ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೆಡಿಟ್ ಕಾರ್ಡ್‌ ಹುಷಾರಾಗಿ ಬಳಸಿ

ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ನಷ್ಟಕ್ಕೆ ಗುರಿಯಾಗಬೇಕಾದೀತು * ಬಳಕೆಗೆ ಇಲ್ಲಿವೆ ಕೆಲ ಟಿಪ್ಸ್
Last Updated 10 ಜುಲೈ 2019, 6:03 IST
ಅಕ್ಷರ ಗಾತ್ರ

ಕ್ರೆಡಿಟ್ ಕಾರ್ಡ್‌ ಬಳಕೆ ಹೆಚ್ಚಿದಂತೆಲ್ಲಾ ಅದರ ಬಳಕೆ ಕುರಿತ ಗೊಂದಲಗಳೂ ಹೆಚ್ಚಾಗುತ್ತಿವೆ. ಹೀಗಾಗಿ ಕ್ರೆಡಿಟ್ ಕಾರ್ಡ್‌ ಬಳಸುವ ಮುನ್ನ ಕೆಲವು ವಿಷಯಗಳನ್ನು ತಿಳಿದುಕೊಂಡು ಬಳಸುವುದು ಉತ್ತಮ. ಅಂತಹ ಕೆಲವು ಸಲಹೆಗಳು ಇಲ್ಲಿವೆ.

ಕ್ರೆಡಿಟ್ ಕಾರ್ಡ್ ಎಂದರೆ, ಖರೀದಿಸಿದ ವಸ್ತು, ಉತ್ಪನ್ನಗಳಿಗೆ ಹಾಗೂ ಪಡೆದ ಸೇವೆಗೆ ಸಾಲದ ಹಣ ಪಾವತಿಸಲು ನೆರವಾಗುವ ಸಾಧನ. ಕಾರ್ಡ್‌ಗಳಿಂದ ಪಡೆದ ಸಾಲದ ಹಣವನ್ನು ಮರುಪಾವತಿಸುವ ಮುನ್ನ ಅವಧಿಯ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಇದರ ಮೂಲಕ ಖರ್ಚು ಮಾಡಿದ ಹಣವನ್ನು ನಿರ್ದಿಷ್ಟ ಸಮಯದೊಳಗೆ ಪಾವತಿಸಲು ನಿಯಮಗಳು ಇರುತ್ತವೆ. ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, ಮರುಪಾವತಿಗೂ ಮುನ್ನ ಗ್ರಾಹಕರಿಗೆ ಎರಡು ಆಯ್ಕೆಗಳು ಇರುತ್ತವೆ. ಅಂದರೆ ಖರ್ಚು ಮಾಡಿದ ಹಣವನ್ನು ನಿಗದಿತ ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಪಾವತಿಸುವುದು ಅಥವಾ ಕಂತಿನ ರೂಪದಲ್ಲಿ ಪಾವತಿಸುತ್ತ ಹೋಗುವುದು.

ಪೂರ್ಣ ಪ್ರಮಾಣದಲ್ಲಿ ಹಣ ಪಾವತಿಸಿದರೆ, ಬಡ್ಡಿ ವಿಧಿಸುವುದು, ವಿಳಂಬ ಶುಲ್ಕ ವಿಧಿಸುವುದು ಇತ್ಯಾದಿ ಸಮಸ್ಯೆಗಳು ಇರುವುದಿಲ್ಲ. ಆದರೆ, ಕಂತಿನ ರೂಪದಲ್ಲಿ ಪಾವತಿಸುವ ಹಣಕ್ಕೆ ಬಡ್ಡಿ ಕಟ್ಟುವುದರ ಜತೆಗೆ ಕೆಲವು ಬಗೆಯ ಶುಲ್ಕಗಳನ್ನೂ ವಿಧಿಸುವ ಸಾಧ್ಯತೆ ಇರುತ್ತದೆ.

ಕ್ರೆಡಿಟ್ ಕಾರ್ಡ್‌ ಮೂಲಕ ಪಡೆದ ಹಣವನ್ನು ನಿಗದಿತ ಅವಧಿಯೊಳಗೆ ಸರಿಯಾದ ಪ್ರಮಾಣದಲ್ಲಿ ಪಾವತಿಸಿದರೆ, ಹೆಚ್ಚುವರಿ ಶುಲ್ಕಗಳು, ಹೆಚ್ಚಿನ ಬಡ್ಡಿ ಪಾವತಿಸಬೇಕಾದ ಅನಿವಾರ್ಯತೆ ಇರುವುದಿಲ್ಲ. ಬಹುತೇಕ ಕಂಪನಿಗಳು ತಮ್ಮ ಗ್ರಾಹಕರಿಗೆ 45 ದಿನಗಳವರೆಗೆ ಬಡ್ಡಿ ವಿಧಿಸುವುದಿಲ್ಲ. ಈ ಅವಧಿಯಲ್ಲಿ ಸಾಲ ಮರುಪಾವತಿಸುವುದೇ ಹೆಚ್ಚು ಜಾಣತನ.

ಹಲವು ಉಪಯೋಗಗಳು

* ಕೈಯಲ್ಲಿ ಹಣ ಇಲ್ಲದಿರುವಾಗ ಸರಕು ಮತ್ತು ಸೇವೆಗಳನ್ನು ಖರೀದಿಸಲು ಅನುಕೂಲ

* ಕ್ರೆಡಿಟ್‌ ಕಾರ್ಡ್‌ನಲ್ಲಿರುವ ಎಲ್ಲ ಹಣವನ್ನು ಒಟ್ಟಿಗೆ ಅಥವಾ ಬೇಕೆಂದಾಗ ಖರ್ಚು ಮಾಡಿ, ಅದನ್ನು ಕಂತಿನ ರೂಪದಲ್ಲಿ ಮರುಪಾವತಿಸಲು ಅವಕಾಶ

*ದಾಖಲೆಗಳಿಲ್ಲದೇ, ಸರಕು ಮತ್ತು ಸೇವೆಗಳ ಖರೀದಿಗೆ ಸುಲಭವಾಗಿ ನೆರವಾಗುತ್ತದೆ.

* ಬಳಕೆ ಹೆಚ್ಚಿದಂತೆಲ್ಲಾ ಕ್ರೆಡಿಟ್ ಸ್ಕೋರ್‌ನಲ್ಲೂ ವ್ಯತ್ಯಾಸಗಳಾಗುತ್ತವೆ.

l ಡೆಬಿಟ್ ಕಾರ್ಡ್‌ಗೆ ಹೋಲಿಸಿದರೆ ಇದರ ಬಳಕೆಯಿಂದ ರಿವಾರ್ಡ್ ಪಾಯಿಂಟ್‌ಗಳು (ಪುರಸ್ಕಾರ ಅಂಕ) ದೊರೆಯುತ್ತವೆ. ವಸ್ತು, ಉಡುಗೊರೆ ಖರೀದಿಸಲು, ಪ್ರಯಾಣ ಟಿಕೆಟ್ ಬುಕ್‌ ಮಾಡಲು ನೆರವಾಗುತ್ತದೆ.

ಡೆಬಿಟ್ ಕಾರ್ಡ್ ಇದ್ದರೆ ಇದು ಬೇಡವೇ

ಬಳಿಯಲ್ಲಿ ಡೆಬಿಟ್ ಕಾರ್ಡ್ ಇದ್ದರೆ ಸಾಕು. ಕ್ರೆಡಿಟ್‌ ಕಾರ್ಡ್ ಅಗತ್ಯವಿಲ್ಲ ಎಂಬ ಭಾವನೆ ಹಲವರಲ್ಲಿ ಇದೆ. ಆದರೆ, ಕ್ರೆಡಿಟ್ ಕಾರ್ಡ್‌ನಿಂದ ಖರ್ಚು ಮಾಡಿದ ಹಣವನ್ನು ಸುಲಭವಾಗಿ ಮತ್ತು ನಮಗೆ ಅನುಕೂಲವಾಗುವ ರೀತಿಯಲ್ಲಿ ಮರುಪಾವತಿಸಲು ಅವಕಾಶವಿದೆ. ಇದು ಗ್ರಾಹಕನ ಕ್ರೆಡಿಟ್‌ ಸ್ಕೋರ್‌ ಉತ್ತಮವಾಗಿರಲೂ ನೆರವಾಗುತ್ತದೆ.

ಋಣ ಚರಿತ್ರೆ ಉಪಯೋಗವೇನು?

ಕ್ರೆಡಿಟ್‌ ಕಾರ್ಡ್‌ನಿಂದ ಪಡೆದ ಸಾಲರೂಪದ ಹಣವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ, ಗ್ರಾಹಕನ ಋಣ ಚರಿತ್ರೆ (Credit Score) ಕೂಡ ಉತ್ತಮವಾಗಿರುತ್ತದೆ. ಒಂದು ವೇಳೆ ನಿಗದಿತ ಅವಧಿಯೊಳಗೆ ಪಾವತಿಸದಿದ್ದರ ಕ್ರೆಡಿಟ್ ಸ್ಕೋರ್ ಕುಸಿಯುತ್ತದೆ.

ಮರುಪಾವತಿ ವಿಷಯ

ಕ್ರೆಡಿಟ್ ಕಾರ್ಡ್ ಮೂಲಕ ಪಡೆದ ಹಣವನ್ನು ಚೆಕ್, ನೆಟ್ ಬ್ಯಾಂಕಿಂಗ್, ನೆಫ್ಟ್ ಹೀಗೆ ಹಲವು ವಿಧಾನಗಳಲ್ಲಿ ಮರುಪಾವತಿಸಬಹುದು. ಡಿಜಿಟಲ್ ವ್ಯವಸ್ಥೆಯಿಂದಾಗಿ ನಿಗದಿತ ದಿನಾಂಕದೊಳಗೆ ಸ್ವಯಂಚಾಲಿತವಾಗಿ ಮರುಪಾವತಿ ಮಾಡುವ ಸೌಲಭ್ಯವೂ ಇದೆ. ಬ್ಯಾಂಕ್‌ನ ಆ್ಯಪ್‌ಗಳು ಅಥವಾ ಅಂತರ್ಜಾಲ ತಾಣಗಳ ಮೂಲಕವೂ ಪಾವತಿಸಬಹುದು.

ಅಗತ್ಯ ಮತ್ತು ಬಳಕೆ ವಿಧಾನಕ್ಕೆ ಅನುಗುಣವಾಗಿ ವಿವಿಧ ಬಗೆಯ ಕ್ರೆಡಿಟ್‌ ಕಾರ್ಡ್‌ಗಳಿವೆ. ವಿಮಾನದ ಟಿಕೆಟ್ ಬುಕ್ ಮಾಡಲು, ಐಷಾರಾಮಿ ಹೋಟೆಲ್‌ಗಳಲ್ಲಿ ತಂಗುವುದಕ್ಕೆ ರಿಯಾಯಿತಿ ನೀಡುವ ಕ್ರೆಡಿಟ್ ಕಾರ್ಡ್‌ಗಳು ಇವೆ. ಅದೇ ರೀತಿ ಹೋಟೆಲ್ ಅಥವಾ ರೆಸ್ಟೊರೆಂಟ್‌ಗಳಲ್ಲಿ ಊಟಕ್ಕೆ ಹಣ ಪಾವತಿಸುವಾಗಲೂ ರಿಯಾಯಿತಿಗಳು ದೊರೆಯುತ್ತವೆ. ಹೀಗೆ ವಿವಿಧ ಬಗೆಯ ಕಾರ್ಡ್‌ಗಳಿಂದ ವಿವಿಧ ಪ್ರಯೋಜನಗಳಿವೆ.

(ಲೇಖಕ: ಆ್ಯಕ್ಸಿಸ್‌ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT