ಸೋಮವಾರ, ಅಕ್ಟೋಬರ್ 14, 2019
23 °C
ಕಂಪನಿ ತೆರಿಗೆ ಕಡಿತ; ಆರ್ಥಿಕಚೇತರಿಕೆಗೆ ಪೂರಕ: ಮೂಡಿಸ್‌

ಸರ್ಕಾರದ ವಿತ್ತೀಯ ಕೊರತೆ ಹೆಚ್ಚಳ ಸಾಧ್ಯತೆ

Published:
Updated:

ನವದೆಹಲಿ: ಕಾರ್ಪೊರೇಟ್‌ ತೆರಿಗೆ ಕಡಿತದ ನಿರ್ಧಾರವು ದೇಶಿ ಉದ್ದಿಮೆ ವಹಿವಾಟು ವಿಸ್ತರಣೆಗೆ ನೆರವಾಗಿ ಆರ್ಥಿಕತೆ ಚೇತರಿಕೆಗೆ ಕಾರಣವಾಗಲಿದ್ದರೂ, ಕೇಂದ್ರ ಸರ್ಕಾರದ ವಿತ್ತೀಯ ಕೊರತೆ ಹೆಚ್ಚಿಸಲಿದೆ ಎಂದು ರೇಟಿಂಗ್‌ ಸಂಸ್ಥೆ ಮೂಡಿಸ್‌ ಇನ್‌ವೆಸ್ಟರ್ಸ್‌ ಸರ್ವಿಸ್‌ ವಿಶ್ಲೇಷಿಸಿದೆ.

ತೆರಿಗೆ ಕಡಿತದ ಮಟ್ಟವು ಏಷ್ಯಾದ ಇತರ ದೇಶಗಳಲ್ಲಿನ ತೆರಿಗೆ ದರಗಳ ಹಂತಕ್ಕೆ ಹತ್ತಿರದಲ್ಲಿದೆ. ಇದು ಉದ್ದಿಮೆಯ ವಹಿವಾಟು ಮತ್ತು ಸ್ಪರ್ಧಾತ್ಮಕತೆ ಹೆಚ್ಚಳಕ್ಕೆ ನೆರವಾಗಲಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆ ಕುಸಿತ, ಉದ್ದಿಮೆ ಸಂಸ್ಥೆಗಳ ಬಂಡವಾಳ ಹೂಡಿಕೆಯಲ್ಲಿ ಕಾಣದ ಉತ್ಸಾಹ ಮತ್ತು ಸಾಲ ನೀಡಿಕೆ ಪ್ರಮಾಣ ಕಡಿಮೆ ಇರುವುದು ಅಲ್ಪಾವಧಿಯಲ್ಲಿ ಆರ್ಥಿಕ ಅಭಿವೃದ್ಧಿಗೆ ಅಡ್ಡಿ ಒದಗಿಸಲಿವೆ. ಇದು ಸರ್ಕಾರದ ವಿತ್ತೀಯ ಕೊರತೆ ಗುರಿ ತಲುಪುವುದರ ಮೇಲೆ ಹೆಚ್ಚಿನ ಒತ್ತಡವನ್ನೂ ಹೇರಲಿದೆ.

ತೆರಿಗೆ ಕಡಿತದಿಂದಾಗಿ ಕಾರ್ಪೊರೇಟ್‌ ಸಂಸ್ಥೆಗಳ ತೆರಿಗೆ ಪಾವತಿ ನಂತರದ ವರಮಾನವು ಹೆಚ್ಚಳಗೊಳ್ಳಲಿದೆ. ಅವುಗಳ ಉಳಿತಾಯವು ₹ 21 ಸಾವಿರ ಕೋಟಿಗಳಷ್ಟಾಗಿರಲಿದೆ. ವರಮಾನದಲ್ಲಿನ ಹೆಚ್ಚುವರಿ ಮೊತ್ತವನ್ನು ವಹಿವಾಟು ಹೆಚ್ಚಳಕ್ಕೆ ಅಥವಾ ಸಾಲದ ಹೊರೆ ತಗ್ಗಿಸಲು ಮತ್ತು ಷೇರುದಾರರಿಗೆ ಹೆಚ್ಚಿನ ಲಾಭಾಂಶ ನೀಡಲು ಬಳಕೆ ಮಾಡಿಕೊಳ್ಳುವುದರ ಮೇಲೆ ಕಂಪನಿಗಳ ಹಣಕಾಸು ಪರಿಸ್ಥಿತಿ ನಿರ್ಧಾರವಾಗಲಿದೆ ಎಂದು ಮೂಡಿಸ್‌ ವಿಶ್ಲೇಷಿಸಿದೆ.

ಸರಕು ತಯಾರಿಸುವ ಹಾಗೂ ಮಾಹಿತಿ ತಂತ್ರಜ್ಞಾನ (ಐ.ಟಿ) ಸೇವಾ ಕಂಪನಿಗಳು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲಿವೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 7.7 ಲಕ್ಷ ಕೋಟಿಗಳಷ್ಟು ಕಾರ್ಪೊರೇಟ್‌ ತೆರಿಗೆ ಸಂಗ್ರಹವಾಗಲಿದೆ ಎಂದು ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಅಂದಾಜಿಸಲಾಗಿತ್ತು. ತೆರಿಗೆ ಕಡಿತದ ನಿರ್ಧಾರದಿಂದಾಗಿ ಸರ್ಕಾರದ ವರಮಾನವು ₹ 1.45 ಲಕ್ಷ ಕೋಟಿಗಳಷ್ಟು ಕಡಿಮೆಯಾಗಲಿದೆ.

Post Comments (+)