ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡವಾಳ ಮಾರುಕಟ್ಟೆ | ಇಂಡೆಕ್ಸ್‌ ಫಂಡ್‌: ಯಾವುದು ಹಿತ?

Published 30 ಜೂನ್ 2024, 23:30 IST
Last Updated 30 ಜೂನ್ 2024, 23:30 IST
ಅಕ್ಷರ ಗಾತ್ರ

ಮ್ಯೂಚುವಲ್ ಫಂಡ್ ಹೌಸ್‌ಗಳ ಫಂಡ್ ಮ್ಯಾನೇಜರ್‌ಗಳು ನಿರ್ವಹಿಸುವ ಶೇ 88ರಷ್ಟು ಲಾರ್ಜ್‌ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು, ನಿಫ್ಟಿ 50 ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳ ಗಳಿಕೆಗಿಂತ ಕಡಿಮೆ ಲಾಭ ಕೊಟ್ಟಿವೆ. ಈ ಕಾರಣದಿಂದಾಗಿ ನಿಫ್ಟಿ 50 ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳ ಆಧಾರಿತವಾಗಿರುವ ಇಂಡೆಕ್ಸ್ ಮ್ಯೂಚುವಲ್ ಫಂಡ್‌ಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ.

ಆದರೆ, ಇಂಡೆಕ್ಸ್ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ನಿಫ್ಟಿ 50 ಕೇಂದ್ರಿತ ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕೇ ಅಥವಾ ಸೆನ್ಸೆಕ್ಸ್ ಕೇಂದ್ರಿತ ಇಂಡೆಕ್ಸ್ ಮ್ಯೂಚುವಲ್ ಫಂಡ್‌ಗಳನ್ನು ಪರಿಗಣಿಸಬೇಕೇ ಎನ್ನುವ ಗೊಂದಲ ಎದುರಾಗುತ್ತದೆ. ಯಾವ ಸೂಚ್ಯಂಕವನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಿದರೆ ಲಾಭ ಜಾಸ್ತಿ ಎನ್ನುವ ಪ್ರಶ್ನೆಯೂ ಬರುತ್ತದೆ. ಇವೆಲ್ಲದಕ್ಕೂ ಈ ಲೇಖನದಲ್ಲಿ ಉತ್ತರ ಹುಡುಕೋಣ.

ಏನಿದು ಇಂಡೆಕ್ಸ್ ಫಂಡ್?:

ಭಾರತದಲ್ಲಿ ಪ್ರಮುಖವಾಗಿ ಎರಡು ಸೂಚ್ಯಂಕಗಳಿವೆ (ಇಂಡೆಕ್ಸ್). ಮುಂಬೈ ಷೇರುಪೇಟೆ ಪ್ರತಿನಿಧಿಸುವ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ಪ್ರತಿನಿಧಿಸುವ ನಿಫ್ಟಿ. ಈ ಸೂಚ್ಯಂಕಗಳನ್ನು ಯಥಾವತ್ತಾಗಿ ಅನುಕರಿಸಿ ಕೆಲ ಮ್ಯೂಚುವಲ್ ಫಂಡ್‌ಗಳು ರೂಪುಗೊಂಡಿವೆ. ಷೇರು ಮಾರುಕಟ್ಟೆಯ ಭಾಷೆಯಲ್ಲಿ ಈ ರೀತಿಯ ಫಂಡ್​ಗಳನ್ನು ‘ಇಂಡೆಕ್ಸ್ ಮ್ಯೂಚುವಲ್ ಫಂಡ್’ ಎಂದು ಕರೆಯುತ್ತಾರೆ.

ಬಿಎಸ್ಇ ಇಂಡೆಕ್ಸ್ ಫಂಡ್ v/s ನಿಫ್ಟಿ ಇಂಡೆಕ್ಸ್ ಫಂಡ್

ಬಿಎಸ್ಇ ಸೆನ್ಸೆಕ್ಸ್ 1986ರಲ್ಲಿ ಪ್ರಾರಂಭವಾಗಿದ್ದು, ಇದು ಭಾರತದ ಅತ್ಯಂತ ಹಳೆಯ ಷೇರು ಸೂಚ್ಯಂಕವಾಗಿದೆ. ಈ ಸೂಚ್ಯಂಕವು ಆರ್ಥಿಕವಾಗಿ ಸಬಲವಾಗಿರುವ 30 ಬೃಹತ್ ಕಂಪನಿಗಳ ಷೇರುಗಳ ಏರಿಳಿತವನ್ನು ದಾಖಲಿಸುತ್ತದೆ. ಮಹೀಂದ್ರ ಆ್ಯಂಡ್‌ ಮಹೀಂದ್ರ, ಎಚ್‌ಡಿಎಫ್‌ಸಿ, ಹಿಂದುಸ್ತಾನ್‌ ಯೂನಿಲಿವರ್, ಐಸಿಐಸಿಐ, ಐಟಿಸಿ, ಇನ್ಫೊಸಿಸ್, ಎಲ್ ಆ್ಯಂಡ್‌ ಟಿ ಹೀಗೆ ವಿವಿಧ ವಲಯಗಳ ಪ್ರಮುಖ ಕಂಪನಿಗಳನ್ನು ಈ ಸೂಚ್ಯಂಕ ಒಳಗೊಂಡಿರುತ್ತದೆ. ಇದೇ ಬಿಎಸ್ಇ ಸೂಚ್ಯಂಕವನ್ನು ಅನುಕರಿಸಿ ಹೂಡಿಕೆ ಮಾಡಿದರೆ ಅದು ಬಿಎಸ್ಇ ಆಧಾರಿತ ಇಂಡೆಕ್ಸ್ ಮ್ಯೂಚುಯಲ್ ಫಂಡ್ ಆಗುತ್ತದೆ.

ಇನ್ನು ನಿಫ್ಟಿ 50 ಸೂಚ್ಯಂಕವು 1996ರಲ್ಲಿ ಪ್ರಾರಂಭವಾಗಿದ್ದು, 50 ದೈತ್ಯ ಕಂಪನಿಗಳನ್ನು ಈ ಸೂಚ್ಯಂಕ ಒಳಗೊಂಡಿದೆ. ನಿಫ್ಟಿ ಸೂಚ್ಯಂಕದಲ್ಲಿ ರಿಲಯನ್ಸ್, ಎಚ್‌ಡಿಎಫ್​ಸಿ ಬ್ಯಾಂಕ್, ಇನ್ಫೊಸಿಸ್, ಹಿಂದುಸ್ತಾನ್‌ ಯೂನಿಲಿವರ್, ಐಸಿಐಸಿಐ ಬ್ಯಾಂಕ್ ಸೇರಿ ವಿವಿಧ ವಲಯಗಳ ಪ್ರಮುಖ 50 ಪ್ರಾತಿನಿಧಿಕ ಕಂಪನಿಗಳಿವೆ. ಈ
ಸೂಚ್ಯಂಕದಲ್ಲಿರುವ ಎಲ್ಲಾ 50 ಕಂಪನಿಗಳನ್ನು ಯಥಾವತ್ತಾಗಿ ಒಳಗೊಂಡು ಒಂದು ಮ್ಯೂಚುವಲ್ ಫಂಡ್ ರೂಪಿಸಿ ಹೂಡಿಕೆ ಮಾಡಿದರೆ ಅದು ನಿಫ್ಟಿ 50 ಇಂಡೆಕ್ಸ್ ಮ್ಯೂಚುವಲ್ ಫಂಡ್ ಎನಿಸಿಕೊಳ್ಳುತ್ತದೆ.

ಇಂಡೆಕ್ಸ್ ಫಂಡ್, ಪ್ಯಾಸಿವ್ ಫಂಡ್ ವರ್ಗಕ್ಕೆ ಸೇರುವುದು ಏಕೆ

ಪ್ಯಾಸಿವ್ ಫಂಡ್​ಗಳಲ್ಲಿ ಯಾವ ಷೇರಿನಲ್ಲಿ ಹೂಡಿಕೆ ಮಾಡಬೇಕು, ಯಾವುದರಲ್ಲಿ ಹೂಡಿಕೆ ಮಾಡಬಾರದು ಎನ್ನುವ ನಿರ್ಧಾರವನ್ನು ಫಂಡ್ ಮ್ಯಾನೇಜರ್ ತೆಗೆದುಕೊಳ್ಳುವುದಿಲ್ಲ. ಬಿಎಸ್ಇ ಅಥವಾ ನಿಫ್ಟಿ 50 ಸೂಚ್ಯಂಕದ ಭಾಗವಾಗಿರುವ ಷೇರುಗಳೇ ಇಂಡೆಕ್ಸ್ ಫಂಡ್​ನಲ್ಲೂ ಇರುತ್ತವೆ. ಈ ಕಾರಣದಿಂದ ಇಂಡೆಕ್ಸ್ ಫಂಡ್ ಪ್ಯಾಸಿವ್ ಫಂಡ್ ಎನಿಸಿಕೊಳ್ಳುತ್ತದೆ.

ಇನ್ನು ಆಕ್ಟಿವ್ ಫಂಡ್​ನಲ್ಲಿ ಯಾವ ಷೇರಿನಲ್ಲಿ ಹೂಡಿಕೆ ಮಾಡಬೇಕು, ಯಾವುದರಲ್ಲಿ ಹೂಡಿಕೆ ಮಾಡಬಾರದು ಎನ್ನುವ ನಿರ್ಧಾರವನ್ನು ಫಂಡ್ ಮ್ಯಾನೇಜರ್ ತೆಗೆದುಕೊಳ್ಳುತ್ತಾರೆ. ಈಕ್ವಿಟಿ, ಡೆಟ್ ಮತ್ತು ಹೈಬ್ರೀಡ್ ಮ್ಯೂಚುವಲ್ ಫಂಡ್ ಆಕ್ಟೀವ್ ಫಂಡ್​ಗೆ ಉತ್ತಮ ಉದಾಹರಣೆ. ಇಂಡೆಕ್ಸ್ ಫಂಡ್​ನಲ್ಲಿ ಫಂಡ್ ಮ್ಯಾನೇಜರ್ ಇಲ್ಲದ ಕಾರಣ ವೆಚ್ಚ ಅನುಪಾತ ಅಂದರೆ, ಕಮಿಷನ್ ಕಡಿಮೆ.

ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್​ಗಳ ವೆಚ್ಚ ಅನುಪಾತ ಶೇ 1.5ರಷ್ಟಿದ್ದರೆ ಇಂಡೆಕ್ಸ್ ಫಂಡ್​ಗಳ ವೆಚ್ಚ ಅನುಪಾತ ಶೇ 0.2ರಷ್ಟಿದೆ. ವೆಚ್ಚ ಅನುಪಾತ ಶುಲ್ಕ ಕಡಿಮೆ ಇರುವುದರಿಂದ ಇಲ್ಲಿ ಹೂಡಿಕೆದಾರನಿಗೆ ಹೆಚ್ಚು ಉಳಿತಾಯ ಸಾಧ್ಯವಾಗುತ್ತದೆ. ಷೇರು ಮಾರುಕಟ್ಟೆ ಎಷ್ಟು ಪ್ರಮಾಣದಲ್ಲಿ ಏರಿಕೆ ಕಾಣುವುದೋ ಅಷ್ಟು ಲಾಭ ಸಿಕ್ಕರೆ ಸಾಕು, ಹೆಚ್ಚು ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎನ್ನುವವರಿಗೆ ಇಂಡೆಕ್ಸ್ ಫಂಡ್ ಒಳ್ಳೆಯ ಆಯ್ಕೆ.

ನಿಫ್ಟಿ 50 ಇಂಡೆಕ್ಸ್ ಫಂಡ್ ಉತ್ತಮವೋ ಅಥವಾ ಸೆನ್ಸೆಕ್ಸ್ ಇಂಡೆಕ್ಸ್ ಫಂಡ್ ಉತ್ತಮವೋ?

ನಿಫ್ಟಿ 50 ಸೂಚ್ಯಂಕದಲ್ಲಿ ಒಟ್ಟು 50 ಕಂಪನಿಗಳಿವೆ. ಈ ಕಂಪನಿಗಳ ಪೈಕಿ 30 ಅಗ್ರಮಾನ್ಯ ಕಂಪನಿಗಳು ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕದ ಭಾಗವೂ ಆಗಿವೆ. ಇನ್ನುಳಿದ 20 ಕಂಪನಿಗಳ ಷೇರುಗಳು ಮಾತ್ರ ಹೆಚ್ಚುವರಿಯಾಗಿ ನಿಫ್ಟಿ 50 ಸೂಚ್ಯಂಕದಲ್ಲಿ ಇರುತ್ತವೆ. ವಾಸ್ತವದಲ್ಲಿ ಶೇ 86ರಷ್ಟು ಒಂದೇ ತರಹದ ಕಂಪನಿಗಳ ಷೇರುಗಳು ನಿಫ್ಟಿ ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳಲ್ಲಿ ಇವೆ.

ನಿಫ್ಟಿ ಸೂಚ್ಯಂಕದಲ್ಲಿ ಶೇ 14ರಷ್ಟು ಮಾತ್ರ ಬೇರೆಯ ಕಂಪನಿಗಳ ಷೇರುಗಳು ಸೇರಿರುತ್ತವೆ. ಹಾಗಾಗಿ, ಎರಡು ಸೂಚ್ಯಂಕಗಳಲ್ಲಿ ಬಹಳಷ್ಟು ವ್ಯತ್ಯಾಸವೇನೂ ಕಂಡು ಬರುವುದಿಲ್ಲ. ಇನ್ನು ನಿಫ್ಟಿ 50 ಸೂಚ್ಯಂಕದ 5 ವರ್ಷಗಳ ಸರಾಸರಿ ವಾರ್ಷಿಕ ಗಳಿಕೆ ನೋಡಿದಾಗ ಶೇ 12.52ರಷ್ಟು ಗಳಿಕೆ ಕೊಟ್ಟಿರುವುದು ತಿಳಿಯುತ್ತದೆ.

ಅದೇ ಅವಧಿಯಲ್ಲಿ ಸೆನ್ಸೆಕ್ಸ್ ಸೂಚ್ಯಂಕ ಶೇ 12.85ರಷ್ಟು ಅಂದರೆ ಅಲ್ಪ ಮೊತ್ತದ ಗಳಿಗೆ ಹೆಚ್ಚಿಗೆ ಕೊಟ್ಟಿದೆ. ಆದರೆ, 7 ವರ್ಷದ ಅವಧಿಗೆ ಸರಾಸರಿ ವಾರ್ಷಿಕ ಗಳಿಕೆ ನೋಡಿದಾಗ ನಿಫ್ಟಿ ಶೇ 13.78ರಷ್ಟು ಗಳಿಕೆ ತಂದುಕೊಟ್ಟಿದ್ದರೆ, ಸೆನ್ಸೆಕ್ಸ್ ಶೇ 12.80ರಷ್ಟು ಗಳಿಕೆ ಕೊಟ್ಟಿದೆ. ಹೀಗೆ ಕೆಲ ವರ್ಷಗಳಲ್ಲಿ ನಿಫ್ಟಿ ಕೊಂಚ ಹೆಚ್ಚು ಗಳಿಕೆ ಕೊಟ್ಟಿದ್ದರೆ ಕೆಲ ವರ್ಷಗಳಲ್ಲಿ ಸೆನ್ಸೆಕ್ಸ್ ಕೊಂಚ ಹೆಚ್ಚು ಲಾಭ ಕೊಟ್ಟಿದೆ. ಒಟ್ಟಾರೆ ಲೆಕ್ಕಾಚಾರದಲ್ಲಿ ನೋಡಿದಾಗ ನಿಫ್ಟಿ ಸೂಚ್ಯಂಕದಲ್ಲಿ 50 ಕಂಪನಿಗಳ ಷೇರುಗಳಿದ್ದರೂ ಮತ್ತು ಸೆನ್ಸೆಕ್ಸ್ ಸೂಚ್ಯಂಕದಲ್ಲಿ 30 ಕಂಪನಿಗಳ ಷೇರುಗಳಿದ್ದರೂ ಹೂಡಿಕೆ ಮಾಡಿದಾಗ ಎರಡರ ಗಳಿಕೆಯಲ್ಲಿ ಹೆಚ್ಚು ವ್ಯತ್ಯಾಸ ಕಂಡು ಬರುವುದಿಲ್ಲ. ಹಾಗಾಗಿ, ಯಾವುದೇ ಉತ್ತಮ ಗಳಿಕೆ ಕೊಟ್ಟಿರುವ ಇಂಡೆಕ್ಸ್ ಫಂಡ್ ಅನ್ನು ನೀವು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬಹುದು.

ಸತತ 4 ವಾರಗಳಿಂದ ಗೂಳಿ ಓಟ

ಸತತ ನಾಲ್ಕು ವಾರಗಳಿಂದ ಷೇರುಪೇಟೆ ಸೂಚ್ಯಂಕಗಳು ಗಳಿಕೆಯ ಹಾದಿಯಲ್ಲಿವೆ. ಜೂನ್ ತಿಂಗಳಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಅತ್ಯುತ್ತಮ ಗಳಿಕೆ ದಾಖಲಿಸಿವೆ. 79032 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 2.36ರಷ್ಟು ಜಿಗಿದಿದೆ.

24010 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 2.17ರಷ್ಟು ಹೆಚ್ಚಳ ಕಂಡಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಷೇರುಪೇಟೆ ಸ್ಥಿರವಾಗಿ ಮೇಲೆ ಸಾಗುತ್ತಿದೆ. ಆರ್ಥಿಕ ಪ್ರಗತಿಗೆ ಸರ್ಕಾರ ಉತ್ತೇಜನ ನೀಡಲಿದೆ ಎಂಬ ಭರವಸೆ ಉತ್ಪಾದನಾ ವಲಯಕ್ಕೆ ಮುಂಬರುವ ಬಜೆಟ್‌ನಲ್ಲಿ ಬಂಪರ್ ಕೊಡುಗೆ ಸಿಗಲಿದೆ ಎಂಬ ನಿರೀಕ್ಷೆ ಸೇರಿ ಹಲವು ಅಂಶಗಳು ಮಾರುಕಟ್ಟೆ ಪುಟಿದೇಳಲು ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಎನರ್ಜಿ ಶೇ 3.33 ಅನಿಲ ಮತ್ತು ತೈಲ ಶೇ 3.02 ಮಾಹಿತಿ ತಂತ್ರಜ್ಞಾನ ಶೇ 2.72 ಫೈನಾನ್ಸ್ ಶೇ 1.85 ಎಫ್‌ಎಂಸಿಜಿ ಶೇ 1.29 ಬ್ಯಾಂಕ್ ಶೇ 1.28 ಫಾರ್ಮಾ ಶೇ 1.09 ಮತ್ತು ನಿಫ್ಟಿ ಆಟೊ ಸೂಚ್ಯಂಕ ಶೇ 0.42ರಷ್ಟು ಜಿಗಿದಿದೆ.

ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 2.64 ಮಾಧ್ಯಮ ಸೂಚ್ಯಂಕ ಶೇ 2.14 ಲೋಹ ಸೂಚ್ಯಂಕ ಶೇ 1.65 ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 0.29ರಷ್ಟು ಕುಸಿದಿದೆ. ಏರಿಕೆ – ಇಳಿಕೆ: ನಿಫ್ಟಿಯಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಶೇ 9.36 ಗ್ರಾಸಿಮ್ ಇಂಡಸ್ಟ್ರೀಸ್ ಶೇ 8.18 ರಿಲಯನ್ಸ್ ಇಂಡಸ್ಟ್ರಿಸ್ ಶೇ 7.74 ಡಾ.ರೆಡ್ಡೀಸ್ ಲ್ಯಾಬ್ಸ್ ಶೇ 6.61 ಎನ್‌ಟಿಪಿಸಿ ಶೇ 5.18 ಎಲ್‌ಟಿಐ ಮೈಂಡ್ ಟ್ರೀ ಶೇ 4.97 ವಿಪ್ರೊ ಶೇ 4.96 ಸನ್ ಫಾರ್ಮಾ ಶೇ 3.82 ಐಸಿಐಸಿಐ ಬ್ಯಾಂಕ್ ಶೇ 3.61 ಮತ್ತು ಶ್ರೀರಾಮ್ ಫೈನಾನ್ಸ್ ಶೇ 3.18ರಷ್ಟು ಜಿಗಿದಿದೆ.

ಇಂಡಸ್ ಇಂಡ್ ಬ್ಯಾಂಕ್ ಶೇ 4.13 ಐಷರ್ ಮೋಟರ್ಸ್ ಶೇ 3.85 ಸಿಪ್ಲಾ ಶೇ 3.83 ಟಾಟಾ ಸ್ಟೀಲ್ ಶೇ 3.25 ಕೋಲ್ ಇಂಡಿಯಾ ಶೇ 1.44 ಮಾರುತಿ ಸುಜುಕಿ ಶೇ 1.38 ಬಿಪಿಸಿಎಲ್ ಶೇ 1.23 ಬಜಾಜ್ ಆಟೊ ಶೇ 1.14 ಅದಾನಿ ಪೋರ್ಟ್ಸ್ ಶೇ 0.54 ಮತ್ತು ಜೆಎಸ್‌ಡಬ್ಲ್ಯು ಸ್ಟೀಲ್ ಶೇ 0.46ರಷ್ಟು ಕುಸಿದಿವೆ. ಮುನ್ನೋಟ: ಸದ್ಯದ ಪರಿಸ್ಥಿತಿಯಲ್ಲಿ ಷೇರುಪೇಟೆಯಲ್ಲಿ ಏರಿಳಿತದ ಪರಿಸ್ಥಿತಿ ಮುಂದುವರಿಯಲಿದೆ. ಮುಂಬರುವ ಬಜೆಟ್ ಮತ್ತು ಕಂಪನಿಗಳ ತ್ರೈಮಾಸಿಕ ಫಲಿತಾಂಶದ ಮೇಲೆ ಹೂಡಿಕೆದಾರರು ಕಣ್ಣಿಟ್ಟಿದ್ದಾರೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ.

ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT