ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಬಿಕ್ಕಟ್ಟು ಸುಖಾಂತ್ಯ

Published 9 ಮೇ 2024, 16:05 IST
Last Updated 9 ಮೇ 2024, 16:05 IST
ಅಕ್ಷರ ಗಾತ್ರ

‌ನವದೆಹಲಿ: ಕ್ಯಾಬಿನ್‌ ಸಿಬ್ಬಂದಿ ಮತ್ತು ಟಾಟಾ ಸಮೂಹಕ್ಕೆ ಸೇರಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಕಂಪನಿಯ ಪ್ರತಿನಿಧಿಗಳ ನಡುವೆ ನಡೆದ ಸಂಧಾನ ಯಶಸ್ವಿಯಾಗಿದ್ದು, ಪ್ರತಿಭಟನೆ ಹಿಂಪಡೆಯಲು ಸಿಬ್ಬಂದಿ ಸಮ್ಮತಿಸಿದ್ದಾರೆ ಎಂದು ಗುರುವಾರ ಮೂಲಗಳು ತಿಳಿಸಿವೆ.

ಆಡಳಿತ ಮಂಡಳಿಯ ಅಸಮರ್ಪಕ ನಿರ್ವಹಣೆ ಖಂಡಿಸಿ 200ಕ್ಕೂ ಹೆಚ್ಚು ಸಿಬ್ಬಂದಿ ಅನಾರೋಗ್ಯದ ರಜೆ ಮೇಲೆ ತೆರಳಿದ್ದರು. ಕಳೆದ ಎರಡು ದಿನಗಳಿಂದ ಕಂಪನಿಯ 170ಕ್ಕೂ ವಿಮಾನಗಳ ಹಾರಾಟ ರದ್ದಾಗಿತ್ತು. ಇದರಿಂದ ಸಾವಿರಾರು ಪ್ರಯಾಣಿಕರು ತೊಂದರೆಗೆ ಸಿಲುಕಿದ್ದರು. 

ಅನಾರೋಗ್ಯದ ರಜೆ ಮೇಲೆ ತೆರಳಿರುವ 25 ಕ್ಯಾಬಿನ್‌ ಸಿಬ್ಬಂದಿ ವಿರುದ್ಧ  ಕಂಪನಿಯು ಕೆಲಸದಿಂದ ವಜಾಗೊಳಿಸುವ ಅಸ್ತ್ರ ಪ್ರಯೋಗಿಸಿತ್ತು. ಅವರಿಗೆ ನೋಟಿಸ್‌ ಕೂಡ ಜಾರಿಗೊಳಿಸಿತ್ತು. ಈ ಸಿಬ್ಬಂದಿಯನ್ನು ಮರಳಿ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳುವುದಾಗಿ ಕಂಪನಿಯು ಒಪ್ಪಿಗೆ ನೀಡಿದೆ. ಹಾಗಾಗಿ, ಮಂಗಳವಾರ ರಾತ್ರಿಯಿಂದ ತಲೆದೋರಿದ್ದ ಬಿಕ್ಕಟ್ಟು ಶಮನಗೊಂಡಿದೆ ಎಂದು ಮೂಲಗಳು ವಿವರಿಸಿವೆ.

ನವದೆಹಲಿಯ ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ (ಕೇಂದ್ರ) ನಡೆದ ಸಂಧಾನ ಸಭೆಯಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಸಂಘ ಹಾಗೂ ಕಂಪನಿಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸತತ ಐದು ಗಂಟೆಗಳ ಕಾಲ ನಡೆದ ಸಭೆಯು ಅಂತಿಮವಾಗಿ ಸುಖಾಂತ್ಯಗೊಂಡಿದೆ.

ದೈಹಿಕ ಕ್ಷಮತೆ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ರಜೆಯ ಮೇಲೆ ತೆರಳಿರುವ ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗಲು ಸೂಚಿಸಲಾಗಿದೆ.

ನೌಕರರ ಸಂಘವು ಭಾರತೀಯ ಮಜ್ದೂರ್‌ ಸಂಘದೊಂದಿಗೆ (ಬಿಎಂಎಸ್‌) ಸಂಯೋಜನೆಗೊಂಡಿದೆ. 

ಸಭೆಯ ಬಳಿಕ ಮಾತನಾಡಿದ ಬಿಎಂಎಸ್‌ ಅಧ್ಯಕ್ಷ ಗಿರೀಶ್‌ ಚಂದ್ರ ಆರ್ಯ, ‘ವಜಾಗೊಳಿಸಿದ್ದ ನೌಕರರನ್ನು ಮರಳಿ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳಲು ಕಂಪನಿಯು ಒಪ್ಪಿದೆ. ಎರಡು ಕಡೆಯವರು ಮೇ 28ರಂದು ನಡೆಯುವ ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಒಟ್ಟು 1,400ಕ್ಕೂ ಹೆಚ್ಚು ಕ್ಯಾಬಿನ್‌ ಸಿಬ್ಬಂದಿ ಇದ್ದಾರೆ. ಈ ಪೈಕಿ 500ಕ್ಕೂ ಹೆಚ್ಚು ಹಿರಿಯ ಕ್ಯಾಬಿನ್‌ ಸಿಬ್ಬಂದಿ ಇದ್ದಾರೆ.  

85 ವಿಮಾನ ಹಾರಾಟ ರದ್ದು

ಕ್ಯಾಬಿನ್ ಸಿಬ್ಬಂದಿಯ ಕೊರತೆಯಿಂದಾಗಿ ಎರಡನೇ ದಿನವಾದ ಗುರುವಾರ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ 85 ವಿಮಾನಗಳ ಹಾರಾಟ ರದ್ದಾಗಿತ್ತು. ದೈನಂದಿನ ಹಾರಾಟದ ಶೇ 23ರಷ್ಟು ವಿಮಾನ ಸೇವೆಗೆ ಅಡ್ಡಿಯಾಗಿತ್ತು. ಹಾಗಾಗಿ ಪ್ರಯಾಣಿಕರಿಗೆ ಎದುರಾಗಿರುವ ಅನನುಕೂಲ ತಪ್ಪಿಸಲು ಕಂಪನಿಯು ರದ್ದುಪಡಿಸಿರುವ 20 ಮಾರ್ಗಗಳಲ್ಲಿ ಏರ್‌ ಇಂಡಿಯಾ ಕಂಪನಿಗೆ ಸೇರಿದ ವಿಮಾನಗಳು ಕಾರ್ಯಾಚರಣೆ ನಡೆಸಿದವು.

‘ಪ್ರಯಾಣಿಕರು ನಿಲ್ದಾಣಕ್ಕೆ ಬರುವ ಮೊದಲು ವಿಮಾನ ಸೇವೆ ಲಭ್ಯವಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ವಿಮಾನ ರದ್ದು ಅಥವಾ ವಿಳಂಬವು ಮೂರು ಗಂಟೆ ಕಾಲ ಮೀರಿದರೆ ಟಿಕೆಟ್‌ ಖರೀದಿಸಿದ ಹಣವನ್ನು ಮರುಪಾವತಿಸಲಾಗುವುದು ಅಥವಾ ಶುಲ್ಕರಹಿತವಾಗಿ ಮತ್ತೆ ನಿಗದಿತ ಸ್ಥಳಕ್ಕೆ ಪ್ರಯಾಣಿಸಲು ಬೇರೆ ದಿನದಂದು ವಿಮಾನ ಸೇವೆ ಒದಗಿಸಲಾಗುವುದು’ ಎಂದು ಕಂಪನಿಯು ಹೇಳಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT