ನವದೆಹಲಿ: ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಸಿಲಿಂಡರ್ ದರವನ್ನು ₹48.5 ಏರಿಕೆ ಮಾಡಲಾಗಿದೆ. ಸದ್ಯ ಸಿಲಿಂಡರ್ ಬೆಲೆ ₹1,740 ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ದರ ಏರಿಕೆ ಹಾಗೂ ವಿದೇಶಿ ವಿನಿಮಯ ದರಕ್ಕೆ ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು, ಪ್ರತಿ ಮಾಸಿಕವು ದರ ಪರಿಷ್ಕರಣೆ ಮಾಡುತ್ತವೆ.
ಸತತ ಮೂರನೇ ತಿಂಗಳು ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ. ತೈಲ ಕಂಪನಿಗಳು ಆಗಸ್ಟ್‌ನಲ್ಲಿ ₹6.5 ಹಾಗೂ ಸೆಪ್ಟೆಂಬರ್‌ನಲ್ಲಿ ₹39 ದರ ಏರಿಕೆ ಮಾಡಿದ್ದವು. ಆಗಸ್ಟ್‌ಗೂ ಹಿಂದಿನ ನಾಲ್ಕು ತಿಂಗಳಿನಲ್ಲಿ ₹148 ದರ ಕಡಿತವಾಗಿತ್ತು. ಈಗ ಮೂರು ತಿಂಗಳಿನಲ್ಲಿ ₹94 ಹೆಚ್ಚಳವಾಗಿದೆ.
ಸದ್ಯ ವಾಣಿಜ್ಯ ಸಿಲಿಂಡರ್ ದರವು ಮುಂಬೈನಲ್ಲಿ ₹1,692.50, ಕೋಲ್ಕತ್ತದಲ್ಲಿ ₹1,850.50 ಹಾಗೂ ಚೆನ್ನೈನಲ್ಲಿ ₹1,903 ಆಗಿದೆ. ಗೃಹ ಬಳಕೆಯ 14.2 ಕೆ.ಜಿ ಸಿಲಿಂಡರ್ ಬೆಲೆಯು ₹803 ಆಗಿದ್ದು, ಇದರ ಬೆಲೆ ಪರಿಷ್ಕರಿಸಿಲ್ಲ.
ಎಟಿಎಫ್ ದರ ಇಳಿಕೆ:
ವಿಮಾನ ಇಂಧನ (ಎಟಿಎಫ್) ದರವನ್ನು ಶೇ 6.3ರಷ್ಟು ಇಳಿಕೆ ಮಾಡಲಾಗಿದೆ.
ಒಟ್ಟಾರೆ ಕಿಲೋ ಲೀಟರ್‌ಗೆ ₹5,883 ಇಳಿಕೆ ಮಾಡಲಾಗಿದೆ (ಒಂದು ಕಿಲೋ ಲೀಟರ್ ಎಂದರೆ ಒಂದು ಸಾವಿರ ಲೀಟರ್). ದೆಹಲಿಯಲ್ಲಿ ಪ್ರತಿ ಕಿಲೋ ಲೀಟರ್ ದರವು ₹87,597ಕ್ಕೆ ಇಳಿಕೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಇದು ಅತಿ ಕಡಿಮೆ ಬೆಲೆಯಾಗಿದೆ.
ಸೆಪ್ಟೆಂಬರ್‌ನಲ್ಲಿ ಎಟಿಎಫ್ ಬೆಲೆಯಲ್ಲಿ ಶೇ 4.58ರಷ್ಟು ಕಡಿತಗೊಳಿಸಲಾಗಿತ್ತು. ವಿಮಾನಗಳ ಕಾರ್ಯಾಚರಣೆಯಲ್ಲಿ ಶೇ 40ರಷ್ಟು ಹಣವು ಇಂಧನ ಖರೀದಿಗೆ ವ್ಯಯವಾಗುತ್ತದೆ. ಹಾಗಾಗಿ, ಬೆಲೆ ಕಡಿತಗೊಳಿಸಿರುವುದು ವಿಮಾನಯಾನ ಕಂಪನಿಗಳ ಆದಾಯ ಹೆಚ್ಚಳಕ್ಕೆ ನೆರವಾಗಲಿದೆ.