ಶುಕ್ರವಾರ, ನವೆಂಬರ್ 27, 2020
20 °C
ಭಾರಿ ಮಳೆ ಮತ್ತು ಪ್ರವಾಹ

ಪ್ರವಾಹ: ಕಾಫಿ ಬೆಳೆಗಾರರಿಗೆ ₹ 800 ಕೋಟಿಗಳಷ್ಟು ನಷ್ಟ

ಮಹೇಶ್‌ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಳೆದ ಬಾರಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಕೊಡುಗು, ಚಿಕ್ಕಮಗಳೂರು ಮತ್ತು ಹಾಸನ ಪ್ರದೇಶದ ಕಾಫಿ ಬೆಳೆಗಾರರಿಗೆ ₹ 800 ಕೋಟಿಗಳಷ್ಟು ನಷ್ಟವಾಗಿರುವ ಅಂದಾಜು ಮಾಡಲಾಗಿದೆ ಎಂದು ಕಾಫಿ ಮಂಡಳಿ ಹೇಳಿದೆ.

2018ರ ಆಗಸ್ಟ್‌ನಲ್ಲಿ 48,250 ಟನ್‌ಗಳಷ್ಟು ಕಾಫಿ ಬೆಳೆಗೆ ಹಾನಿಯಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಟನ್‌ನ ಸರಾಸರಿ ಮೌಲ್ಯ ₹ 1,67,559 ಇದೆ. ಒಟ್ಟಾರೆ ಬೆಳೆ ಹಾನಿ ಮೊತ್ತ ₹ 808 ಕೋಟಿಯಷ್ಟಾಗಲಿದೆ ಎಂದು ಮಂಡಳಿ ಮಾಹಿತಿ ನೀಡಿದೆ.‌

ಆದರೆ ಮಂಡಳಿ ನೀಡುತ್ತಿರುವ ಅಂದಾಜಿಗಿಂತಲೂ ಅಧಿಕ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಬೆಳೆಗಾರರು ಹೇಳುತ್ತಿದ್ದಾರೆ. 

‘ಕಳೆದ ಮುಂಗಾರಿನ ಅವಧಿಯಲ್ಲಿ ಕೊಡಗು ಪ್ರದೇಶದಲ್ಲಿ ಹಿಂದೆಂದೂ ಕಾಣದಂತಹ ಭಾರಿ ಮಳೆ ಮತ್ತು ಪ್ರವಾಹ ಸ್ಥಿತಿ ಎದುರಾಗಿತ್ತು. ಇದರಿಂದಾಗಿ 70 ಸಾವಿರ ಟನ್‌ ಪ್ರಮಾಣದ ಬೆಳೆ ಹಾನಿಯಾಗಿದ್ದು, ಇದರ ಮೌಲ್ಯ ₹ 1,500 ಕೋಟಿಗಳಷ್ಟಾಗಲಿದೆ’ ಎಂದು ಕರ್ನಾಟಕ ಪ್ಲಾಂಟರ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷ ಎಂ.ಬಿ. ಗಣಪತಿ ಹೇಳಿದ್ದಾರೆ.

‘ಕೊಡಗಿನ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಭಾರಿ ಮಳೆ ಮತ್ತು ಭೂಕುಸಿತದಿಂದ ಹಣ್ಣು ಕೊಳೆತು ಹೋಗಿವೆ, ಹಣ್ಣುಗಳು ಉದುರಿಹೋಗಿವೆ’ ಎಂದು ಕಾಫಿ ಬೆಳೆಯುವ ಮತ್ತು ರಫ್ತು ಮಾಡುತ್ತಿರುವ ನಿಶಾಂತ್‌ ಗುರ್ಜರ್‌ ತಿಳಿಸಿದ್ದಾರೆ.

‘ಇನ್‌ಸ್ಟಂಟ್‌ ಕಾಫಿ, ಅರೇಬಿಕಾ ಮತ್ತು ರೋಬಸ್ಟಾ ಬೆಳೆಗಳನ್ನು ಒಳಗೊಂಡು ಹಾನಿಯ ಲೆಕ್ಕಾಚಾರ ಹಾಕಲಾಗಿದೆ. ಪ್ರತ್ಯೇಕವಾಗಿ ಪರಿಗಣಿಸಿದರೆ ನಷ್ಟದ ಪ್ರಮಾಣ ಹೆಚ್ಚಾಗಲಿದೆ. ಸದ್ಯದ ದರವು 30 ವರ್ಷಗಳಲ್ಲಿಯೇ ಕನಿಷ್ಠ ಮಟ್ಟದಲ್ಲಿದೆ. ಈ ದರದಿಂದ ಬೆಳೆಗಾರರಿಗೆ ಉತ್ಪಾದನಾ ವೆಚ್ಚವನ್ನೂ ತುಂಬಿಕೊಡಲು ಸಾಧ್ಯವಾಗುವುದಿಲ್ಲ’ ಎಂದು ಕಾಫಿ ರಫ್ತುದಾರರ ಒಕ್ಕೂಟದ ಅಧ್ಯಕ್ಷ ರಮೇಶ್‌ ರಾಜಾ ಹೇಳಿದ್ದಾರೆ.

ರಫ್ತು ಇಳಿಕೆ: ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾರ್ಚ್‌ 20ರವರೆಗೆ, ದೇಶದ ಕಾಫಿ ರಫ್ತು ಶೇ 9.3ರಷ್ಟು ಇಳಿಕೆಯಾಗಿದ್ದು, 3.42 ಲಕ್ಷ ಟನ್‌ಗಳಷ್ಟಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ 3.77 ಲಕ್ಷ ಟನ್‌ ಕಾಫಿ ರಫ್ತು ಮಾಡಲಾಗಿತ್ತು.

ಕಾಫಿ ಮಂಡಳಿಯ ಜಾಲತಾಣದಲ್ಲಿರುವ ಮಾಹಿತಿಯ ಪ್ರಕಾರ, 2018ರ ಏಪ್ರಿಲ್‌ 1 ರಿಂದ 2019ರ ಮಾರ್ಚ್‌ 20ರ ಅವಧಿಯಲ್ಲಿ ₹ ₹ 5,741 ಕೋಟಿ ಮೌಲ್ಯದ ರಫ್ತು ವಹಿವಾಟು ನಡೆದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹ 5,916.61 ಕೋಟಿ ಮೌಲ್ಯದ ರಫ್ತು ವಹಿವಾಟು ನಡೆದಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು