ಶುಕ್ರವಾರ, ಜುಲೈ 1, 2022
23 °C

ಎರಡನೆಯ ಅಲೆಯಿಂದ ರಿಯಲ್ ಎಸ್ಟೇಟ್ ಮೇಲೆ ತೀವ್ರ ಪರಿಣಾಮ: ಕ್ರೆಡಾಯ್ ಸಮೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

ರಿಯಲ್‌ ಎಸ್ಟೇಟ್‌–ಪ್ರಾತಿನಿಧಿಕ ಚಿತ್ರ

ನವದೆಹಲಿ: ಕೋವಿಡ್‌ ಎರಡನೆಯ ಅಲೆಯು ಮೊದಲ ಅಲೆಗಿಂತಲೂ ಹೆಚ್ಚು ಕೆಟ್ಟ ಪರಿಣಾಮವನ್ನು ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಬೀರಿದೆ ಎಂದು ಉದ್ಯಮದ ಶೇಕಡ 90ರಷ್ಟು ಮಂದಿ ಭಾವಿಸಿದ್ದಾರೆ.

ಸ್ಥಳೀಯ ಮಟ್ಟದಲ್ಲಿ ಲಾಕ್‌ಡೌನ್‌ ಜಾರಿಗೆ ಬಂದ ಕಾರಣ ರಿಯಲ್ ಎಸ್ಟೇಟ್ ಯೋಜನೆಗಳು ಪೂರ್ಣಗೊಳ್ಳುವುದು ತಡವಾಗಬಹುದು ಎಂದು ಉದ್ಯಮದ ಶೇಕಡ 95ರಷ್ಟು ಮಂದಿ ಕಳವಳ ವ್ಯಕ್ತಪಡಿಸಿದ್ದಾರೆ. ಕ್ರೆಡಾಯ್ ನಡೆಸಿದ ಸಮೀಕ್ಷೆಯು ಈ ಅಂಶವನ್ನು ಕಂಡುಕೊಂಡಿದೆ.

217 ನಗರಗಳಲ್ಲಿ ನಡೆಸಿದ ಸಮೀಕ್ಷೆಯನ್ನು ಕ್ರೆಡಾಯ್ ಗುರುವಾರ ಬಿಡುಗಡೆ ಮಾಡಿದೆ. ಮೇ 24ರಿಂದ ಜೂನ್‌ 3ರ ನಡುವೆ ಸಮೀಕ್ಷೆ ನಡೆದಿದೆ. ಕಾರ್ಮಿಕರ ಕೊರತೆ, ಹಣಕಾಸಿನ ತೊಂದರೆಗಳು, ಅನುಮತಿ ವಿಳಂಬ ಆಗುವುದು, ನಿರ್ಮಾಣ ವೆಚ್ಚ ಹೆಚ್ಚಾಗುವುದು ಮತ್ತು ಗ್ರಾಹಕರಿಂದ ಬೇಡಿಕೆ ಕುಗ್ಗುವುದು ಪ್ರಮುಖ ಸವಾಲುಗಳು ಎಂದು ಡೆವಲಪರ್‌ಗಳು ಹೇಳಿದ್ದಾರೆ.

‘ಎರಡನೆಯ ಅಲೆಯ ಕಾರಣದಿಂದಾಗಿ ಗ್ರಾಹಕರು ಮನೆ ಖರೀದಿಸುವುದನ್ನು ಮುಂದಕ್ಕೆ ಹಾಕಿದ್ದಾರೆ’ ಎಂದು ಸಮೀಕ್ಷೆ ಹೇಳಿದೆ. ಸಮೀಕ್ಷೆಯ ವರದಿಯನ್ನು ಕ್ರೆಡಾರ್ ಅಧ್ಯಕ್ಷ ಹರ್ಷವರ್ಧನ್ ಪಟೋಡಿಯಾ ಬಿಡುಗಡೆ ಮಾಡಿದರು.

ಶೇಕಡ 92ರಷ್ಟು ಡೆವಲಪರ್‌ಗಳಿಗೆ ಕಾರ್ಮಿಕರ ಕೊರತೆ ಎದುರಾಗಿದೆ, ಶೇ 83ರಷ್ಟು ಬಿಲ್ಡರ್‌ಗಳು ಅರ್ಧಕ್ಕಿಂತ ಕಡಿಮೆ ಪ್ರಮಾಣದ ಕಾರ್ಮಿಕರನ್ನು ನೆಚ್ಚಿಕೊಂಡು ಕೆಲಸ ಮಾಡಿಸುತ್ತಿದ್ದಾರೆ.

ಉಕ್ಕು ಮತ್ತು ಸಿಮೆಂಟ್‌ ಸೇರಿದಂತೆ ನಿರ್ಮಾಣ ಕಾಮಗಾರಿಗಳಲ್ಲಿ ಬಳಸುವ ಸಾಮಗ್ರಿಗಳ ಬೆಲೆಯಲ್ಲಿ ಆಗಿರುವ ಏರಿಕೆಯ ಕಾರಣದಿಂದಾಗಿ ಒಟ್ಟು ವೆಚ್ಚಗಳಲ್ಲಿ ಶೇ 10ಕ್ಕಿಂತ ಹೆಚ್ಚಿನ ಏರಿಕೆ ಆಗಿದೆ ಎಂದು ಶೇ 88ರಷ್ಟು ಡೆವಲಪರ್‌ಗಳು ಹೇಳಿದ್ದಾರೆ.

ರಿಯಲ್ ಎಸ್ಟೇಟ್ ವಲಯಕ್ಕೆ ನೆರವಾಗಲು ಕ್ರೆಡಾಯ್ ಕೆಲವು ಕ್ರಮಗಳನ್ನು ಸೂಚಿಸಿದೆ. ಈ ವಲಯಕ್ಕೆ ಹೆಚ್ಚಿನ ನಗದು ಲಭ್ಯವಾಗುವಂತೆ ಮಾಡುವುದು, ಸಾಲಗಳನ್ನು ಒಂದು ಬಾರಿಗೆ ಮರುಹೊಂದಾಣಿಕೆ ಮಾಡಿಕೊಳ್ಳಲು ಅವಕಾಶ ಕೊಡುವುದು, ಮುದ್ರಾಂಕ ಶುಲ್ಕ ತಗ್ಗಿಸುವುದು ಅಥವಾ ಮನ್ನಾ ಮಾಡುವುದು ಈ ಕ್ರಮಗಳ ಪೈಕಿ ಕೆಲವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು