ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ತಿದಾರರ ವಿರುದ್ಧ ಕ್ರಮ ಬಹಿರಂಗಕ್ಕೆ ಆದೇಶ

ಹಣಕಾಸು ಸಚಿವಾಲಯ, ಆರ್‌ಬಿಐಗೆ ಮಾಹಿತಿ ಆಯುಕ್ತ ತಾಕೀತು
Last Updated 29 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಂಕ್‌ಗಳಲ್ಲಿ ₹ 50 ಕೋಟಿಗಿಂತ ಹೆಚ್ಚಿನ ಸಾಲ ಮರುಪಾವತಿ ಮಾಡದ ಉದ್ದೇಶಪೂರ್ವಕ ಸುಸ್ತಿದಾರರ ವಿರುದ್ಧ ಕೈಗೊಂಡ ಕ್ರಮಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಮುಖ್ಯ ಮಾಹಿತಿ ಆಯುಕ್ತರು ತಾಕೀತು ಮಾಡಿದ್ದಾರೆ.

‘ಸಣ್ಣ ಮೊತ್ತದ ಸಾಲ ಪಡೆದವರು ಮತ್ತು ರೈತರನ್ನು ಸಾರ್ವಜನಿಕವಾಗಿ ಅವಹೇಳನ ಮಾಡಲಾಗುತ್ತದೆ. ಆದರೆ ₹ 50 ಕೋಟಿ ಸಾಲ ಬಾಕಿ ಉಳಿಸಿಕೊಂಡವರಿಗೆ ಹಲವಾರು ಬಗೆಗಳಲ್ಲಿ ವಿನಾಯ್ತಿ ನೀಡಲಾಗುತ್ತಿದೆ. ಇಂತಹ ಪ್ರವೃತ್ತಿ ತಪ್ಪಬೇಕು. ದೊಡ್ಡ ಮೊತ್ತದ ಸಾಲ ಬಾಕಿ ಉಳಿಸಿಕೊಂಡವರಿಗೆ ಒಂದು ಬಾರಿ ಇತ್ಯರ್ಥ, ಬಡ್ಡಿ ಮನ್ನಾ ಸೇರಿದಂತೆ ಇತರ ಅನೇಕ ಸೌಲಭ್ಯಗಳನ್ನು ಒದಗಿಸಲಾಗುವುದು. ಅವರ ವರ್ಚಸ್ಸಿಗೆ ಧಕ್ಕೆಯಾಗುವ ಕಾರಣಕ್ಕೆ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ’ ಎಂದು ಮುಖ್ಯ ಮಾಹಿತಿ ಆಯುಕ್ತ ಶ್ರೀಧರ್‌ ಆಚಾರ್ಯುಲು ಅವರು ಹೇಳಿದ್ದಾರೆ.

‘ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಕಾರಣಕ್ಕೆ ಮರ್ಯಾದೆಗೆ ಹೆದರಿ ಅಸಂಖ್ಯಾತ ರೈತರು ಸಾವಿಗೆ ಶರಣಾಗುತ್ತಿದ್ದಾರೆ. ಜೀವನಾಧಾರಕ್ಕೆ ಭೂತಾಯಿಯನ್ನೇ ನೆಚ್ಚಿಕೊಂಡಿದ್ದ ರೈತರು ತಮ್ಮ ಕೃಷಿ ಭೂಮಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸುಶಿಕ್ಷಿತ, ಸಿರಿವಂತ, ಕಾರ್ಪೊರೇಟ್‌ ಉದ್ಯಮಿಗಳು ಕೋಟ್ಯಂತರ ರೂಪಾಯಿಗಳ ಸಾಲ ಮರುಪಾವತಿಸದೆ ದೇಶವನ್ನೇ ವಂಚಿಸುವ ಉದ್ದೇಶಪೂರ್ವಕ ಸುಸ್ತಿದಾರರಂತೆ ರೈತರು ಯಾವತ್ತೂ ತಾಯ್ನಾಡಿಗೆ ದ್ರೋಹ ಬಗೆಯುವುದಿಲ್ಲ’ ಎಂದು ಹೇಳಿದ್ದಾರೆ.

‘ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯ ಅನ್ವಯ, ಸಾರ್ವಜನಿಕ ಬದುಕಿನ ಮೇಲೆ ಪ್ರಭಾವ ಬೀರುವ ಮಹತ್ವದ ನಿಯಮಗಳಿಗೆ ಸಂಬಂಧಿಸಿದ ವಾಸ್ತವ ಸಂಗತಿಗಳನ್ನು ಸರ್ಕಾರದ ಎಲ್ಲ ಇಲಾಖೆಗಳು ಪ್ರಕಟಿಸಬೇಕಾಗುತ್ತದೆ. ₹ 50 ಕೋಟಿಗಿಂತ ಹೆಚ್ಚಿನ ಮೊತ್ತದ ಉದ್ದೇಶಪೂರ್ವಕ ಸುಸ್ತಿದಾರರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಆರ್‌ಬಿಐ ಮತ್ತು ಹಣಕಾಸು ಸಚಿವಾಲಯದ ಕರ್ತವ್ಯವಾಗಿದೆ. ಸಾರ್ವಜನಿಕರಿಗೆ ಸೇರಿದ ಹಣ ಉಳಿಸುವ ಮತ್ತು ದೇಶಿ ಆರ್ಥಿಕತೆ ರಕ್ಷಿಸಲು ಕೈಗೊಂಡ ಕ್ರಮಗಳನ್ನು ಬಹಿರಂಗಪಡಿಸಬೇಕು.

ಸುಸ್ತಿದಾರರ ವಿರುದ್ಧ ಕೈಗೊಂಡ ಕ್ರಮಗಳನ್ನು ಬಹಿರಂಗಪಡಿಸಲು ಆರ್‌ಬಿಐ ಎತ್ತಿದ್ದ ಆಕ್ಷೇಪಗಳನ್ನೆಲ್ಲ ಸುಪ್ರೀಂಕೋರ್ಟ್‌ ತಳ್ಳಿ ಹಾಕಿದೆ. ಹೀಗಾಗಿ ಮಾಹಿತಿಯನ್ನು ಸಾರ್ವಜನಿಕಗೊಳಿಸದೇ ಆರ್‌ಬಿಐಗೆ ಬೇರೆ ದಾರಿಯೇ ಇಲ್ಲ. ಉದ್ದೇಶಪೂರ್ವಕ ಸುಸ್ತಿದಾರರ ವಿರುದ್ಧ ಕೈಗೊಂಡ ಕ್ರಮಗಳು, ಕ್ರಮ ಕೈಗೊಳ್ಳದಿರುವುದರ ಕಾರಣಗಳು, ಕ್ರಿಮಿನಲ್‌ ಕ್ರಮಕ್ಕೆ ಚಾಲನೆ ನೀಡಿರುವುದು ಅಥವಾ ಚಾಲನೆ ನೀಡದಿರುವುದರ ಕಾರಣಗಳನ್ನು ತಿಳಿಸುವಂತೆ ಆಚಾರ್ಯುಲು ಆದೇಶಿಸಿದ್ದಾರೆ.

ಈ ಮಾಹಿತಿಗೆ ಸಂಬಂಧಿಸಿದಂತೆ ಯಾವುದೇ ವರದಿ ಸಲ್ಲಿಸದಿದ್ದರೆ ಈ ಬಗ್ಗೆ ಸೆಪ್ಟೆಂಬರ್‌ 20ರ ಒಳಗೆ ಸೂಕ್ತ ಸಮಜಾಯಿಷಿ ನೀಡಬೇಕಾಗುತ್ತದೆ’ ಎಂದೂ ಹೇಳಿದ್ದಾರೆ.

30 ಸಾವಿರ

1998ರಿಂದ 2018ರ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT