ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆ: ನೆರವಿಗೆ 3 ಕ್ಯಾಲ್ಕುಲೇಟರ್‌

Published 22 ಮೇ 2023, 0:02 IST
Last Updated 22 ಮೇ 2023, 0:02 IST
ಅಕ್ಷರ ಗಾತ್ರ

ಕಾವ್ಯ ಡಿ.

ಹೂಡಿಕೆ ಮಾಡುವ ಮುನ್ನ ಸರಿಯಾದ ಲೆಕ್ಕಾಚಾರ ಮಾಡುವುದು ಬಹಳ ಮುಖ್ಯ. ಎಷ್ಟು ಮೊತ್ತ ಹೂಡಿಕೆ ಮಾಡಿದರೆ ಎಷ್ಟು ಲಾಭ ಬರುತ್ತದೆ, ಯಾವ ಹೂಡಿಕೆ ಪರಿಗಣಿಸಬೇಕು, ಯಾವುದನ್ನು ಪರಿಗಣಿಸಬಾರದು, ಬೆಲೆ ಏರಿಕೆ ಪ್ರಮಾಣ ಮೀರಿ ಹೂಡಿಕೆಯಲ್ಲಿ ಲಾಭ ಗಳಿಸುವುದು ಹೇಗೆ... ಹೀಗೆ ಅನೇಕ ಲೆಕ್ಕಾಚಾರಗಳನ್ನು ಹೂಡಿಕೆದಾರ ಮಾಡಬೇಕಾಗುತ್ತದೆ.

ಅಂತಹ ಲೆಕ್ಕಾಚಾರಗಳಲ್ಲಿ ನೆರವಾಗುವ ಮೂರು ಬಗೆಯ ಕ್ಯಾಲ್ಕುಲೇಟರ್‌ಗಳ ಬಗ್ಗೆ ತಿಳಿಯೋಣ.

1. ಲಮ್‌ಸಮ್ ಇನ್ವೆಸ್ಟ್ಮೆಂಟ್ ಕ್ಯಾಲ್ಕುಲೇಟರ್: ಮ್ಯೂಚುವಲ್ ಫಂಡ್‌ನಲ್ಲಿ ಒಂದೇ ಬಾರಿಗೆ ಹೂಡಿಕೆ ಮಾಡುವ ಮೊತ್ತವನ್ನು ಲಮ್‌ಸಮ್ ಎಂದು ಕರೆಯುತ್ತಾರೆ. ಒಮ್ಮೆಗೇ ₹5 ಸಾವಿರ, ₹10 ಸಾವಿರ, ₹15 ಸಾವಿರ, ₹1 ಲಕ್ಷ , ₹10 ಲಕ್ಷ ಹೀಗೆ ಒಂದಿಷ್ಟು ಮೊತ್ತವನ್ನು ಒಂದೇ ಬಾರಿಗೆ ಹೂಡಿಕೆ ಮಾಡುವುದನ್ನು ಲಮ್‌ಸಮ್ ಎಂದು ಪರಿಗಣಿಸಬಹುದು. ಲಮ್‌ಸಮ್ ಮೊತ್ತ ಹೂಡಿಕೆ ಮಾಡಿದರೆ ಆ ಮೊತ್ತ ಕೆಲವು ವರ್ಷಗಳ ಬಳಿಕ ಎಷ್ಟರ ಮಟ್ಟಿಗೆ ಬೆಳವಣಿಗೆ ಸಾಧಿಸಬಹುದು ಎನ್ನುವುದನ್ನು ಲಮ್‌ಸಮ್ ಕ್ಯಾಲ್ಕುಲೇಟರ್ ತಿಳಿಸಿಕೊಡುತ್ತದೆ.

ಉದಾಹರಣೆಗೆ, ₹1 ಲಕ್ಷವನ್ನು ಇಂದು ಹೂಡಿಕೆ ಮಾಡುತ್ತೀರಿ ಎಂದುಕೊಳ್ಳೋಣ. ವಾರ್ಷಿಕ ಶೇ 12ರಷ್ಟು ಲಾಭ ಸಿಕ್ಕು, 10 ವರ್ಷಗಳ ಬಳಿಕ ಆ ಮೊತ್ತ ಒಟ್ಟು ₹2,10,585 ಲಾಭ ತಂದುಕೊಡುತ್ತದೆ. ಅಸಲಿನ ಮೊತ್ತ ಸೇರಿಸಿದರೆ ಒಟ್ಟು ಮೌಲ್ಯ ₹3,10,585 ಆಗುತ್ತದೆ. (ಹೆಚ್ಚಿನ ಮಾಹಿತಿಗಾಗಿ ಪಟ್ಟಿ ಗಮನಿಸಿ)

2. ಎಸ್‌ಐಪಿ ಇನ್ವೆಸ್ಟ್ಮೆಂಟ್ ಕ್ಯಾಲ್ಕುಲೇಟರ್: ಮ್ಯೂಚುವಲ್ ಫಂಡ್‌ನಲ್ಲಿ ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕಕ್ಕೆ ನಿಯಮಿತವಾಗಿ ಹೂಡಿಕೆ ಮಾಡುವುದನ್ನು ಎಸ್‌ಐಪಿ ಎನ್ನುತ್ತಾರೆ. ಉದಾಹರಣೆಗೆ, ಪ್ರತಿ ತಿಂಗಳು ₹1 ಸಾವಿರ, ₹2 ಸಾವಿರ, ₹5 ಸಾವಿರ, ₹10 ಸಾವಿರ, ₹25 ಸಾವಿರ, ₹50 ಸಾವಿರ ಹೀಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮೊತ್ತ ನಿಗದಿ ಮಾಡಿ ಮಾಸಿಕವಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದನ್ನು ಮ್ಯೂಚುವಲ್ ಫಂಡ್ ಎಸ್‌ಐಪಿ ಎನ್ನುತ್ತಾರೆ.

ಹೀಗೆ ಮಾಸಿಕವಾಗಿ ಹೂಡಿಕೆ ಮಾಡಿದ ಮೊತ್ತ ಹಾಗೂ ಅದಕ್ಕೆ ಸಿಗುವ ಲಾಭವನ್ನು ಲೆಕ್ಕ ಹಾಕಲು ಎಸ್ಐಪಿ ಇನ್ವೆಸ್ಟ್ಮೆಂಟ್ ಕ್ಯಾಲ್ಕುಲೇಟರ್ ಬೇಕು. ಉದಾಹರಣೆಗೆ, 10 ವರ್ಷಗಳ ಕಾಲ ಪ್ರತಿ ತಿಂಗಳು ₹10 ಸಾವಿರ ಹೂಡಿಕೆ ಮಾಡುತ್ತಾ ಹೋದರೆ ಶೇ 12ರಷ್ಟು ಲಾಭ ದೊರೆತು, ಅಸಲು ಹೂಡಿಕೆ ಮೊತ್ತ ₹12 ಲಕ್ಷ ಸೇರಿ ಒಟ್ಟು ₹23,23,391 ಸಿಗುತ್ತದೆ. (ಹೆಚ್ಚಿನ ಮಾಹಿತಿಗಾಗಿ ಪಟ್ಟಿ ಗಮನಿಸಿ)

3. ಇನ್‌ಫ್ಲೇಷನ್ ಕ್ಯಾಲ್ಕುಲೇಟರ್: ಬೆಲೆ ಏರಿಕೆ ಕಾರಣದಿಂದಾಗಿ ನಮ್ಮ ಹಣ ಮೌಲ್ಯ ಕಳೆದುಕೊಳ್ಳುತ್ತಿರುತ್ತದೆ. ಉದಾಹರಣೆಗೆ, 10 ವರ್ಷಗಳ ಹಿಂದೆ ಪ್ರತಿ ಲೀಟರ್ ಹಾಲಿನ ಬೆಲೆ ₹18 ಇತ್ತು. ಈಗ ಅದೇ ಹಾಲಿನ ಬೆಲೆ ₹38 ಆಗಿದೆ. ಅಂದರೆ ಬೆಲೆ ಏರಿಕೆಯ ಕಾರಣದಿಂದ ದುಡ್ಡಿನ ಮೌಲ್ಯ ಕುಸಿಯುತ್ತದೆ.

ಉನ್ನತ ವ್ಯಾಸಂಗಕ್ಕೆ ಇವತ್ತಿನ ಬೆಲೆಯಲ್ಲಿ ₹5 ಲಕ್ಷ ಖರ್ಚಾಗುತ್ತಿದೆ ಎಂದು ಭಾವಿಸೋಣ. ಇದರಂತೆ 20 ವರ್ಷಗಳ ಬಳಿಕ ಉನ್ನತ ವ್ಯಾಸಂಗಕ್ಕೆ ಸಮಾರು ₹16 ಲಕ್ಷ ಬೇಕಾಗಬಹುದು. ವಾರ್ಷಿಕ ಶೇ 6ರ ಹಣದುಬ್ಬರ (ಬೆಲೆ ಏರಿಕೆ) ಪರಿಗಣಿಸಿ, ಈ ಲೆಕ್ಕಾಚಾರ ಮಾಡಲಾಗಿದೆ.

ಈ ಕ್ಯಾಲ್ಕುಲೇಟರ್‌ಗಳು ಎಲ್ಲಿ ಸಿಗುತ್ತವೆ?: ಗ್ರೋ, ಅಪ್‌ಸ್ಟಾಕ್, ಐಸಿಐಸಿಐ, ಅಡ್ವೈಸರ್ ಕೋಜ್ ಸೇರಿದಂತೆ ಬಹುತೇಕ ಹೂಡಿಕೆ ಮತ್ತು ಬ್ಯಾಂಕಿಂಗ್ ವೆಬ್‌ಸೈಟ್‌ಗಳು ವಿವಿಧ ಮಾದರಿಯ ಇನ್ವೆಸ್ಟ್ಮೆಂಟ್ ಕ್ಯಾಲ್ಕುಲೇಟರ್‌ಗಳನ್ನು ಒದಗಿಸುತ್ತವೆ. ಈ ಬಗೆಯ ಕ್ಯಾಲ್ಕುಲೇಟರ್‌ಗಳನ್ನು ಬಳಸಿ ಸುಲಭದಲ್ಲಿ ಹೂಡಿಕೆ ಅಂದಾಜು ಮಾಡಬಹುದು.

(ಲೇಖಕಿ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT