ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 3 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ಗೆ ಸಿಐಐ ಆಗ್ರಹ

Last Updated 17 ಜೂನ್ 2021, 20:20 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಅರ್ಥ ವ್ಯವಸ್ಥೆಗೆ ₹ 3 ಲಕ್ಷ ಕೋಟಿ ಮೌಲ್ಯದ ಉತ್ತೇಜನಾ ಪ್ಯಾಕೇಜ್‌ನ ಅವಶ್ಯಕತೆ ಇದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಸಿಐಐ) ಹೇಳಿದೆ. ಜನಧನ ಖಾತೆ ಹೊಂದಿರುವವರಿಗೆ ಹಣಕಾಸಿನ ನೆರವನ್ನು ನೇರವಾಗಿ ವರ್ಗಾವಣೆ ಮಾಡುವುದು ಕೂಡ ಈ ಮೊತ್ತದಲ್ಲಿ ಸೇರಿದೆ ಎಂದು ಅದು ಹೇಳಿದೆ.

ಹಾಲಿ ಆರ್ಥಿಕ ವರ್ಷದಲ್ಲಿ ದೇಶದ ಅರ್ಥ ವ್ಯವಸ್ಥೆಯು ಶೇಕಡ 9.5ರಷ್ಟು ಬೆಳವಣಿಗೆ ಕಾಣಲಿದೆ ಎಂದು ಸಿಐಐ ಅಧ್ಯಕ್ಷ ಟಿ.ವಿ. ನರೇಂದ್ರನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದ ಅರ್ಥ ವ್ಯವಸ್ಥೆಯು ಗ್ರಾಹಕರ ಖರೀದಿ ಸಾಮರ್ಥ್ಯವನ್ನು ನೆಚ್ಚಿಕೊಂಡಿದೆ. ಸಾಂಕ್ರಾಮಿಕವು ಗ್ರಾಹಕರ ಖರೀದಿ ಸಾಮರ್ಥ್ಯದ ಮೇಲೆ ಪರಿಣಾಮ ಉಂಟುಮಾಡಿದೆ. ಇದನ್ನು ಸರಿಪಡಿಸಲು ನೇರ ನಗದು ವರ್ಗಾವಣೆಯಂತಹ ಕ್ರಮಗಳ ಅಗತ್ಯವಿದೆ ಎಂದು ಅವರು ಸುದ್ದಿಗಾರರ ಬಳಿ ಹೇಳಿದರು.

ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ದಿಮೆಗಳು ಸೇರಿದಂತೆ ಎಲ್ಲ ವರ್ಗಗಳಿಗೆ ಸೇರಿದ ಕಂಪನಿಗಳಿಗೆ ಬರಬೇಕಿರುವ ಹಣವು ಸಕಾಲದಲ್ಲಿ ಪಾವತಿ ಆಗಬೇಕು, ಮೂಲಸೌಕರ್ಯಕ್ಕೆ ಸಂಬಂಧಿಸಿದ ಕಾಮಗಾರಿಗಳು ವೇಗ ಪಡೆದುಕೊಳ್ಳಬೇಕು, ತುರ್ತು ಸಾಲ ಖಾತರಿ ಯೋಜನೆಯ ಮೊತ್ತವನ್ನು ₹ 5 ಲಕ್ಷ ಕೋಟಿಗೆ ಹೆಚ್ಚಿಸಬೇಕು, ತೈಲೋತ್ಪನ್ನಗಳ ಮೇಲಿನ ಎಕ್ಸೈಸ್ ಸುಂಕವನ್ನು ತಗ್ಗಿಸಬೇಕು, ತೈಲೋತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂದು ನರೇಂದ್ರನ್ ಅವರು ಒತ್ತಾಯಿಸಿದರು.

ಈ ವರ್ಷದ ಡಿಸೆಂಬರ್‌ಗೆ ಮೊದಲು ದೇಶದ ವಯಸ್ಕರಿಗೆಲ್ಲ ಕೋವಿಡ್ ಲಸಿಕೆ ಕೊಡಿಸಬೇಕು ಎಂದಾದರೆ ಪ್ರತಿದಿನ 71.2 ಲಕ್ಷ ಡೋಸ್ ಲಸಿಕೆ ನೀಡಬೇಕಾಗುತ್ತದೆ ಎಂದು ಅವರು ಅಂದಾಜಿಸಿದರು.

ಕೋವಿಡ್‌ನ ಮೊದಲ ಹಾಗೂ ಎರಡನೆಯ ಅಲೆಯು ಜನರ ಆದಾಯ ಮತ್ತು ಕುಟುಂಬಗಳ ವೈದ್ಯಕೀಯ ವೆಚ್ಚಗಳ ಮೇಲೆ ಮಾಡಿರುವ ಪರಿಣಾಮವು ಮಾರುಕಟ್ಟೆಯಲ್ಲಿನ ಬೇಡಿಕೆಯ ಮೇಲೆ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ ಎಂದರು. ‘ಕೋವಿಡ್ ಮೂರನೆಯ ಅಲೆ ಎದುರಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತಗಳು ಹಾಗೂ ಖಾಸಗಿ ವಲಯದವರು ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸಬೇಕು’ ಎಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT