ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಹಿಂಜರಿತ ಸಾಧ್ಯತೆ ಶೇ 50ರಷ್ಟು

Last Updated 23 ಜೂನ್ 2022, 18:47 IST
ಅಕ್ಷರ ಗಾತ್ರ

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತ ಶುರುವಾಗುವ ಸಾಧ್ಯತೆಯು ಶೇಕಡ 50ರಷ್ಟು ಇದೆ ಎಂದು ಸಿಟಿಗ್ರೂಪ್ ಅಂದಾಜು ಮಾಡಿದೆ.

ಜಗತ್ತಿನ ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಹಣದುಬ್ಬರ ಪ್ರಮಾಣ ಕಡಿಮೆ ಮಾಡಲು ಬಡ್ಡಿ ದರ ಜಾಸ್ತಿ ಮಾಡುತ್ತಿರುವ ಸಂದರ್ಭದಲ್ಲಿ ಸಿಟಿಗ್ರೂಪ್ ಈ ಅಂದಾಜು ಮಾಡಿದೆ.

‘ಹಿಂಜರಿತದ ಅಪಾಯವು ಹೆಚ್ಚೆಚ್ಚು ಅನುಭವಕ್ಕೆ ಬರುತ್ತಿದೆ’ ಎಂದು ಸಿಟಿಗ್ರೂಪ್‌ನ ವಿಶ್ಲೇಷಕರು ಬುಧವಾರ ಹೇಳಿದ್ದಾರೆ. ‘ಹಣದುಬ್ಬರ ಕಡಿಮೆ ಮಾಡುವಾಗ ಬೆಳವಣಿಗೆಯ ಪ್ರಮಾಣವೂ ತಗ್ಗುತ್ತದೆ ಎಂಬುದನ್ನು ಹಿಂದಿನ ಅನುಭವ ಹೇಳುತ್ತದೆ. ಆರ್ಥಿಕ ಹಿಂಜರಿತ ಉಂಟಾಗುವ ಸಾಧ್ಯತೆಯು ಶೇ 50ರ ಸಮೀಪ ಬಂದಿದೆ’ ಎಂದು ವಿಶ್ಲೇಷಕರು ಹೇಳಿದ್ದಾರೆ.

ಅಮೆರಿಕದ ಫೆಡರಲ್ ರಿಸರ್ವ್ ಸೇರಿದಂತೆ ಹಲವು ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರವನ್ನು ತೀವ್ರವಾಗಿ ಹೆಚ್ಚಳ ಮಾಡಿವೆ. ‘ನಾವು ಆರ್ಥಿಕ ಹಿಂಜರಿತಕ್ಕೆ ಇಂಬು ಕೊಡುವ ಯತ್ನ ಮಾಡುತ್ತಿಲ್ಲ. ಬದಲಿಗೆ, ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ಬದ್ಧತೆಯನ್ನು ಹೊಂದಿದ್ದೇವೆ’ ಎಂದು ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೋವೆಲ್ ಬುಧವಾರ ಹೇಳಿದ್ದಾರೆ. ಅಲ್ಲದೆ, ಆರ್ಥಿಕ ಹಿಂಜರಿತದ ಸಾಧ್ಯತೆ ಖಂಡಿತವಾಗಿಯೂ ಇದೆ ಎಂದು ಕೂಡ ಪೋವೆಲ್ ಹೇಳಿದ್ದಾರೆ.

‘ಜಾಗತಿಕ ಅರ್ಥ ವ್ಯವಸ್ಥೆಯು ಈಗಿನ ಹಂತದಲ್ಲಿ ಮಂದಗತಿಗೆ ತಿರುಗುವ ಹಲವು ಸೂಚನೆಗಳನ್ನು ನೀಡುತ್ತಿದೆ. ಪೂರೈಕೆ ವ್ಯವಸ್ಥೆಗೆ ಬಿದ್ದ ಏಟುಗಳು ಮಾತ್ರವೇ ಅಲ್ಲದೆ, ಕೇಂದ್ರೀಯ ಬ್ಯಾಂಕ್‌ಗಳ ಹಣಕಾಸು ನೀತಿಯನ್ನು ಬಿಗಿಗೊಳಿಸಿದ್ದು, ಹೆಚ್ಚಿನ ಹಣದುಬ್ಬರವು ಗ್ರಾಹಕರ ಮೇಲೆ ಬೀರುವ ಪರಿಣಾಮಗಳಿಂದಾಗಿಯೂ ಹೀಗಾಗುತ್ತಿದೆ’ ಎಂದು ಸಿಟಿಗ್ರೂಪ್ ಹೇಳಿದೆ.

ಬ್ರಿಟನ್ನಿನ ಬಹುರಾಷ್ಟ್ರೀಯ ಬ್ಯಾಂಕ್‌ ಆಗಿರುವ ಬಾಕ್ಲೀಸ್ ಕೂಡ, ಅಭಿವೃದ್ಧಿ ಹೊಂದಿರುವ ಅರ್ಥ ವ್ಯವಸ್ಥೆಗಳ ಬೆಳವಣಿಗೆ ದರವು 2023ರಲ್ಲಿ ಶೇಕಡ 1ಕ್ಕೆ ಇಳಿಕೆ ಆಗಲಿದೆ ಎಂದು ಅಂದಾಜು ಮಾಡಿದೆ. ಪ್ರಸಕ್ತ ಹಣಕಾಸು ವರ್ಷದ ನಾಲ್ಕನೆಯ ತ್ರೈಮಾಸಿಕದಿಂದ ಯೂರೊ ಪ್ರದೇಶವು (‘ಯೂರೊ’ವನ್ನು ಕರೆನ್ಸಿಯಾಗಿ ಒಪ್ಪಿಕೊಂಡಿರುವ ದೇಶಗಳು) ಆರ್ಥಿಕ ಹಿಂಜರಿತಕ್ಕೆ ಜಾರುವ ಸಾಧ್ಯತೆ ಇದೆ ಎಂದು ಹೇಳಿದೆ.

2023ರಲ್ಲಿ ಅಮೆರಿಕದ ಅರ್ಥ ವ್ಯವಸ್ಥೆಯ ಬೆಳವಣಿಗೆ ದರವು ಶೇ 1.1ಕ್ಕೆ ಕುಸಿಯಲಿದೆ ಎಂದು ಬಾಕ್ಲೀಸ್ ಹೇಳಿದೆ. ಅಮೆರಿಕದ ಬೆಳವಣಿಗೆ ದರ 2021ರಲ್ಲಿ ಶೇ 5.7ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT