ಗುರುವಾರ , ಆಗಸ್ಟ್ 11, 2022
21 °C

2 ವರ್ಷಗಳ ಗರಿಷ್ಠ ಮಟ್ಟದಲ್ಲಿ ತೈಲ ಬೆಲೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ಬೆಂಗಳೂರು: ದೇಶದ ರಾಜಧಾನಿಯಲ್ಲಿ ಪೆಟ್ರೋಲ್‌ ಬೆಲೆಯು ಭಾನುವಾರ ಲೀಟರ್‌ಗೆ 28 ಪೈಸೆಯಷ್ಟು ಹೆಚ್ಚಳವಾಗಿದೆ. ಡೀಸೆಲ್‌ ಬೆಲೆಯು ಲೀಟರ್‌ಗೆ 29 ಪೈಸೆ ಹೆಚ್ಚಳ ಆಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳವಾಗುತ್ತಿರುವುದರ ಪರಿಣಾಮವಾಗಿ, ದೇಶಿ ಮಾರುಕಟ್ಟೆಯಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗುತ್ತಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತವಾಗಿ ಐದು ದಿನಗಳಿಂದ ಏರಿಕೆ ಆಗುತ್ತಿದೆ. ದೆಹಲಿಯಲ್ಲಿ ಭಾನುವಾರ ಲೀಟರ್ ಪೆಟ್ರೋಲ್‌ ಬೆಲೆ ₹ 84.41ಕ್ಕೆ, ಡೀಸೆಲ್ ಬೆಲೆಯು ₹ 73.61ಕ್ಕೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆಯು ₹ 90ರ ಗಡಿಯನ್ನು, ಡೀಸೆಲ್ ಬೆಲೆಯು ₹ 80ರ ಗಡಿಯನ್ನು ದಾಟಿವೆ.

ತೈಲ ಮಾರಾಟ ಕಂಪನಿಗಳು ತೈಲದ ದರವನ್ನು ಪ್ರತಿನಿತ್ಯ ಪರಿಷ್ಕರಿಸುವುದನ್ನು ನವೆಂಬರ್ 20ರಿಂದ ಪುನರಾರಂಭಿಸಿವೆ. ಅದಾದ ನಂತರದಲ್ಲಿ 14 ಬಾರಿ ತೈಲ ದರ ಹೆಚ್ಚಳ ಆಗಿದೆ. ತೈಲ ದರವು ಈಗ 2018ರ ಸೆಪ್ಟೆಂಬರ್ ತಿಂಗಳ ನಂತರದ ಗರಿಷ್ಠ ಮಟ್ಟದಲ್ಲಿದೆ.

ಕಳೆದ 17 ದಿನಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆಯು ₹ 2.35ರಷ್ಟು, ಡೀಸೆಲ್ ಬೆಲೆಯು ₹ 3.15ರಷ್ಟು ಹೆಚ್ಚಳ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ದರವು ಅಕ್ಟೋಬರ್ 30ರ ನಂತರ ಶೇಕಡ 34ರಷ್ಟು ಹೆಚ್ಚಳವಾಗಿದೆ.

ಕೋವಿಡ್–19 ಸಾಂಕ್ರಾಮಿಕಕ್ಕೆ ಲಸಿಕೆ ಅಭಿವೃದ್ಧಿ ಆದ ನಂತರ, ಮಾರುಕಟ್ಟೆಯಲ್ಲಿ ತೈಲ ಬೇಡಿಕೆ ಹೆಚ್ಚಲಿದೆ ಎಂಬ ಭರವಸೆಯು ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಎಷ್ಟು?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಡೀಸೆಲ್ ಬೆಲೆಯಲ್ಲಿ 30 ಪೈಸೆ ಹೆಚ್ಚಳ ಆಗಿದೆ. ಲೀಟರ್‌ ಡೀಸೆಲ್‌ ₹ 78.03ಕ್ಕೆ ಮಾರಾಟವಾಗಿದೆ. ಪೆಟ್ರೋಲ್ ಬೆಲೆಯಲ್ಲಿ 29 ಪೈಸೆ ಹೆಚ್ಚಳವಾಗಿದ್ದು, ಲೀಟರ್ ಪೆಟ್ರೋಲ್‌ ₹ 86.20ಕ್ಕೆ ಮಾರಾಟವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು