6 ತಿಂಗಳಲ್ಲಿ 200 ರೈತರ ಆತ್ಮಹತ್ಯೆ: ಆರ್‌. ಅಶೋಕ್‌

7
ಕೊಳ್ಳೇಗಾಲ, ಹನೂರು ತಾಲ್ಲೂಕಿಗೆ ಭೇಟಿ ನೀಡಿದ ಬಿಜೆಪಿ ಬರ ಅಧ್ಯಯನ ತಂಡ, ಸರ್ಕಾರದ ವಿರುದ್ಧ ಆಕ್ರೋಶ

6 ತಿಂಗಳಲ್ಲಿ 200 ರೈತರ ಆತ್ಮಹತ್ಯೆ: ಆರ್‌. ಅಶೋಕ್‌

Published:
Updated:
Deccan Herald

ಕೊಳ್ಳೇಗಾಲ/ಹನೂರು: ‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಸರ್ಕಾರ ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ’  ಎಂದು ಬಿಜೆಪಿ ಹಿರಿಯ ಮುಖಂಡ, ಶಾಸಕ ಆರ್‌.ಅಶೋಕ ಅವರು ಶುಕ್ರವಾರ ಆರೋಪಿಸಿದರು.

ಪಕ್ಷದ ವತಿಯಿಂದ ಬರ ಅಧ್ಯಯನಕ್ಕಾಗಿ ಕೊಳ್ಳೇಗಾಲ ಮತ್ತು ಹನೂರು ತಾಲ್ಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಹೆಚ್ಚು ನೀರು ಪೂರೈಕೆ ಆಗುವ ಮಂಡ್ಯ ಜಿಲ್ಲೆಯಲ್ಲೇ 22 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಿರುವಾಗ ಬೇರೆ ಜಿಲ್ಲೆಗಳಲ್ಲಿ ಎಷ್ಟು ಮಂದಿ ಮಾಡಿಕೊಂಡಿರಬಹುದು? ಇದು ರೈತ ವಿರೋಧಿ ಸರ್ಕಾರ. ಸರ್ಕಾರಿ ನೌಕರರ  ವರ್ಗಾವಣೆಯಲ್ಲೇ ನಿರತವಾಗಿದೆ. 6 ತಿಂಗಳು ಕಳೆದರೂ ಟೇಕ್ ಆಫ್ ಆಗಿಲ್ಲ’ ಎಂದು ಕಿಡಿ ಕಾರಿದರು. 

‘ರಾಜ್ಯದಲ್ಲಿ 100ಕ್ಕೂ ಹೆಚ್ಚು ತಾಲ್ಲೂಕುಗಳು ಬರ ಪೀಡಿತವಾಗಿವೆ ಎಂದು ಸರ್ಕಾರ ಘೋಷಣೆ ಮಾಡಿದೆ. ಆದರೆ, ಬರ ಪರಿಹಾರ ಕೆಲಸ ಯಾವ ಜಿಲ್ಲೆಯಲ್ಲೂ ಪ್ರಾರಂಭವಾಗಿಲ್ಲ. ಬರಗಾಲ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಬೇಕು. ಆ ಕೆಲಸವೂ ನಡೆದಿಲ್ಲ. ಪಕ್ಷವು ಐದು ತಂಡಗಳ ಮೂಲಕ ರಾಜ್ಯದಲ್ಲಿ ಬರ ಅಧ್ಯಯನ ನಡೆಸುತ್ತಿದೆ’ ಎಂದರು.

ಹನೂರು ತಾಲ್ಲೂಕಿನ ಚೆನ್ನಾಲಿಂಗನಹಳ್ಳಿ ಗ್ರಾಮದಲ್ಲಿ ಬರಪೀಡಿತ ಸ್ಥಳಗಳ ಪರಿಶೀಲನೆ ನಡೆಸಿ, ಸ್ಥಳೀಯ ರೈತರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅಶೋಕ ಅವರು, ‘ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಬದಲು ದೇವಸ್ಥಾನಗಳನ್ನು ಸುತ್ತುವುದರಲ್ಲೇ ಕಾಲ ಕಳೆಯುತ್ತಿದ್ದಾರೆ’ ಎಂದು ಆಪಾದಿಸಿದರು.

‘ಮಳೆಯಿಲ್ಲದೇ ಬೆಳೆನಾಶವಾಗಿದೆ. ಕಂಗಲಾಗಿರುವ ರೈತರಿಗೆ ಇದುವರೆಗೂ ಯಾವ ಅಧಿಕಾರಿಗಳು ಬಂದು ಸಾಂತ್ವನ ಹೇಳಿಲ್ಲ. ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಕಾಣೆಯಾಗಿದ್ದಾರೆ. ರೈತರು ಬ್ಯಾಂಕಿನಿಂದ ಸಾಲ ಪಡೆದು ಕೃಷಿ ಮಾಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಸಮೀಕ್ಷೆ ನಡೆಸಿಲ್ಲ. ತಾಲ್ಲೂಕಿನಲ್ಲಿರುವ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರೆತೆ ಇದೆ. ಸೂಕ್ತ ಚಿಕಿತ್ಸೆಯಿಲ್ಲದೇ ಜಾನುವಾರುಗಳು ಸಾವಿಗೀಡಾಗುತ್ತಿವೆ’ ಎಂದು ಅವರು ಆರೋಪಿಸಿದರು.

ದಿವಾಳಿ ಸರ್ಕಾರ: ‘ಖಜಾನೆಯಲ್ಲಿ ಹಣವಿಲ್ಲದೇ ಸರ್ಕಾರ ದಿವಾಳಿ ಆಗಿದೆ. ಬರ ಪರಿಹಾರಕ್ಕಾಗಿ ಪ್ರತಿ ಜಿಲ್ಲೆಗೆ ₹ 50 ಲಕ್ಷ ಹಣ ನೀಡುವುದಾಗಿ ಹೇಳಿ ಸರ್ಕಾರ, ₹25 ಲಕ್ಷ ಬಿಡುಗಡೆ ಮಾಡಿದೆ. ಆದರೆ, ಅವರು ನೀಡುವ ಹಣ ಕೊಳವೆಬಾವಿ ಕೊರೆಸಲೂ ಸಾಲುವುದಿಲ್ಲ. ₹45 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿ, ಕೇವಲ ₹3,000 ಕೋಟಿ ಬಿಡುಗಡೆ ಮಾಡಿದೆ. ಸರ್ಕಾರದ ಖಜಾನೆಯಲ್ಲಿ ಎಷ್ಟು ಹಣ ಇದೆ, ಹೊಸ ತಾಲ್ಲೂಕುಗಳ ರಚನೆಗೆ ನೀಡುವ ಹಣ ಎಷ್ಟು, ರೈತರ ಸಾಲ ಮನ್ನಾ ಮಾಡಲು ನೀಡುವ ಹಣ, ಪ್ರಸ್ತುತ ಬಿಡುಗಡೆಯಾಗಿರುವ ಹಣ ಎಷ್ಟು ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲಿ’ ಎಂದು ಸವಾಲು ಹಾಕಿದರು.

ಮೈಸೂರಿನ ಶಾಸಕ ನಾಗೇಂದ್ರ, ಬರ ಅಧ್ಯಯನ ತಂಡದ ಸಮಿತಿ ಸದಸ್ಯ ಜಯದೇವ್, ಬಿಜೆಪಿ ಜಿಲ್ಲಾ ಘಟಕದ ಪ್ರೊ. ಮಲ್ಲಿಕಾರ್ಜುನಪ್ಪ, ಮುಖಂಡರಾದ ನಂಜುಂಡಸ್ವಾಮಿ, ಪರಿಮಳಾ ನಾಗಪ್ಪ, ಸರ್ವೆಶ್ ಬಸವಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರದಾ ಜಯಂತಿ, ಬಾಲರಾಜು, ನಗರಸಭೆ ಸದಸ್ಯೆ ಕವಿತಾ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

ಸುವರ್ಣ ಸೌಧಕ್ಕೆ ಮುತ್ತಿಗೆ
‘ಮಲಗಿರುವ ಸಮ್ಮಿಶ್ರ ಸರ್ಕಾರವನ್ನು ಎಬ್ಬಿಸಿ ಕಿವಿ ಹಿಂಡಿ ಕೆಲಸ ಮಾಡಿಸಬೇಕಾಗಿದೆ. ಬೆಳಗಾವಿ ಅಧಿವೇಶನ ಡಿ. 10 ರಂದು ಆರಂಭವಾಗಲಿದೆ. ಅಧಿವೇಶನದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ. ಅಧಿವೇಶನದ ಸಂದರ್ಭದಲ್ಲಿ ದೊಡ್ಡ ಹೋರಾಟ ನಡೆಸುತ್ತೇವೆ. 1 ಲಕ್ಷ ಜನರನ್ನು ಸೇರಿಸಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಇದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ’ ಎಂದು ಅಶೋಕ ಹೇಳಿದರು.‌

ಸಂಕಷ್ಟ ತೋಡಿಕೊಂಡ ರೈತರು 
ಚೆನ್ನಾಲಿಂಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಬಿಜೆಪಿ ತಂಡದ ಮುಂದೆ ಸ್ಥಳೀಯ ರೈತರು ತಮ್ಮ ಸಂಕಷ್ಟವನ್ನು ಹೇಳಿಕೊಂಡರು.

ಪುಟ್ಟದೇವಮ್ಮ ಮಾತನಾಡಿ, ‘ಸ್ವಾಮಿ, ಸಾಲ ಮಾಡಿ ನಾಲ್ಕು ಎಕರೆ ಜಮೀನಿನಲ್ಲಿ ರಾಗಿ ಹಾಕಿದ್ದೆ. ಆದರೆ ಮಳೆಯಿಲ್ಲದೇ ಎಲ್ಲವೂ ಒಣಗಿದೆ. ಎಕರೆಗೆ ₹10 ಸಾವಿರ ಖರ್ಚು ಮಾಡಿದ್ದೇನೆ. ಆದರೆ ಅಧಿಕಾರಿಗಳು ನಾಲ್ಕು ಎಕರೆಗೆ ₹10 ಸಾವಿರ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಸಾಲ ತೀರಿಸಲು ಈಗ ಮಕ್ಕಳೊಂದಿಗೆ ಊರು ಬಿಡಬೇಕಾದ ಪರಿಸ್ಥಿತಿ ಎದುರಾಗಿದೆ’ ಎಂದು ಅಳಲು ತೋಡಿಕೊಂಡರು.

ಕಣ್ಣೂರು ಗ್ರಾಮದ ರೈತ ಬಸವರಾಜು ಮಾತನಾಡಿ, ‘ಜಿಲ್ಲೆಯಲ್ಲಿ ನಾಲ್ಕು ವರ್ಷಗಳಿಂದ ಹನೂರು ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ನದಿಮೂಲಗಳಿಂದ ಕೆರಗಳಿಗೆ ನೀರು ತುಂಬಿಸುವ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮುಂತಾದ ಯೋಜನೆಗಳು ನನೆಗುದಿಗೆ ಬಿದ್ದಿವೆ. ಇಲ್ಲಿನ ಶಾಸಕರು ಕ್ಷೇತ್ರ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ’ ಎಂದು ಆರೋಪಿಸಿದರು.

ಚೆನ್ನಾಲಿಂಗನಹಳ್ಳಿ ಗ್ರಾಮದ ರೈತ ಯೋಗೀಶ್ ಮಾತನಾಡಿ, ‘ಫಸಲ್ ಬಿಮಾ ಯೋಜನೆಯಡಿ 2016-17ರಲ್ಲಿ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದೆ. ಆದರೆ, ಅರ್ಜಿ ಸಲ್ಲಿಸಿ ಎರಡು ವರ್ಷಗಳಾದರೂ ಇದುವರೆಗೆ ಪರಿಹಾರ ಬಂದಿಲ್ಲ. ಕೃಷಿ ಸಮಸ್ಯೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಭಾರಿ ಮನವಿ ಸಲ್ಲಿಸಿದ್ದರೂ, ಯಾರೊಬ್ಬರೂ ಮನವಿಗೆ ಸ್ಪಂದಿಸಿಲ್ಲ’ ಎಂದು ನೋವು ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !