ಶುಕ್ರವಾರ, ಏಪ್ರಿಲ್ 10, 2020
19 °C
ಆಂಧ್ರದ ಕಡಿಮೆ ಗುಣಮಟ್ಟದ ಭತ್ತ ಬೆಳೆಯುವವರೇ ಹೆಚ್ಚು

ಅಧಿಕ ಇಳುವರಿ ಆಸೆ: ನಕಲಿ ಸೋನಾ ಮಸೂರಿಗೆ ರೈತರ ಒಲವು!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಎರಡು ವರ್ಷಗಳಲ್ಲಿ ಅಸಲಿ ಸೋನಾ ಮಸೂರಿ ಭತ್ತ ಬೆಳೆಯುವ ರೈತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಹೆಚ್ಚು ಇಳುವರಿಯ ಆಸೆಗೆ ಆಂಧ್ರ ಮೂಲದ ಕಡಿಮೆ ಗುಣಮಟ್ಟದ, ಕಲಬೆರಕೆ ಭತ್ತ ಬೆಳೆಯುವವರೇ ಹೆಚ್ಚಾಗಿರುವುದರಿಂದ, ಭತ್ತಕ್ಕೆ ಬೇಡಿಕೆಯೂ ಕಡಿಮೆಯಾಗಿದೆ. ಮೂರೂ ಜಿಲ್ಲೆಗಳಲ್ಲಿ ಸುಮಾರು 6 ಲಕ್ಷ ಎಕರೆಯಲ್ಲಿ ಭತ್ತ ಬೆಳೆಯಲಾಗುತ್ತದೆ.

ಮೂಲ ಸೋನಾ ಭತ್ತ ಪ್ರತಿ ಎಕರೆಗೆ 25ರಿಂದ 30 ಕ್ವಿಂಟಲ್‌ ಇಳುವರಿ ನೀಡಿದರೆ, ಆಂಧ್ರದ ಕಂಟ್ರಿ ಸೋನಾ, ನೆಲ್ಲೂರು ಸೋನಾ ಮತ್ತು ನಂದ್ಯಾಲ ಸೋನಾ 28ರಿಂದ 33 ಕ್ವಿಂಟ್‌ ಇಳುವರಿ ದೊರಕುವುದೇ ಇದಕ್ಕೆ ಕಾರಣ.

ಉತ್ತಮ ಗುಣಮಟ್ಟದ ಸೋನಾ ಮಸೂರಿ ಭತ್ತವೂ ಇದಾಗಿಲ್ಲ. ಹೀಗಾಗಿ ‌ಅಕ್ಕಿಗಿರಣಿ ಮಾಲೀಕರು ಇದಕ್ಕೆ ಹೆಚ್ಚಿನ ಬೆಲೆ ನಿಗದಿ ಮಾಡುವುದಿಲ್ಲ. 

‘ಸದ್ಯ ಅಸಲಿ ಸೋನಾ ಮಸೂರಿ ಭತ್ತದ ಬೆಲೆ ಪ್ರತಿ ಕ್ವಿಂಟಲ್‌ಗೆ ₹1,900 ಇದೆ. ಉಳಿದ ತಳಿಗಳ ಭತ್ತದ ದರಗಳು ₹1,700 ರಿಂದ ಶುರುವಾಗುತ್ತವೆ. ಎರಡು ವರ್ಷಗಳಿಂದ ಈ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ’ ಎಂದು ಜಿಲ್ಲಾ ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್‌.ಜಿ.ಬಸವರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಳ್ಳಾರಿಯ ಅಕ್ಕಿಯನ್ನು ಮೈಸೂರು, ತಮಿಳುನಾಡು, ತುಮಕೂರಿಗೆ ಪ್ರಮುಖವಾಗಿ ಗಿರಣಿ ಮಾಲೀಕರು ಮಾರಾಟ ಮಾಡುತ್ತಾರೆ. ಕೆಲವರಷ್ಟೇ ಚೆನ್ನೈ, ಮುಂಬೈ ಮತ್ತು ದೆಹಲಿಯಲ್ಲಿರುವ ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಾರೆ. ಅಲ್ಲಿಂದ ಅಕ್ಕಿ ರಫ್ತಾಗುತ್ತದೆ. ನಾವು ಯಾರೂ ರಫ್ತುದಾರರೊಂದಿಗೆ ನೇರವಾಗಿ ವ್ಯವಹರಿಸುವುದಿಲ್ಲ’ ಎಂದು ಬಸವರಾಜಪ್ಪ ಹೇಳಿದರು.

ಸಂಘರ್ಷದಿಂದ ಪರಿಣಾಮ ಇಲ್ಲ!
‘ಇರಾನ್‌ ಮತ್ತು ಅಮೆರಿಕ ನಡುವಣ ಸಂಘರ್ಷದಿಂದ ಇರಾನ್‌ಗೆ ನಮ್ಮ ಸೋನಾ ಮಸೂರಿ ರಫ್ತು ಮಾಡಲು ತೊಂದರೆಯಾಗಿದೆ ಎಂಬ ತಪ್ಪು ಅಭಿಪ್ರಾಯಗಳು ಮೂಡಿರುವುದು ವಿಷಾದನೀಯ’ ಎಂದುಬಸವರಾಜಪ್ಪ ಅಭಿಪ್ರಾಯಪಡುತ್ತಾರೆ.

’ಇರಾನ್‌ ಅತ್ಯಧಿಕವಾಗಿ ಬಾಸುಮತಿ ಅಕ್ಕಿಯನ್ನು ಆಮದು ಮಾಡಿಕೊಳ್ಳುವ ದೇಶ. ಸೋನಾ ಮಸೂರಿ ಅಕ್ಕಿಯು ಪ್ರಮುಖವಾಗಿ ದಕ್ಷಿಣ ಆಫ್ರಿಕಾ ಸೇರಿದಂತೆ ಭಾರತೀಯರು ಇರುವ ದೇಶಗಳಿಗೆ ದಿನಸಿ ಸಾಮಗ್ರಿಗಳೊಂದಿಗೆ ರಫ್ತಾಗುತ್ತದೆಯೇ ಹೊರತೂ ಪ್ರತ್ಯೇಕ ಕಂಟೇನರ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ರಫ್ತಾಗುವುದಿಲ್ಲ’ ಎಂದು ಹೇಳಿದ್ದಾರೆ.

*
ಅಸಲಿ ಸೋನಾ ಮಸೂರಿ ಭತ್ತಕ್ಕೆ ಇರುವ ಮಹತ್ವವನ್ನು ರೈತರು ಅರಿಯಬೇಕು. ಕೃಷಿ ಇಲಾಖೆ, ಬೀಜ ನಿಗಮ ಎಚ್ಚೆತ್ತುಕೊಳ್ಳಬೇಕು. -ದರೂರು ಪುರುಷೋತ್ತಮಗೌಡ, ತುಂಗಭದ್ರಾ ಸಂಘ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು