ನವದೆಹಲಿ: ಲೋಕಸಭೆಯಲ್ಲಿ ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಮಸೂದೆ–2024 ಮಂಡಿಸಿದ್ದಾರೆ.
ಠೇವಣಿದಾರರು ಬ್ಯಾಂಕ್ ಖಾತೆಗೆ ನಾಲ್ವರನ್ನು ನಾಮಿನಿಯಾಗಿ ಸೇರ್ಪಡೆಗೊಳಿಸುವುದು ಸೇರಿ ಬ್ಯಾಂಕಿಂಗ್ ನಿಯಮಾವಳಿಗಳಲ್ಲಿ ಹಲವು ಬದಲಾವಣೆಗೆ ಈ ಮಸೂದೆಯು ಅವಕಾಶ ಕಲ್ಪಿಸಲಿದೆ.
ಪ್ರಸ್ತುತ ಬ್ಯಾಂಕ್ ಖಾತೆಗೆ ಒಬ್ಬರನ್ನು ನಾಮಿನಿ ಮಾಡಲು ಅವಕಾಶವಿದೆ. ಏಕಕಾಲದಲ್ಲಿ ನಾಲ್ವರನ್ನು ವಾರಸುದಾರರನ್ನಾಗಿ ಮಾಡಲು ಮಸೂದೆಯು ಅವಕಾಶ ನೀಡಿದೆ. ಠೇವಣಿದಾರರು ಮತ್ತು ಹೂಡಿಕೆದಾರರ ಹಿತ ಕಾಪಾಡಲು ಸರ್ಕಾರವು ಈ ಕ್ರಮಕೈಗೊಂಡಿದೆ ಎಂದು ಹೇಳಲಾಗಿದೆ.
ಬ್ಯಾಂಕ್‌ನಲ್ಲಿರುವ ಠೇವಣಿ, ಚಿನ್ನಾಭರಣ, ದಾಖಲೆ ಪತ್ರಗಳು ಹಾಗೂ ಲಾಕರ್‌ಗಳಿಗೆ ಕಾನೂನಿನಡಿ ಠೇವಣಿದಾರರು ತಮ್ಮ ಉತ್ತರಾಧಿಕಾರಿಗಳ ನೇಮಕಕ್ಕೆ ಅವಕಾಶ ಒದಗಿಸಲಿದೆ.
ವಾರಸುದಾರರಿಲ್ಲದ ಲಾಭಾಂಶ, ಷೇರು, ಬಡ್ಡಿ ಅಥವಾ ಬಾಂಡ್‌ಗಳನ್ನು ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿಗೆ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ. ಅರ್ಹ ವಾರಸುದಾರರಿದ್ದರೆ ಈ ನಿಧಿಯ ಮೂಲಕ ಹಣ ವಾಪಸ್ ಪಡೆಯುವ ಅಥವಾ ರೀಫಂಡ್ ಪಡೆಯುವುದಕ್ಕೆ ಮಸೂದೆಯು ಅವಕಾಶ ನೀಡಿದೆ.