ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಂಪುಟ ಒಪ್ಪಿಗೆ

Published 7 ಜೂನ್ 2023, 14:09 IST
Last Updated 7 ಜೂನ್ 2023, 14:09 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭತ್ತದ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) 2023–24ನೇ ಬೆಳೆ ವರ್ಷಕ್ಕೆ (ಜುಲೈ–ಜೂನ್‌) ಪ್ರತಿ ಕ್ವಿಂಟಲ್‌ಗೆ ₹143ರಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ಭತ್ತದ ಎಂಎಸ್‌ಪಿ ಪ್ರತಿ ಕ್ವಿಂಟಲ್‌ಗೆ ₹2,183ಕ್ಕೆ ತಲುಪಿದೆ.

ಈ ಏರಿಕೆಯು ಒಂದು ದಶಕದ ಅವಧಿಯಲ್ಲಿ ಆಗಿರುವ ಎರಡನೆಯ ಅತಿಹೆಚ್ಚಿನ ಏರಿಕೆ. ಈ ಹಿಂದೆ 2018–19ರಲ್ಲಿ ಕ್ವಿಂಟಲ್‌ಗೆ ಎಂಎಸ್‌ಪಿಯನ್ನು ₹200ರಷ್ಟು ಹೆಚ್ಚಿಸಲಾಗಿತ್ತು.

ರೈತರು ಭತ್ತವನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವಂತೆ ಉತ್ತೇಜನ ನೀಡಲು ಮತ್ತು ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.

2023–24ನೇ ಮುಂಗಾರು ಬೆಳೆಗಳಿಗೆ ಎಂಎಸ್‌ಪಿಯನ್ನು ಶೇ 5.3ರಿಂದ ಶೇ 10.35ರವರೆಗೆ ಹೆಚ್ಚಿಸಲಾಗಿದೆ. ಬೆಲೆಯ ಲೆಕ್ಕದಲ್ಲಿ ಕ್ವಿಂಟಲ್‌ಗೆ ₹128ರಿಂದ ₹805ರವರೆಗೆ ಏರಿಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯು ಎಂಎಸ್‌ಪಿ ಹೆಚ್ಚಿಸಲು ಒಪ್ಪಿಗೆ ನೀಡಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

‘ಕೇಂದ್ರ ಸರ್ಕಾರದ ಬೆಲೆ ಸಲಹಾ ಸಂಸ್ಥೆಯಾಗಿರುವ ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ (ಸಿಎಸಿಪಿ) ಶಿಫಾರಸುಗಳನ್ನು ಆಧರಿಸಿ ಕಾಲಕಾಲಕ್ಕೆ ಎಂಎಸ್‌ಪಿ ನಿಗದಿಪಡಿಸಲಾಗುತ್ತಿದೆ. ಈ ಬಾರಿಯ ಮುಂಗಾರು ಬೆಳೆಗೆ ನಿಗದಿಪಡಿಸಿರುವ ಎಂಎಸ್‌ಪಿಯು ಕಳೆದ ವರ್ಷಕ್ಕೆ ಹೋಲಿಸಿದರೆ ಗರಿಷ್ಠ ಮಟ್ಟದ್ದಾಗಿದೆ’ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪೀಯೂಷ್‌ ಗೋಯಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಚಿಲ್ಲರೆ ಹಣದುಬ್ಬರ ಪ್ರಮಾಣ ಇಳಿಮುಖ ಆಗಿರುವ ಸಂದರ್ಭದಲ್ಲಿ ಎಂಎಸ್‌ಪಿ ಹೆಚ್ಚಿಸಿರುವುದರಿಂದ ರೈತರಿಗೆ ಅನುಕೂಲ ಆಗಲಿದೆ. ಎ ಗ್ರೇಡ್‌ನ ಭತ್ತದ ಎಂಎಸ್‌ಪಿ ಪ್ರತಿ ಕ್ವಿಂಟಲ್‌ಗೆ ₹2,060ರಿಂದ ₹2,203ಕ್ಕೆ ಏರಿಕೆ ಆಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೆಸರುಕಾಳಿನ ಎಂಎಸ್‌ಪಿಯನ್ನು 2023–24ನೇ ಬೆಳೆ ವರ್ಷಕ್ಕೆ ಗರಿಷ್ಠ ಶೇ 10.4ರಷ್ಟು ಹೆಚ್ಚಿಸಲಾಗಿದೆ. ಇದರಿಂದ ಪ್ರತಿ ಕ್ವಿಂಟಲ್‌ ಎಂಎಸ್‌ಪಿ ₹8,558ಕ್ಕೆ ತಲುಪಿದೆ. ಕಳೆದ ಬಾರಿ ಇದು ಕ್ವಿಂಟಲ್‌ಗೆ ₹7,755 ಇತ್ತು.

ಜೋಳ (ಹೈಬ್ರಿಡ್‌) ಮತ್ತು ಮಾಲಂದಡೆ ಜೋಳದ ಎಂಎಸ್‌ಪಿಯನ್ನು ಕ್ರಮವಾಗಿ ಶೇ 7 ಮತ್ತು ಶೇ 7.85ರಷ್ಟು ಹೆಚ್ಚಿಸಲಾಗಿದೆ. ಮೆಕ್ಕೆ ಜೋಳದ ಮೇಲಿನ ಎಂಎಸ್‌ಪಿ ಶೇ 6.5ರಷ್ಟು ಏರಿಕೆ ಮಾಡಲಾಗಿದ್ದು, ಕ್ವಿಂಟಲ್‌ಗೆ ₹2,090ಕ್ಕೆ ತಲುಪಿದೆ. ರಾಗಿ ಮೇಲಿನ ಎಂಎಸ್‌ಪಿ ಶೇ 7.49ರಷ್ಟು ಹೆಚ್ಚಾಗಿ ₹3,846ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT