ಭಾನುವಾರ, ಆಗಸ್ಟ್ 9, 2020
22 °C

ವಿಮಾನ ಹಾರಾಟ: ಬೆಳಗಾವಿಗೆ 2ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ವಿಮಾನಗಳ ಹಾರಾಟ ಹಾಗೂ ಪ್ರಯಾಣಿಸಿದವರ ಸಂಖ್ಯೆಯಲ್ಲಿ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣ ಜೂನ್ ತಿಂಗಳಲ್ಲಿ ರಾಜ್ಯದಲ್ಲಿ 2ನೇ ಸ್ಥಾನ ಗಳಿಸಿದೆ.

ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಮೊದಲ ಸ್ಥಾನದಲ್ಲಿದೆ. ಬೆಳಗಾವಿಯು ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು ಹಿಂದಿಕ್ಕಿದೆ. ಈ ಪ್ರಕಾರ ಬೆಳಗಾವಿಯಿಂದ 391 ವಿಮಾನಗಳು ಹಾರಾಡಿದ್ದು, 10,224 ಜನ ಪ್ರಯಾಣಿಸಿದ್ದಾರೆ.

ಕೋವಿಡ್‌ ಲಾಕ್‌ಡೌನ್‌ ನಿರ್ಬಂಧದಿಂದ ವಿನಾಯಿತಿ ಸಿಕ್ಕ ನಂತರ ಅಂದರೆ ಮೇ 25ರ ಬಳಿಕ ಇಲ್ಲಿಂದ ವಿಮಾನ ಹಾರಾಟ ಪುನರಾರಂಭ ಮಾಡಲಾಗಿದೆ. ಅಂದಿನಿಂದ ಜುಲೈ 31ರವರೆಗೆ 855 ವಿಮಾನಗಳು ಹಾರಾಟ ನಡೆಸಿದ್ದು, 25,300 ಮಂದಿ ಪ್ರಯಾಣಿಸಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿಮಾನನಿಲ್ದಾಣದ ನಿರ್ದೇಶಕ ರಾಜೇಶ್‌ಕುಮಾರ್‌ ಮೌರ್ಯ, ‘ರಾಜ್ಯದ ಇತರ ವಿಮಾನನಿಲ್ದಾಣಗಳೊಂದಿಗೆ ಹೋಲಿಕೆಗೆ ಬಯಸುವುದಿಲ್ಲ. ಆದರೆ, ಲಾಕ್‌ಡೌನ್‌ನಿಂದ ವಿನಾಯಿತಿ ಸಿಕ್ಕ ಬಳಿಕ ಬೆಳಗಾವಿ ನಿಲ್ದಾಣವು ವಿಮಾನಗಳ ಹಾರಾಟ ಹಾಗೂ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ’ ಎಂದು ಹೇಳಿದರು.

‘ಕೊರೊನಾ ಸೋಂಕಿನ ಭೀತಿ ಇರುವುದರಿಂದಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಇಲ್ಲಿಂದ ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್‌, ಇಂದೋರ್, ಮೈಸೂರು ಹಾಗೂ ಅಹಮದಾಬಾದ್‌ಗೆ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಸರಾಸರಿ 33 ಮಂದಿ ಪ್ರಯಾಣಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಗರಗಳಿಗೆ ಸೇವೆ ವಿಸ್ತರಣೆಯಾಗುವ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದರು.

ವಿಮಾನ ಹಾರಾಟದ ಪಟ್ಟಿ (ಜೂನ್ ತಿಂಗಳಲ್ಲಿ)

‌ನಿಲ್ದಾಣ; ವಿಮಾನಗಳು; ಪ್ರಯಾಣಿಕರು

ಬೆಂಗಳೂರು;4,421;3,80,406

ಬೆಳಗಾವಿ;391;10,224

ಮಂಗಳೂರು;198;8,608

ಕಲಬುರ್ಗಿ;120;3,606

ಮೈಸೂರು;330;3,158

ಹುಬ್ಬಳ್ಳಿ;14;55

(ಆಧಾರ: ಬೆಳಗಾವಿ ವಿಮಾನ ನಿಲ್ದಾಣದ‌ ಟ್ವಿಟರ್ ಖಾತೆ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು