ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ತಾರಾ: 50 ವಿಮಾನ ಸಂಚಾರ ರದ್ದು

ಪರಿಷ್ಕೃತ ವೇತನಕ್ಕೆ ಅತೃಪ್ತಿ: ಅನಾರೋಗ್ಯದ ರಜೆ ಹಾಕಿದ ಪೈಲಟ್‌ಗಳು
Published 2 ಏಪ್ರಿಲ್ 2024, 15:34 IST
Last Updated 2 ಏಪ್ರಿಲ್ 2024, 15:34 IST
ಅಕ್ಷರ ಗಾತ್ರ

ನವದೆಹಲಿ/ ಮುಂಬೈ: ಪೈಲಟ್‌ಗಳು ಏಕಾಏಕಿ ಅನಾರೋಗ್ಯದ ರಜೆ ಹಾಕಿರುವುದರಿಂದ ಮಂಗಳವಾರ ವಿಸ್ತಾರಾ ಏರ್‌ಲೈನ್ಸ್‌ನ 50ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ.

ಹಲವು ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ. ಇದರಿಂದ ಪ್ರಯಾಣಿಕರು ತಮಗಾದ ತೊಂದರೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಏರ್‌ ಇಂಡಿಯಾ ಜೊತೆಗೆ ವಿಸ್ತಾರಾ ವಿಲೀನಗೊಂಡ ಬಳಿಕ ಹೊಸ ಒಪ್ಪಂದದ ಅನ್ವಯ ಪೈಲಟ್‌ಗಳಿಗೆ ಪರಿಷ್ಕೃತ ವೇತನ ಪಟ್ಟಿ ಪ್ರಕಟಿಸಲಾಗಿದೆ. ಇದಕ್ಕೆ ಪೈಲಟ್‌ಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ರಜೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಸ್ತಾರಾ ಎ320 ವಿಮಾನ ಸಂಚಾರ ಮತ್ತು ಕಾರ್ಯಾಚರಣೆಗೆ ನಿರ್ದೇಶನ ನೀಡುವ ಹಿರಿಯ ಅಧಿಕಾರಿಗಳು ಕೂಡ ರಜೆಯ ಮೇಲೆ ತೆರಳಿದ್ದಾರೆ ಎಂದು ತಿಳಿಸಿವೆ.

ಪೈಲಟ್‌ಗಳ ಅಲಭ್ಯತೆ ಹಾಗೂ ಕಾರ್ಯಾಚರಣೆಯಲ್ಲಿ ಎದುರಾಗಿರುವ ತೊಂದರೆಯಿಂದಾಗಿ ವಿಮಾನಗಳ ಹಾರಾಟದ ಸಂಖ್ಯೆಯನ್ನು ತಗ್ಗಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಪ್ರತಿದಿನ ವರದಿಗೆ ಡಿಜಿಸಿಎ ಸೂಚನೆ:

ವಿಮಾನ ಹಾರಾಟ ರದ್ದು ಮತ್ತು ವಿಳಂಬ ಕುರಿತು ಪ್ರತಿದಿನ ವರದಿ ಸಲ್ಲಿಸುವಂತೆ ವಿಸ್ತಾರಾಗೆ, ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ಸೂಚಿಸಿದೆ. 

ಪ್ರಯಾಣಿಕರಿಗೆ ಆಗಿರುವ ತೊಂದರೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಸೂಕ್ತ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದೆ.

‘ಡಿಜಿಸಿಎ ನಿಯಮಾವಳಿಗಳ ಅನುಸಾರ ತೊಂದರೆಗೆ ಸಿಲುಕುವ ಪ್ರಯಾಣಿಕರಿಗೆ ಕಂಪನಿಯು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ’ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ‘ಎಕ್ಸ್‌’ನಲ್ಲಿ ಸೂಚಿಸಿದೆ.

ಹೊಸ ಒಪ್ಪಂದದ ಅನ್ವಯ ನಿಶ್ಚಿತ ವೇತನದ ಮೊತ್ತವನ್ನು ಕಡಿತಗೊಳಿಸಲಾಗಿದೆ.  ವಿಮಾನಗಳ ಹಾರಾಟಕ್ಕೆ ಅನುಗುಣವಾಗಿ ಪೈಲಟ್‌ಗಳಿಗೆ ಪ್ರೋತ್ಸಾಹಧನ ನೀಡಲು ಪ್ರಕಟಿಸಲಾಗಿದೆ. ವಿಸ್ತಾರಾ ಮತ್ತು ಏರ್‌ ಇಂಡಿಯಾ ಪೈಲಟ್‌ಗಳ ನಡುವೆ ವೇತನದಲ್ಲಿ ಸಮಾನತೆ ಕಾಯ್ದುಕೊಳ್ಳಲು ಈ ಹೊಸ ಒಪ್ಪಂದವನ್ನು ರೂಪಿಸಲಾಗಿದೆ ಎಂದು ಹೇಳಲಾಗಿದೆ.

15 ಪೈಲಟ್‌ಗಳ ರಾಜೀನಾಮೆ

ಮುಂಬೈ: ಪರಿಷ್ಕೃತ ವೇತನ ಸಂಬಂಧ ಕಳೆದ ಕೆಲವು ವಾರಗಳಿಂದ ಟಾಟಾ ಸಮೂಹದ ವಿಮಾನಯಾನ ಸಂಸ್ಥೆಗಳಲ್ಲಿ ಇರುವ ಪೈಲಟ್‌ಗಳ ನಡುವೆ ಅಸಮಾಧಾನ ಭುಗಿಲೆದ್ದಿದೆ ಮೂಲಗಳು ತಿಳಿಸಿವೆ. 15 ಹಿರಿಯ ಪೈಲಟ್‌ಗಳು ರಾಜೀನಾಮೆ ನೀಡಿದ್ದು ಇತರೆ ವಿಮಾನಯಾನ ಸಂಸ್ಥೆಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿವೆ.‌ ಈ ಬಗ್ಗೆ ಮಾಹಿತಿ ನೀಡಲು ವಿಸ್ತಾರಾದ ವಕ್ತಾರರು ನಿರಾಕರಿಸಿದ್ದಾರೆ. ಪ್ರತಿದಿನ ವಿಸ್ತಾರಾದ 300ಕ್ಕೂ ಹೆಚ್ಚು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದ್ದು  800 ಪೈಲಟ್‌ಗಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT