ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಲಿವೆ ಬಯೋಮೆಟ್ರಿಕ್ ಎಟಿಎಂ

Last Updated 19 ಜೂನ್ 2018, 16:31 IST
ಅಕ್ಷರ ಗಾತ್ರ

ಮೊಬೈಲ್ ಫೋನ್ ಮೂಲಕ ಪಾವತಿ ಸೇವೆಯನ್ನು ನೀಡುತ್ತಿರುವ ಮನಿಆನ್‌ ಮೊಬೈಲ್‌ ಕಂಪನಿಬಯೋಮೆಟ್ರಿಕ್ ಮೂಲಕ ಎಟಿಎಂನಲ್ಲಿ ಹಣ ಪಡೆಯುವ ಸೇವೆ ನೀಡಲು ಮುಂದಾಗಿದೆ.

ಇನ್ನು ಮುಂದೆ ಬಳಕೆದಾರರು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಮಾಡದೇ ಬಯೊ ಮೆಟ್ರಿಕ್ (ಬೆರಳಚ್ಚು) ಮೂಲಕ ಎಟಿಎಂಗಳಲ್ಲಿ ಹಣ ಪಡೆಯಬಹುದಾಗಿದೆ. ಇದಕ್ಕೆ ಬಳಕೆದಾರರು ಆಧಾರ್ ಕಾರ್ಡ್ಅನ್ನು ಕಡ್ಡಾಯವಾಗಿ ಹೊಂದಿರಬೇಕು. ಹಾಗೇ ಬ್ಯಾಂಕುಗಳಲ್ಲೂ ಕೂಡ ಯಾವುದೇ ದಾಖಲೆ (ಚೆಕ್, ಡಿಡಿ) ಇಲ್ಲದೆ ಹಣವನ್ನು ಡ್ರಾ ಮಾಡಿಕೊಳ್ಳಬಹುದು.

ದೇಶದಾದ್ಯಂತ ಮೂರು ಸಾವಿರ ಬಯೊ ಮೆಟ್ರಿಕ್ ಎಟಿಎಂ ಕೇಂದ್ರಗಳನ್ನು ತೆರೆಯಲು ಮನಿಆನ್‌ಮೊಬೈಲ್‌ ಕಂಪನಿ ಸಿದ್ಧತೆ ಮಾಡಿಕೊಂಡಿದೆ. ದೇಶದ ಮುಖ್ಯ ಬ್ಯಾಂಕ್‌ಗಳಲ್ಲೂ ಬಯೊ ಮೆಟ್ರಿಕ್ ಮೂಲಕ ಹಣ ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಪ್ರಿಯೊನ್ ಜಾಲದಲ್ಲಿ ಸಣ್ಣ ಮಾರಾಟಗಾರರು

ಕಟಮಾರನ್ ವೆಂಚರ್ಸ್ ಮತ್ತು ಅಮೆಜಾನ್ ಸಂಸ್ಥೆಗಳ ಜಂಟಿ ಸಹಭಾಗಿತ್ವದ ಪ್ರಿಯೊನ್ ಬಿಸಿನೆಸ್ ಸರ್ವಿಸಸ್ ಲಿಮಿಟೆಡ್ ಆನ್‍ಲೈನ್ ಮಾರುಕಟ್ಟೆ ತಾಣದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ದೇಶದ 150ಕ್ಕೂ ಹೆಚ್ಚು ಪಟ್ಟಣಗಳ 60,000 ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳನ್ನು ತಲುಪಿದೆ

ಇ ವಾಣಿಜ್ಯ ಅನುಭವ ಹೊಂದಿರುವ ಪ್ರಿಯೊನ್, ಆನ್‍ಲೈನ್ ವಹಿವಾಟುಗಳನ್ನು ಭಾರಿ ಬಂಡವಾಳವಿಲ್ಲದೇ ತ್ವರಿತವಾಗಿ ಮತ್ತು ಸುಲಲಿತವಾಗಿ ನಡೆಸಲು ಎಸ್‍ಎಂಬಿಗಳಿಗೆ ನೆರವಾಗುತ್ತದೆ.

ಆನ್‍ಲೈನ್‍ನಲ್ಲಿ ತಮ್ಮ ವಹಿವಾಟನ್ನು ವೃದ್ಧಿಸಿಕೊಳ್ಳಲು ಎಸ್‍ಎಂಬಿಗಳಿಗೆ ಪ್ರಿಯೊನ್ ವಿಶೇಷ ಕಾರ್ಯಾಗಾರ ಮತ್ತು ತರಬೇತಿಗಳನ್ನೂ ನಡೆಸುತ್ತದೆ. ಇ ವಾಣಿಜ್ಯ ತಾಣಗಳಿಗೆ ಸೂಕ್ತವಾದ ಉತ್ಪನ್ನಗಳನ್ನು ಗುರುತಿಸಲೂ ಅದು ನೆರವಾಗುತ್ತದೆ. ಉತ್ಪನ್ನ ಸ್ವರೂಪಗಳನ್ನು ಡಿಜಿಟಲೀಕರಣಗೊಳಿಸಲು, ವಿಶ್ವದರ್ಜೆಯ ಸೇವೆಗಳನ್ನು ವಿಸ್ತರಿಸಲು ಮತ್ತು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಸಹಾಯ ಮಾಡುತ್ತದೆ.

‘ಡಿಜಿಟಲ್ ಪಾವತಿ, ಹೈಪರ್ ಲೋಕಲ್ ಲಾಜಿಸ್ಟಿಕ್ಸ್, ವಿಶ್ಲೇಷಣೆ ಆಧಾರಿತ ಗ್ರಾಹಕ ಸಂಪರ್ಕ ಮತ್ತು ಡಿಜಿಟಲ್ ಜಾಹೀರಾತಿನಂತಹ ತಂತ್ರಜ್ಞಾನ ಆಧಾರಿತ ವಿಧಾನಗಳಿಂದಾಗಿ ಭಾರತದಲ್ಲಿ ಇ ವಾಣಿಜ್ಯ ಉದ್ಯಮ ಅತಿವೇಗವಾಗಿ ಬೆಳೆಯುತ್ತಿದೆ.

ಎಸ್‍ಎಂಬಿ ಸಮುದಾಯಕ್ಕೆ ಅತ್ಯುತ್ತಮ ಅನುಭವ ಕಟ್ಟಿಕೊಡಲು ನಾವು ಪ್ರಯತ್ನಿಸುತ್ತಿದ್ದೇವೆ. ಪ್ರಗತಿಯ ಮತ್ತು ವಿಸ್ತರಣೆಯ ಹೊಸ ಅವಕಾಶಗಳನ್ನು ಆನ್‍ಲೈನ್ ಮಾರುಕಟ್ಟೆ ತಾಣಗಳಲ್ಲಿ ಸೃಷ್ಟಿಸುತ್ತಿದ್ದೇವೆ.

ದೇಶದಲ್ಲಿ 5 ಕೋಟಿಗೂ ಹೆಚ್ಚು ಎಸ್‍ಎಂಬಿಗಳಿದ್ದು, ವಿನೂತನ ಉತ್ಪನ್ನಗಳನ್ನು ತಯಾರಿಸುವಂತೆ ಅವರಿಗೆ ನೆರವಾಗುವ ಮೂಲಕ ಭಾರತದಾದ್ಯಂತ ಅವು ತಲುಪುವಂತೆ ಮಾಡಲಾಗುತ್ತಿದೆ’ ಎಂದು ಪ್ರಿಯೊನ್‍ನ ಸಿಇಒ ಸಂದೀಪ್ ವಾರಗಂಟಿ ಹೇಳುತ್ತಾರೆ.

ವಿನೂತನ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಪ್ರಿಯೊನ್ ತಮ್ಮ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಿಕೊಂಡಿದೆ. ಕರಕುಶಲ ಸ್ಟೇಷನರಿ ವಸ್ತುಗಳಿಂದ ಸೋಪಿನವರೆಗೆ, ಹಾಲಿನಿಂದ ತುಪ್ಪದವರೆಗೆ ಮುಂಬೈ, ಲೂಧಿಯಾನದ ಮಾರಾಟಗಾರರು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಮಾರಾಟಗಾರರು ಸುಸ್ಥಿರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಪ್ರತಿ ತಿಂಗಳೂ 3000ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರುತ್ತಿದ್ದಾರೆ.

ಆಧಾರ್ ಮಾಹಿತಿ ಸೋರಿಕೆ:ಆತಂಕ

ಫೇಸ್‌ಬುಕ್‌ನಲ್ಲಿನ ವೈಯಕ್ತಿಕ ಖಾತೆಗಳ ದತ್ತಾಂಶ ಸೋರಿಕೆಯಾದ ಬೆನ್ನಲೇ, ಇದೀಗ ಆಧಾರ್ ಮಾಹಿತಿ ಸೋರಿಕೆ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಸರ್ಕಾರ ಕೂಡಲೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಒತ್ತಾಯ ಹೆಚ್ಚಿದೆ.

ಇತ್ತೀಚೆಗೆ ರಾಷ್ಟ್ರೀಯ ಅಧ್ಯಯನ ಮತ್ತು ಮಾರುಕಟ್ಟೆ ಸಂಶೋಧನೆ ಹಾಗೂ ವಿಶ್ಲೇಷಣಾ ಸಂಸ್ಥೆ ನಡೆಸಿದ ಅಧ್ಯಯನದಿಂದ ಈ ಸಂಗತಿ ಬೆಳಕಿಗೆ ಬಂದಿದೆ. 10 ರಲ್ಲಿ 8 ಜನರು ಆಧಾರ್ ಮಾಹಿತಿ ಸೋರಿಕೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಈ ಸಂಸ್ಥೆ ತನ್ನ ಅಧ್ಯಯನ ವರದಿಯಲ್ಲಿ ತಿಳಿಸಿದೆ.

ಈ ಅಧ್ಯಯನಕ್ಕಾಗಿ ದೇಶದಾದ್ಯಂತ 5,800 ಜನರನ್ನು ಸಂದರ್ಶನಕ್ಕೆ ಒಳಪಡಿಸಲಾಗಿತ್ತು. ಇವರಲ್ಲಿ ಶೇ 80 ಜನರು ಆಧಾರ್ ಸೋರಿಕೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಡಿಜಿಟಲ್ ವೇದಿಕೆಯಲ್ಲಿ ಯಾವುದನ್ನೂ ನಂಬಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಸರ್ಕಾರ ಆಧಾರ್ ಮಾಹಿತಿ ಸೋರಿಕೆಯಾಗುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂದರ್ಶಕರು ಅಭಿಪ್ರಾಯಪಟ್ಟಿದರು ಎಂದು ರಾಷ್ಟ್ರೀಯ ಅಧ್ಯಯನ ಮತ್ತು ಮಾರುಕಟ್ಟೆ ಸಂಶೋಧನೆ ಹಾಗೂ ವಿಶ್ಲೇಷಣ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT