ಭಾನುವಾರ, ಜೂನ್ 7, 2020
22 °C
ಉತ್ಪಾದನೆ ಕಡಿತ; ಒಪೆಕ್‌, ರಷ್ಯಾ ಮಾತುಕತೆಯಲ್ಲಿ ಪ್ರಗತಿ

ಕಚ್ಚಾ ತೈಲ ಉತ್ಪಾದನೆ ಬಿಕ್ಕಟ್ಟು ಶಮನ: ಕಚ್ಚಾ ತೈಲ ಬೆಲೆ ಏರಿಕೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಸಿಂಗಪುರ: ಕಚ್ಚಾ ತೈಲ ಉತ್ಪಾದನೆಗೆ ಸಂಬಂಧಿಸಿದ ಬಿಕ್ಕಟ್ಟು ಶಮನಗೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಗುರುವಾರ ತೈಲ ಬೆಲೆಯು ಏರಿಕೆ ದಾಖಲಿಸಿತು.

ಉತ್ಪಾದನೆ ಕಡಿತಗೊಳಿಸಲು ತಾನು ಸಿದ್ಧವಿರುವುದಾಗಿ ರಷ್ಯಾ ತಿಳಿಸಿತ್ತು. ತೈಲ ಉತ್ಪಾದಿಸುವ ಪ್ರಮುಖ ದೇಶಗಳು ಒಪ್ಪಂದಕ್ಕೆ ಬರುವ ಕುರಿತು ಗುರುವಾರ ಟೆಲಿಕಾನ್‌ಫೆರನ್ಸ್‌ ಸಭೆ ನಿಗದಿಯಾಗಿತ್ತು.

ಕೊರೊನಾ ವೈರಸ್‌ ಬಾಧಿತ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿರುವ ಬೇಡಿಕೆ ಕುಸಿತ ಮತ್ತು ಪೂರೈಕೆ ಹೆಚ್ಚಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತೈಲ ರಫ್ತು ದೇಶಗಳ ಸಂಘಟನೆ (ಒಪೆಕ್‌) ಮತ್ತು ರಷ್ಯಾ ಸಭೆ ನಡೆಸಲು ಸಮ್ಮತಿಸಿದ್ದವು.

ಪ್ರತಿ ದಿನ 16 ಲಕ್ಷ ಬ್ಯಾರಲ್‌ಗಳಷ್ಟು ಉತ್ಪಾದನೆ ಕಡಿತ ಮಾಡಲು ಸಿದ್ಧ ಇರುವುದಾಗಿ ರಷ್ಯಾ ಬುಧವಾರ ಪ್ರಕಟಿಸಿತ್ತು.ಈ ಪ್ರಕಟಣೆಯ ಬೆನ್ನಲ್ಲೇ ಡಾಲರ್‌ ಎದುರಿನ ರಷ್ಯಾದ ಕರೆನ್ಸಿ ರೂಬಲ್‌ ಬೆಲೆ ಏರಿಕೆಯಾಗಿತ್ತು.

‘ಪ್ರತಿ ದಿನ 1 ಕೋಟಿಯಿಂದ 1.5 ಕೋಟಿ ಬ್ಯಾರೆಲ್‌ನಷ್ಟು ಉತ್ಪಾದನೆ ಕಡಿತಗೊಳಿಸಲು ತೈಲ ಉತ್ಪಾದಿಸುವ ಪ್ರಮುಖ ದೇಶಗಳು ಒಪ್ಪಂದಕ್ಕೆ ಬರುವ ಸಾಧ್ಯತೆ ಇದೆ’ ಎಂದು ಕುವೈತ್‌ನ ಇಂಧನ ಸಚಿವ ಖಲೇದ್‌ ಅಲ್‌ ಫಧೇಲ್‌ ಹೇಳಿದ್ದರು.

ಟೆಲಿ ಕಾನ್‌ಫೆರನ್ಸ್‌ನಲ್ಲಿ ಪ್ರತಿ ದಿನ 1.20 ಕೋಟಿ ಬ್ಯಾರಲ್‌ಗಳಷ್ಟು ಉತ್ಪಾದನೆ ಕಡಿತಗೊಳಿಸುವ ಸಂಬಂಧ ಚರ್ಚೆ ನಡೆದಿದೆ. ಇತರ ಉತ್ಪಾದಕರು ಪ್ರತಿ ದಿನ 50 ಲಕ್ಷ ಬ್ಯಾರಲ್‌ನಷ್ಟು ಕಡಿತಗೊಳಿಸಬೇಕಾಗಿದೆ ಎಂದು ‘ಒಪೆಕ್‌’ ಮೂಲಗಳು ತಿಳಿಸಿದ್ದವು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಏಷ್ಯಾದ ಮಾರುಕಟ್ಟೆಯ ಗುರುವಾರದ ವಹಿವಾಟಿನಲ್ಲಿ ಕಚ್ಚಾ ತೈಲ ಬೆಲೆ
ಏರಿಕೆ ಕಂಡಿತು.

ತೈಲ;ಏರಿಕೆ (%); ಬೆಲೆ ಪ್ರತಿ ಬ್ಯಾರಲ್‌ಗೆ (ಡಾಲರ್‌ಗಳಲ್ಲಿ)

ವೆಸ್ಟ್ ಟೆಕ್ಸಾಸ್‌ ಇಂಟರ್‌ಮೀಡಿಯೇಟ್‌; 3.0;25.84 

ಬ್ರೆಂಟ್‌: 0.7 ಹೆಚ್ಚಳ; 33.08

ಪ್ರತಿ ಬ್ಯಾರಲ್‌ಗೆ 35 ಡಾಲರ್‌?

ಮುಂಬೈ (ಪಿಟಿಐ):  ಸದ್ಯದ ಬೇಡಿಕೆ ಮತ್ತು ಪೂರೈಕೆ ಅಂದಾಜಿನ ಪ್ರಕಾರ ಭಾರತಕ್ಕೆ ಪೂರೈಕೆಯಾಗುವ ಕಚ್ಚಾ ತೈಲದ ಬೆಲೆಯು 2020–21ನೇ ಸಾಲಿನಲ್ಲಿ ಪ್ರತಿ ಬ್ಯಾರಲ್‌ಗೆ ಸರಾಸರಿ 35 ಡಾಲರ್‌ಗಳಷ್ಟು ಇರಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.

ಈ ಹಣಕಾಸು ವರ್ಷದಲ್ಲಿ ಡಾಲರ್‌ ಎದುರಿನ ರೂಪಾಯಿ ವಿನಿಮಯ ದರವು ₹ 75ರ ಆಸುಪಾಸಿನಲ್ಲಿ ಇರಲಿದೆ ಎಂದೂ ಆರ್‌ಬಿಐ ಅಂದಾಜಿಸಿದೆ.

ತೈಲ ಖರೀದಿ ನಿರ್ಧಾರ

ದುಬೈ (ರಾಯಿಟರ್ಸ್‌): ಕಚ್ಚಾ ತೈಲದ ಬೇಡಿಕೆಗೆ ಚೇತರಿಕೆ ನೀಡಲು ಆಮದು ಮಾಡಿಕೊಳ್ಳುವ ಪ್ರಮುಖ ದೇಶಗಳು ತಮ್ಮ ದಾಸ್ತಾನು ಹೆಚ್ಚಿಸಲು ಖರೀದಿ ಪ್ರಮಾಣವನ್ನು ಶುಕ್ರವಾರದ ವೇಳೆಗೆ ಘೋಷಿಸಲಿವೆ ಎಂದು
ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ತಿಳಿಸಿದೆ.

‘ಖರೀದಿ ಪ್ರಮಾಣ ಘೋಷಿಸುವುದರಿಂದ ಬೇಡಿಕೆ ಹೆಚ್ಚಳಗೊಂಡು ತೈಲ ಮಾರುಕಟ್ಟೆ ಸ್ಥಿರಗೊಳ್ಳುವ ಸಾಧ್ಯತೆ ಇದೆ’ ಎಂದು  ‘ಐಇಎ’ದ
ಕಾರ್ಯನಿರ್ವಾಹಕ ನಿರ್ದೇಶಕ ಫತೀಹ್‌ ಬಿರೊಲ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು