ಬುಧವಾರ, ಮೇ 12, 2021
18 °C

ಮಹದಾಯಿ, ಎತ್ತಿನಹೊಳೆಗೆ ಮೀಸಲಿಟ್ಟ ಅನುದಾನ ಸಾಕೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಬಹುನಿರೀಕ್ಷಿತ ಮಹದಾಯಿ ಮತ್ತು ಎತ್ತಿನಹೊಳೆ ಯೋಜನೆಗಳಿಗೆ ರಾಜ್ಯ ಬಿಜೆಪಿ ಸರ್ಕಾರ ಅನುದಾನ ನಿಗದಿ ಮಾಡಿದೆ. ಮಹದಾಯಿ ಯೋಜನೆಗೆ ₹ 500 ಕೋಟಿ, ಎತ್ತಿನಹೊಳೆಗೆ ₹ 1500 ಕೋಟಿ ಅನುದಾನ ಮೀಸಲಿಡಲಾಗಿದೆ. 

ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಬಜೆಟ್‌ ಭಾಷಣದಲ್ಲಿ ಈ ಎರಡೂ ಯೋಜನೆಗಳಿಗೆ ಅನುದಾನ ಘೋಷಿಸಿದರು. 

ಮಹದಾಯಿ ನದಿ ನೀರು ಹಂಚಿಕೆ ಕುರಿತು ಅಧಿಸೂಚನೆ ಹೊರಡಿಸುವ ಮೂಲಕ ಕೇಂದ್ರ ಸರ್ಕಾರವು ಬಹುದಿ ನಗಳ ನಿರೀಕ್ಷೆಯನ್ನು ಈಡೇರಿಸಿತ್ತು. ಅದರ ಬೆನ್ನಲ್ಲೆ, ಮಹದಾಯಿ ಯೋಜನೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು  ₹ 2,000 ಕೋಟಿ ಅನುದಾನದ ಅವಶ್ಯಕತೆ ಇದ್ದು, 2020–21ನೇ ಸಾಲಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದರೆ, ನಿರೀಕ್ಷಿಸಿದಷ್ಟು ಸಿಗದೇ ಹೋದರೂ, ಸರ್ಕಾರ ₹500 ಕೋಟಿಗಳ ಅನುದಾನ ನೀಡಿದೆ. 

ಇನ್ನು ಬೆಂಗಳೂರು ಸೇರಿದಂತೆ ಬಯಲು ಸೀಮೆಯ ಹಲವು ಜಿಲ್ಲೆಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೈಗೊಂಡಿರುವ ಎತ್ತಿನಹೊಳೆ ಯೋಜನೆಗೆ ಈ ವರ್ಷ ₹1500 ಕೋಟಿಗಳನ್ನು ನೀಡಲಾಗಿದೆ. 2012ರಲ್ಲಿ ₹12,912.36 ಕೋಟಿ ಇದ್ದ ಯೋಜನಾ ವೆಚ್ಚ  2020ರ ಹೊತ್ತಿಗೆ ₹24,982 ಕೋಟಿಗೆ ಏರಿದೆ. ಈ ಬೃಹತ್‌ ಮೊತ್ತದ ಯೋಜನೆಗೆ ಈ ವರ್ಷ ನಿಗದಿಯಾಗಿರುವುದು ₹1500 ಕೋಟಿ ಮಾತ್ರ. ಹೀಗಾಗಿ ಯೋಜನೆ ನಿರೀಕ್ಷಿತ ವೇಗದಲ್ಲಿ ನಡೆಯುವುದೇ ಎಂಬ ಅನುಮಾನ ಮೂಡಿದೆ.  

ನೀರಾವರಿ ಒದಗಿಸಲು ಕ್ರಮ: 2020–21ನೇ ಸಾಲಿನಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚುವರಿಯಾಗಿ ಜಲಸಂಪನ್ಮೂಲ ಇಲಾಖೆಯ ಮೂಲಕ ನೀರಾವರಿ ಒದಗಿಸಲು ಕ್ರಮ ತೆಗೆದುಕೊಳ್ಳುತ್ತೇವೆ.

ಜಲಾನಯನ ಪ್ರದೇಶ ಅಭಿವೃದ್ಧಿಗೆ: ಸುಜಲಾ–3 ಯೋಜನೆ ಮಾದರಿಯಲ್ಲಿಯೇ ವಿಶ್ವಬ್ಯಾಂಕ್ ಸಹಕಾರದಲ್ಲಿ 10 ಲಕ್ಷ ಹೆಕ್ಟೇರ್ ಜಲಾನಯನ ಪ್ರದೇಶದಲ್ಲಿ ಭೂ ಮೌಲ್ಯ ಸಂವರ್ಧನಗೆ ಕ್ರಮ.

ಮಳೆ ನೀರು, ಜಲಸಂರಕ್ಷಣೆಗೆ ವಿಶೇಷ ಯೋಜನೆ: ಜಲಸಂರಕ್ಷಣೆ ಮತ್ತು ಮಳೆ ನೀರು ಸಂರಕ್ಷಣೆಗಾಗಿ ವಿಶೇಷ ಯೋಜನೆ ರೂಪಿಸುತ್ತೇವೆ. 810 ಅತಿ ಸಣ್ಣ ಜಲಾನಯನ ಪ್ರದೇಶಗಳಲ್ಲಿ ಯೋಜನೆ ಜಾರಿ ಮಾಡುತ್ತೇವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು