ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಜೆಟ್‌ 2022| ಭದ್ರಾ ಮೇಲ್ದಂಡೆಗೆ ₹ 3 ಸಾವಿರ ಕೋಟಿ

ರಾಜ್ಯ ಬಜೆಟ್‌ನಲ್ಲಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಭರಪೂರ ಕೊಡುಗೆ
Last Updated 5 ಮಾರ್ಚ್ 2022, 4:13 IST
ಅಕ್ಷರ ಗಾತ್ರ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳಿಸಲು 2022–23ನೇ ಸಾಲಿನ ಬಜೆಟ್‌ನಲ್ಲಿ ₹ 3 ಸಾವಿರ ಕೋಟಿ ಮೀಸಲಿಟ್ಟಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ರಾಷ್ಟ್ರೀಯ ಮಾನ್ಯತೆ ಪಡೆಯುವ ಹೊಸ್ತಿಲಲ್ಲಿರುವ ಯೋಜನೆಯನ್ನು ಇನ್ನಷ್ಟು ತ್ವರಿತಗೊಳಿಸಲು ಇದರಿಂದ ಅನುಕೂಲವಾಗಲಿದೆ.

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೋಟೆನಾಡಿ ಅನೇಕ ಯೋಜನೆಗಳಿಗೆ ಮುಕ್ತಿ ಸಿಗುವ ಆಶಾಭಾವನೆಯನ್ನು ಬಜೆಟ್‌ ಮೂಡಿಸಿದೆ. ಪ್ರತಿ ವರ್ಷವೂ ನಿರಾಸೆಯಿಂದಲೇ ಪ್ರತಿಕ್ರಿಯಿಸುತ್ತಿದ್ದ ಜಿಲ್ಲೆಯ ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿದ ಎಲ್ಲವೂ ಆರ್ಥಿಕ ವರ್ಷದೊಳಗೆ ಹೇಗೆ ಅನುಷ್ಠಾನಗೊಳ್ಳಲಿವೆ ಎಂಬ ಅನುಮಾನವೂ ಮೂಡಿದೆ.

‘ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿಗಣಿಸುವಂತೆ ಜಲಶಕ್ತಿ ಸಚಿವಾಲಯದ ಉನ್ನತ ಸಮಿತಿ ಕೇಂದ್ರ ಸಚಿವ ಸಂಪುಟಕ್ಕೆ ಶಿಫಾರಸು ಮಾಡಿದೆ. ಈ ಯೋಜನೆ ರಾಷ್ಟ್ರೀಯ ಮಾನ್ಯತೆ ಪಡೆದು, ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಅನುಷ್ಠಾನಕ್ಕೆ ಬರಲಿದೆ. ಪ್ರಸಕ್ತ ವರ್ಷ ಚಿತ್ರದುರ್ಗ ಶಾಖಾ ಕಾಲುವೆಯ 60 ಕಿ.ಮೀ .ಕಾಮಗಾರಿ ಪೂರ್ಣಗೊಳಿಸಿ ಹೊಳಲ್ಕೆರೆ ಫೀಡರ್‌ ವ್ಯಾಪ್ತಿಗೆ ಬರುವ 28 ಕೆರೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುವುದು. ತರೀಕೆರೆ ಏತ ನೀರಾವರಿ ವ್ಯಾಪ್ತಿಯ 20,150 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಮುಖ್ಯಮಂತ್ರಿ ಬಜೆಟ್‌ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

ಈ ಬೃಹತ್‌ ನೀರಾವರಿ ಯೋಜನೆ ದಶಕದ ಹಿಂದಿನಿಂದ ಜಾರಿಯಾದರೂ ಶೇ 40ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ. ವರ್ಷಗಳು ಉರುಳಿದ ಪರಿಣಾಮ ಯೋಜನಾ ವೆಚ್ಚ ಮೂರು ಬಾರಿ ಪರಿಷ್ಕರಣೆಯಾಗಿದೆ. ರಾಷ್ಟ್ರೀಯ ಯೋಜನೆಗೆ ಪ್ರಸ್ತಾವ ಸಲ್ಲಿಸುವ ಉದ್ದೇಶದಿಂದ ಕಳೆದ ವರ್ಷ ಇದರ ಯೋಜನಾ ಗಾತ್ರ ₹ 21 ಸಾವಿರಗೆ ಕೋಟಿಗೆ ಹಿಗ್ಗಿತ್ತು. ಕೇಂದ್ರ ಸಚಿವ ಸಂಪುಟದ ಅನುಮೋದನೆಯ ಹೊರತಾಗಿ ಎಲ್ಲ ಕಾರ್ಯವೂ ಪೂರ್ಣಗೊಂಡಿದೆ.

ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ಸಿಕ್ಕರೆ ಕೇಂದ್ರ ಸರ್ಕಾರ ಶೇ 60ರಷ್ಟು ಅನುದಾನವನ್ನು ಭರಿಸಲಿದೆ. ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ₹ 12,500 ಕೋಟಿ ನೀಡಲಿದೆ. ಯೋಜನೆಯ ಒಟ್ಟು ವೆಚ್ಚದ ಶೇ 40ರಷ್ಟು ಅನುದಾನವನ್ನು ರಾಜ್ಯ ಸರ್ಕಾರದ ಹೆಗಲಿಗೆ ಬೀಳಲಿದೆ. ಅಂದರೆ ₹ 8,500 ಕೋಟಿಯನ್ನು ಭರಿಸಬೇಕಾಗಿದೆ. ಹತ್ತು ವರ್ಷದಲ್ಲಿ ರಾಜ್ಯ ಸರ್ಕಾರ ₹ 4,500 ಕೋಟಿ ವೆಚ್ಚ ಮಾಡಿದೆ. ಉಳಿದ ₹ 4 ಸಾವಿರ ಕೋಟಿಯಲ್ಲಿ ₹ 3 ಸಾವಿರ ಕೋಟಿಯನ್ನು ಒಂದೇ ಆರ್ಥಿಕ ವರ್ಷದಲ್ಲಿ ಮೀಸಲಿಡುವ ದೊಡ್ಡ ಮನಸನ್ನು ರಾಜ್ಯ ಸರ್ಕಾರ ಮಾಡಿದೆ.

ಯೋಜನೆ ಆರಂಭವಾದಾಗಿನಿಂದಲೂ ಭದ್ರಾ ಮೇಲ್ದಂಡೆಗೆ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಟ್ಟಿದ್ದು ಅಪರೂಪ. ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ದೊರಕುತ್ತಿದ್ದ ಅನುದಾನದಲ್ಲಿ ಭದ್ರಾ ಮೇಲ್ದಂಡೆಗೆ ಹಂಚಿಕೆ ಮಾಡಲಾಗುತ್ತಿತ್ತು. ಇದರಿಂದ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರಿಗೆ ಸುಮಾರು ₹ 900 ಕೋಟಿಯಷ್ಟು ನಿಗಮ ಬಾಕಿ ಉಳಿಸಿಕೊಂಡಿದೆ. ಕಾಮಗಾರಿ ಪೂರ್ಣಗೊಂಡರೂ ಅನುದಾನದ ಕೊರತೆಯ ಕಾರಣಕ್ಕೆ ಬಿಲ್‌ ಮಾಡುವುದನ್ನೇ ನಿಗಮ ಸ್ಥಗಿತಗೊಳಿಸಿತ್ತು. ಇದು ಯೋಜನೆಯ ಹಿನ್ನೆಡೆಗೂ ಕಾರಣವಾಗಿತ್ತು. ಇಂತಹ ಸಮಸ್ಯೆಗಳಿಗೆ ಬಜೆಟ್‌ನಲ್ಲಿ ಪರಿಹಾರ ಸಿಕ್ಕಂತಾಗಿದೆ.

ನೇರ ರೈಲು ಮಾರ್ಗಕ್ಕೆ ಚಾಲನೆ

ಬಹು ನಿರೀಕ್ಷಿತ ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ದಶಕದಿಂದ ನನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆಗೆ ಕೊನೆಗೂ ಮುಕ್ತಿ ಸಿಗುತ್ತಿದೆ.

‘ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗ ಸೇರಿ ರಾಜ್ಯದ 9 ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ. ರೈಲ್ವೆ ಇಲಾಖೆಯೊಂದಿಗಿನ ಶೇ 50:50 ವೆಚ್ಚ ಹಂಚಿಕೆ ಆಧಾರದ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಜೆಟ್‌ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

ಬಿ.ಎಸ್‌.ಯಡಿಯೂರಪ್ಪ ಅವರು ದಶಕದ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಯೋಜನೆ ಘೋಷಣೆಯಾಗಿತ್ತು. ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಇನ್ನು ಮುಂದೆ ಭೂಸ್ವಾಧೀನ ಪ್ರಕ್ರಿಯೆ ಚುರುಕು ಪಡೆಯುವ ಸಾಧ್ಯತೆ ಇದೆ.

ಕೈಗಾರಿಕಾ ಕ್ಲಸ್ಟರ್‌ ಘೋಷಣೆ

ಚೆನ್ನೈ–ಬೆಂಗಳೂರು–ಮುಂಬೈ ಕಾರಿಡಾರ್‌ ವ್ಯಾಪ್ತಿಗೆ ಬರುವ ಚಿತ್ರದುರ್ಗ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ.

ಮುರುಘಾ ಮಠದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗೆ ಶಿವಮೂರ್ತಿ ಮುರುಘಾ ಶರಣರು ಈ ಬೇಡಿಕೆ ಮುಂದಿಟ್ಟಿದ್ದರು. ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಜನರ ಕೈಗಳಿಗೆ ಉದ್ಯೋಗ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸುವುದಾಗಿ ಅದೇ ವೇದಿಕೆಯಲ್ಲಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದ್ದರು.

ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಪ್ರದೇಶದಲ್ಲಿ ಒಂದೂವರೆ ಸಾವಿರ ಎಕರೆ ಭೂಮಿಯಲ್ಲಿ ಟೌನ್‌ಶಿಪ್‌ ನಿರ್ಮಿಸಲಾಗುತ್ತದೆ. ಜಿಲ್ಲಾಧಿಕಾರಿ ಭೂಮಿ ಗುರುತಿಸುವ ಕಾರ್ಯವನ್ನು ಪೂರ್ಣಗೊಳಿಸಿ ಸರ್ಕಾರದ ಆದೇಶಕ್ಕೆ ಕಾಯುತ್ತಿದ್ದಾರೆ.

ಪ್ರವಾಸೋದ್ಯಮಕ್ಕೆ ಸಿಗದ ಉತ್ತೇಜನ

ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿವೆ. ಆದರೆ, ಬಜೆಟ್‌ನಲ್ಲಿ ಪ್ರವಾಸಿತಾಣಗಳಿಗೆ ಸರಿಯಾದ ಉತ್ತೇಜನ ಸಿಕ್ಕಿಲ್ಲ ಎಂಬ ಕೊರಗು ಅನೇಕರಲ್ಲಿದೆ.

ಐತಿಹಾಸಿಕ ಕಲ್ಲಿನ ಕೋಟೆ, ಜೋಗಿಮಟ್ಟಿ ವನ್ಯಧಾಮ, ಚಂದ್ರವಳ್ಳಿ ಕೆರೆ, ವಿ.ವಿ.ಸಾಗರ ಜಲಾಶಯ ಸೇರಿದಂತೆ ಹಲವು ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ. ಮೂಲಸೌಲಭ್ಯದ ಕೊರತೆಯಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿಲ್ಲ. ಮೂಲಸೌಲಭ್ಯ ಅಭಿವೃದ್ಧಿಪಡಿಸುವಂತೆ ಹಲವು ಬಾರಿ ಬೇಡಿಕೆ ಸಲ್ಲಿಸಿದರೂ ಸರ್ಕಾರ ಪರಿಗಣಿಸುತ್ತಿಲ್ಲ ಎಂಬ ಆರೋಪವಿದೆ.

ಜಿಲ್ಲೆಗೆ ಇನ್ನೂ ಏನೇನು ಕೊಡುಗೆ?

* ದಾವಣಗೆರೆ–ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ. ಈವರೆಗೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿ ಒಕ್ಕೂಟವಿತ್ತು.
ಇದನ್ನು ಪ್ರತ್ಯೇಕ ಮಾಡಬೇಕು ಎಂಬ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ.

* ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಿಸುವುದಾಗಿ ಘೋಷಣೆ ಮಾಡಲಾಗಿದೆ. ಖಾಸಗಿ ಸಹಭಾಗಿತ್ವದ ತೀರ್ಮಾನವನ್ನು ಕೈಬಿಟ್ಟಿರುವುದು ಇದರಿಂದ ಸ್ಪಷ್ಟವಾಗಿದೆ. ಹಲವು ದಿನಗಳಿಂದ ಮೂಡಿದ್ದ ಗೊಂದಲಗಳಿಗೆ ಕೊನೆಗೂ ತೆರೆಬಿದ್ದಿದೆ.

* ವಿ.ವಿ.ಸಾಗರ ಹಿನ್ನೀರು ಪ್ರದೇಶದಲ್ಲಿ ಜಲಸಾಹಸ ಕ್ರೀಡೆಗೆ ಉತ್ತೇಜನ ನೀಡಲು ಸರ್ಕಾರ ಮುಂದಾಗಿದೆ. ಇದರ ರೂಪುರೇಷೆ, ಅನುದಾನದ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

* ಮೊಳಕಾಲ್ಮುರಿನಲ್ಲಿ ಸೀರೆಗೆ ಮೈಕ್ರೋಕ್ಲಸ್ಟರ್‌ ಸ್ಥಾಪನೆ. ಇದರಿಂದ ಮೊಳಕಾಲ್ಮುರು ಸೀರಿಗೆ ಇನ್ನಷ್ಟು ಉತ್ತೇಜನ ಸಿಗುವ ಸಾಧ್ಯತೆ ಇದೆ.

* ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಠ ಹಾಗೂ ಸಂಸ್ಥೆಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಗೆ ವಿಶೇಷ ನೆರವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT