ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿನ ವರ್ಷದ ದಾಖಲೆ ಮೀರಿಸಲಿದೆ ಹಿಂಗಾರು ಉತ್ಪಾದನೆ: ತೋಮರ್

Last Updated 2 ಜನವರಿ 2021, 12:06 IST
ಅಕ್ಷರ ಗಾತ್ರ

ನವದೆಹಲಿ: ‘2020–21ನೇ ಸಾಲಿನ ಬೆಳೆ ವರ್ಷದಲ್ಲಿ ಹಿಂಗಾರು ಅವಧಿಯಲ್ಲಿ ಆಹಾರಧಾನ್ಯಗಳ ಉತ್ಪಾದನೆಯು ಹಿಂದಿನ ವರ್ಷದ ದಾಖಲೆ ಮಟ್ಟವನ್ನೂ ಮೀರುವ ಅಂದಾಜು ಮಾಡಲಾಗಿದೆ’ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ಹೇಳಿದ್ದಾರೆ.

2019–20ನೇ ಬೆಳೆ ವರ್ಷದಲ್ಲಿ ಹಿಂಗಾರು ಆಹಾರಧಾನ್ಯಗಳ ಉತ್ಪಾದನೆ 15.32 ಕೋಟಿ ಟನ್‌ಗಳಷ್ಟು ಆಗಿತ್ತು. ಹಿಂಗಾರು ಬಿತ್ತನೆಯು ಅಕ್ಟೋಬರ್‌ನಿಂದ ಆರಂಭವಾಗುತ್ತದೆ. ಗೋಧಿ ಮತ್ತು ಸಾಸಿವೆ ಪ್ರಮುಖ ಬೆಳೆಗಳಾಗಿವೆ.

‘ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿಯೂ 2020ರಲ್ಲಿ ಕೃಷಿ ವಲಯವು ಉತ್ತಮ ಬೆಳವಣಿಗೆ ಕಂಡಿದೆ. ಮುಂಗಾರು ಅವಧಿಯಲ್ಲಿ ಆಹಾರಧಾನ್ಯಗಳ ಉತ್ಪಾದನೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ರೈತರು ಹೆಚ್ಚು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ’ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

2020–21ನೇ ಬೇಳೆ ವರ್ಷಕ್ಕೆ ಸರ್ಕಾರವು ಆಹಾರ ಧಾನ್ಯಗಳ ಒಟ್ಟಾರೆ ಉತ್ಪಾದನೆ 30.10 ಕೋಟಿ ಟನ್‌ಗಳಿಗೆ ತಲುಪುವ ಅಂದಾಜು ಮಾಡಿದೆ. ಇದರಲ್ಲಿ 15.16 ಕೋಟಿ ಟನ್‌ಗಳಷ್ಟು ಹಿಂಗಾರು ಅವಧಿಯಿಂದ ಬರುವ ನಿರೀಕ್ಷೆ ಮಾಡಿದೆ. 2019–20ನೇ ಬೆಳೆ ವರ್ಷದಲ್ಲಿ ಸರ್ಕಾರ ಮಾಡಿರುವ ನಾಲ್ಕನೇ ಅಂದಾಜಿನ ಪ್ರಕಾರ ಒಟ್ಟಾರೆ 29.66 ಕೋಟಿ ಟನ್‌ ಉತ್ಪಾದನೆ ಆಗಿದೆ.

‘ರೈತರ ಪರವಾದ ಸರ್ಕಾರದ ನೀತಿಗಳು ಕೃಷಿ ವಲಯವನ್ನು ಬಲಪಡಿಸಲಿವೆ. ಹೊಸ ಸುಧಾರಣೆಗಳು ವಲಯಕ್ಕೆ ಪ್ರಯೋಜನಕಾರಿಯಾಗಲಿವೆ’ ಎಂದು ಅವರು ಹೇಳಿದ್ದಾರೆ.

ಗೋಧಿ ಬಿತ್ತನೆ ಪ್ರದೇಶ ಶೇ 4ರಷ್ಟು ಹೆಚ್ಚಾಗಿದ್ದು 325.35 ಲಕ್ಷ ಹೆಕ್ಟೇರ್‌ಗಳಿಗೆ ತಲುಪಿದೆ. ಬೇಳೆಕಾಳುಗಳ ಬಿತ್ತನೆಯಲ್ಲಿ ಶೇ 5ರಷ್ಟು ಹೆಚ್ಚಾಗಿದ್ದು 154.80 ಲಕ್ಷ ಹೆಕ್ಟೇರ್‌ಗಳಷ್ಟಾಗಿದೆ. ಎಣ್ಣೆಕಾಳುಗಳ ಬಿತ್ತನೆ ಪ್ರದೇಶವು 75.93 ಲಕ್ಷ ಹೆಕ್ಟೇರ್‌ಗಳಿಂದ 80.61 ಲಕ್ಷ ಹೆಕ್ಟೇರ್‌ಗಳಿಗೆ ಏರಿಕೆಯಾಗಿದೆ.

ಭತ್ತ ಬಿತ್ತನೆಯು 15.47 ಲಕ್ಷ ಹೆಕ್ಟೇರ್‌ಗಳಿಂದ 14.83 ಲಕ್ಷ ಹೆಕ್ಟೇರ್‌ಗಳಿಗೆ ಅಲ್ಪ ಇಳಿಕೆ ಕಂಡಿದೆ. ಒರಟುಧಾನ್ಯ ಬಿತ್ತನೆ 49.90 ಲಕ್ಷ ಹೆಕ್ಟೇರ್‌ಗಳಿಂದ 45.12 ಲಕ್ಷ ಹೆಕ್ಟೇರ್‌ಗಳಿಗೆ ಇಳಿಕೆ ಆಗಿದೆ.

ಹಿಂಗಾರು ಬಿತ್ತನೆ
620.71 ಲಕ್ಷ ಹೆಕ್ಟೇರ್‌:
2020–21ನೇ ಬೆಳೆ ವರ್ಷ
603.15 ಲಕ್ಷ ಹೆಕ್ಟೇರ್‌:2019–20ನೇ ಬೆಳೆ ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT