ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಷೇರುಪೇಟೆಗೆ ಬರಲಿದೆ ₹ 31 ಲಕ್ಷ ಕೋಟಿ ಮೌಲ್ಯದ ಸಂಸ್ಥೆ ಎಲ್‌ಐಸಿ

ಬಜೆಟ್ 2020
Last Updated 1 ಫೆಬ್ರುವರಿ 2020, 10:35 IST
ಅಕ್ಷರ ಗಾತ್ರ

ನವದೆಹಲಿ: ಎಲ್‌ಐಸಿ ಎಂದೇ ದೇಶವ್ಯಾಪಿ ಜನಜನಿತವಾಗಿರುವಭಾರತೀಯ ಜೀವ ನಿಗಮದ ಷೇರು ಮಾರಾಟ ಪ್ರಸ್ತಾವ ಕೇಂದ್ರ ಬಜೆಟ್‌ನಲ್ಲಿ ಹೆಚ್ಚು ಗಮನ ಸೆಳೆದ ಅಂಶ. ಇಂದಿಗೂ ದೇಶದ ಹೂಡಿಕೆದಾರರ ನೆಚ್ಚಿನ ಸಂಸ್ಥೆ ಎನಿಸಿರುವ ಎಲ್‌ಐಸಿ ತನ್ನ ನಿರ್ವಹಣೆಯಲ್ಲಿ₹31.11 ಲಕ್ಷ ಕೋಟಿ ಸಂಪತ್ತು ಹೊಂದಿದೆ.

ಐಪಿಒ (ಆರಂಭಿಕ ಸಾರ್ವಜನಿಕ ನೀಡಿಕೆ) ಮೂಲಕ ಷೇರು ಮಾರುಕಟ್ಟೆ ಪ್ರವೇಶಿಸಿದರೆ ಇದು ಷೇರು ವಹಿವಾಟು ನಡೆಸುವದೇಶದ ಅತಿದೊಡ್ಡ ಸಂಸ್ಥೆ ಎನಿಸಿಕೊಳ್ಳುತ್ತದೆ.ಮೂರು ವರ್ಷಗಳ ಹಿಂದೆ ಜನರಲ್ ಇನ್ಷುರೆನ್ಸ್ ಕಂಪನಿ, ನ್ಯೂ ಇಂಡಿಯಾ ಅಶುರೆನ್ಸ್ ಕಂಪನಿಗಳ ಐಪಿಒ ಬಿಡುಗಡೆ ಮಾಡಿದ್ದ ಸರ್ಕಾರ ತನ್ನ ಪಾಲು ಕಡಿಮೆ ಮಾಡಿಕೊಂಡಿತ್ತು. ಅದರ ಮುಂದುವರಿದ ಭಾಗವಾಗಿ ಎಲ್‌ಐಸಿಯನ್ನು ಷೇರು ವಹಿವಾಟಿಗೆ ತರುವ ಸರ್ಕಾರದ ಕ್ರಮವನ್ನು ಪರಿಗಣಿಸಬಹುದು.

ಕಳೆದ ಜುಲೈನಲ್ಲಿಯೇ ಎಲ್‌ಐಸಿಯಿಂದ ಸರ್ಕಾರ ತನ್ನ ಪಾಲು ಹಿಂಪಡೆಯಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು. ಒಂದು ವೇಳೆ ಐಪಿಒ ಬಿಡುಗಡೆಯಾಗಿ,ಎಲ್‌ಐಸಿ ದೊಡ್ಡಮಟ್ಟದಲ್ಲಿಹೂಡಿಕೆದಾರರನ್ನು ಆಕರ್ಷಿಸಿದರೆ,ಬಂಡವಾಳ ಹಿಂಪಡೆಯುವ ಮೂಲಕ ಹಣ ಸಂಚಯಿಸುವ ನಿರ್ಧಾರದ ಭಾಗವಾಗಿ ಇನ್ನಷ್ಟು ಸರ್ಕಾರಿ ಕಂಪನಿಗಳು ಶೀಘ್ರಷೇರುಪೇಟೆ ಪ್ರವೇಶಿಸಬಹುದು.

ಪ್ರಸ್ತುತ ದೇಶದ ಷೇರುಪೇಟೆಯಲ್ಲಿ ಅತಿದೊಡ್ಡ ಕಂಪನಿಗಳು ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ (₹8.73 ಲಕ್ಷ ಕೋಟಿ) ಮತ್ತು ಟಾಟಾ ಕನ್ಸಲ್‌ಟೆನ್ಸಿ ಸರ್ವಿಸಸ್‌ಗಳಿಗಿಂತಲೂ(₹8.15 ಲಕ್ಷ ಕೋಟಿ) ಎಲ್‌ಐಸಿ ಎಷ್ಟೋಪಟ್ಟು ದೊಡ್ಡದು.

ಕೇವಲ ₹ 5 ಕೋಟಿ ಮೂಲ ಬಂಡವಾಳದೊಂದಿಗೆ ಕಾರ್ಯಾಚರಣೆ ಮಾಡುತ್ತಿರುವ ಎಲ್‌ಐಸಿಯಿಂದ ಗ್ರಾಹಕರು ಖರೀದಿಸಿರುವ (ಹಾಲಿ ಊರ್ಜಿತದಲ್ಲಿರುವ) ಪಾಲಿಸಿಗಳ ಸಂಖ್ಯೆ29 ಕೋಟಿಗೂ ಹೆಚ್ಚು. 2018–19ರಲ್ಲಿ ಎಲ್‌ಐಸಿ ಘೋಷಿಸಿಕೊಂಡಿದ್ದ ಆದಾಯ ₹ 48,436 ಕೋಟಿ. ಐಪಿಒ ಮೂಲಕ ಎಲ್‌ಐಸಿ ಷೇರುಪೇಟೆಗೆ ಬಂದರೆ ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆ ಹೆಚ್ಚಾಗಿ, ಎಲ್‌ಐಸಿಗೆ ಅನುಕೂಲವೇ ಆಗುತ್ತದೆ ಎನ್ನುವ ವಿಶ್ಲೇಷಣೆ ಚಾಲ್ತಿಯಲ್ಲಿದೆ.

ಎಲ್‌ಐಸಿ: ಭಾರತದ ಅತಿದೊಡ್ಡ ಹೂಡಿಕೆದಾರ

ಎಲ್‌ಐಸಿಯನ್ನು ಷೇರುಪೇಟೆಗೆ ತರಬೇಕು ಎನ್ನುವ ಬೇಡಿಕೆಗೆ ಹಲವು ವರ್ಷಗಳಿಂದ ಸರ್ಕಾರಗಳು ನಕಾರಾತ್ಮಕವಾಗಿ ಸ್ಪಂದಿಸುತ್ತಿದ್ದವು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಮಾರುಕಟ್ಟೆಗೆ ಬರುತ್ತಿದ್ದ ಸರ್ಕಾರಿ ಕಂಪನಿಗಳ ಷೇರುಗಳ ಬೆಲೆಯಲ್ಲಿ ಸ್ಥಿರತೆ ತರಲು, ಅಂಥ ಕಂಪನಿಗಳಲ್ಲಿ ಹೂಡಿಕೆ ಮಾಡುವಂತೆ ಎಲ್‌ಐಸಿ ಮೇಲೆ ಸರ್ಕಾರಗಳು ಒತ್ತಡ ಹೇರುತ್ತಿದ್ದವು.ಕೆಟ್ಟ ಸಾಲಗಳಿಂದ ಐಡಿಬಿಐ ಬ್ಯಾಂಕ್ ಕಂಗೆಡುವ ಸ್ಥಿತಿ ಬಂದಾಗ ಅದರ ಪಾಲು ಖರೀದಿಸಿ ಕಾಪಾಡಿದ್ದು ಎಲ್‌ಐಸಿ. ಹೂಡಿಕೆ ಅಧಿಕಾರಿಗಳ ಕಾರ್ಯನಿರ್ವಹಣೆಯಲ್ಲಿ ಸರ್ಕಾರದ ಮೂಗು ತೂರಿಸುವಿಕೆ ಹೆಚ್ಚಾದ ನಂತರಸಂಸ್ಥೆಯ ಒಟ್ಟಾರೆ ಲಾಭದ ಪ್ರಮಾಣ ಕಡಿಮೆಯಾದದ್ದು ಸುಳ್ಳಲ್ಲ.

ಪ್ರತಿ ವರ್ಷವೂ ಎಲ್‌ಐಸಿ ಸರಾಸರಿ ₹ 55ರಿಂದ ₹66 ಸಾವಿರ ಕೋಟಿಗಳಷ್ಟು ಹಣವನ್ನು ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತದೆ. ಈ ಮೂಲಕ ಭಾರತೀಯ ಷೇರುಮಾರುಕಟ್ಟೆಯ ಅತಿದೊಡ್ಡ ಹೂಡಿಕೆದಾರ ಎಂಬ ಶ್ರೇಯಕ್ಕೂ ಎಲ್‌ಐಸಿ ಪಾತ್ರವಾಗಿದೆ.2017–18ರ ವಾರ್ಷಿಕ ವರದಿಯ ಪ್ರಕಾರಸಾಲಪತ್ರಗಳಲ್ಲಿ ಎಲ್‌ಐಸಿ ಹೂಡಿಕೆ ₹ 4.35 ಲಕ್ಷ ಕೋಟಿ. ವಿವಿಧ ಮೂಲ ಸೌಕರ್ಯ ಯೋಜನೆಗಳಲ್ಲಿ ಎಲ್‌ಐಸಿ ಹೂಡಿಕೆ ಮಾಡಿರುವ ಮೊತ್ತ ₹ 3.77 ಲಕ್ಷ ಕೋಟಿ.

ವಿಮಾ ಮಾರುಕಟ್ಟೆಯಲ್ಲಿ ಸಾಕಷ್ಟು ಖಾಸಗಿ ಸಂಸ್ಥೆಗಳು ಪ್ರವೇಶಿಸಿದ್ದರೂ ಎಲ್‌ಐಸಿ ಇಂದಿಗೂ ಹೂಡಿಕೆದಾರರ ಮೆಚ್ಚಿನ ಸಂಸ್ಥೆಯಾಗಿಯೇ ಉಳಿದುಕೊಂಡಿದೆ. ವರ್ಷದಿಂದ ವರ್ಷಕ್ಕೆ ಎಲ್‌ಐಸಿಯಲ್ಲಿ ಗ್ರಾಹಕರ ಹೂಡಿಕೆ ಪ್ರಮಾಣ ಹೆಚ್ಚಾಗುತ್ತಿದೆ. 2017–18ರಲ್ಲಿ ಎಲ್‌ಐಸಿ ನಿರ್ವಹಿಸುತ್ತಿದ್ದ ಸಂಪತ್ತು ₹26.46 ಲಕ್ಷ ಕೋಟಿ. 2018–19ರಲ್ಲಿ ಈ ಪ್ರಮಾಣ ₹28.84 ಲಕ್ಷ ಕೋಟಿಗೆ ಮುಟ್ಟಿತು. ಪ್ರಸಕ್ತ ಸಾಲಿನಲ್ಲಿ ಈವರೆಗೆ ಎಲ್‌ಐಸಿ ಬಳಿ ಐತಿಹಾಸಿಕ ದಾಖಲೆಯಾದ ₹ 31.11 ಲಕ್ಷ ಕೋಟಿ ಸಂಪತ್ತು ಸಂಚಯವಾಗಿದೆ.

ಕಾಯ್ದೆ ಬದಲಾಗಬೇಕು

ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ನಿಗಾದಲ್ಲಿ ಎಲ್‌ಐಸಿ ಕೆಲಸ ಮಾಡಿದರೂ, ಎಲ್‌ಐಸಿಯ ಬಹುತೇಕ ಕಾರ್ಯವಿಧಾನವನ್ನು ನಿರೂಪಿಸುವುದು‘ಎಲ್‌ಐಸಿ ಕಾಯ್ದೆ 1956’. ನಿಗಮವನ್ನು ಷೇರುಪೇಟೆ ವಹಿವಾಟಿಗೆ ತರಬೇಕು ಎಂದರೆ ಸರ್ಕಾರ ಮೊದಲು ಈ ಕಾಯ್ದೆಯನ್ನು ಬದಲಿಸಬೇಕಾಗುತ್ತದೆ.

ಎಲ್‌ಐಸಿ ಕಾಯ್ದೆಯ 37ನೇ ಪರಿಚ್ಛೇದದ ಅನ್ವಯ ನಿಗಮದ ಎಲ್ಲ ಪಾಲಿಸಿಗಳ ಖಾತ್ರಿಮೊತ್ತ ಮತ್ತು ಬೋನಸ್‌ ನೀಡುವುದುಭಾರತ ಸರ್ಕಾರದ ಜವಾಬ್ದಾರಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT