ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಪಿಸಿಎಲ್‌ ಖಾಸಗೀಕರಣ: ಗಡುವು ಮತ್ತೆ ವಿಸ್ತರಣೆ

Last Updated 1 ಅಕ್ಟೋಬರ್ 2020, 18:24 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಎರಡನೆಯ ಅತಿದೊಡ್ಡ ತೈಲ ಕಂಪನಿ ‘ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್’ನ (ಬಿಪಿಸಿಎಲ್‌) ಖರೀದಿಗೆ ಬಿಡ್ ಸಲ್ಲಿಸಲು ಇದ್ದ ಗಡುವನ್ನು ಕೇಂದ್ರ ಸರ್ಕಾರವು ನಾಲ್ಕನೆಯ ಬಾರಿಗೆ ವಿಸ್ತರಣೆ ಮಾಡಿದೆ.

ಹೊಸ ಗಡುವಿನ ಅನ್ವಯ, ಬಿಡ್ ಸಲ್ಲಿಸಲು ನವೆಂಬರ್ 16ರವರೆಗೆ ಅವಕಾಶ ಇದೆ. ಬಿಪಿಸಿಎಲ್‌ನಲ್ಲಿ ಕೇಂದ್ರ ಸರ್ಕಾರವು ಶೇಕಡ 52.98ರಷ್ಟು ಷೇರುಗಳನ್ನು ಹೊಂದಿದೆ. ಅಷ್ಟೂ ಷೇರುಗಳ ಮಾರಾಟಕ್ಕೆ ಕೇಂದ್ರ ಸಚಿವ ಸಂಪುಟವು ಹಿಂದಿನ ವರ್ಷದ ನವೆಂಬರ್‌ನಲ್ಲಿ ಅನುಮೋದನೆ ನೀಡಿತ್ತು. ಈ ಷೇರುಗಳನ್ನು ಖರೀದಿಸುವ ಆಸಕ್ತಿ ಹೊಂದಿದವರಿಂದ ಬಿಡ್ ಸಲ್ಲಿಸಲು ಮಾರ್ಚ್‌ 7ರ ನಂತರ ಅವಕಾಶ ಕಲ್ಪಿಸಲಾಯಿತು.

ಬಿಡ್ ಸಲ್ಲಿಸುವ ಕೊನೆಯ ದಿನವು ಮೇ 2 ಎಂದು ನಿಗದಿಯಾಗಿತ್ತು. ನಂತರ, ಅದನ್ನು ಜೂನ್‌ 13ರವರೆಗೆ ವಿಸ್ತರಿಸಲಾಯಿತು. ಅದಾದ ನಂತರ, ಜುಲೈ 31ರವರೆಗೆ ಹಾಗೂ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಲಾಯಿತು.

‘ಬಿಡ್ ಸಲ್ಲಿಸಲು ಆಸಕ್ತಿ ಇರುವವರಿಂದ ಮನವಿಗಳು ಬಂದಿರುವ ಕಾರಣ, ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಗಡುವನ್ನು ನವೆಂಬರ್ 16ರವರೆಗೆ ವಿಸ್ತರಿಸಲಾಗುತ್ತಿದೆ’ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಪ್ರಕಟಣೆ ತಿಳಿಸಿದೆ.

ಬಿಪಿಸಿಎಲ್‌ನ ಮಾರುಕಟ್ಟೆ ಬಂಡವಾಳದ ಮೊತ್ತ ₹ 78,300 ಕೋಟಿ. ಕಂಪನಿಯಲ್ಲಿ ಸರ್ಕಾರದ ಪಾಲಿನ ಮೊತ್ತವು ₹ 41,436 ಕೋಟಿಗಿಂತಲೂ ಹೆಚ್ಚು. ಸರ್ಕಾರದ ಬಳಿ ಇರುವ ಬಿಪಿಸಿಎಲ್‌ ಷೇರುಗಳನ್ನು ಖರೀದಿಸಲು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಅವಕಾಶ ನೀಡಿಲ್ಲ. ಭಾರತದ ತೈಲ ಮಾರುಕಟ್ಟೆಯಲ್ಲಿ ಬಿಪಿಸಿಎಲ್‌ನ ಪಾಲು ಸರಿಸುಮಾರು ನಾಲ್ಕನೆಯ ಒಂದರಷ್ಟು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT