ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌ 2020: ರೈಲ್ವೆಗೆ ಸಿಕ್ಕಿದ್ದೇನು?

Last Updated 1 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಜನಸಾಮಾನ್ಯರ ಪ್ರಯಾಣಕ್ಕೆ ಹೊಸ ಪ್ಯಾಸೆಂಜರ್‌ ರೈಲುಗಳು, ದೇಶದ ಪ್ರವಾಸಿ ತಾಣಗಳ ತ್ವರಿತ ಸಂಪರ್ಕಕ್ಕೆ ತೇಜಸ್‌ ಮಾದರಿ ರೈಲುಗಳು, ರೈಲ್ವೆ ಹಳಿಗುಂಟ ಸೌರಶಕ್ತಿ ವಿದ್ಯುತ್‌ ಉತ್ಪಾದನಾ ಘಟಕಗಳ ಸ್ಥಾಪನೆ, 27,000 ಕಿ.ಮೀ. ಉದ್ದದ ರೈಲು ಮಾರ್ಗದಲ್ಲಿ ವಿದ್ಯುದೀಕರಣ ಸೌಲಭ್ಯ...

ಕೇಂದ್ರ ಬಜೆಟ್‌ನಲ್ಲಿ ರೈಲ್ವೆಗೆ ದೊರೆತಿರುವ ಪ್ರಮುಖ ಕೊಡುಗೆಗಳು ಇವಾಗಿವೆ. ರೈತರ ತೋಟಗಾರಿಕೆ ಉತ್ಪನ್ನಗಳ ತ್ವರಿತ ಸಾಗಣೆಗೆ ಖಾಸಗಿ ಸಹಭಾಗಿತ್ವದಲ್ಲಿ ಹವಾನಿಯಂತ್ರಿತ ‘ಕಿಸಾನ್‌’ ರೈಲುಗಳ ಸೌಲಭ್ಯ ಒದಗಿಸುವ ಪ್ರಸ್ತಾಪವನ್ನೂ ಬಜೆಟ್‌ನಲ್ಲಿ ಮಾಡಲಾಗಿದೆ. ಎಕ್ಸ್‌ಪ್ರೆಸ್‌ ರೈಲುಗಳಲ್ಲೂ ತೋಟಗಾರಿಕೆ ಉತ್ಪನ್ನಗಳ ಸಾಗಣೆಗೆ ಹವಾನಿಯಂತ್ರಿತ ಸರಕು ಬೋಗಿಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪ್ರಕಟಿಸಲಾಗಿದೆ.

ತೇಜಸ್‌ ಮಾದರಿಯ ಹೈಸ್ಪೀಡ್‌ ರೈಲುಗಳ ಮೂಲಕ ದೇಶದ ಎಲ್ಲ ಪ್ರವಾಸಿ ತಾಣಗಳ ಸಂಪರ್ಕಕ್ಕೆ ಅನುವು ಮಾಡಿಕೊಡುವ ಗುರಿಯನ್ನು ಕೇಂದ್ರ ಹೊಂದಿದೆ. ಮುಂಬೈ–ಅಹಮದಾಬಾದ್‌ ನಡುವಿನ ಹೈಸ್ಪೀಡ್‌ ರೈಲ್ವೆ ಕಾರಿಡಾರ್‌ ಯೋಜನೆ 2023ರೊಳಗೆ ಪೂರ್ಣಗೊಳ್ಳಲಿದೆ ಎಂದು ಪ್ರಕಟಿಸಲಾಗಿದೆ. ಮೋದಿ ನೇತೃತ್ವದ ಹಾಲಿ ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ 550 ರೈಲು ನಿಲ್ದಾಣಗಳಲ್ಲಿ ವೈ–ಫೈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಪ್ರಸಕ್ತ ಸಾಲಿಗೆ ಹೋಲಿಕೆ ಮಾಡಿದರೆ ಮುಂದಿನ ಹಣಕಾಸು ವರ್ಷದಲ್ಲಿ ರೈಲ್ವೆ ಆದಾಯ ಶೇ 9.5ರಷ್ಟು ಹೆಚ್ಚಲಿದೆ ಎಂದು ಅಂದಾಜು ಮಾಡಲಾಗಿದೆ. 2020–21ರ ಅವಧಿಯಲ್ಲಿ ಹೊಸ ಮಾರ್ಗಗಳ ನಿರ್ಮಾಣಕ್ಕೆ ₹ 12000 ಕೋಟಿ, ಗೇಜ್‌ ಪರಿವರ್ತನೆಗೆ ₹ 2250 ಕೋಟಿ, ಜೋಡಿ ಮಾರ್ಗ ನಿರ್ಮಾಣಕ್ಕೆ ₹700 ಕೋಟಿ, ಸಿಗ್ನಲಿಂಗ್‌ ವ್ಯವಸ್ಥೆಗೆ ₹ 1,650 ಕೋಟಿ ಎತ್ತಿಡಲಾಗಿದೆ.

ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ವೇಗೆ ವೇಗ

ನನೆಗುದಿಗೆ ಬಿದ್ದಿದ್ದ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ವೇ ಯೋಜನೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ಚಾಲನೆ ನೀಡಲಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ಈ ಯೋಜನೆಯಿಂದ ಲಾಭವಾಗಲಿದೆ. 262 ಕಿ.ಮೀ. ಉದ್ದದ ಈ ರಸ್ತೆ ರಾಜ್ಯದ ಹೊಸಕೋಟೆಯಿಂದ ಆರಂಭವಾಗಲಿದ್ದು, ತಮಿಳುನಾಡಿನ ಶ್ರೀಪೆರಂಬೂರ್‌ನಲ್ಲಿ ಕೊನೆಗೊಳ್ಳಲಿದೆ.

ಈ ಹೆದ್ದಾರಿ ಪೂರ್ಣಗೊಂಡ ಬಳಿಕ ಬೆಂಗಳೂರು ಮತ್ತು ಚೆನ್ನೈ ನಡುವೆ ಕೇವಲ ನಾಲ್ಕು ಗಂಟೆಗಳಲ್ಲಿ ಪ್ರಯಾಣ ಮಾಡಬಹುದಾಗಿದೆ. ರಾಜ್ಯದಲ್ಲಿ ಈ ಹೆದ್ದಾರಿಯ ಉದ್ದ 76 ಕಿ.ಮೀ.ಗಳಷ್ಟು ಇರಲಿದೆ.

ಹಳಿಗೆ ಬಂತು ಉಪನಗರ ರೈಲು

ಬೆಂಗಳೂರಿನಲ್ಲಿ ₹ 18,600 ಕೋಟಿ ವೆಚ್ಚದಲ್ಲಿ ಉಪನಗರ ರೈಲು ಸಾರಿಗೆ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದ್ದು, ಶೇ 20ರಷ್ಟು ಅನುದಾನವನ್ನು ಕೇಂದ್ರ ನೀಡಲಿದೆ. ಸರ್ಕಾರೇತರ ಹಣಕಾಸು ಮೂಲಗಳಿಂದ ಶೇ 60ರಷ್ಟು ಆರ್ಥಿಕ ನೆರವು ಒದಗಿಸುವುದಾಗಿಯೂ ಅದು ಹೇಳಿದೆ.

ಈ ಯೋಜನೆಯಡಿ ನಗರ ವ್ಯಾಪ್ತಿಯಲ್ಲಿರುವ 444 ಕಿ.ಮೀ. ರೈಲ್ವೆ ಮಾರ್ಗದ ಸದ್ಬಳಕೆಯೊಂದಿಗೆ, ಕೆಲವೆಡೆ ವಿಸ್ತರಣೆ, ಸ್ವಯಂಚಾಲಿತ ಸಿಗ್ನಲ್‌ ವ್ಯವಸ್ಥೆ ಹಾಗೂ ರೈಲ್ವೆ ಮಾರ್ಗಗಳ ವಿದ್ಯುದೀಕರಣದ ಮೂಲಕ ಉಪನಗರ ರೈಲು ಸೌಲಭ್ಯ ಕಲ್ಪಿಸಲಾಗುತ್ತದೆ. 116 ಹೊಸ ರೈಲುಗಳ ಸೇವೆ ಒದಗಿಸಲು ಅವಕಾಶ ಸಿಗಲಿದೆ.

ನೈರುತ್ಯ ರೈಲ್ವೆಯು ಒಂಬತ್ತು ಪ್ರಮುಖ ಮಾರ್ಗಗಳನ್ನು ಉಪನಗರ ರೈಲು ಜಾಲಕ್ಕಾಗಿ ಗುರುತಿಸಿದೆ. ನೆಲಮಂಗಲ, ರಾಜಾನಕುಂಟೆ, ಕೆಂಗೇರಿ, ದೇವನಹಳ್ಳಿ, ವೈಟ್‌ಫೀಲ್ಡ್‌, ಹೀಲಳಿಗೆ, ಯಶವಂತಪುರ, ಹೆಬ್ಬಾಳ, ಬೈಯಪ್ಪನಹಳ್ಳಿ, ಯಲಹಂಕ, ಕಂಟೋನ್ಮೆಂಟ್‌ ನಿಲ್ದಾಣಗಳು ಈ ಜಾಲದಲ್ಲಿ ಸೇರಿವೆ. ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವು ಈ ರೈಲು ಜಾಲದ ಕೇಂದ್ರಸ್ಥಾನದಲ್ಲಿ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT