ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಭಾಷಣದಂತಿರುವ ಬಜೆಟ್: ಪ್ರಲ್ಹಾದ ಜೋಶಿ

Published 16 ಫೆಬ್ರುವರಿ 2024, 13:55 IST
Last Updated 16 ಫೆಬ್ರುವರಿ 2024, 13:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಜ್ಯ ಸರ್ಕಾರದ 2024–25ನೇ ಸಾಲಿನ ಆಯವ್ಯಯವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಭಾಷಣದಂತಿದ್ದು, ಯಾವುದೇ ಅರ್ಥಶಾಸ್ತ್ರದ ಮಾರ್ಗದರ್ಶಿಗೆ ಒಳಪಡದ ಬಜೆಟ್‌ ಆಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ. 

‘ರಾಜ್ಯ ಸರ್ಕಾರ ಘೋಷಿಸಿದ 5 ಗ್ಯಾರಂಟಿಗಳಿಗೆ ವರ್ಷವಿಡೀ ಹೇಗೆ ಹಣ ಕ್ರೋಡೀಕರಿಸಬೇಕು ಎಂಬ ಅಂಶಬಿಟ್ಟರೆ ಈ ಬಜೆಟ್‌ ಪತ್ರದಲ್ಲಿ ರಾಜ್ಯವನ್ನು ಮುಂಬರುವ ವರ್ಷದಲ್ಲಿ ಹೇಗೆ ಆರ್ಥಿಕ ಶಕ್ತಿ ಕೇಂದ್ರವನ್ನಾಗಿಸಬೇಕು ಎಂಬುದರ ಬಗ್ಗೆ ಯಾವುದೇ ರಚನಾತ್ಮಕ ಪ್ರಸ್ತಾವಗಳಿಲ್ಲ. ಅನೇಕ ಯೋಜನೆಗಳಿಗೆ ಹಣ ಒದಗಿಸಿರುವುದು ಹಿಂದಿನ ಸರ್ಕಾರದ ಪ್ರಸ್ತಾವನೆಗಳ ಪುನರಾವರ್ತನೆ ಆಗಿದೆ’ ಎಂದು ತಿಳಿಸಿದ್ದಾರೆ.

‘ಮುಂಗಡ ಪತ್ರವೆಂದರೆ ತಮ್ಮ ಸರ್ಕಾರ ಯಾವ ಯಾವ ಯೋಜನೆಗೆ ಎಷ್ಟೆಷ್ಟು ಹಣ ನಿಗದಿಪಡಿಸಿದೆಯೆಂಬ ಲೆಕ್ಕದ ಪಟ್ಟಿಯಷ್ಟೇ ಆಗಿರದೆ ರಾಜ್ಯದ ಆರ್ಥಿಕ ಸ್ಥಿತಿಯನ್ನು ಪ್ರಗತಿಯ ಹೆಬ್ಬಾಗಿಲಿಗೆ ಹೇಗೆ ಕೊಂಡೊಯ್ಯಬೇಕು ಎಂಬ ಕುರಿತು ಆಲೋಚನೆಗಳ ಅನುಷ್ಠಾನದ ವಿವರ ಇರಬೇಕು. ಆದರೆ, ರಾಜ್ಯದ ನೀರಾವರಿ ಯೋಜನೆಗಳಿಗೆ ಯಾವುದೇ ಹಣಕಾಸಿನ ಪ್ರಸ್ತಾಪವಿಲ್ಲ. ಕೇಂದ್ರದ ಅನುಮತಿ ನೆಪಹೇಳಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನವಷ್ಟೆ ಸಿದ್ದರಾಮಯ್ಯ ಅವರ ಕಸರತ್ತಾಗಿದೆ’ ಎಂದು ಟೀಕಿಸಿದ್ದಾರೆ. 

‘ರಾಜ್ಯದ ವಿವಿಧ ಇಲಾಖೆಗಳಿಂದ ಎಷ್ಟು ಆದಾಯಗಳಿಸಬೇಕು ಎಂಬ ವಿವರದೊಂದಿಗೆ ₹3.71 ಲಕ್ಷ ಕೋಟಿ ಬೃಹತ್ ಗಾತ್ರದ ಬಜೆಟ್‌ ಎಂಬ ಹೆಗ್ಗಳಿಕೆ ಬಿಟ್ಟರೇ ಈ ಬಜೆಟ್ ಯಾವುದೇ ದಿಕ್ಕು ದೆಶೆ ಇಲ್ಲದ ಒಂದು ದಾಖಲೆ ಪಟ್ಟಿಯಾಗಿದೆ. ಇದರಿಂದ ಯಾವುದೇ ಜನಕಲ್ಯಾಣವೂ ಇಲ್ಲ. ಆರ್ಥಿಕ ಪ್ರಗತಿಯೂ ಇಲ್ಲ’ ಎಂದು ತಿಳಿಸಿದ್ದಾರೆ.  

‘ಕ್ಯಾಪಿಟಲ್‌ ಎಕ್ಸ್‌ಪೆಂಡೀಚರ್‌ನಲ್ಲಿ ಯಾವುದೇ ಏರಿಕೆ ಇಲ್ಲದೇ ಅದನ್ನು ₹5 ಸಾವಿರ ಕೋಟಿಗಳಿಗೆ ಮಿತಿಗೊಳಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ರೆವಿನ್ಯೂ ವೆಚ್ಚವನ್ನು ಒಂದು ಲಕ್ಷ ಕೋಟಿಗೂ ಮೀರಲಾಗಿದೆ. ವಿವಿಧ ಇಲಾಖೆಗಳಿಂದ ಬರುವ ಆದಾಯದ ಮೂಲಗಳನ್ನು ಹೆಚ್ಚಿಸಲು ವಾಣಿಜ್ಯ ತೆರಿಗೆ ₹1,10,000 ಕೋಟಿ, ಮೋಟಾರು ವಾಹನಗಳ ಮೇಲಿನ ತೆರಿಗೆ ₹13,000 ಅಬಕಾರಿ ತೆರಿಗೆ ₹38,000 ಕೋಟಿ ಹಾಗೂ ನೊಂದಣಿ ಮುದ್ರಾಂಕಗಳ ಮೇಲಿನ ತೆರಿಗೆ ₹26,000 ಕೋಟಿ. ಇತರೆ ₹2,300 ಕೋಟಿ. ಈ ರೀತಿ ತೆರಿಗೆ ಹೆಚ್ಚಿಸಿ ತೆರಿಗೆದಾರರ ಮೇಲೆ ಅನಗತ್ಯ ಹೊರೆ ಹಾಕಲಾಗಿದೆ. ಕಳೆದ ಸರ್ಕಾರದಲ್ಲಿ ಸಾಲದ ಮೊತ್ತಕ್ಕೆ ಹೋಲಿಸಿದಲ್ಲಿ ಈಗ ಸಾಲದ ಹೊರೆಯನ್ನು ₹1,05,246 ಕೋಟಿಗೆ ಮೀರುತ್ತಿದ್ದು, ಇದು ಶೇ 22 ಹೆಚ್ಚಿಗೆ ಆಗಿದ್ದು, ಇದೊಂದು ಸಾಲದ ಹೊರೆ ಬಜೆಟ್ ಎಂತಲೂ ಹೇಳಬಹುದು‘ ಎಂದು ಸಚಿವ ಜೋಶಿ ಪ್ರತಿಕ್ರಿಯಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT