ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಶ್ಚಿತತೆ ಮೆಟ್ಟಿ ನಿಲ್ಲುವುದು ಹೇಗೆ?

Last Updated 24 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ನಿಮ್ಮ ಬಳಿ ಈಗ ₹ 10 ಸಾವಿರ ಇದೆ. ಅದನ್ನು ನಿಶ್ಚಿತ ಠೇವಣಿಯಲ್ಲಿ ಶೇ 6 ರ ಬಡ್ಡಿಯಲ್ಲಿ ಇರಿಸಿದರೆ 12 ವರ್ಷಗಳ ನಂತರ ಆ ಹಣ ₹ 20 ಸಾವಿರ ಆಗುತ್ತದೆ. ಇದೇ ₹ 10 ಸಾವಿರ ದುಡ್ಡನ್ನು ನೀವು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿದರೆ ಐದು ವರ್ಷಗಳಲ್ಲೇ ₹ 20 ಸಾವಿರದಷ್ಟು ಹಣ ನಿಮ್ಮದಾಗುತ್ತದೆ. ಅರೆ, ಇದೇನು ಇಷ್ಟು ಖಚಿತವಾಗಿ ಹೇಳುತ್ತಿದ್ದೀರಲ್ಲಾ ಎಂದು ನೀವು ಕೇಳಬಹುದು. ಆದರೆ, ಇದು ವಾಸ್ತವ. ಷೇರು ಮಾರುಕಟ್ಟೆ ಆರಂಭವಾದಾಗಿನಿಂದ ಇಲ್ಲಿಯವರೆಗಿನ ಅಂಕಿ- ಅಂಶಗಳನ್ನು ನೋಡಿದಾಗ ಸರಾಸರಿ ಶೇ 15 ರಷ್ಟು ಲಾಭಾಂಶ ಸಿಕ್ಕಿರುವುದು ಸ್ಪಷ್ಟವಾಗುತ್ತದೆ.

ಈಗ ಒಂದು ಲೀಟರ್ ಹಾಲಿನ ಬೆಲೆ ₹ 36 ಇದೆ. ಐದು ವರ್ಷಗಳ ಬಳಿಕ ಲೀಟರ್ ಹಾಲಿನ ಬೆಲೆ ₹ 50 ಆಗಬಹುದು. ನೀವು ಕೂಡಿಟ್ಟ ಹಣದ ಲೆಕ್ಕಾಚಾರವೂ ಹೀಗೇ ಇರುತ್ತದೆ. ಹೂಡಿಕೆ ಮಾಡಿದ ಹಣವು ಬೆಲೆ ಏರಿಕೆಯನ್ನು ಮೀರಿ ಮೌಲ್ಯ ಹೆಚ್ಚಿಸಿಕೊಳ್ಳದಿದ್ದರೆ ಕೊಳ್ಳುವ ಸಾಮರ್ಥ್ಯ ವೃದ್ಧಿಸುವುದಿಲ್ಲ. ಆಗ ಅಸಲಿಗೆ ಹೂಡಿಕೆಯಿಂದ ನಿಮಗೆ ಏನೂ ದಕ್ಕಿರುವುದೇ ಇಲ್ಲ. ಷೇರುಪೇಟೆ ಸೂಚ್ಯಂಕ ನಿಫ್ಟಿಯು ಕಳೆದ 22 ವರ್ಷಗಳಲ್ಲಿ 16 ವರ್ಷ ವರ್ಷಗಳ ಕಾಲ ಸಕಾರಾತ್ಮಕ ಫಲಿತಾಂಶ ನೀಡಿದ್ದರೆ, 7 ವರ್ಷಗಳ ಕಾಲ ನಕಾರಾತ್ಮಕ ಫಲಿತಾಂಶ ಕೊಟ್ಟಿದೆ. ಇದನ್ನು ಪರಿಗಣಿಸಿ ನೋಡಿದಾಗ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಹಣದುಬ್ಬರದ ಪರಿಸ್ಥಿತಿಯನ್ನು ಮೀರಿ ಮೌಲ್ಯ ಹೆಚ್ಚಿಸಿಕೊಂಡು ಹೂಡಿಕೆದಾರರಿಗೆ ಲಾಭ ನೀಡಿರುವುದು ಸ್ಪಷ್ಟವಾಗುತ್ತದೆ.

ಖ್ಯಾತ ಹೂಡಿಕೆ ತಜ್ಞ ವಾರನ್ ಬಫೆಟ್ ಹೇಳುತ್ತಾರೆ, ‘ಬದುಕಿನಲ್ಲಿ ನೀವೇನು ಮಾಡುತ್ತಿದ್ದೀರಿ ಎಂಬುದು ನಿಮಗೆ ಗೊತ್ತಿಲ್ಲದಿದ್ದರೆ ಮಾತ್ರವೇ ರಿಸ್ಕ್ (ಅಪಾಯ) ಎದುರಾಗುತ್ತದೆ’ ಅಂತ. ಷೇರುಪೇಟೆಯ ವಿಚಾರದಲ್ಲಿ ಸದಾ ಒಪ್ಪುವ ಮಾತು ಇದು. ಷೇರುಗಳಲ್ಲಿ ತೊಡಗಿಸುವಾಗ ಅರಿತು ಹೂಡಿಕೆ ಮಾಡಬೇಕೇ ವಿನಾ ಅನುಕರಣೆ ಮಾಡಬಾರದು. ಮಾರುಕಟ್ಟೆಯ ಆಳ ಅಗಲ ನಿಮಗೆ ತಿಳಿದಿದ್ದರೆ ಪರಿಸ್ಥಿತಿಗೆ ಅನುಗುಣವಾಗಿ ಹೂಡಿಕೆ ನಿರ್ಧಾರಗಳನ್ನು ಮಾಡಬೇಕು. ಆದರೆ, ವ್ಯವಹಾರ ಗೊತ್ತಿಲ್ಲದೆ ನೇರವಾಗಿ ಯಾವುದಾದರೂ ಒಂದು ಕಂಪನಿಯ ಷೇರುಗಳನ್ನು ಖರೀದಿ ಮಾಡಲು ಹೋದರೆ ನಿಮ್ಮ ಹೂಡಿಕೆಗೆ ಅಪಾಯ ಹೆಚ್ಚು.

ಪೇಟೆಯಲ್ಲಿ ನೇರ ಹೂಡಿಕೆ ಬಗ್ಗೆ ನನಗೆ ಅರಿವಿಲ್ಲ ಎನ್ನುವವರು ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸಬಹುದು. ಇಲ್ಲಿ ಹೂಡಿಕೆ ವೈವಿಧ್ಯಮವಾಗಿರುವ ಜತೆಗೆ ರಿಸ್ಕ್ ಕಡಿಮೆ ಇರುತ್ತದೆ. ಮ್ಯೂಚುವಲ್ ಫಂಡ್‌ನ ಲಾರ್ಜ್, ಮಿಡ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳಲ್ಲಿ ಹಣ ತೊಡಗಿಸಲು ಅವಕಾಶವಿರುತ್ತದೆ. ಅಗತ್ಯಾನುಸಾರ ಎರಡು ಮೂರು ವರ್ಷಗಳಿಂದ ಹಿಡಿದು ಹತ್ತರಿಂದ ಹದಿನೈದು ವರ್ಷಗಳವರೆಗೆ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ಹಾಕಬಹುದು.

ಏರಿಳಿತದ ಮಧ್ಯೆ ಅಲ್ಪ ಗಳಿಕೆ: 9 ದಿನಗಳ ಇಳಿಮುಖ ವಹಿವಾಟು ಕಂಡಿದ್ದ ಷೇರುಪೇಟೆ ವಾರಾಂತ್ಯಕ್ಕೆ ಸಣ್ಣ ಮಟ್ಟದ ಚೇತರಿಕೆ ಕಂಡುಕೊಂಡಿದೆ. ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಶೇ 0.2 ರಷ್ಟು (35,871) ಗಳಿಕೆ ಕಂಡರೆ, ನಿಫ್ಟಿ ಶೇ 0.6 ರಷ್ಟು (10,792) ಪ್ರಗತಿ ಸಾಧಿಸಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಮಿಶ್ರ ವಹಿವಾಟು, ಬಡ್ಡಿದರ ಏರಿಕೆ ವಿಚಾರದಲ್ಲಿ ಅಮೆರಿಕದ ಕೇಂದ್ರಿಯ ಬ್ಯಾಂಕ್‌ನ ತಾಳ್ಮೆಯ ವರ್ತನೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಕೇಂದ್ರದಿಂದ ₹ 48,239 ಕೋಟಿ ಪುನರ್ಧನ ಘೋಷಣೆ, ತೈಲ ಬೆಲೆ ಏರಿಳಿತ, ರೂಪಾಯಿ ಮೌಲ್ಯ, ಪ್ರಗತಿ ದರ ನಿಧಾನಗತಿಯಲ್ಲಿ ಇರಲಿದೆ ಎಂಬ ಆರ್‌ಬಿಐ ಮುನ್ಸೂಚನೆ ಸೇರಿ ಹಲವು ಸಂಗತಿಗಳು ಮಾರುಕಟ್ಟೆಯ ವಹಿವಾಟಿನ ಮೇಲೆ ಪ್ರಭಾವ ಬೀರಿವೆ. ಮುಂದಿನ ಕೆಲ ದಿನಗಳಲ್ಲೂ ಷೇರುಪೇಟೆಯಲ್ಲಿ ತ್ವರಿತ ಏರಿಳಿತ ನಿರೀಕ್ಷಿಸಬಹುದಾಗಿದೆ.

ವಾರದ ಇಳಿಕೆ- ಏರಿಕೆ: ಬಜಾಜ್ ಆಟೊ, ಎಚ್‌ಡಿಎಫ್‌ಸಿ ಬ್ಯಾಂಕ್, ಹೀರೊ ಮೋಟೊ ಕಾರ್ಪ್, ಇನ್ಫೊಸಿಸ್, ರಿಲಯನ್ಸ್ ಇಂಡಸ್ಟ್ರೀಸ್ ನಂತಹ ಪ್ರಮುಖ ಕಂಪನಿಗಳು ವಾರದ ಅವಧಿಯಲ್ಲಿ ಶೇ 0.32 ರಿಂದ ಶೇ 0.97 ರಷ್ಟು ಕುಸಿತ ಕಂಡಿವೆ. ವೇದಾಂತ, ಒಎನ್‌ಜಿಸಿ, ಇಂಡಿಯನ್ ಆಯಿಲ್, ಟಾಟಾ ಮೋಟರ್ಸ್, ಟಾಟಾ ಸ್ಟೀಲ್ ಮತ್ತು ಗ್ರಾಸಿಮ್ ಇಂಡಸ್ಟ್ರೀಸ್ ಕಂಪನಿಗಳು ಶೇ 7.35 ರಿಂದ ಶೇ 15.17 ರಷ್ಟು ಪ್ರಗತಿ ಕಂಡಿವೆ.

ಪ್ರಮುಖ ಬೆಳವಣಿಗೆ: ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಷೇರುಗಳು ಶೇ 5 ರಷ್ಟು ಕುಸಿತ ಕಂಡು 3 ವಾರಗಳ ಕನಿಷ್ಠ ಮಟ್ಟಕ್ಕೆ ಇಳಿದಿವೆ. ಐಎನ್‌ಜಿ ಗ್ರೂಪ್ ಹೊಂದಿರುವ ಶೇ 1.21 ರಷ್ಟು ಪಾಲುದಾರಿಕೆಯನ್ನು ಮಾರಾಟ ಮಾಡುತ್ತಿರುವುದಾಗಿ ಸುದ್ದಿ ಹೊರಬಿದ್ದ ಪರಿಣಾಮ ಕೋಟಕ್ ಮಹೀಂದ್ರಾದ ಪ್ರತಿ ಷೇರಿನ ಬೆಲೆ ₹ 1,225ಕ್ಕೆ ಕುಸಿದಿದೆ. ತೈಲ ಕಂಪನಿಗಳು ಕಳೆದ ವಾರ ಆರೋಗ್ಯಕರ ವಹಿವಾಟು ನಡೆಸಿವೆ. ಐಒಸಿ, ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್ ಕಂಪನಿಗಳು ಶೇ 5 ರಿಂದ 10 ರಷ್ಟು ಪ್ರಗತಿ ಸಾಧಿಸಿವೆ.

ಷೇರು ಮರು ಖರೀದಿ: ಟೆಕ್ ಮಹೀಂದ್ರಾ ₹ 1,956 ಕೋಟಿ ಮೌಲ್ಯದ ಷೇರುಗಳ ಮರು ಖರೀದಿ ನಿರ್ಧಾರ ಪ್ರಕಟಿಸಿದೆ. ಪ್ರತಿ ಷೇರಿನ ಮರು ಖರೀದಿಗೆ ಕಂಪನಿ ₹ 950 ನಿಗದಿ ಮಾಡಿದೆ.ಮುಂದುವರಿಯಲಿದೆ ಏರಿಳಿತದ ಹಾದಿ ಈ ವಾರ ಸಾಕಷ್ಟು ಚಟುವಟಿಕೆಗಳಿಂದ ಕೂಡಿರುವುದರಿಂದ ಏರಿಳಿತದ ಹಾದಿ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಬಡ ರೈತರ ಬ್ಯಾಂಕ್ ಅಕೌಂಟ್‌ಗೆ ಮೊದಲ ಕಂತಿನಲ್ಲಿ ₹ 2 ಸಾವಿರ ಸಂದಾಯವಾಗಲಿದೆ. ಡಿಸೆಂಬರ್ ತಿಂಗಳ ವಿತ್ತೀಯ ಕೊರತೆ ಮತ್ತು ಮೂರನೇ ತ್ರೈಮಾಸಿಕದ ಜಿಡಿಪಿ ದರ ಪ್ರಕಟಗೊಳ್ಳಲಿದೆ. ಜಿಎಸ್‌ಟಿ ಮಂಡಳಿ ಸಭೆಯ ನಿರ್ಣಯಗಳು ಪರಿಣಾಮ ಬೀರಲಿವೆ. ಇದೇ 26 ರಂದು ಸುಪ್ರೀಂ ಕೋರ್ಟ್‌ನಲ್ಲಿ ಅಯೋಧ್ಯೆ ಪ್ರಕರಣದ ವಿಚಾರಣೆ ಇದೆ. ಈ ಎಲ್ಲಾ ವಿದ್ಯಮಾನಗಳು ಷೇರುಪೇಟೆಯ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

(ಲೇಖಕ: ಇಂಡಿಯನ್‌ಮನಿ ಡಾಟ್‌ಕಾಂ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT