ಗುರುವಾರ , ಸೆಪ್ಟೆಂಬರ್ 19, 2019
29 °C
ಭಾರತದ ಮಾರುಕಟ್ಟೆಯಲ್ಲಿ ಇದೇ 27 ರಿಂದ ಖರೀದಿಗೆ ಲಭ್ಯ

ಐಫೋನ್‌ 11 ಸರಣಿ ಬಿಡುಗಡೆ

Published:
Updated:
Prajavani

ಕ್ಯುಪರ್ಟಿನೊ/ನವದೆಹಲಿ : ಸ್ಮಾರ್ಟ್‌ಫೋನ್‌ ದಿಗ್ಗಜ ಕಂಪನಿ ಆ್ಯಪಲ್‌, ಐಫೋನ್‌ 11 ಸರಣಿಯ ಹ್ಯಾಂಡ್‌ಸೆಟ್‌ಗಳನ್ನು ಬಿಡುಗಡೆ ಮಾಡಿದ್ದು, ಖರೀದಿಗೆ ಲಭ್ಯವಾಗಲಿವೆ.

ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿ ಇರುವ ಪ್ರಧಾನ ಕಚೇರಿಯಲ್ಲಿ ಸಿಇಒ ಟಿಮ್‌ ಕುಕ್‌ ಅವರು ಐಫೋನ್‌ 11, ಐಫೋನ್‌ 11 ಪ್ರೊ ಮತ್ತು ಐಫೋನ್‌ 11 ಪ್ರೊ ಮ್ಯಾಕ್ಸ್‌ ಬಿಡುಗಡೆ ಮಾಡಿದ್ದಾರೆ.

ಡ್ಯುಯಲ್‌ ಕ್ಯಾಮೆರಾ: ವೃತ್ತಿಪರರೂ ಬಳಸಬಹುದಾದ ಕ್ಯಾಮೆರಾ ಒಳಗೊಂಡಿದ್ದು, ಲ್ಯಾಂಡ್‌ಸ್ಕೇಪ್‌, ಟ್ರಾವೆಲ್‌, ಗ್ರೂಪ್‌, ಲಾರ್ಜ್‌ ಇಂಟೀರಿಯರ್‌ ಚಿತ್ರಗಳನ್ನು ಸೆರೆಹಿಡಿಯಲು ಉತ್ತಮವಾಗಿದೆ. ವೈಡ್‌–ಟು ಅಲ್ಟ್ರಾ ವೈಡ್‌ ಫೋಟೊ ತೆಗೆಯುವ ಆಯ್ಕೆ ಇದೆ. ಫೋಟೊದ ರೀತಿಯಲ್ಲಿಯೇ ವಿಡಿಯೊ ಸಹ ಎಡಿಟ್‌ ಮಾಡುವ ಆಯ್ಕೆ ಇದೆ. ಮಂದಬೆಳಕಿನಲ್ಲಿಯೂ ಉತ್ತಮ ಚಿತ್ರ ಸೆರೆಹಿಡಿಯಲು ನೈಟ್‌ ಮೋಡ್‌ ಇದೆ.

ಐಪಾಡ್‌: ಕಂಪನಿಯು ಏಳನೇ ಪೀಳಿಗೆಯ ಐಪಾಡ್‌ ಪರಿಚಯಿಸಿದೆ. ಇದು ಸ್ಮಾರ್ಟ್‌ ಕೀಬೋರ್ಡ್‌ ಒಳಗೊಂಡಿದ್ದು, ಭಾರತದಲ್ಲಿ ಆರಂಭಿಕ ಬೆಲೆ ₹ 29,900ಕ್ಕೆ ಲಭ್ಯವಾಗಲಿದೆ. ಇದೇ ತಿಂಗಳ 30ರಿಂದ ಖರೀದಿಗೆ ಲಭ್ಯವಾಗಲಿದೆ.

ಆ್ಯಪಲ್‌ ವಾಚ್‌: ಐದನೇ ಸರಣಿಯ ಆ್ಯಪಲ್‌ ವಾಚ್‌ ಬಿಡುಗಡೆ ಮಾಡಿದೆ. ಆಲ್‌ವೇಸ್‌ ಆನ್‌ ರೆಟಿನಾ ಡಿಸ್‌ಪ್ಲೇ ಹೊಂದಿದೆ. ಇದರಿಂದಾಗಿ ಸಮಯ ಮತ್ತು ಇನ್ನಿತರೆ ಅಗತ್ಯ ಮಾಹಿತಿಗಳನ್ನು ನೋಡಲು ಪದೇ ಪದೇ ಡಿಸ್‌ಪ್ಲೇ ಮುಟ್ಟುವ ಅಗತ್ಯ ಇಲ್ಲ. ಜಿಪಿಎಸ್‌ ಇರುವ ವಾಚ್‌  ಬೆಲೆ ₹ 40,900 ಮತ್ತು ಜಿಪಿಎಸ್‌ ಪ್ಲಸ್‌ ಸೆಲ್ಯುಲರ್‌ ಇರುವ ವಾಚ್‌ ಬೆಲೆ ₹ 49,900 ರಿಂದ ಆರಂಭವಾಗಲಿದೆ.  ಮೂರನೇ ಪೀಳಿಗೆಯ ಆ್ಯಪಲ್‌ ವಾಚ್‌ನ ಬೆಲೆ ₹ 20,900 ಮತ್ತು ₹ 29,900 ಇದೆ.

ಆ್ಯಪಲ್‌ ಟಿವಿ ಪ್ಲಸ್‌

ಸದ್ಯಕ್ಕೆ, ಐಫೋನ್‌ನಿಂದಲೇ ಕಂಪನಿಗೆ ಹೆಚ್ಚಿನ ವರಮಾನ ಬರುತ್ತಿದೆ. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚುತ್ತಿರುವುದರಿಂದ ಮಾರಾಟ ಇಳಿಮುಖವಾಗಿದೆ. ಹೀಗಾಗಿ ಕಂಪನಿಯು ಐಫೋನ್‌ ಮೇಲಿನ ಅವಲಂಬನೆ ತಗ್ಗಿಸಲು ನಿರ್ಧರಿಸಿದೆ. ಇದರ ಭಾಗವಾಗಿ, ವಿಡಿಯೊ ಆಫರಿಂಗ್‌ ಮತ್ತು ಆ್ಯಪಲ್‌ ಟಿವಿ ಪ್ಲಸ್‌ಗೆ ಹೆಚ್ಚಿನ ಗಮನ ಹರಿಸಲಿದೆ.

ನವೆಂಬರ್‌ 1 ರಂದು ನೂರಕ್ಕೂ ಹೆಚ್ಚಿನ ನಗರಗಳಲ್ಲಿ ಆ್ಯಪಲ್‌ ಟಿವಿ ಪ್ಲಸ್‌ ಸೇವೆಗಳನ್ನು ಬಿಡುಗಡೆ ಮಾಡಲಿದೆ.

ನೆಟ್‌ಫ್ಲಿಕ್‌ ಮತ್ತು ಅಮೆಜಾನ್‌ ರೀತಿಯಲ್ಲಿಯೇ  ಮನರಂಜನಾ ಕಾರ್ಯಕ್ರಮಗಳು ಮತ್ತು ಮಕ್ಕಳ ಕಾರ್ಯಕ್ರಮಗಳನ್ನು ಒದಗಿಸಲಿದೆ.

 ಆ್ಯಪಲ್‌ನ ಯಾವುದೇ ಉತ್ಪನ್ನ ಖರೀದಿಸಿದರೆ ಮೊದಲ ವರ್ಷ ಟಿವಿ ಪ್ಲಸ್‌ನ ಸೇವೆಯು ಸಂಪೂರ್ಣವಾಗಿ ಉಚಿತವಾಗಿರಲಿದೆ. ತಿಂಗಳಿಗೆ ₹ 99 ಪಾವತಿಸಿದರೆ ಆ್ಯಪಲ್‌ ಟಿವಿ ಆ್ಯಪ್‌ನಲ್ಲಿ ಆ್ಯಪಲ್‌ ಟಿವಿ ಪ್ಲಸ್‌ ಲಭ್ಯವಾಗಲಿದೆ

Post Comments (+)