ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ವೆಚ್ಚ ಹೆಚ್ಚಳಕ್ಕೆ ಸಲಹೆ?

ಆರ್ಥಿಕ ಸಮೀಕ್ಷಾ ವರದಿ: ಇರಲಿವೆ ಹಲವು ಸಲಹೆಗಳು
Last Updated 30 ಜನವರಿ 2022, 18:24 IST
ಅಕ್ಷರ ಗಾತ್ರ

ನವದೆಹಲಿ: ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಲು, ಖಾಸಗಿ ಹೂಡಿಕೆಯನ್ನು ಹೆಚ್ಚು ಆಕರ್ಷಿಸಲು ಹಾಗೂ ಉದ್ಯೋಗ ಸೃಷ್ಟಿಗೆ ಇಂಬು ಕೊಡಲು ಕೇಂದ್ರ ಸರ್ಕಾರವು ಬಂಡವಾಳ ವೆಚ್ಚವನ್ನು ಜಾಸ್ತಿ ಮಾಡಬೇಕು ಎಂಬ ಸಲಹೆಯು ಸೋಮವಾರ ಮಂಡನೆ ಆಗುವ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಇರುವ ಸಾಧ್ಯತೆ ಇದೆ.

ಆರೋಗ್ಯ ಸೇವೆಗಳು ಹಾಗೂ ಶಿಕ್ಷಣದ ಮೇಲೆ ಹೆಚ್ಚು ವೆಚ್ಚ ಮಾಡುವಂತೆಯೂ ಸಮೀಕ್ಷೆಯು ಸರ್ಕಾರಕ್ಕೆ ಸಲಹೆ ನೀಡುವ ಸಾಧ್ಯತೆ ಇದೆ. ಹಿಂದಿನ ಬಜೆಟ್‌ನಲ್ಲಿ ಶಿಕ್ಷಣದ ಮೇಲೆ ₹ 93 ಸಾವಿರ ಕೋಟಿಗಿಂತ ತುಸು ಹೆಚ್ಚು ಹಣ ನಿಗದಿ ಮಾಡಲಾಗಿತ್ತು. ಮಧ್ಯಮ ಆದಾಯದ ವರ್ಗದವರು ಹಾಗೂ ವೇತನ ವರ್ಗದವರ ಮೇಲೆ ಹೆಚ್ಚಿನ ಹೊರೆ ಹಾಕದೆಯೇ, ಕೋವಿಡ್‌ ಲಸಿಕೆ ನೀಡುವ ವೆಚ್ಚಕ್ಕೆ ಹೆಚ್ಚಿನ ವರಮಾನ ಸಂಗ್ರಹಿಸಲು ಕೆಲವು ಸಲಹೆಗಳನ್ನು ಸಮೀಕ್ಷೆಯು ನೀಡುವ ನಿರೀಕ್ಷೆ ಇದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಹಿಂದಿನ ಬಜೆಟ್‌ನಲ್ಲಿ ಅಂದಾಜಿಸಿದ್ದಕ್ಕಿಂತಲೂ ಒಳ್ಳೆಯ ಮಟ್ಟದಲ್ಲಿ ತೆರಿಗೆ ವರಮಾನ ಕೇಂದ್ರಕ್ಕೆ ಬರುತ್ತಿರುವ ಕಾರಣ, ಕುಟುಂಬಗಳಿಗೆ ಕೆಲವು ವಿನಾಯಿತಿಗಳನ್ನು ನೀಡುವ, ಆ ಮೂಲಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುವಂತೆ ಮಾಡಲು ಸಮೀಕ್ಷೆಯು ಸರ್ಕಾರಕ್ಕೆ ಕಿವಿಮಾತು ಹೇಳಬಹುದು. ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವ ಸಾಮರ್ಥ್ಯವಿರುವ ತಯಾರಿಕಾ ವಲಯದ ಕೆಲವು ಉದ್ದಿಮೆಗಳಿಗೆ ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯ ಪ್ರಯೋಜನವನ್ನು ವಿಸ್ತರಿಸುವಂತೆ ಸೂಚಿಸುವ ಸಾಧ್ಯತೆಯೂ ಇದೆ.

ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರರು ಆರ್ಥಿಕ ಸಮೀಕ್ಷೆಯ ವರದಿಯನ್ನು ಸಿದ್ಧಪಡಿಸುತ್ತಾರೆ. ಕೇಂದ್ರ ಸರ್ಕಾರವು ಎರಡು ದಿನಗಳ ಹಿಂದೆ ವಿ. ಅನಂತ ನಾಗೇಶ್ವರನ್ ಅವರನ್ನು ಮುಖ್ಯ ಆರ್ಥಿಕ ಸಲಹೆಗಾರ ಸ್ಥಾನಕ್ಕೆ ನೇಮಕ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT