ಶನಿವಾರ, ಜೂನ್ 6, 2020
27 °C

ಅಪರಿಮಿತ ಸೌಂದರ್ಯ ಅನಾವರಣ

ಹೇಮಾ ವೆಂಕಟ್‌ Updated:

ಅಕ್ಷರ ಗಾತ್ರ : | |

Prajavani

ಅಳಿದು ಹೋದ ನಾಗರಿಕತೆ ಕುತೂಹಲ ಹುಟ್ಟಿಸುವ ವಿಷಯ. ಗತವೈಭವದ ನೆನಪುಗಳು ಮೆಲುಕು ಹಾಕುವಂಥವೇ. ಅಲ್ಲೊಂದು ಅನುಪಮ ಸೌಂದರ್ಯದ ದರ್ಶನ ಸಾಧ್ಯತೆಯನ್ನು ಅತ್ಯಂತ ಕುತೂಹಲ ಮತ್ತು ಹುಡುಕಾಟದ ಪ್ರಜ್ಞೆ ಇಟ್ಟುಕೊಂಡು ಹಿರಿಯ ಕಲಾವಿದ ಶ್ರೀನಾಥ್‌ ಬಿದರೆ ಅಪರೂಪದ ಕಲಾಕೃತಿಗಳನ್ನು ರಚಿಸಿದ್ದಾರೆ. 

‘ಅಪರಿಮಿತ’ (ಬೌಂಡ್‌ಲೆಸ್‌) ಸೌಂದರ್ಯದ ಅನಾವರಣ– ಇದು ಕಲಾ ನಿರ್ದೇಶಕರೂ ಆಗಿರುವ ಶ್ರೀನಾಥ್‌ ಬಿದರೆ ಅವರ ಇತ್ತೀಚಿನ ಕಲಾಕೃತಿಗಳ ಪ್ರದರ್ಶನದ ಶೀರ್ಷಿಕೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಇದೇ 25ರಿಂದ 30ರವರೆಗೆ ಅಪರಿಮಿತ ಸೌಂದರ್ಯದ ಒಟ್ಟು 35 ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿದೆ. 

ಇವರಿಗೆ ಅಳಿದುಳಿದ ಪರಂಪರೆಯ ಕುರುಹುಗಳ ಬಗ್ಗೆ ತೀವ್ರ ಆಸಕ್ತಿ. ಅವುಗಳಲ್ಲಿನ ಅಪರಿಮಿತ ಸೌಂದರ್ಯ ಅವರ ಹುಡುಕಾಟ. ಕಲಾಕೃತಿಗಳನ್ನು ನೋಡುತ್ತಿದ್ದರೆ, ನಿಜಕ್ಕೂ ಮರೆಗೆ ಸರಿದ ನಾಗರಿಕತೆಯೊಂದರ ಅಂಥದೊಂದು ಅಪರೂಪದ ದರ್ಶನವಾಗುತ್ತದೆ.

ಅಮೂರ್ತ ಕಲಾಕೃತಿಗಳನ್ನು ಅಸಾಂಪ್ರದಾಯಿಕ ಶೈಲಿಯಲ್ಲಿ ಮೂಡಿಸುವುದು ಇವರ ಸೃಜನಶೀಲತೆಯ ವಿಶೇಷ. ಕಪ್ಪು ಬಿಳುಪು, ಕಂದು, ಹಳದಿ ಬಣ್ಣಗಳ ಬಳಕೆಯಲ್ಲಿಯೇ ಇವರು ಇತಿಹಾಸವನ್ನು, ಕಳೆದು ಹೋದ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತಾರೆ. ಶ್ರೀನಾಥ್‌ ತಮ್ಮ ಕಲಾಕೃತಿಗಳಿಗೆ ಶೀರ್ಷಿಕೆ ನೀಡಿಲ್ಲ. ಅಮೂರ್ತ ಕಲಾಕೃತಿಯೊಂದನ್ನು ತಮ್ಮ ತಮ್ಮ ಭಾವಕ್ಕೆ ದಕ್ಕಿಸಿಕೊಳ್ಳಲು ಇದುವೇ ಸರಿಯಾದ ಕ್ರಮ ಕೂಡ. ಈ ಸರಣಿಯ ವರ್ಣ ಹಾಗೂ ರೇಖಾ ಚಿತ್ರಗಳು ಅಸಾಂಪ್ರದಾಯಿಕ ರೀತಿಯಲ್ಲಿ ಮೂಡಿ ಬಂದಿವೆ.

ಬೆಂಗಳೂರಿನವರೇ ಆಗಿರುವ ಶ್ರೀನಾಥ್‌, ದಾವಣಗೆರೆಯ ದೃಶ್ಯಕಲಾ ಕಾಲೇಜಿನಲ್ಲಿ ಚಿತ್ರಕಲಾ ಪದವಿ ಪಡೆದವರು. ಉತ್ತಮ ಛಾಯಾಗ್ರಾಹಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರೇಮಿ. ಜಾಹೀರಾತುಗಳಿಗೆ ಕಲಾ ನಿರ್ದೇಶಕರಾಗಿಯೂ ದುಡಿದಿರುವ ಅನುಭವಿ. ಸದ್ಯ ಪೂರ್ಣಪ್ರಮಾಣದಲ್ಲಿ ಕಲಾಕೃತಿ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಇದುವರೆಗೆ ನಾಲ್ಕು ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ. ಅನೇಕ ಸಮೂಹ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.

‘ಬೌಂಡ್‌ಲೆಸ್‌’ ಪ್ರದರ್ಶನ ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ತೆರೆದಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು