ಶನಿವಾರ, ಮೇ 30, 2020
27 °C
ವಿಶ್ವಸಂಸ್ಥೆ ವರದಿಯಲ್ಲಿ ಉಲ್ಲೇಖ

ಕೊರೊನಾ: ವಿಶ್ವಕ್ಕೆ ಆರ್ಥಿಕ ಆಘಾತ ಖಚಿತ, ಭಾರತ-ಚೀನಾ ಪಾರು: ವಿಶ್ವಸಂಸ್ಥೆ ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

Recession

ವಿಶ್ವಸಂಸ್ಥೆ: ಕೊರೊನಾ ವೈರಸ್ ಸೋಂಕಿನ (ಕೋವಿಡ್–19) ಪರಿಣಾಮದಿಂದ ಜಾಗತಿಕ ಆದಾಯದಲ್ಲಿ ಲಕ್ಷಾಂತರ ಕೋಟಿ ಡಾಲರ್ ನಷ್ಟವಾಗಲಿದೆ. ಇದು ಭಾರತ, ಚೀನಾ ಹೊರತುಪಡಿಸಿ ಅಭಿವೃದ್ಧಿ ಹೊಂದುತ್ತಿರುವ ಇತರ ದೇಶಗಳನ್ನು ಸಂಕಷ್ಟಕ್ಕೆ ಈಡುಮಾಡಲಿದೆ ಎಂದು ವಿಶ್ವಸಂಸ್ಥೆಯ ವಹಿವಾಟು ವರದಿ ತಿಳಿಸಿದೆ.

ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವಿಶ್ವದ ಮೂರನೇ ಎರಡರಷ್ಟು ಮಂದಿ ಇದ್ದು, ಕೊರೊನಾ ಬಿಕ್ಕಟ್ಟಿನ ಪರಿಣಾಮ ಎದುರಿಸುತ್ತಿದ್ದಾರೆ. ಈ ರಾಷ್ಟ್ರಗಳ ಆರ್ಥಿಕತೆಯ ಚೇತರಿಕೆಗಾಗಿ ₹ 187 ಲಕ್ಷ ಕೋಟಿ (2.5 ಟ್ರಿಲಿಯನ್ ಡಾಲರ್) ಪ್ಯಾಕೇಜ್‌ಗಾಗಿ ವಿಶ್ವಸಂಸ್ಥೆ ಕರೆ ನೀಡಿದೆ.

ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮಾವೇಶದ (UNCTAD) ವಿಶ್ಲೇಷಣೆ ಪ್ರಕಾರ, ಕೋವಿಡ್–19ರ ಪರಿಣಾಮವಾಗಿ ಸರಕು ಶ್ರೀಮಂತಿಕೆ ಹೊಂದಿರುವ ರಫ್ತು ಮಾಡುವ ರಾಷ್ಟ್ರಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ₹ 150–225 ಲಕ್ಷ ಕೋಟಿ (2–3 ಟ್ರಿಲಿಯನ್ ಡಾಲರ್‌ವರೆಗೆ) ಹೂಡಿಕೆ ಕಡಿತವಾಗಲಿದೆ.

ಇತ್ತೀಚಿನ ದಿನಗಳಲ್ಲಿ ಮುಂದುವರಿದ ಆರ್ಥಿಕತೆಗಳು ಮತ್ತು ಚೀನಾ ಬೃಹತ್ ಸರ್ಕಾರಿ ಪ್ಯಾಕೇಜ್‌ಗಳನ್ನು ಒಟ್ಟುಗೂಡಿಸಿವೆ. ಜಿ20 ರಾಷ್ಟ್ರಗಳೂ ₹ 375 ಲಕ್ಷ ಕೋಟಿಗೆ (5 ಟ್ರಿಲಿಯನ್ ಡಾಲರ್‌) ಆರ್ಥಿಕ ಸಹಕಾರ ವಿಸ್ತರಿಸಲಿವೆ ಎಂದು ಯುಎನ್‌ಸಿಟಿಎಡಿ ವರದಿ ಹೇಳಿದೆ.

ಇದು ಹಠಾತ್ ಸಂಭವಿಸಿದ ಬಿಕ್ಕಟ್ಟಿಗೆ ಅಭೂತಪೂರ್ವ ಪ್ರತಿಕ್ರಿಯೆಯಾಗಿದೆ. ಈ ಕ್ರಮವು ಬಿಕ್ಕಟ್ಟಿನಿಂದ ಉಂಟಾದ ಆರ್ಥಿಕ, ದೈಹಿಕ ಮತ್ತು ಮಾನಸಿಕ ಆಘಾತವನ್ನು ಕಡಿಮೆ ಮಾಡಬಲ್ಲದು ಎಂದು ವರದಿ ಅಭಿಪ್ರಾಯಪಟ್ಟಿದೆ.

ಆರ್ಥಿಕ ಪ್ಯಾಕೇಜ್‌ಗಳ ಪೂರ್ತಿ ವಿವರ ಇನ್ನೂ ಬಹಿರಂಗವಾಗಿಲ್ಲ. ಆದರೂ ಆರಂಬಿಕ ಹಂತದಲ್ಲಿ ಜಿ20 ಆರ್ಥಿಕತೆಯ ಬೇಡಿಕೆಗೆ ಅನುಗುಣವಾಗಿ ₹ 75–150 ಲಕ್ಷ ಕೋಟಿ (1 –2 ಟ್ರಿಲಿಯನ್ ಡಾಲರ್‌) ವರೆಗೆ ಘೋಷಣೆಯಾಗಬಹುದೆಂದು ಅಂದಾಜಿಸಲಾಗಿದೆ ಎಂಬುದಾಗಿ ವರದಿ ತಿಳಿಸಿದೆ.

‘ಆದಾಗ್ಯೂ ವಿಶ್ವವು ಈ ವರ್ಷ ಆರ್ಥಿಕ ಹಿಂಜರಿತಕ್ಕೆ ಒಳಗಾಗಲಿದೆ. ಜಾಗತಿಕ ಆದಾಯದಲ್ಲಿ ಲಕ್ಷಾಂತರ ಕೋಟಿ ಡಾಲರ್‌ ನಷ್ಟವಾಗಲಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಮಾರಕವಾಗಲಿದೆ. ಭಾರತ ಮತ್ತು ಚೀನಾ ಇದಕ್ಕೆ ಹೊರತಾಗುವ ಸಾಧ್ಯತೆ ಇದೆ’ ಎಂದು ವರದಿ ಉಲ್ಲೇಖಿಸಿದೆ.

ಆದರೆ, ಭಾರತ ಮತ್ತು ಚೀನಾ ಯಾಕೆ ಜಾಗತಿಕ ಆರ್ಥಿಕ ಹಿಂಜರಿತದಿಂದ ಹೊರತಾಗಿರಲಿವೆ ಎಂಬುದಕ್ಕೆ ಹೆಚ್ಚಿನ ವಿವರಣೆ ವರದಿಯಲ್ಲಿ ಇಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು