ಮಂಗಳವಾರ, ಸೆಪ್ಟೆಂಬರ್ 17, 2019
25 °C

ವೆಚ್ಚ ಹೆಚ್ಚಳ: ಬ್ಯಾಂಕ್‌ಗಳ ಎಟಿಎಂ ಸಂಖ್ಯೆ ಇಳಿಕೆ

Published:
Updated:
Prajavani

ಬೆಂಗಳೂರು: ದೇಶದಲ್ಲಿ ಎಟಿಎಂಗಳ ಬಳಕೆಯಲ್ಲಿ ಹೆಚ್ಚಳವಾಗಿದ್ದರೂ, ಸತತ ಎರಡನೆ ವರ್ಷವೂ ಅವುಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ.

ಹಿಂದಿನ ಎರಡು ಹಣಕಾಸು ವರ್ಷಗಳಲ್ಲಿ ಎಟಿಎಂಗಳ ಸಂಖ್ಯೆ ಶೇ 3ರಷ್ಟು ಕಡಿಮೆಯಾಗಿದೆ. 2017–18ರಲ್ಲಿ ಶೇ 1 ಮತ್ತು 2018–19ರಲ್ಲಿ ಶೇ 2.3ರಷ್ಟು ಕಡಿಮೆಯಾಗಿವೆ. 2019ರ ಮಾರ್ಚ್‌ ಅಂತ್ಯಕ್ಕೆ ಎಟಿಎಂಗಳ ಸಂಖ್ಯೆ 2.02 ಲಕ್ಷದಷ್ಟಿತ್ತು.  2018ರ ಮಾರ್ಚ್‌ ಅಂತ್ಯಕ್ಕೆ ಇವುಗಳ ಸಂಖ್ಯೆ 2.07 ಲಕ್ಷದಷ್ಟಿತ್ತು.

ಈ ವರ್ಷದ ಮಾರ್ಚ್‌ನಲ್ಲಿ ಎಟಿಎಂಗಳಿಂದ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ ಮೂಲಕ ನಗದು ಪಡೆಯುವುದೂ ಸೇರಿದಂತೆ ವಿವಿಧ ಬಗೆಯ 89.23 ಕೋಟಿ ವಹಿವಾಟು ದಾಖಲಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 77.57 ಕೋಟಿ ವಹಿವಾಟು ನಡೆದಿದ್ದವು. ಇತ್ತೀಚಿನ ದಿನಗಳಲ್ಲಿ ಎಟಿಎಂಗಳ ಬಳಕೆ ಪ್ರಮಾಣ ಶೇ 15ರಷ್ಟು ಏರಿಕೆಯಾಗಿದೆ.

ಮೊತ್ತದ ರೂಪದಲ್ಲಿಯೂ ಎಟಿಎಂಗಳ ವಹಿವಾಟು ಆರೋಗ್ಯಕರ ಬೆಳವಣಿಗೆ ದಾಖಲಿಸಿದೆ. ಈ ವರ್ಷದ ಮಾರ್ಚ್‌ ವೇಳೆಗೆ ವಿವಿಧ ಬ್ಯಾಂಕ್‌ಗಳ ಎಟಿಎಂಗಳಲ್ಲಿ 2.89 ಲಕ್ಷ ಕೋಟಿ ಮೊತ್ತದ ವಹಿವಾಟು ನಡೆದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ 8.5ರಷ್ಟು ಏರಿಕೆ ಕಂಡಿದೆ.

 6,158 ಎಟಿಎಂಗಳು ಎರಡು ವರ್ಷಗಳಲ್ಲಿ ಅಸ್ತಿತ್ವ ಕಳೆದುಕೊಂಡಿವೆ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಎಟಿಎಂಗಳು ಬಾಗಿಲು ಹಾಕಿರುವ ಸಂಖ್ಯೆ ಹೆಚ್ಚಿದೆ. ನಿರ್ವಹಣಾ ವೆಚ್ಚ ಹೆಚ್ಚಳಗೊಂಡಿರುವುದರಿಂದ ಬ್ಯಾಂಕ್‌ಗಳು ಹೆಚ್ಚೆಚ್ಚು ಎಟಿಎಂಗಳ ಬಾಗಿಲು ಹಾಕಲು ಮುಂದಾಗಿವೆ.

Post Comments (+)