯಲ್ಲಿಣುಕುವ ನೀತಿ– ತತ್ವ, ಗೆಳೆಯರ ಬಳಗ, ಸಂಬಂಧಿಕರ ಬಾಂಧವ್ಯಗಳೆಲ್ಲವನ್ನೂ ನಾನು ಕಳೆದುಕೊಂಡುಬಿಟ್ಟೆನಲ್ಲವೆ ಎಂದು ಎಷ್ಟೋ ಸಾರಿ, ನನಗೆ ನಾನೇ ಯೋಚನೆ ಮಾಡಿ ಕುಗ್ಗಿ ಹೋಗುವುದಿದೆ.

ಏನಾದರೂ ಸಾಧನೆ ಮಾಡುವುದು ಅಂದರೆ ಎಲ್ಲರನ್ನೂ ಬಿಟ್ಟು ದೂರ ಉಳಿಯುವುದೇ, ಅಥವಾ ಅವಕಾಶಗಳನ್ನು ಅರಸಿ ಎಲ್ಲರನ್ನೂ ಮೆಚ್ಚಿಸಿ ಎಲ್ಲರಿಗೂ ಗೌರವ ತರುವ ಕೆಲಸ ಮಾಡುವುದೆ? ಹೌದು ನನಗೆ ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೇನೆ. ನಿಜ, ಹಾಗಾದರೆ ನಾನು ನನ್ನೊಂದಿಗೆ ಯಾವಾಗಲಾದರೂ ಇದೀನಾ?

ಊರಲ್ಲಿರುವಾಗ– ಅಥವಾ ಈಗ? ಆವಾಗ ನಾನು ನನ್ನೊಂದಿಗಿದ್ದೆ, ನಮ್ಮವರೊಂದಿಗೆ ಖುಷಿಯಾಗಿದ್ದೆ. ಹಾಗಾದರೆ ಈಗ ನಾನು ಸಾಧನೆಯ ಹಾದಿಯಲ್ಲಿದ್ದೇನೆ. ನಮ್ಮವರೊಂದಿಗಿಲ್ಲ, ನನ್ನೊಂದಿಗಿಲ್ಲ ನನ್ನತನದಲ್ಲಿದೀನಿ ಅಷ್ಟೇ. ಹೀಗೆ ನನ್ನನ್ನು ನಾನೇ ವಿಮರ್ಶೆ ಮಾಡಿಕೊಂಡಾಗ ನನಗೆ ದೊರೆತದ್ದು ‘ನನ್ನ ಸಂಬಂಧಗಳನ್ನು ಸಾಯಿಸಿ, ನಾನು ಸತ್ತು ಬಿಟ್ಟೆನೇ’ ಎಂಬ ಪ್ರಶ್ನೆ.

ಇದಕ್ಕೆ ಉತ್ತರ ಹುಡುಕತೊಡಗಿದಾಗಲೇ ಕಿಸೆಯಲ್ಲಿನ ಫೋನಿನಿಂದ ರಿಂಗ್‌ಟೋನ್‌! ಬೇಗನೆ ಟೀ ಕುಡಿದು ಮುಂದಿನ ಕೆಲಸ ಏನು ಅಂತ ಯೋಚಿಸುತ್ತ ಹೆಜ್ಜೆ ಹಾಕಿದೆ... 

ಬರಹ ಇಷ್ಟವಾಯಿತೆ?

 • 1

  Happy
 • 5

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !