ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ನಲ್ಲಿ ರಫ್ತು, ಆಮದು ಇಳಿಕೆ

ಮುಂಬರುವ ತಿಂಗಳುಗಳಲ್ಲಿ ರಫ್ತು ಸುಧಾರಿಸಲಿದೆ: ವಾಣಿಜ್ಯ ಕಾರ್ಯದರ್ಶಿ
Published 13 ಅಕ್ಟೋಬರ್ 2023, 15:33 IST
Last Updated 13 ಅಕ್ಟೋಬರ್ 2023, 15:33 IST
ಅಕ್ಷರ ಗಾತ್ರ

ನವದೆಹಲಿ : ದೇಶದ ರಫ್ತು ವಹಿವಾಟು ಸೆಪ್ಟೆಂಬರ್‌ ತಿಂಗಳಿನಲ್ಲಿ ಶೇ 2.6ರಷ್ಟು ಇಳಿಕೆ ಕಂಡು ₹ 2.86 ಲಕ್ಷ ಕೋಟಿಗೆ ತಲುಪಿದೆ. ವ್ಯಾಪಾರ ಕೊರತೆ ಅಂತರವು ₹1.60 ಲಕ್ಷ ಕೋಟಿಗೆ ತಗ್ಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸರಕುಗಳ ದರ ಇಳಿಕೆ ಮತ್ತು ತೈಲ ಆಮದು ಪ್ರಮಾಣ ಇಳಿಕೆ ಕಂಡಿರುವುದರಿಂದ ಆಮದು ವಹಿವಾಟು ಸಹ ಸೆಪ್ಟೆಂಬರ್‌ನಲ್ಲಿ ಶೇ 15ರಷ್ಟು ಇಳಿಕೆ ಕಂಡಿದೆ. ಮೌಲ್ಯದ ಲೆಕ್ಕದಲ್ಲಿ ₹5.25 ಲಕ್ಷ ಕೋಟಿಯಷ್ಟು ಆಗಿದೆ. 

ಜಾಗತಿಕ ಸವಾಲುಗಳ ಹೊರತಾಗಿಯೂ ದೇಶದ ರಫ್ತು ವಹಿವಾಟು ಚೇತರಿಕೆ ಕಂಡುಕೊಳ್ಳುತ್ತಿದೆ ಎನ್ನುವುದನ್ನು ಸೆಪ್ಟೆಂಬರ್ ತಿಂಗಳ ಅಂಕಿ–ಅಂಶಗಳು ಸೂಚಿಸುತ್ತಿವೆ ಎಂದು ವಾಣಿಜ್ಯ ಕಾರ್ಯದರ್ಶಿ ಸುನಿಲ್‌ ಭಾರ್ತ್‌ವಾಲ್‌ ತಿಳಿಸಿದ್ದಾರೆ.

ಏಪ್ರಿಲ್‌, ಮೇ, ಜೂನ್ ಮತ್ತು ಜುಲೈನಲ್ಲಿ ಎರಡಂಕಿ ಮಟ್ಟದಲ್ಲಿ ರಫ್ತು ವಹಿವಾಟು ಇಳಿಕೆ ಕಂಡಿತ್ತು. ಆದರೆ ಸೆಪ್ಟೆಂಬರ್‌ನಲ್ಲಿ ಒಂದಂಕಿ ಮಟ್ಟಕ್ಕೆ ಬಂದಿದೆ. ಹೀಗಾಗಿ ಮುಂಬರುವ ತಿಂಗಳುಗಳಲ್ಲಿ ಪರಿಸ್ಥಿತಿಯು ಇನ್ನಷ್ಟು ಸುಧಾರಿಸುವ ವಿಶ್ವಾಸ ಇದೆ ಎಂದೂ ಅವರು ತಿಳಿಸಿದ್ದಾರೆ.

ಪ್ರಮುಖ 30 ವಲಯಗಳಿದ್ದು, ಅದರಲ್ಲಿ ಕಬ್ಬಿಣದ ಅದಿರು, ಹತ್ತಿ ಬಟ್ಟೆ, ಮಾಂಸ, ಡೈರಿ ಉತ್ಪನ್ನಗಳು, ಔಷಧ, ಎಂಜಿನಿಯರಿಂಗ್‌ ವಲಯಗಳು ಸೆಪ್ಟೆಂಬರ್‌ನಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡಿವೆ. ಪೆಟ್ರೋಲಿಯಂ ಉತ್ಪನ್ನಗಳು, ಜವಳಿ, ಎಲೆಕ್ಟ್ರಾನಿಕ್‌ ವಸ್ತುಗಳು, ರಾಸಾಯನಿಕ, ಹರಳು ಮತ್ತು ಚಿನ್ನಾಭರಣ, ಚರ್ಮ, ಟೀ ಮತ್ತು ಕಾಫಿ ವಲಯಗಳು ನಕಾರಾತ್ಮಕ ಬೆಳವಣಿಗೆ ಕಂಡಿವೆ.

ಏಪ್ರಿಲ್‌–ಸೆಪ್ಟೆಂಬರ್‌ನಲ್ಲಿ ರಫ್ತು ಶೇ 8.77ರಷ್ಟು ಇಳಿಕೆ ಕಂಡಿದ್ದು, ₹17.51 ಲಕ್ಷ ಕೋಟಿಗೆ ತಲುಪಿದೆ. ಆಮದು ವಹಿವಾಟು ಶೇ 12.23ರಷ್ಟು ಇಳಿಕೆ ಆಗಿದ್ದು, ಮೌಲ್ಯದ ಲೆಕ್ಕದಲ್ಲಿ ₹27.14 ಲಕ್ಷ ಕೋಟಿಯಷ್ಟು ಆಗಿದೆ. ಇದರಿಂದಾಗಿ ವ್ಯಾಪಾರ ಕೊರತೆ ಅಂತರವು ₹9.59 ಲಕ್ಷ ಕೋಟಿಗೆ ಇಳಿಕೆ ಕಂಡಿದೆ ಎಂದು ಸರ್ಕಾರ ತಿಳಿಸಿದೆ.

ಏಪ್ರಿಲ್‌–ಸೆಪ್ಟೆಂಬರ್ ಅವಧಿಯಲ್ಲಿ ಚಿನ್ನದ ಆಮದು ಶೇ 9.8ರಷ್ಟು ಮತ್ತು ತೈಲ ಆಮದು ಶೇ 22.81ರಷ್ಟು ಇಳಿಕೆ ಕಂಡಿದೆ.

ಸೇವೆಗಳ ರಫ್ತು: ಸೇವೆಗಳ ರಫ್ತು ವಹಿವಾಟು 2023ರ ಏಪ್ರಿಲ್‌–ಸೆಪ್ಟೆಂಬರ್ ಅವಧಿಯಲ್ಲಿ ₹13.69 ಲಕ್ಷ ಕೋಟಿಯಷ್ಟು ಆಗಿರುವ ಅಂದಾಜು ಮಾಡಲಾಗಿದೆ. 2022ರ ಇದೇ ಅವಧಿಯಲ್ಲಿ ₹12.94 ಲಕ್ಷ ಕೋಟಿಯಷ್ಟು ಆಗಿತ್ತು ಎಂದು ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT