ಮುಂಬೈ: ಬ್ಯಾಂಕ್‌ಗೆ ಬಾಕಿ ಹಣ ಪಾವತಿಸಿ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡುವ ನೆಪದಲ್ಲಿ ಮುಂಬೈ ಉದ್ಯಮಿಯೊಬ್ಬರಿಗೆ ₹23 ಕೋಟಿ ವಂಚಿಸಿದ ಆರೋಪದಡಿ ಮೂವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣದ ದೂರುದಾರ ಉದ್ಯಮಿ ಮನೋಹರ್ ಗೋವಿಂದ್ ಸಕ್‌ಪಾಲ್ (58) ಸಾರಿಗೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, 117 ಬಸ್‌ಗಳನ್ನು ಹೊಂದಿದ್ದಾರೆ.
ಉದ್ಯಮಿ ತನ್ನ ಬಸ್‌ಗಳನ್ನು ಮಾರಾಟ ಮಾಡುವ, ಬ್ಯಾಂಕ್ ಬಾಕಿಗಳನ್ನು ಪಾವತಿಸುವ ಮತ್ತು ಬ್ಯಾಂಕ್‌ನಿಂದ ಎನ್‌ಒಸಿ ಪಡೆಯುವ ಕೆಲಸವನ್ನು ವೈಭವ್ ರವೀಂದ್ರ ಕುಮಾರ್ ಶರ್ಮಾ, ಜಿತೇಂದ್ರ ಗುಲ್ಲು ಥಡಾನಿ ಮತ್ತು ಸುನಿಲ್ ಗುಲ್ಲು ಥಡಾನಿ ಅವರಿಗೆ ವಹಿಸಿದ್ದರು ಎಂದು ದಹಿಸರ್ ಪೊಲೀಸ್ ಠಾಣಾ ಅಧಿಕಾರಿ ತಿಳಿಸಿದ್ದಾರೆ.
ಕೆಲಸ ಮಾಡಲು ಉದ್ಯಮಿಯಿಂದ ₹23 ಕೋಟಿ ತೆಗೆದುಕೊಂಡಿದ್ದಾರೆ. ಆದರೆ ಕೆಲಸವನ್ನು ಪೂರ್ಣಗೊಳಿಸದೆ, ಉದ್ಯಮಿಗೆ ಸರಿಯಾಗಿ ಪ್ರತಿಕ್ರಿಯೆಯನ್ನು ನೀಡಲಿಲ್ಲ ಎಂದು ಅವರು ಹೇಳಿದರು.
ನಂತರ, ಉದ್ಯಮಿ ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗವನ್ನು (ಇಒಡಬ್ಲ್ಯು) ಸಂಪರ್ಕಿಸಿ ದೂರು ದಾಖಲಿಸಿದರು.
ದೂರಿನ ಆಧಾರದ ಮೇಲೆ ಮೂವರ ವಿರುದ್ಧ ವಂಚನೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ದಹಿಸರ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.
ಇಒಡಬ್ಲ್ಯು ತನಿಖೆಯನ್ನು ಪ್ರಾರಂಭಿಸಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದರು.