ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ವಲಯವಾರು ಬಜೆಟ್‌? ಯಾವುದಕ್ಕೆ ಎಷ್ಟು ಅನುದಾನ?

Last Updated 5 ಮಾರ್ಚ್ 2020, 11:53 IST
ಅಕ್ಷರ ಗಾತ್ರ

ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್‌ ಹೊಸತನದಿಂದ ಕೂಡಿತ್ತು. ಬಜೆಟ್‌ ಅನ್ನು ಇಲಾಖಾವಾರು ವಿಂಗಡಿಸದೇ ಆರು ವಲಯಗಳನ್ನಾಗಿ ವಿಂಗಡಿಸಿ ಆಯವ್ಯಯ ಮಂಡನೆ ಮಾಡಿದ್ದು ವಿಶೇಷವಾಗಿತ್ತು.

ಆರ್ಥಿಕ ಹಿಂಜರಿತ, ಕೇಂದ್ರದಿಂದ ಬಾರದ ನಿರೀಕ್ಷಿತ ಅನುದಾನ ಮತ್ತು ವಿತ್ತೀಯ ಕೊರತೆಗಳ ಸವಾಲುಗಳ ನಡುವೆಯೂ ಯಡಿಯೂರಪ್ಪ ಹೊಸ ಯೋಜನೆಗಳನ್ನು ಘೋಷಣೆ ಮಾಡದೇ ಸಮತೋಲಿತ ಬಜೆಟ್‌ ಮಂಡಿಸಿದರು.

ಸುಭಿಕ್ಷ ಮತ್ತು ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ ಯಡಿಯೂರಪ್ಪ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ಸಮನ್ವಯ ಸಾಧಿಸಲು ಇಲಾಖಾವಾರು ವಿಂಗಡಿಸದೇ ಆರು ವಲಯಗಳನ್ನಾಗಿ ವಿಂಗಡಿಸಿ ಆಯವ್ಯಯ ಮಂಡನೆ ಮಾಡಿದರು.

ಆರು ವಲಯಗಳು...

1) ಕೃಷಿ ಮತ್ತು ಪೂರಕ ಚಟುವಟಿಕೆಗಳು

2) ಸರ್ವೋದಯ ಮತ್ತು ಕ್ಷೇಮಾಭಿವೃದ್ದಿ

3) ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ

4) ಬೆಂಗಳೂರು ಸಮಗ್ರ ಅಭಿವೃದ್ಧಿ

5) ಸಂಸ್ಕೃತಿ ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ

6) ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು

ಕೃಷಿ ಮತ್ತು ಪೂರಕ ಚಟುವಟಿಕೆಗಳು...

ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಅನುಗುಣವಾಗಿ ನೀರಾವರಿ, ಮಹಿಳೆ, ಕಾರ್ಮಿಕ, ರೈತರನ್ನು ಒಳಗೊಂಡ ಸಮಗ್ರ ಯೋಜನೆಗಳ ಬಜೆಟ್‌ಗೆ ಆದ್ಯತೆ ನೀಡಿದ್ದು ವಿಶೇಷವಾಗಿತ್ತು. ಈ ವಲಯದ ಮುಖ್ಯ ಅಂಶಗಳು ಈ ಕೆಳಗಿವೆ.

*ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಒಟ್ಟಾರೆ ₹ 32,259 ಕೋಟಿ ಅನುದಾನ.

*ಎಲ್ಲಾ ರೈತರಿಗೆ ಹಾಗೂ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ.

* 76 ತಾಲ್ಲೂಕುಗಳಲ್ಲಿಅಂತರ್ಜಲ ಬಲವರ್ದನೆಗೆ ಜಲಾಮೃತ ಯೋಜನೆ ಅನುಷ್ಠಾನ.

* ಮಹಿಳೆಯರು, ಪರಿಶಿಷ್ಠರು ಒಳಗೊಂಡ ಸಮಗ್ರ ಕೃಷಿ

* ಕೃಷಿ ಮತ್ತು ಗ್ರಾಮೀಣ ಬ್ಯಾಂಕ್‌ಗಳಲ್ಲಿನ ರೈತರ ದೀರ್ಘಾವಧಿ ಸಾಲದ ಬಡ್ಡಿ ಮನ್ನಾ

ಸರ್ವೋದಯ ಮತ್ತು ಕ್ಷೇಮಾಭಿವೃದ್ದಿ...

ಪರಿಶಿಷ್ಠ ಜಾತಿ, ಪಂಗಡ, ಅಲ್ಪಸಂಖ್ಯಾತರು, ಮಹಿಳೆಯರು, ಅಂಗವಿಕಲರು, ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕೆ ಈ ವಲಯದಲ್ಲಿ ಆದ್ಯತೆ ನೀಡಲಾಗಿದೆ.

* 2020-21ನೇ ಸಾಲಿನಲ್ಲಿ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ನಿಗದಿ ಪಡಿಸಿದ ಒಟ್ಟು ಅನುದಾನ ₹ 72,093 ಕೋಟಿ

*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮೂಲಕ ವಾಹನ ಚಾಲನಾ ತರಬೇತಿ, ವಿವಿಧ ಪ್ಯಾರಾಮೆಡಿಕಲ್ ಸರ್ಟಿಫಿಕೇಟ್ ಕೋರ್ಸುಗಳೊಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಸಣ್ಣ ಸರಕು ಸಾಗಾಣಿಕೆ ವಾಹನ ಖರೀದಿಗೆ ಸಾಲದ ಸೌಲಭ್ಯ ನೀಡಲು ಕ್ರಮ.

*ಆಯವ್ಯಯದಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ₹ 37,783 ಕೋಟಿಯಲ್ಲಿ 953 ಕಾರ್ಯಕ್ರಮಗಳ ನಿಗದಿ. ಇದು ಒಟ್ಟಾರೆ ಆಯವ್ಯಯ ಗಾತ್ರದ ಶೇ.15.88 ರಷ್ಟು.

*ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಮಹಿಳಾ ಪೂರಕ ಪೌಷ್ಟಿಕ ಉತ್ಪಾದನಾ ಕೇಂದ್ರಗಳ ಆಧುನೀಕರಣಕ್ಕೆ ಮಹಿಳಾ ಅಭಿವೃದ್ಧಿ ನಿಗಮದಿಂದ ₹ 20 ಲಕ್ಷ ವರೆಗೆ ಬಡ್ಡಿ ರಹಿತ ಕಿರು ಸಾಲ ಸೌಲಭ್ಯ. ₹ 20 ಕೋಟಿ ಅನುದಾನ.

*ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಪಾರದರ್ಶಕವಾಗಿ ಮಹಿಳೆಯರಿಗೆ ತಲುಪಿಸಲು ಮಹಿಳಾ ಸುರಕ್ಷತಾ ಪೋರ್ಟಲ್ ಪ್ರಾರಂಭ.

ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ...

ಸುಭಿಕ್ಷ ಮತ್ತು ಸಮೃದ್ಧ ಕರ್ನಾಟಕ ನಿರ್ಮಾಣಕ್ಕಾಗಿ ಹಾಗೂ ಆರ್ಥಿಕ ಅಭಿವೃದ್ದಿಗೆ ಪ್ರಚೋದನೆ ನೀಡುವುದು ಈ ವಲಯದ ವಿಶೇಷತೆ.

*ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ವಲಯಕ್ಕೆ ಒದಗಿಸಲಾದ ಅನುದಾನ ₹ 55,732 ಕೋಟಿ

*2020ರ ನವೆಂಬರ್‍ನಲ್ಲಿ “ಇನ್‍ವೆಸ್ಟ್ ಕರ್ನಾಟಕ-2020” ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆ.

*ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆ ಮುಂದುವರಿಕೆ, ₹ 3060 ಕೋಟಿ ಅನುದಾನ.

*ರಾಜ್ಯದಲ್ಲಿ ಹೂಡಿಕೆದಾರರಿಗೆ ಉತ್ತೇಜನ ನೀಡಲು, ಕೈಗಾರಿಕೆ ಸ್ಥಾಪನೆಗೆ ಗುರುತಿಸುವ ಜಾಗದಲ್ಲಿ ನೇರವಾಗಿ ಭೂಮಾಲೀಕರಿಂದ ಭೂಮಿ ಖರೀದಿಸಲು ಅನುಕೂಲವಾಗುವಂತೆ ಸಂಬಂಧಿಸಿದ ಕಾಯ್ದೆಗಳಿಗೆ ತಿದ್ದುಪಡಿಗೆ ಕ್ರಮ.

*ಎಲ್ಲಾ ಇಲಾಖೆಗಳಿಗೆ ಹಾಗೂ ನಿಗಮ-ಮಂಡಳಿಗಳಿಗೆ ವಿವಿಧ ಕಾಮಗಾರಿಗಳಿಗೆ ಏಕರೂಪ ಅನುಸೂಚಿ ದರಗಳನ್ನು ರೂಪಿಸಲು ಕ್ರಮ.

* ನವೋದ್ಯಮಗಳ ವೇಗ ವರ್ಧಿಸಲು ಹಾಗೂ ಮಾರುಕಟ್ಟೆ ಪ್ರವೇಶಕ್ಕೆ ನೆರವಾಗಲು ಉದ್ಯಮದವರ ಸಹಯೋಗದೊಂದಿಗೆ ‘Acceleration Programme’ ಪ್ರಾರಂಭಿಸಲು ಮೂರು ಕೋಟಿ ರೂ. ಅನುದಾನ.

ಬೆಂಗಳೂರು ಸಮಗ್ರ ಅಭಿವೃದ್ಧಿ...

ಅಂತರರಾಷ್ಟ್ರೀಯ ಖ್ಯಾತಿಯ ಬೆಂಗಳೂರು ಮಹಾನಗರವನ್ನು ಸಮಗ್ರವಾಗಿ ಅಭಿವೃದ್ದಿಪಡಿಸುವುದು ಮತ್ತು ಬಂಡವಾಳ ಆಕರ್ಷಿಸುವುದು ಈ ವಲಯದ ಮುಖ್ಯ ಉದ್ದೇಶ.

*ಬೆಂಗಳೂರು ಅಭಿವೃದ್ಧಿ ವಲಯಕ್ಕೆ ಒಟ್ಟಾರೆಯಾಗಿ ಒದಗಿಸಿರುವ ಮೊತ್ತ ₹ 8,772 ಕೋಟಿ

* ಪರಿಣಾಮಕಾರಿ ಆಡಳಿತ ಹಾಗೂ ನಾಗರಿಕ ಸೇವೆಗಳನ್ನು ನೀಡಲು, ಬೆಂಗಳೂರು ನಗರಕ್ಕೆ ಸೀಮಿತವಾಗಿ, ಪ್ರತ್ಯೇಕ ಪೌರನಿಗಮ ಕಾಯ್ದೆ ರಚನೆ.

* ಬೆಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿಗೆ ₹ 8344 ಕೋಟಿ. ಮೊತ್ತದ “ಮುಖ್ಯಮಂತ್ರಿಗಳ ನವ ನಗರೋತ್ಥಾನ” ಯೋಜನೆ ಅನುಷ್ಠಾನ.

*ಸಬ್-ಅರ್ಬನ್ ರೈಲು ಯೋಜನೆಗೆ ರಾಜ್ಯ ಸರ್ಕಾರದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ₹ 500 ಕೋಟಿ ಅನುದಾನ.

*ಕಾವೇರಿ ನೀರು ಸರಬರಾಜು ಐದನೇ ಹಂತದ ಯೋಜನೆ ₹ 5550 ಕೋಟಿ ರೂ. ವೆಚ್ಚದಲ್ಲಿ 2023ರ ಅಂತ್ಯಕ್ಕೆ ಪೂರ್ಣ

ಸಂಸ್ಕೃತಿ, ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ...

ರಾಜ್ಯದಸಂಸ್ಕೃತಿ, ಪರಂಪರೆಸಂರಕ್ಷಣೆಗೆ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳುವುದಕ್ಕೆ ಆದ್ಯತೆ ನೀಡಲಾಗಿದೆ.

*ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ವಲಯಕ್ಕೆ ನಿಗದಿಪಡಿಸಿದ ಒಟ್ಟಾರೆ ಅನುದಾನ ₹ 4552 ಕೋಟಿ

* ಪ್ರವಾಸಿ ಸ್ನೇಹಿ ಯೋಜನೆಗಳನ್ನು ಒಳಗೊಂಡ ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ಕ್ರಮ.

*ಚಿತ್ರದುರ್ಗದ ಶ್ರೀ ಮುರುಘಾ ಮಠದ ಆವರಣದಲ್ಲಿ 325 ಅಡಿ ಎತ್ತರದ ಶ್ರೀ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ₹ 20 ಕೋಟಿ ರೂ. ನೆರವು. ಹಾಗೂ ₹66 ಕೋಟಿ ರೂ. ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡರ 100 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ.

*ಭಾರತದ ವಿವಿಧ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಕರ್ನಾಟಕ ಸರ್ಕಾರವು ನಡೆಸುತ್ತಿರುವ ಅತಿಥಿಗೃಹಗಳ ಮೂಲಸೌಕರ್ಯ ಅಭಿವೃದ್ಧಿಗೆ ₹ 25 ಕೋಟಿ ರೂ. ಅನುದಾನ.

*ಕರ್ನಾಟಕ ಪ್ರವಾಸೋದ್ಯಮ ಕಾರ್ಯಪಡೆಯ ಶಿಫಾರಸುಗಳಂತೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕ್ರಮ. ಪ್ರವಾಸಿಗರನ್ನು ಸೆಳೆಯುವ ಜಾಹೀರಾತು ಮತ್ತು ಇತರ ಚಟುವಟಿಕೆಗಳಿಗೆ ₹ 100 ಕೋಟಿ ಹಾಗೂ ರಾಜ್ಯದ ಪ್ರವಾಸೋದ್ಯಮದ ಸರ್ವತೋಮುಖ ಅಭಿವೃದ್ಧಿಗೆ ₹ 500 ಕೋಟಿ ಅನುದಾನ.

*ಪ್ರವಾಸಿ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆದಾರರನ್ನು ಆಕರ್ಷಿಸಲು “ಜಾಗತಿಕ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ” (Global Tourism Investors Meet).

ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು...

ರಾಜ್ಯದಲ್ಲಿನ ಆಡಳಿತ ಸುಧಾರಣೆಮಾಡುವ ನಿಟ್ಟಿನಲ್ಲಿ ಈ ವಲಯಕ್ಕೆ ಆದ್ಯತೆ ನೀಡಲಾಗಿದ್ದ ಸಾರ್ವಜನಿಕ ಸೇವೆಗಳಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ.

*ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ಸೇವೆಗಳ ವಲಯಕ್ಕೆ ಒಟ್ಟಾರೆ ನಿಗದಿ ಪಡಿಸಿದ ಅನುದಾನ₹ 10,194 ಕೋಟಿ

*ರಾಜ್ಯ ಸರ್ಕಾರದ ಕೆಲವು ಕಚೇರಿಗಳನ್ನು ಹಂತ ಹಂತವಾಗಿ ಬೆಳಗಾವಿಯ ಸುವರ್ಣ ವಿಧಾನ ಸೌಧಕ್ಕೆ ಸ್ಥಳಾಂತರಿಸಲು ಕ್ರಮ.

*ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ಸೇವೆಗಳ ವಲಯಕ್ಕೆ ಒಟ್ಟಾರೆ ನಿಗದಿ ಪಡಿಸಿದ ಅನುದಾನ- ₹ 10,194 ಕೋಟಿ .

*ರಾಜ್ಯದ 22.5 ಲಕ್ಷ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರಿಗೆ ಜ್ಯೋತಿ ಸಂಜೀವಿನಿ ಯೋಜನೆ ಮಾರ್ಪಡಿಸಿ, ಶಸ್ತ್ರ ಚಿಕಿತ್ಸಾ ವಿಧಾನಗಳಿಗೆ ನಗದುರಹಿತ ಚಿಕಿತ್ಸಾ ಸೌಲಭ್ಯ. ಇದರ ಅಂದಾಜು ವಾರ್ಷಿಕ ವೆಚ್ಚ ₹ 50 ಕೋಟಿ ರೂ.

*ರಾಜ್ಯದ ರಸ್ತೆ ಸಾರಿಗೆ ನಿಗಮಗಳ ವತಿಯಿಂದ 2450 ಹೊಸ ಬಸ್‍ಗಳನ್ನು ಖರೀದಿಸಲು ಕ್ರಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT