ಶುಕ್ರವಾರ, ಸೆಪ್ಟೆಂಬರ್ 20, 2019
26 °C
ಮೈತ್ರಿ ಸರ್ಕಾರ ಬೆಂಬಲಿಸಲು ಸೂಚನೆ ನೀಡಿದ್ದ ಮಾಯಾವತಿ–ಎಂ.ಕೃಷ್ಣಮೂರ್ತಿ

ಎನ್‌.ಮಹೇಶ್‌ ನಿಲುವಿನ ಹಿಂದೆ ಬಿಜೆಪಿ: ಆರೋಪ

Published:
Updated:
Prajavani

ಚಾಮರಾಜನರ: ‘ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಏಕೈಕ ಶಾಸಕರಾಗಿದ್ದ ಎನ್‌.ಮಹೇಶ್‌, ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲಿ ಮೈತ್ರಿ ಸರ್ಕಾರವನ್ನು ಬೆಂಬಲಿಸದೆ ಇರಲು ಬಿಜೆಪಿಯೇ ಕಾರಣ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ’ ಎಂದು ಪಕ್ಷದ ರಾಜ್ಯ ಘಟಕದ ನೂತನ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದರು. 

ನಗರದಲ್ಲಿ ಮಂಗಳವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಪಕ್ಷೇತರ ಶಾಸಕರು ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವುದರ ಹಿಂದೆ ಬಿಜೆಪಿ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋಗಲು ವಿ‌ಮಾನದ ವ್ಯವಸ್ಥೆ ಮಾಡಿರುವುದು, ಹೋಟೆಲ್‌ ವ್ಯವಸ್ಥೆ ಮಾಡಿರುವುದು ಎಲ್ಲವೂ ಬಿಜೆಪಿಯೇ. ಅದೇ ರೀತಿ ಪಕ್ಷದ ನಾಯಕಿ ಮಾಯಾವತಿ ಅವರ ಆದೇಶ ಉಲ್ಲಂಘಿಸಿ ಎನ್‌‌.ಮಹೇಶ್‌ ಅವರು ತಟಸ್ಥರಾಗಲೂ ಬಿಜೆಪಿಯೇ ಕಾರಣ’ ಎಂದು ಆರೋಪಿಸಿದರು. 

‘10 ಜನ ಮಲೇರಿಯಾ ಪೀಡಿತರೊಂದಿಗೆ ಇದ್ದ ವ್ಯಕ್ತಿಗೂ ಮಲೇರಿಯಾ ಬಂದಿದೆ ಎಂದರೆ, ಉಳಿದವರಿಗೆ ಕಚ್ಚಿದ ಸೊಳ್ಳೆ ಆ ವ್ಯಕ್ತಿಗೂ ಕಚ್ಚಿದೆಯೆಂದೇ ಅರ್ಥ’ ಎಂದು ಮಾರ್ಮಿಕವಾಗಿ ಹೇಳಿದರು.

ಸುಳ್ಳು ಹೇಳಿಕೆ: ‘ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ತಟಸ್ಥರಾಗಿರುವಂತೆ ವರಿಷ್ಠರು ಸೂಚನೆ ನೀಡಿದ್ದಾಗಿ ಸುಳ್ಳು ಹೇಳಿಕೆ ನೀಡುತ್ತಾ ಎನ್‌.ಮಹೇಶ್‌ ಅವರು ಪಕ್ಷದ ಕಾರ್ಯಕರ್ತರ, ಬೆಂಬಲಿಗರ ಮತ್ತು ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ. ಮೈತ್ರಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಬೇಕು ಎಂದು ಒಂದು ತಿಂಗಳ ಮೊದಲೇ ಮಾಯಾವತಿ ಅವರು ಶಾಸಕರಿಗೆ ಸ್ಪಷ್ಟ ಆದೇಶ ನೀಡಿದ್ದರು’ ಎಂದರು. 

ಮಹೇಶ್‌, ಬಿಜೆಪಿ ಆಮಿಷಕ್ಕೆ ಒಳಗಾಗಿದ್ದಾರೆಯೇ ಎಂಬ ಪ್ರಶ್ನೆಗೆ, ‘ಕಾರ್ಯಕರ್ತರು ಆ ರೀತಿ ಮಾತನಾಡುತ್ತಿದ್ದು, ಅವರ ಕಣ್ಣು ತಪ್ಪಿಸಿ ಏನೂ ಮಾಡಲು ಸಾಧ್ಯವಿಲ್ಲ’ ಎಂದು ಉತ್ತರಿಸಿದರು.

‘ರಾಜೀನಾಮೆ ಕೊಡಲಿ’

‘ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ದಿನದಿಂದಲೇ ಮಹೇಶ್‌ ಅವರು ಪಕ್ಷದಿಂದ ಮಾನಸಿಕವಾಗಿ ದೂರವಾಗಿದ್ದರು. ತಮ್ಮನ್ನು ಉಚ್ಚಾಟಿಸಿದ್ದಕ್ಕಾಗಿ ಬೆಂಬಲಿಗರಿಂದ ರಾಜೀನಾಮೆ ಕೊಡಿಸಿ ಪಕ್ಷದ ಅಸ್ತಿತ್ವ ನಾಶಕ್ಕೆ ಯತ್ನಿಸುತ್ತಿದ್ದಾರೆ. ಪಕ್ಷದ ಚಿಹ್ನೆಯಿಂದ ಗೆದ್ದಿರುವ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ, ನಂತರ ನಡೆಯುವ ಉಪಚುನಾವಣೆಯಲ್ಲಿ ಬೆಂಬಲಿಗರ ನೆರವಿನಿಂದ ಗೆಲ್ಲಲಿ. ಆಗ ಅವರು ನಾಯಕರೆಂದು ಒಪ್ಪಿಕೊಳ್ಳುತ್ತೇವೆ’ ಎಂದು ಕೃಷ್ಣಮೂರ್ತಿ ಸವಾಲು ಹಾಕಿದರು. 

Post Comments (+)