ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈವಿಕ ಡೀಸೆಲ್ ಮಿಶ್ರಣದ ಡೀಸೆಲ್‌ ಬಳಕೆಗೆ ಚಾಲನೆ

Last Updated 4 ಮೇ 2021, 16:46 IST
ಅಕ್ಷರ ಗಾತ್ರ

ನವದೆಹಲಿ: ಅಡುಗೆಗೆ ಬಳಸಿ, ವ್ಯರ್ಥವಾಗುವ ಎಣ್ಣೆಯಿಂದ ತಯಾರಿಸಿದ ಜೈವಿಕ ಡೀಸೆಲ್‌ಅನ್ನು ಮಾಮೂಲಿ ಡೀಸೆಲ್‌ ಜೊತೆ ಸಣ್ಣ ಪ್ರಮಾಣದಲ್ಲಿ ಬೆರೆಸಿ ಬಳಕೆ ಮಾಡುವ ಪ್ರಕ್ರಿಯೆಯು ದೇಶದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ. ವಿದೇಶಗಳಿಂದ ತೈಲ ಆಮದು ಮಾಡಿಕೊಳ್ಳುವುದನ್ನು ತಗ್ಗಿಸುವುದು ಹಾಗೂ ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡುವ ಉದ್ದೇಶ ಈ ಪ್ರಯೋಗಕ್ಕೆ ಇದೆ.

ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವ ಇಂಧನ ಡೀಸೆಲ್. ಇದು ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಒಂದು. ದೇಶವು ತನ್ನ ಅಗತ್ಯದ ಶೇಕಡ 85ರಷ್ಟು ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ.

ಖಾದ್ಯತೈಲ, ಪ್ರಾಣಿಜನ್ಯ ಕೊಬ್ಬು, ಅಡುಗೆಗೆ ಬಳಸಿದ ನಂತರ ವ್ಯರ್ಥವಾಗುವ ಎಣ್ಣೆ ಬಳಸಿ ಜೈವಿಕ ಡೀಸೆಲ್ ತಯಾರಿಸಬಹುದು ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ (ಐಒಸಿ) ಅಧ್ಯಕ್ಷ ಎಸ್.ಎ. ವೈದ್ಯ ಅವರು ತಿಳಿಸಿದ್ದಾರೆ. ಬಳಸಿದ ಅಡುಗೆ ಎಣ್ಣೆಯಿಂದ ತಯಾರಿಸಿದ ಜೈವಿಕ ಡೀಸೆಲ್‌ಅನ್ನು ಮಾಮೂಲಿ ಡೀಸೆಲ್‌ನಲ್ಲಿ ಶೇ 7ರಷ್ಟು ಪ್ರಮಾಣದಲ್ಲಿ ಮಿಶ್ರ ಮಾಡಿ, ಅದನ್ನು ವಾಹನಗಳಲ್ಲಿ ಬಳಕೆಗೆ ಒದಗಿಸುವುದು ಮಂಗಳವಾರದಿಂದ ಆರಂಭ ಆಗಿದೆ.

ದೇಶದಲ್ಲಿ ಪ್ರತಿವರ್ಷ 2.3 ಕೋಟಿ ಟನ್ ಖಾದ್ಯತೈಲವನ್ನು ಬಳಸಲಾಗುತ್ತದೆ. ಇದರಲ್ಲಿ 30 ಲಕ್ಷ ಟನ್ ಖಾದ್ಯತೈಲವನ್ನು ಬಳಸಿ, ಎಸೆಯಲಾಗುತ್ತದೆ ಎಂದು ವೈದ್ಯ ಅವರು ಮಾಹಿತಿ ನೀಡಿದರು. ‘ದೇಶದಲ್ಲಿ ಪ್ರತಿವರ್ಷ 222 ಕೋಟಿ ಲೀಟರ್‌ನಷ್ಟು ಬಳಸಿದ ಅಡುಗೆ ಎಣ್ಣೆ ಸಿಗುತ್ತದೆ. ಆದರೆ ಅದನ್ನು ಸಂಗ್ರಹಿಸುವ ವ್ಯವಸ್ಥೆ ಇಲ್ಲ’ ಎಂದು ಅವರು ಹೇಳಿದ್ದಾರೆ.

ಜೈವಿಕ ಡೀಸೆಲ್ ಮಿಶ್ರಣ ಇರುವ ಡೀಸೆಲ್‌ ಪೂರೈಕೆಗೆ ಇಂಧನ ಸಚಿವ ಧರ್ಮೇಂದ್ರ ‍ಪ್ರಧಾನ್ ಅವರು ಹಸಿರು ನಿಶಾನೆ ತೋರಿದರು. ‘ಜೈವಿಕ ಡೀಸೆಲ್‌ ಮಿಶ್ರಣದ ಡೀಸೆಲ್ ಬಳಕೆಯು ಪರಿಸರದ ಮೇಲೆ ಪೂರಕ ಪರಿಣಾಮ ಬೀರಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸಲಿದೆ’ ಎಂದು ಪ್ರಧಾನ್ ಹೇಳಿದ್ದಾರೆ.

ಐಒಸಿ ಕಂಪನಿಯು ಉತ್ತರ ಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಒಟ್ಟು ಎಂಟು ಜೈವಿಕ ಡೀಸೆಲ್ ಉತ್ಪಾದನಾ ಘಟಕಗಳ ನಿರ್ಮಾಣ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT