ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಸೆಯ ಕಡಲಿಗೆ ದೂಡಿದ ಬಜೆಟ್‌

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿದ ಆಯ್ಯವ್ಯಯದಲ್ಲಿ ಜಿಲ್ಲೆಗೆ ಸಿಗದ ಆದ್ಯತೆ, ಬೇಸರದಲ್ಲಿ ಬಯಲು ಸೀಮೆಯ ಜಿಲ್ಲೆಯ ಜನರು
Last Updated 5 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ ಮಂಡಿಸಿದ ಬಜೆಟ್‌, ಕಾತರದಲ್ಲಿದ್ದ ಜಿಲ್ಲೆಯ ಜನರಿಗೆ ತೀವ್ರ ನಿರಾಸೆ ಮೂಡಿಸಿದೆ.

ಈ ಬಜೆಟ್‌ನಲ್ಲಿ ಎತ್ತಿನಹೊಳೆ ಯೋಜನೆಗೆ ₹1,500 ಕೋಟಿ ಅನುದಾನ ಮಂಜೂರು ಎಂಬ ಅಂಶದಲ್ಲಿ ಒಂದೇ ಒಂದು ಕಡೆ ಚಿಕ್ಕಬಳ್ಳಾಪುರ ಹೆಸರು ಉಲ್ಲೇಖವಾಗಿದ್ದು ಬಿಟ್ಟರೆ, ಇಡೀ ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರದ ಸೊಲ್ಲೇ ಇಲ್ಲ. ಡಾ.ಕೆ.ಸುಧಾಕರ್ ಅವರು ಸೇರಿದಂತೆ ಕೆಲ ಶಾಸಕರು ಸೇರಿ ಸಮ್ಮಿಶ್ರ ಸರ್ಕಾರ ಪತನಗೊಳಿಸಿದ ಬೆನ್ನಲ್ಲೇ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರ ಸರ್ಕಾರದಿಂದ ಜಿಲ್ಲೆಯ ಜನರು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಆ ಎಲ್ಲಾ ಲೆಕ್ಕಾಚಾರ ಇದೀಗ ತಲೆ ಕೆಳಗಾಗಿದೆ.

ಪ್ರತಿ ರಾಜ್ಯ ಬಜೆಟ್‌ನಲ್ಲಿ ನಮ್ಮ ಜಿಲ್ಲೆಗೆ ಏನೆಲ್ಲ ದಕ್ಕುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯ್ದು ನೋಡುವ ಜಿಲ್ಲೆಯ ಜನರಿಗೆ ಆಯ್ಯವ್ಯಯಗಳು ನಿರಾಸೆ ಮೂಡಿಸಿದ್ದೇ ಹೆಚ್ಚು. ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ರೂಪುಗೊಂಡು 12 ವರ್ಷಗಳು ಪೂರೈಸಿದರೂ ಜಿಲ್ಲೆಯೊಂದಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ ಈವರೆಗೆ ಸಿಕ್ಕಿಲ್ಲ. ಈ ಬಜೆಟ್‌ನಲ್ಲಾದರೂ ನಮಗೆ ನ್ಯಾಯ ಸಿಕ್ಕಿತೆ ಎಂಬ ಆಸೆಯಲ್ಲಿದ್ದ ಬಯಲು ಸೀಮೆ ಜಿಲ್ಲೆಯ ಜನರಿಗೆ ಈ ಬಜೆಟ್‌ನಲ್ಲಿ ಜಿಲ್ಲೆಯ ಹೆಸರಿನಲ್ಲಿ ಯಾವುದೇ ಘೋಷಣೆ ಮೊಳಗದೆ ಕನಸು ಮತ್ತೆ ಭಗ್ನವಾಗಿದೆ.

ಕಳೆದ ವರ್ಷ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ₹100 ಕೋಟಿ, ಬಾಗೇಪಲ್ಲಿಯ ಪಾತಪಾಳ್ಯದ ಗಂಟ್ಲಮಲ್ಲಮ್ಮ ಕಣಿವೆ ಬಳಿ ಆಣೆಕಟ್ಟು ನಿರ್ಮಾಣಕ್ಕೆ ₹20 ಕೋಟಿ, ಹೊಸ ಕ್ರೀಡಾ ವಸತಿ ಶಾಲೆ ಆರಂಭ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್‌ಗಳ ಪತ್ತೆ ಮಾಡುವ ಯಂತ್ರಗಳ ಮಂಜೂರು ಮಾಡುವ ಜತೆಗೆ ಬಾಗೇಪಲ್ಲಿ ತಾಲ್ಲೂಕಿನ ಚೇಳೂರು ಹೋಬಳಿ ಕೇಂದ್ರವನ್ನು ಹೊಸ ತಾಲ್ಲೂಕು ಆಗಿ ಘೋಷಣೆ ಮಾಡಿದ್ದರು.

ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಗೆ ಸೀಮಿತವಾಗಿ ಯಾವುದೇ ಹೊಸ ಘೋಷಣೆ ಕೇಳಿಬರಲಿಲ್ಲ. ಸದ್ಯ ಆಡಳಿತಾರೂಢ ಪಕ್ಷವನ್ನು ಸಮರ್ಥಿಸುವವರೆಲ್ಲ ಎತ್ತಿನಹೊಳೆ ಯೋಜನೆಗೆ ₹1,500 ಕೋಟಿ ನೀಡಿದ್ದೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸುತ್ತಿದ್ದರೆ, ವಿರೋಧ ಪಕ್ಷದವರು ಇದೊಂದು ವ್ಯರ್ಥ ಬಜೆಟ್‌ ಎಂದು ಟೀಕಿಸುತ್ತಿದ್ದಾರೆ.

ಸದಾ ‘ಶಾಶ್ವತ ನೀರಾವರಿ’ ಎನ್ನುವ ಪದವನ್ನು ನಿದ್ದೆಯಲ್ಲೂ ಬಡಬಡಿಸುವ ಜಿಲ್ಲೆಯ ಜನರಿಗೆ ಈ ಬಜೆಟ್‌ನಲ್ಲಿ ಜಿಲ್ಲೆಯ ನೀರಾವರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಅಂಶವಿಲ್ಲದೆ ನಿರಾಶೆ ಮೂಡಿಸಿದೆ. ಎತ್ತಿನಹೊಳೆ ಯೋಜನೆಗೆ ದೊಡ್ಡ ಪ್ರಮಾಣದ ಅನುದಾನ ಮಂಜೂರು ಮಾಡಿ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂಬುದು ಜಿಲ್ಲೆಯ ಜನರ ಒತ್ತಾಯವಾಗಿತ್ತು. ಸದ್ಯ ಸರ್ಕಾರ ಘೋಷಿಸಿರುವ ಅನುದಾನ ಪ್ರಜ್ಞಾವಂತ ನಾಗರಿಕರಲ್ಲಿ ತೃಪ್ತಿ ತಂದಿಲ್ಲ.

ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಬಯಲು ಸೀಮೆಯ ಮೂರು ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಗೆ ಮುಖ್ಯವಾಗಿ ಮೂರನೇ ಹಂತದ ಶುದ್ಧೀಕರಣ ಮಾಡಬೇಕು ಎನ್ನುವುದು ಬಹುತೇಕರ ಆಗ್ರಹವಾಗಿತ್ತು. ಅದು ಈ ಬಜೆಟ್‌ನಲ್ಲಿ ಸಹ ಪ್ರಸ್ತಾಪವಾಗದೆ ಹೋದದ್ದು ಬದಲಾವಣೆಯ ನಿರೀಕ್ಷೆಯಲ್ಲಿದ್ದವರಿಗೆ ತೀವ್ರ ಆಘಾತ ಮೂಡಿಸಿದೆ.

ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಕೆಲ ತಿಂಗಳ ಹಿಂದೆ ಶಂಕುಸ್ಥಾಪನೆ ನೆರವೇರಿದೆ. ಆದರೆ ಅದಕ್ಕೆ ಬೇಕಾದ ಅನುದಾನದ ಬಗ್ಗೆ ಕೂಡ ಬಜೆಟ್‌ನಲ್ಲಿ ನಮೂದಿಸಿಲ್ಲ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಜಿಲ್ಲೆಯಲ್ಲಿ ಮೊಬೈಲ್ ಫೋನ್‌ಗಳ ಬಿಡಿಭಾಗಗಳ ಘಟಕ ಸ್ಥಾಪಿಸಲಾಗುತ್ತದೆ ಎಂದು ಘೋಷಿಸಿದ್ದರು. ಅದರ ಬಗ್ಗೆ ಈ ಬಜೆಟ್‌ನಲ್ಲೂ ಎಲ್ಲೂ ಉಲ್ಲೇಖವಿಲ್ಲ.

ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆ ಸ್ಥಾಪನೆ ಈ ಭಾಗದ ಬಹುಸಂಖ್ಯಾತ ಜನರ ಪ್ರಮುಖ ಬೇಡಿಕೆ. ದ್ರಾಕ್ಷಿ, ಟೊಮ್ಯಾಟೊ ಸೇರಿದಂತೆ ವಿವಿಧ ತರಕಾರಿಗಳು ಬೆಲೆ ಕಳೆದುಕೊಂಡಾಗ ಸ್ಥಳೀಯವಾಗಿ ಅವುಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಮಾಡಬಹುದು. ಜತೆಗೆ ಉದ್ಯೋಗ ಸೃಷ್ಟಿಸಬಹುದು ಎನ್ನುವುದು ಹಣ್ಣು, ತರಕಾರಿ ಬೆಳೆಗಾರರ ಪ್ರತಿಪಾದನೆ. ಆದರೆ ಅವರ ಬೇಡಿಕೆಗೆ ಈ ಬಾರಿ ಕೂಡ ಸರ್ಕಾರ ಸ್ಪಂದಿಸಿಲ್ಲ ಎನ್ನುವ ಬೇಸರ ಆ ಬೆಳೆಗಾರರಲ್ಲಿ ಎಂದಿನಂತೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT