ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ ಕಾರ್ಡ್ಸ್ ಐಪಿಒ ಲಾಭದಾಯಕವೇ?

Last Updated 24 ಫೆಬ್ರುವರಿ 2020, 5:35 IST
ಅಕ್ಷರ ಗಾತ್ರ
ADVERTISEMENT
""

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಭಾಗವಾಗಿರುವ ಎಸ್‌ಬಿಐ ಕಾರ್ಡ್ಸ್ ಮತ್ತು ಪೇಮೆಂಟ್ ಸರ್ವೀಸಸ್ ಲಿಮಿಟೆಡ್ ಆರಂಭಿಕ ಸಾರ್ವಜನಿಕ ಕೊಡುಗೆಗೆ ( ಐಪಿಒ) ತಯಾರಿ ನಡೆಸಿದೆ. ಈ ಹೊತ್ತಿನಲ್ಲಿ ಎಸ್‌ಬಿಐ ಕಾರ್ಡ್‌ನ ‘ಐಪಿಒ’ದ ಒಳನೋಟ ಇಲ್ಲಿದೆ.

ಐಪಿಒ ಬಗ್ಗೆ ಮಾಹಿತಿ: ಈ ಐಪಿಒ ಮೂಲಕ ₹ 9,000 ಕೋಟಿ ಸಂಗ್ರಹಕ್ಕೆ ಎಸ್‌ಬಿಐ ಕಾರ್ಡ್ಸ್ ಮುಂದಾಗಿದೆ. ಕಂಪನಿ ₹ 500 ಕೋಟಿ ಮೌಲ್ಯದ ಹೊಸ ಷೇರುಗಳನ್ನು ವಿತರಿಸುವ ಜತೆಗೆ ₹ 13.05 ಕೋಟಿ ಮೌಲ್ಯದ ಷೇರುಗಳನ್ನು ಆಫರ್ ಫಾರ್ ಸೇಲ್ ಮಾದರಿಯಲ್ಲಿ ನೀಡಲಿದೆ. ಆಫರ್ ಫಾರ್ ಸೇಲ್ ಅಂದರೆ, ಎಸ್‌ಬಿಐ ಕಾರ್ಡ್ಸ್ ಕಂಪನಿಯಲ್ಲಿ ಈಗಾಗಲೇ ಪಾಲುದಾರಿಕೆ ಹೊಂದಿರುವ ಕಂಪನಿಗಳು ತಮ್ಮ ಪಾಲುದಾರಿಕೆಯಲ್ಲಿ ಒಂದಿಷ್ಟನ್ನು ಸಾರ್ವಜನಿಕರಿಗೆ ಷೇರುಗಳ ರೂಪದಲ್ಲಿ ನೀಡುವ ಪ್ರಕ್ರಿಯೆ. ಎಸ್‌ಬಿಐ ಕಾರ್ಡ್‌ನ ಷೇರುಗಳನ್ನು ಮಾರ್ಚ್ 2 ರಿಂದ ಮಾರ್ಚ್ 5 ರವರೆಗೆ ಖರೀದಿಸಬಹುದಾಗಿದೆ. ಮಾರ್ಚ್ 13 ರ ಒಳಗಾಗಿ ಷೇರುಗಳು ಹೂಡಿಕೆದಾರರ ಡಿ ಮ್ಯಾಟ್ ಅಕೌಂಟ್‌ಗೆ ಸೇರಲಿವೆ.

ಎಸ್‌ಬಿಐ ಕಾರ್ಡ್‌ನ ಹುಟ್ಟು ಮತ್ತು ಬೆಳವಣಿಗೆ: 1998 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜಿಇ ಕ್ಯಾಪಿಟಲ್ ಜತೆಗೂಡಿ ಎಸ್‌ಬಿಐ ಕಾರ್ಡ್ಸ್ ಮತ್ತು ಪೇಮೆಂಟ್ಸ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಆರಂಭಿಸಿದವು.

ಆರಂಭದಲ್ಲಿ ಶೇ 60 ರಷ್ಟು ಪಾಲುದಾರಿಕೆಯನ್ನು ಎಸ್‌ಬಿಐ ಹೊಂದಿದ್ದರೆ, ಶೇ 40 ರಷ್ಟನ್ನು ಜಿಇ ಕ್ಯಾಪಿಟಲ್ ಹೊಂದಿತ್ತು. 2017 ಡಿಸೆಂಬರ್‌ನಲ್ಲಿ ಕಾರ್ಲೈಲ್ ಗ್ರೂಪ್, ಜಿಇ ಕ್ಯಾಪಿಟಲ್ ನಿಂದ ಶೇ 26 ರಷ್ಟು ಪಾಲುದಾರಿಕೆಯನ್ನು ಪಡೆದುಕೊಂಡಿತು. ಇನ್ನುಳಿದ ಶೇ 14 ರಷ್ಟು ಪಾಲುದಾರಿಕೆಯನ್ನು ಎಸ್‌ಬಿಐ ಕಾರ್ಡ್ಸ್‌ಗೆ ಜಿಇ ಕ್ಯಾಪಿಟಲ್ ನೀಡಿತು. ಸದ್ಯ ಶೇ 74 ರಷ್ಟು ಪಾಲುದಾರಿಕೆ ಎಸ್‌ಬಿಐ ಬಳಿ ಇದೆ. ಉಳಿದ ಶೇ 26 ರಷ್ಟು ಪಾಲುದಾರಿಕೆಯನ್ನು ಕಾರ್ಲೈಲ್ ಗ್ರೂಪ್ ಹೊಂದಿದೆ.

ಕ್ರೆಡಿಟ್ ಕಾರ್ಡ್ ಕಂಪನಿಗಳು ಹೇಗೆ ಹಣ ಗಳಿಸುತ್ತವೆ: ಎಸ್‌ಬಿಐ ಕಾರ್ಡ್ಸ್‌ನ ‘ಐಪಿಒ’ದಲ್ಲಿ ಹಣ ಹೂಡಿಕೆ ಮಾಡಬೇಕೆ ಬೇಡವೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲು ಕ್ರೆಡಿಟ್ ಕಾರ್ಡ್ ಕಂಪನಿಗಳು ಹೇಗೆ ಹಣ ಗಳಿಸುತ್ತವೆ ಎನ್ನುವುದನ್ನು ಮೊದಲು ಅರಿಯಬೇಕು. ಉದಾಹರಣೆಗೆ ನೀವು ಅಂಗಡಿಗೆ ಹೋಗಿ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ 100 ರೂಪಾಯಿಯ ಖರೀದಿ ಮಾಡುತ್ತೀರಿ. ಅಂಗಡಿಯ ಮಾಲೀಕ ನಿಮ್ಮ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿ ಹಣ ಪಡೆದುಕೊಳ್ಳುತ್ತಾನೆ. ಹೀಗೆ ಮಾಡಿದಾಗ ಅಂಗಡಿಯ ಮಾಲೀಕನಿಗೆ ನೀವು ₹ 100 ಪಾವತಿಸಿದ್ದರೂ ಆತನಿಗೆ ಸಿಗುವುದು 97 ರಿಂದ 98 ರೂಪಾಯಿ ಮಾತ್ರ. ಅಂದರೆ ಒಂದು ಪಾವತಿಯಿಂದ ಕ್ರೆಡಿಟ್ ಕಾರ್ಡ್ ಕಂಪನಿಗೆ ಶೇ 2 ರಿಂದ ಶೇ 3 ರಷ್ಟು ಲಾಭ ಸಿಗುತ್ತದೆ. ಇಷ್ಟೇ ಅಲ್ಲ, ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡುವ ವ್ಯಕ್ತಿ ತಡವಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಿದರೆ ಅದರಿಂದ ವಿಳಂಬ ಪಾವತಿ ಶುಲ್ಕ ಮತ್ತು ಬಡ್ಡಿ ಕ್ರೆಡಿಟ್ ಕಾರ್ಡ್ ಕಂಪನಿಗೆ ಸಿಗುತ್ತದೆ. ಇದರ ಜತೆಗೆ ಗ್ರಾಹಕರಿಗೆ ವಾರ್ಷಿಕ ನಿರ್ವಹಣಾ ಸೇರಿ ಹಲವು ಶುಲ್ಕಗಳಿರುತ್ತವೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಕಂಪನಿಗಳಿಗೆ ಲಾಭ ಇದ್ದೇ ಇದೆ.

ಎಸ್‌ಬಿಐ ಕಾರ್ಡ್ಸ್‌ನ ಆರ್ಥಿಕ ಸ್ಥಿತಿಗತಿ: ದೇಶದ 130 ನಗರಗಳಲ್ಲಿ 90 ಲಕ್ಷ ಕ್ರೆಡಿಟ್ ಕಾರ್ಡ್ ಗ್ರಾಹಕರನ್ನು ಹೊಂದಿರುವ ಎಸ್‌ಬಿಐ, ಎರಡನೇ ಅತಿ ದೊಡ್ಡ ಕ್ರೆಡಿಟ್ ಕಾರ್ಡ್ ಕಂಪನಿಯಾಗಿ ಬೆಳೆದಿದೆ.

ಏಪ್ರಿಲ್‌ನಿಂದ ಸೆಪ್ಟೆಂಬರ್ 2019 ರ ಅವದಿಯಲ್ಲಿ ಎಸ್‌ಬಿಐ ಕಾರ್ಡ್ ₹ 1,034.58 ಕೋಟಿ ಲಾಭ ( ಶೇ 78 ರಷ್ಟು ಏರಿಕೆ) ಗಳಿಸಿದೆ. ಎಸ್‌ಬಿಐ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವುದರಿಂದ ಈ ಬ್ರಾಂಡ್ ಹೆಸರೇ ಅದರ ಅತಿ ದೊಡ್ಡ ಬಲ. ಎಸ್‌ಬಿಐನ ಗ್ರಾಹಕರ ಜಾಲ, ದೈತ್ಯ ಕಂಪನಿಗಳ ಸಹಭಾಗಿತ್ವದಲ್ಲಿ ತಂದಿರುವ ಕ್ರೆಡಿಟ್ ಕಾರ್ಡ್‌ಗಳು, ಹೊಸ ತಂತ್ರಜ್ಞಾನ ಅಳವಡಿಕೆ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಸುದೀರ್ಘ ಅನುಭವ ಎಸ್‌ಬಿಐ ಕಾರ್ಡ್ಸ್‌ನ ಬೆಳವಣಿಗೆಗೆ ಪೂರಕವಾಗಿದೆ.

ಕ್ರೆಡಿಟ್ ಕಾರ್ಡ್ ವಹಿವಾಟಿನ ಮುನ್ನೋಟ: ಮುಂದಿನ 5 ವರ್ಷಗಳಲ್ಲಿ ಕ್ರೆಡಿಟ್ ಕಾರ್ಡ್ ವಹಿವಾಟು 2.5 ಪಟ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ. ಸದ್ಯ ಭಾರತದ ಜನಸಂಖ್ಯೆ 135 ಕೋಟಿ ಇದ್ದು ಈ ಪೈಕಿ 108 ಕೋಟಿ ಜನರು ಬ್ಯಾಂಕ್ ಖಾತೆ ಹೊಂದಿದ್ದಾರೆ. ಬ್ಯಾಂಕ್ ಖಾತೆ ಹೊಂದಿರುವ ಅರ್ಧದಷ್ಟು ಜನರಿಗೆ ಕ್ರೆಡಿಟ್ ಕಾರ್ಡ್ ಪಡೆಯುವ ಅರ್ಹತೆ ಇದೆ ಎಂದು ಭಾವಿಸಿದರೂ, 54 ಕೋಟಿ ಜನರು ಕ್ರೆಡಿಟ್ ಕಾರ್ಡ್ ಹೊಂದಿರಬೇಕಿತ್ತು. ಆದರೆ ಲಭ್ಯ ಅಂಕಿ – ಅಂಶದ ಪ್ರಕಾರ 4.89 ಕೋಟಿ ಜನರ ಬಳಿ ಮಾತ್ರ ಕ್ರೆಡಿಟ್ ಕಾರ್ಡ್ ಇದೆ. ಹಾಗಾಗಿ ಸವಾಲುಗಳ ನಡುವೆಯೂ ಈ ವಲಯದಲ್ಲಿ ವಹಿವಾಟು ಬೆಳವಣಿಗೆಗೆ ಸಾಕಷ್ಟು ಅವಕಾಶವಿದೆ.

ಹೂಡಿಕೆದಾರರ ಚಿತ್ತ ಜಿಡಿಪಿಯತ್ತ

ಎರಡು ವಾರಗಳ ಅವಧಿಯಲ್ಲಿ ಗಳಿಕೆ ಕಂಡಿದ್ದ ಷೇರುಪೇಟೆ ಸೂಚ್ಯಂಕಗಳು ಕಳೆದ ವಾರ ನಕಾರಾತ್ಮಕ ಹಾದಿ ತುಳಿದಿವೆ. 41,170 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ಶೇ 0.21 ರಷ್ಟು ಕುಸಿದಿದೆ. 12,080 ರಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 0.27 ರಷ್ಟು ತಗ್ಗಿದೆ. ಇದರ ನಡುವೆ ಫೆಬ್ರವರಿ 28 ರಂದು ಹೊರಬೀಳಲಿರುವ ಜಿಡಿಪಿ ದತ್ತಾಂಶದತ್ತ ಹೂಡಿಕೆದಾರರು ಚಿತ್ತ ಹರಿಸಿದ್ದಾರೆ.

ವಲಯವಾರು ಪ್ರಗತಿಯಲ್ಲಿ 11 ರ ಪೈಕಿ 5 ವಲಯಗಳು ನಷ್ಟ ಅನುಭವಿಸಿವೆ. ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ವಲಯ ಶೇ 1.91, ವಾಹನ ತಯಾರಿಕಾ ವಲಯ ಶೇ 1.59 ಮತ್ತು ರಿಯಲ್ ಎಸ್ಟೇಟ್ ಶೇ 1.31 ರಷ್ಟು ಕುಸಿದಿವೆ.

ನಿಫ್ಟಿ ಮಾಧ್ಯಮ ವಲಯ, ಫಾರ್ಮಾ, ಬ್ಯಾಂಕ್ ಮತ್ತು ಹಣಕಾಸು ಸೇವಾ ವಲಯ ಕ್ರಮವಾಗಿ ಶೇ 2.14, 0.39, 0.35, 0.23, ರಷ್ಟು ಜಿಗಿದಿವೆ.

ನಿಫ್ಟಿ (50)ಯ 50 ಷೇರುಗಳ ಪೈಕಿ 29 ಷೇರುಗಳು ಕುಸಿತ ದಾಖಲಿಸಿವೆ. ಯೆಸ್ ಬ್ಯಾಂಕ್, ಟಾಟಾ ಮೋಟರ್ಸ್, ಹೀರೊ ಮೋಟ ಕಾರ್ಪ್, ಭಾರ್ತಿ ಇನ್ಫ್ರಾಟೆಲ್ ಮತ್ತು ಏರ್‌ಟೆಲ್‌ ಶೇ 3.61 ರಿಂದ ಶೇ 8.61 ರವರೆಗೆ ಕುಸಿದಿವೆ. ಜೀ ಎಂಟರ್ ಟೇನ್‌ಮೆಂಟ್, ಪವರ್ ಗ್ರಿಡ್, ಎಸ್‌ಬಿಐ, ಕೋಲ್ ಇಂಡಿಯಾ, ಟೈಟನ್ ಶೇ 2.26 ರಿಂದ ಶೇ 9.13 ರ ವರೆಗೆ ಗಳಿಕೆ ಕಂಡಿವೆ.

ಮುನ್ನೋಟ: ಈ ವಾರ ಮೂರನೇ ತ್ರೈಮಾಸಿಕದ ಆರ್ಥಿಕ ವೃದ್ಧಿ ದರ (ಜಿಡಿಪಿ) ದತ್ತಾಂಶ ಪ್ರಕಟಗೊಳ್ಳುವುದರಿಂದ ಹೂಡಿಕೆದಾರರು ಕಾದು ನೋಡುವ ತಂತ್ರ ಅನುಸರಿಸಲಿದ್ದಾರೆ. ಜಿಡಿಪಿ ದರವು ದೇಶಿ ಆರ್ಥಿಕತೆ ಎತ್ತ ಸಾಗುತ್ತಿದೆ ಎನ್ನುವುದರ ಸೂಚಕವಾಗಿರಲಿದೆ. ಅದನ್ನು ಆಧರಿಸಿ ಮಾರುಕಟ್ಟೆ ಭವಿಷ್ಯದ ನೋಟ ಮತ್ತಷ್ಟು ಸ್ಪಷ್ಟವಾಗಲಿದೆ. ಕರೋನಾ ವೈರಸ್ ಎಷ್ಟರ ಮಟ್ಟಿಗೆ ಹತೋಟಿಗೆ ಬರಲಿದೆ ಎನ್ನುವುದು ಕೂಡ ಮಾರಕಟ್ಟೆ ಏರಿಳಿತಕ್ಕೆ ಕಾರಣವಾಗಲಿದೆ.

ನರಸಿಂಹ ಬಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT